ಶಿಸ್ತು, ಏಕಾಗ್ರತೆ, ಪರಿಶ್ರಮದಷ್ಟೇ ವಿದ್ಯಾರ್ಥಿಯ ಯಶಸ್ಸಿಗೆ ಈ ಗುಣವೂ ಮುಖ್ಯ; ಪೋಷಕರು, ಶಿಕ್ಷಕರು ಗಮನಿಸಬೇಕಾದ ಅಂಶವಿದು– ಮನದ ಮಾತು ಅಂಕಣ
ಕನ್ನಡ ಸುದ್ದಿ  /  ಜೀವನಶೈಲಿ  /  ಶಿಸ್ತು, ಏಕಾಗ್ರತೆ, ಪರಿಶ್ರಮದಷ್ಟೇ ವಿದ್ಯಾರ್ಥಿಯ ಯಶಸ್ಸಿಗೆ ಈ ಗುಣವೂ ಮುಖ್ಯ; ಪೋಷಕರು, ಶಿಕ್ಷಕರು ಗಮನಿಸಬೇಕಾದ ಅಂಶವಿದು– ಮನದ ಮಾತು ಅಂಕಣ

ಶಿಸ್ತು, ಏಕಾಗ್ರತೆ, ಪರಿಶ್ರಮದಷ್ಟೇ ವಿದ್ಯಾರ್ಥಿಯ ಯಶಸ್ಸಿಗೆ ಈ ಗುಣವೂ ಮುಖ್ಯ; ಪೋಷಕರು, ಶಿಕ್ಷಕರು ಗಮನಿಸಬೇಕಾದ ಅಂಶವಿದು– ಮನದ ಮಾತು ಅಂಕಣ

ಭವ್ಯಾ ವಿಶ್ವನಾಥ್ ಬರಹ: ಕುತೂಹಲವೇ ಮಕ್ಕಳಲ್ಲಿರುವ ದೊಡ್ಡ ಸಂಪತ್ತು. ಕುತೂಹಲ ಮಕ್ಕಳಲ್ಲಿ ಆಸಕ್ತಿ ಮೂಡಿಸಿ, ಮುನ್ನಡೆಸುತ್ತದೆ. ಆಗ ವಿದ್ಯಾರ್ಥಿಯು ಸ್ವಯಂ ಪ್ರೇರಣೆಯಿಂದಾಗಿ ತಾನೇ ಕಲಿಕೆಯನ್ನು ಮುಂದುವರೆಸುತ್ತಾನೆ.

ಶಿಸ್ತು, ಏಕಾಗ್ರತೆ, ಪರಿಶ್ರಮದಷ್ಟೇ ವಿದ್ಯಾರ್ಥಿಯ ಯಶಸ್ಸಿಗೆ ಈ ಗುಣವೂ ಮುಖ್ಯ– ಮನದ ಮಾತು
ಶಿಸ್ತು, ಏಕಾಗ್ರತೆ, ಪರಿಶ್ರಮದಷ್ಟೇ ವಿದ್ಯಾರ್ಥಿಯ ಯಶಸ್ಸಿಗೆ ಈ ಗುಣವೂ ಮುಖ್ಯ– ಮನದ ಮಾತು

Manada Matu Column: ವಿದ್ಯಾರ್ಥಿಗಳ ಯಶಸ್ಸಿಗೆ ಶಿಸ್ತು, ಏಕಾಗ್ರತೆ, ಪರಿಶ್ರಮ, ಪ್ರತಿಭೆ ಮತ್ತು ಬುದ್ಧಿವಂತಿಕೆ ಅತ್ಯವಶ್ಯಕ. ಇದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಒಬ್ಬ ವಿದ್ಯಾರ್ಥಿಯಲ್ಲಿ ಇವೆಲ್ಲಾ ಅಂಶಗಳು ಇದ್ದೂ, ಆ ಒಂದೇ ಒಂದು ಮಹತ್ವದ ಗುಣ ಇಲ್ಲ ಎಂದಾದರೆ ಅಂತಹ ವಿದ್ಯಾರ್ಥಿ ಯಶಸ್ಸು ಕಾಣಲು ಸಾಧ್ಯವಿಲ್ಲ. ಹಾಗಾದರೆ ಕಲಿಕೆ ಮತ್ತು ಯಶಸ್ಸು ಈ ಎರಡಕ್ಕೂ ಬೇಕಾಗಿರುವಂತಹ ಮಹತ್ವದ ಗುಣ ಏನಿರಬಹುದು? ಒಮ್ಮೆ ಯೋಚಿಸಿ. ಓದುಗರಿಗೆ ಈ ಮಹತ್ತರ ಗುಣವನ್ನು ನೇರವಾಗಿ ಹೇಳುವುದಕ್ಕಿಂತ, ಯಶಸ್ಸನ್ನು ಗಳಿಸಿ ನಮ್ಮ ನಡುವೆ ಬದುಕಿ ಬಾಳಿದ ಒಬ್ಬ ಶ್ರೇಷ್ಠ ವ್ಯಕ್ತಿಯ ಹಿಂದಿನ ಕಥೆಯನ್ನು ಹೇಳುವ ಮೂಲಕ ವಿವರಿಸುತ್ತೇನೆ.

ಬಡತನ ತುಂಬಿರುವ ಮನೆಯ ಒಬ್ಬ ಪುಟ್ಟ ಹುಡುಗನಿದ್ದಾನೆ. ಆ ಮನೆಯಲ್ಲಿ ಏಳು ಜನ ಮಕ್ಕಳು. ನಮ್ಮ ಕಥಾನಾಯಕ ಐದನೆಯವನು. ತಂದೆ–ತಾಯಿಗೆ ಮನೆ ನಡೆಸಲು ಸಹಾಯ ಮಾಡಲು ತಾನಿರುವ ಚಿಕ್ಕ ಹಳ್ಳಿಯಲ್ಲಿ ಸುದ್ಧಿಪತ್ರಿಕೆಗಳನ್ನು ಮಾರುತ್ತಿದ್ದ. ಮನೆಯಲ್ಲಿ ಆರ್ಥಿಕ ಸಮಸ್ಯೆ ಇದ್ದರೂ ಕೂಡ ಶಾಲೆಯಲ್ಲಿ ಬುದ್ಧಿವಂತ ಎನ್ನಿಸಿಕೊಂಡಿದ್ದ. ಚಿಕ್ಕ ವಯಸ್ಸಿನಿಂದಲೂ ಆಕಾಶದಲ್ಲಿ ಹಾರಾಡುವ ಹಕ್ಕಿಗಳು, ವಿಮಾನಗಳೆಂದರೆ ಅದೇನೋ ಹುಚ್ಚು ಕುತೂಹಲ. ಗಂಟೆಗಟ್ಟಲೆ ಆಕಾಶ ನೋಡುತ್ತ, ಹಕ್ಕಿ ಮತ್ತು ವಿಮಾನಗಳನ್ನು ಗಮನಿಸುತ್ತಾ ಕುಳಿತು ಬಿಡುತ್ತಿದ್ದ. ಭೂಮಿಯ ಮೇಲಿರುವ ಉಳಿದ ಜೀವಿಗಳಿಗೆ ಹಾರಲು ಸಾಧ್ಯವಾಗದ್ದು ಈ ಹಕ್ಕಿಗಳಿಗೆ ಹೇಗೆ ಸಾಧ್ಯವೆಂದು ಯೋಚನೆ ಮಾಡುತ್ತ ಕಳೆದು ಹೋಗುತ್ತಿದ್ದ.

ಹಕ್ಕಿಯಂತೆಯೇ ಹಾರಾಡುವ ವಿಮಾನಗಳು ಹೇಗೆ ಕಾರ್ಯನಿರ್ವಹಿಸುತ್ತವೆ, ವಿಜ್ಞಾನಿಗಳು ಅದನ್ನು ಹೇಗೆ ಕಂಡುಹಿಡಿದರು ಎನ್ನುವ ಕುತೂಹಲ ಆ ಪುಟ್ಟ ಬಾಲಕನನ್ನು ವಿಮಾನದಿಂದ ರಾಕೆಟ್ ಕಡೆಗೆ ಕರೆದುಕೊಂಡು ಹೋಯಿತು. ಈ ಕುತೂಹಲವೇ ಈ ಪುಟ್ಟ ಬಾಲಕನನ್ನು ಮುಂದೆ ಜಗತ್ಪ್ರಸಿದ್ಧ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ವಿಜ್ಞಾನಿಯನ್ನಾಗಿ ಮಾಡಿತು. ಇವರ ಅಪಾರ ಕೊಡುಗೆ ಮತ್ತು ಸೇವೆಯಿಂದಾಗಿ ಭಾರತ ದೇಶದ ರಾಷ್ಟ್ರಪತಿಯಾಗಿಯೂ ಕೂಡ ಸೇವೆ ಸಲ್ಲಿಸಿದರು. ಅವರೇ ನಮ್ಮ ಡಾ ಎಪಿಜೆ ಅಬ್ದುಲ್ ಕಲಾಂ. ‘ಭಾರತದ ಕ್ಷಿಪಣಿ ಮನುಷ್ಯ' ಎಂದು ಕರೆಸಿಕೊಂಡರು. ಡಾ ಕಲಾಂ ಅವರು ವಿಜ್ಞಾನಿಯಾಗಿ ದೇಶದ ಬಾಹ್ಯಾಕಾಶ ಮತ್ತು ರಕ್ಷಣಾ ಕಾರ್ಯಕ್ರಮಗಳನ್ನು ಮುನ್ನಡೆಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ನೋಡಿದ್ರಾ ಓದುಗರೇ, ಈ ಪುಟ್ಟ ಬಾಲಕನ ಕುತೂಹಲ ಮತ್ತು ಆಸಕ್ತಿ ಅವನನ್ನು ಎಂತಹ ಉನ್ನತ ಮಟ್ಟಕ್ಕೆ ಕರೆದುಕೊಂಡು ಹೋಯಿತು. ಆತನ ಕುತೂಹಲವೇ ಅವನ ಕಲಿಕೆ ಮತ್ತು ಸಾಧನೆಗೆ ಬುನಾದಿಯಾಯ್ತು. ಹೀಗೆ ಬಾಲ್ಯದಲ್ಲಿ ಕುತೂಹಲವಿರುವ ಅನೇಕ ಮಕ್ಕಳು ದೊಡ್ಡ ಸಾಧಕರಾಗಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಥಾಮಸ್ ಅಲ್ವಾ ಎಡಿಸನ್ (ವಿದ್ಯುತ್ ಬಲ್ಬ್), ಐಸಾಕ್ ನ್ಯೂಟನ್ (ನ್ಯೂಟನ್ ಲಾ ಆಫ್ ಮೋಷನ್), ಆಲ್ಬರ್ಟ್‌ ಐನ್‌ಸ್ಟೈನ್‌ (ಕ್ವಾಟಂಮ್ ಫಿಸಿಕ್ಸ್) ಸೇರಿದಂತೆ ಹಲವು ವಿಜ್ಞಾನಿಗಳ ಮತ್ತು ಜ್ಞಾನಿಗಳ ಯಶಸ್ಸಿನ ಗುಟ್ಟೇ ಈ ಕುತೂಹಲ. ಪ್ರತಿಕೂಲ ಪರಿಸ್ಥಿತಿಗಳಲ್ಲೂ ಕೂಡ ಕುತೂಹಲವೊಂದಿದ್ದರೆ ಸಾಕು, ಛಲ ಮತ್ತು ಸಂಕಲ್ಪದ ಜೊತೆ, ಪ್ರಯತ್ನವನ್ನು ಬಿಡದಿದ್ದರೆ ಕನಸು ನನಸಾಗಿಸಿಕೊಳ್ಳಬಹುದು.

ವಿದ್ಯಾರ್ಥಿಗಳಿಗೆ ಕುತೂಹಲ ಬಹಳ ಮುಖ್ಯ

ಕುತೂಹಲವು ಎಲ್ಲಾ ವಿಷಯಗಳಲ್ಲೂ ಇರಬಹುದು ಅಥವಾ ಒಂದೇ ವಿಷಯದಲ್ಲಿ ಇರಬಹುದು. ಎಲ್ಲ ಮಕ್ಕಳಿಗೂ ಸಹ ಕುತೂಹಲವಿರುತ್ತದೆ. ಇದರಿಂದಲೇ ಮಗುವಿನ ಕಲಿಕೆ ಮತ್ತು ಬೆಳವಣಿಗೆಯೂ ಸಹ ಆಗುತ್ತದೆ. ಆದರೆ, ಸಮಾಜದ ನಂಬಿಕೆ ಮತ್ತು ಶೈಕ್ಷಣಿಕ ವ್ಯವಸ್ಥೆಯ ನಿಯಮಾವಳಿಗಳ ಒತ್ತಡದಿಂದ ಮಕ್ಕಳ ಕುತೂಹಲವನ್ನು ಮುಂದುವರೆಸಲು ಬಿಡುವುದಿಲ್ಲ.

ಎಷ್ಟೋ ಪೋಷಕರು ಮತ್ತು ಶಿಕ್ಷಕರು ಮಕ್ಕಳ ಕುತೂಹಲವನ್ನು ಮೊಟಕುಗೊಳಿಸುತ್ತಾರೆ. ಕೆಲವೊಮ್ಮೆ ಮಕ್ಕಳು ಕುತೂಹಲದಿಂದ ಪ್ರಶ್ನೆಗಳನ್ನು ಕೇಳಲು ಆರಂಭಿಸಿದಾಗ ಹಿರಿಯರ ಪ್ರತಿಕ್ರಿಯೆ ಹೀಗಿರುತ್ತದೆ.

‘ನೀನು ಪುಸ್ತಕದಲ್ಲಿ ಏನಿದೆ, ಎಷ್ಟಿದೆ ಅಷ್ಟು ತಿಳಿದುಕೊಂಡರೆ ಸಾಕು. ಪರೀಕ್ಷೆಯಲ್ಲಿ ಕೇಳುವುದನ್ನು ಮಾತ್ರ ಓದಿದರೆ ಸಾಕು, ಉಳಿದ ವಿಚಾರಕ್ಕೆ ಜಾಸ್ತಿ ತಲೆಕೊಡಿಸಿಕೊಳ್ಳಬೇಡ‘ ಎಂದು ಗದರುತ್ತಾರೆ.

ಓದಿನ ವಿಷಯದಲ್ಲಾಗಲಿ ಅಥವಾ ಬೇರೆ ಯಾವುದೇ ವಿಷಯದಲ್ಲಾಗಲಿ, ವಿದ್ಯಾರ್ಥಿಗಳು ಕುತೂಹಲ ಬೆಳೆಸಿಕೊಳ್ಳಬೇಕು. ಈ ಕುತೂಹಲವೇ ನಿಮಗೆ ವಿಷಯವನ್ನು ಆಳವಾಗಿ ಅಧ್ಯಯನ ಮತ್ತು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಗಣಿತವೇ ಆಗಲಿ, ಸಮಾಜಶಾಸ್ತ್ರವೇ ಆಗಲಿ ಅಥವಾ ವಿಜ್ಞಾನವೇ ಆಗಲಿ ಇವುಗಳಲ್ಲಿ ಬರುವ ಪ್ರತಿಯೊಂದು ವಿಷಯಗಳನ್ನು ಕುರಿತು ಮೊದಲು ಕುತೂಹಲ ಬೆಳೆಸಿಕೊಂಡು ಅಭ್ಯಾಸ ಮಾಡುವ ಪ್ರಯತ್ನ ಮಾಡಿ. ಪರೀಕ್ಷೆ ಮತ್ತು ಫಲಿತಾಂಶ, ಉದ್ಯೋಗದ ಉದ್ದೇಶಕ್ಕೆ ಮಾತ್ರವಲ್ಲದೇ ಸಂಪೂರ್ಣವಾಗಿ ಕಲಿಯುವ ಮತ್ತು ಬೆಳೆಯುವ ಉದ್ದೇಶದಿಂದ ನಿಮ್ಮ ಕಲಿಕೆ ಸಾಗಲಿ. ಈ ಮನೋಭಾವ ರೂಢಿಸಿಕೊಂಡರೆ ಯಾವ ಅಡಚಣೆಯೂ ನಿಮ್ಮ ಕಲಿಕೆಯನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ.

ಮಕ್ಕಳಲ್ಲಿ ಕುತೂಹಲ ಬೆಳೆಸುವುದು ಹೇಗೆ?

  • ಮಕ್ಕಳನ್ನು ಪ್ರಕೃತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಬಿಡಬೇಕು. ಪ್ರಕೃತಿಯನ್ನು ಗಮನಿಸಿದಾಗ ಅನೇಕ ರೀತಿಯ ಕುತೂಹಲಕಾರಿ ವಿಚಾರಗಳು ಗಮನಕ್ಕೆ ಬರುತ್ತವೆ.
  • ಥಿಯರಿಗಿಂತ ಪ್ರಾಕ್ಟಿಕಲ್ಸ್ ಮುಖ್ಯ: ಮಕ್ಕಳಿಗೆ ಪಾಠದ ಬೋಧನೆಗಿಂತ ಪ್ರಾಯೋಗಿಕ ಶಿಕ್ಷಣದಿಂದ ಕುತೂಹಲ ಮತ್ತು ಆಸಕ್ತಿ ಉಂಟಾಗುತ್ತದೆ. ಬರಿ ಪಠ್ಯ ಪುಸ್ತಕ ಓದುವುದರಿಂದ, ಹೋಮ್ ವರ್ಕ್‌ ಮಾಡುವುದರಿಂದ ಓದುತ್ತಿರುವ ವಿಷಯವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಕುತೂಹಲ ಅಗತ್ಯ. ಆಗಲೇ ಮಕ್ಕಳು ಆಸಕ್ತಿಯನ್ನು ಬೆಳೆಸಿಕೊಂಡು ಸ್ವ ಪ್ರೇರಣೆಯಿಂದ ಕಲಿಕೆಯನ್ನು ಮುಂದುವರೆಸುತ್ತಾರೆ.
  • ದಿನನಿತ್ಯದ ವಿಚಾರಗಳಲ್ಲಿ ಅವರು ತಮ್ಮದೇ ಆದ ಆಯ್ಕೆಗಳನ್ನು ಮಾಡಲು ಪ್ರೋತ್ಸಾಹಿಸಿ ಮತ್ತು ಅವಕಾಶ ನೀಡಿ. ಇದರಿಂದ ಸ್ವತಂತ್ರರಾಗಿ ನಿಭಾಯಿಸುವಂತವರಾಗುತ್ತಾರೆ ಮತ್ತು ಜವಾಬ್ಧಾರಿ ಕೂಡ ಬರುತ್ತದೆ.
  • ಅವರ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಲು ಮತ್ತು ಸಂಶಯಗಳನ್ನು ಸ್ಪಷ್ಟೀಕರಿಸಿಕೊಳ್ಳಲು ನೆರವಾಗಿ. ಇದರಿಂದ ಅವರ ಆತ್ಮವಿಶ್ವಾಸ ಹೆಚ್ಚುತ್ತದೆ. ಅವರ ಪ್ರಯೋಗ, ಪರಿಶೋಧನೆಗಳನ್ನು ತೇಜೋವಧೆ ಮಾಡದೇ, ದೊಡ್ಡದು ಸಣ್ಣದೆಂಬ ನಿರ್ಣಯಕ್ಕೆ ಬರದೆ, ನಿಮ್ಮ ಮಕ್ಕಳು ಮುಂದುವರೆಯುವುದಕ್ಕೆ ಆದಷ್ಚು ಬೆಂಬಲಿಸಿ.
  • ಅವರ ದಿನಚರಿಯಲ್ಲಿ ಹೊಸ ಮತ್ತು ವಿಭಿನ್ನ ಚಟುವಟಿಕೆಗಳು ಮತ್ತು ಸವಾಲುಗಳನ್ನು ಅಳವಡಿಸಿ.
  • ಮಕ್ಕಳು ನಿಮ್ಮನ್ನು ಕುತೂಹಲಕರ ಪ್ರಶ್ನೆಗಳನ್ನು ಕೇಳಿದರೆ ನಿರ್ಲಕ್ಷಿಸಬೇಡಿ. ತಲೆಹರಟೆ ಅಂತ ಬೈದು ಸುಮ್ಮನಾಗಿಸಬೇಡಿ. ಒಂದು ಪಕ್ಷ ನಿಮಗೆ ಉತ್ತರವೇ ಗೊತ್ತಿಲ್ಲದಿದ್ದರೆ ಅವರೇ ಪ್ರಯತ್ನಪಟ್ಟು ಉತ್ತರ ಹುಡುಕುವಂತೆ ಪ್ರೋತ್ಸಾಹಿಸಿ.
  • ರಜೆ ಹಾಗು ಬಿಡುವಿನ ವೇಳೆಯಲ್ಲಿ ಮಕ್ಕಳನ್ನು ಟಿವಿ, ಆನ್‌ಲೈನ್ ಗೇಮ್ಸ್, ಮೊಬೈಲ್‌ಗಳಿಂದ ದೂರವಿಟ್ಟು ನೈಸರ್ಗಿಕ ಚಟುವಟಿಕೆ ಮತ್ತು ಆಟಗಳಲ್ಲಿ ತೊಡಗಿಸಿ. ತಮ್ಮ ಕ್ರಿಯಾಶೀಲತೆ ಬಳಸಿಕೊಂಡು ಆಟವಾಡುವುದಕ್ಕೆ ಪ್ರಚೋದಿಸಿ. ಇದರಿಂದ ಸುತ್ತಮುತ್ತಲಿರುವ ವಿಷಯಗಳ ಕುರಿತು ಸ್ವಾಭಾವಿಕವಾದ ಕುತೂಹಲ ಮತ್ತು ಆಸಕ್ತಿ ಉಂಟಾಗಿ ಬೆಳವಣಿಗೆಯತ್ತ ಸಾಗುತ್ತಾರೆ.

ಒಟ್ಟಾರೆ ಹೇಳುವುದಾದರೆ, ಎಲ್ಲ ವಿದ್ಯಾರ್ಥಿಗಳ ಕುತೂಹಲದ ಹಿಂದೆ ಮಹಾನ್ ಜ್ಞಾನಿ ಅಥವಾ ವಿಜ್ಞಾನಿ ಅಡಗಿರುತ್ತಾನೆ/ಳೆ. ಈ ಕುತೂಹಲವೇ ಮಕ್ಕಳಲ್ಲಿರುವ ದೊಡ್ಡ ಸಂಪತ್ತು. ಈ ಕುತೂಹಲವೇ ಮಕ್ಕಳಲ್ಲಿ ಆಸಕ್ತಿ ಮೂಡಿಸಿ, ಮುನ್ನಡೆಸುತ್ತದೆ. ಆಗ ವಿದ್ಯಾರ್ಥಿಯು ಸ್ವಯಂ ಪ್ರೇರಣೆಯಿಂದಾಗಿ ತಾನೇ ಕಲಿಕೆಯನ್ನು ಮುಂದುವರೆಸುತ್ತಾನೆ. ಪೋಷಕರ ಅಥವಾ ಶಿಕ್ಷಕರ ಒತ್ತಡವಿಲ್ಲದೆೇ, ಅಡಚಣೆಗಳಿದ್ದರೂ ಕೂಡ ಅವುಗಳನ್ನು ಮೀರಿ ಸಾಧಿಸುತ್ತಾಳೆ/ನೆ. ಆದ್ದರಿಂದ ಮಕ್ಕಳಿಗೆ ಕುತೂಹಲ ಬೆಳೆಸಿಕೊಳ್ಳುವುದಕ್ಕೆ ಉತ್ತೇಜಿಸಿ.

ಭವ್ಯಾ ವಿಶ್ವನಾಥ್ – ಮನದ ಮಾತು
ಭವ್ಯಾ ವಿಶ್ವನಾಥ್ – ಮನದ ಮಾತು

ಭವ್ಯಾ ವಿಶ್ವನಾಥ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner