ಮಹಾಭಾರತ ಮತ್ತು ಮನಃಶಾಸ್ತ್ರ: ಪ್ರಬುದ್ಧತೆಯಲ್ಲಿ ಅದೆಷ್ಟು ವಿಧ? ಅಕ್ಕಪಕ್ಕದಲ್ಲೇ ಇರುವ ಟಾಕ್ಸಿಕ್ ಜನರಿಂದ ಪಾರಾಗಲು ಇಲ್ಲಿದೆ ಟಿಪ್ಸ್
ಕನ್ನಡ ಸುದ್ದಿ  /  ಜೀವನಶೈಲಿ  /  ಮಹಾಭಾರತ ಮತ್ತು ಮನಃಶಾಸ್ತ್ರ: ಪ್ರಬುದ್ಧತೆಯಲ್ಲಿ ಅದೆಷ್ಟು ವಿಧ? ಅಕ್ಕಪಕ್ಕದಲ್ಲೇ ಇರುವ ಟಾಕ್ಸಿಕ್ ಜನರಿಂದ ಪಾರಾಗಲು ಇಲ್ಲಿದೆ ಟಿಪ್ಸ್

ಮಹಾಭಾರತ ಮತ್ತು ಮನಃಶಾಸ್ತ್ರ: ಪ್ರಬುದ್ಧತೆಯಲ್ಲಿ ಅದೆಷ್ಟು ವಿಧ? ಅಕ್ಕಪಕ್ಕದಲ್ಲೇ ಇರುವ ಟಾಕ್ಸಿಕ್ ಜನರಿಂದ ಪಾರಾಗಲು ಇಲ್ಲಿದೆ ಟಿಪ್ಸ್

ಡಾ ರೂಪಾ ರಾವ್ ಬರಹ: ಮಾತಿಗೆ ಮುಂಚೆ ಯಾವುದೂ ಶಾಶ್ವತ ಅಲ್ಲ, ಬದುಕೇ ನಶ್ವರ, ಇದ್ದುದರಲ್ಲಿ ನೆಮ್ಮದಿಯಾಗಿರು ಎಂದೆಲ್ಲಾ ಉಪದೇಶ ಮಾಡುವವರ (ಕೆಲವರ) ನಿಜವಾದ ಮನಸ್ಥಿತಿ ಬೇರೆಯೇ ಆಗಿರುತ್ತದೆ. ಇಂಥವರನ್ನು ಮೆಚ್ಯುರ್ಡ್‌ (ಪ್ರಬುದ್ಧರು) ಎಂದುಕೊಳ್ಳುವ ಮೊದಲು ನಿಮಗೆ ಮಹಾಭಾರತದ ಪಾಠವೊಂದು ನಿಮಗೆ ಅರ್ಥವಾಗಬೇಕು.

ಡಾ ರೂಪಾ ರಾವ್ ಬರಹ
ಡಾ ರೂಪಾ ರಾವ್ ಬರಹ

ಟಾಕ್ಸಿಕ್ ಪ್ರಬುದ್ಧತೆ ಎಂಬ ಹೊಸ ವಿಷಯ ತಲೆಗೆ ಹೊಳೆಯಿತು. ಸರಿ ಅದನ್ನು ಬೆಳೆಸಿ ಬರೆದಿರುವೆ , ನೋಡಿ , ನೀವು ಅಥವಾ. ನಿಮ್ಮ ಸುತ್ತಲಿನ ಜನ‌ ಪ್ರಬುದ್ದರೇ ಅಥವಾ ಟಾಕ್ಸಿಕ್ ಪ್ರಬುದ್ಧರೇ ಅಂತ

ಮೊದಲಿಗೆ ಪ್ರಬುದ್ಧ ವ್ಯಕ್ತಿತ್ವ ಎಂದರೇನು?

ಸಹಾಯಕಾರಿ, ಸಹಕಾರಿ ಮನೋಭಾವ

ಜೊತೆಗಿದ್ದರೆ ಓವರ್ ಅನಿಸದ ಆದರೆ ಕಮ್ಫರ್ಟ್ ಅನಿಸುವ, ಭಾವನಾತ್ಮಕವಾಗಿ ಅತೀವೃಷ್ಟಿ ಅಲ್ಲದ ಆದರೆ ಒಣ‌ ಎನಿಸದ ಮಾತುಗಳು, ಸುಸ್ಥಿರ ಸೂಕ್ತವಾದ ( ಟಾಕ್ಸಿಕ್ ಅಲ್ಲದ) ಪಾಸಿಟೀವ್ನೆಸ್, ಜೊತೆಗೆ ಕಮಿಟ್ಮೆಂಟ್ಗಳನ್ನು ನಡೆಸುವುದು ಹಾಗು ನಿಯಮಬದ್ದವಾಗಿರುವುದು ಇವುಗಳು ಒಂದು ಅಧ್ಯಯನದ ಪ್ರಕಾರ ಪ್ರಬುದ್ಧತೆ ಎಂದೆನಿಸಿಕೊಳ್ಳುತ್ತದೆ. ಪ್ರಬುದ್ಧತೆಯಲ್ಲಿಯೂ ಸುಮಾರು ಬಗೆಗಳಿವೆ ದೈಹಿಕ ಪ್ರಬುದ್ದತೆ, ಮಾನಸಿಕ ಪ್ರಬುದ್ಧತೆ, ಸಾಮಾಜಿಕ ಪ್ರಬುದ್ಧತೆ. ಭಾವನಾತ್ಮಕ ಪ್ರಬುದ್ಧತೆ ಆಧ್ಯಾತ್ಮಿಕ ಪ್ರಬುದ್ಧತೆ, ನಿರ್ಧಾರ ತೆಗೆದುಕೊಳ್ಳುವ ಪ್ರಬುದ್ದತೆ

ಇದೀಗ ಮಹಾಭಾರತದ ಪಾತ್ರಗಳಲ್ಲಿ ಪ್ರಬುದ್ಧ ಗುಣಗಳ ವಿಧವನ್ನು ನೋಡೋಣ , ನಾನು ನನಗೆ ಸುಲಭವಾಗಲಿ ಎಂದು ಈ ಆರು ಜನರನ್ನು ಮಾತ್ರ ತೆಗೆದುಕೊಂಡಿರುವೆ( ಪಾಂಡವರು ಹಾಗು ಕೃಷ್ಣ ಮಾತ್ರ ತೆಗೆದುಕೊಂಡಿದ್ದೀರ ಕೌರವರನ್ನು ಯಾಕೆ ಬಿಟ್ರಿ , ಅಥವಾ ಕೌರವರು ಏನು ಸಕಲ ಗುಣ ಸಂಪನ್ನರಾ ಎಂದೆಲ್ಲಾ ಅರಚಿದರೆ ಅಂತಹವರಿಗೆ ದೈಹಿಕ ಪ್ರಬುದ್ಧತೆ ಬಿಟ್ಟು ಬೇರಾವ ಪ್ರಬುದ್ಧತೆಯೂ ಇಲ್ಲ ಎಂದೇ ಅರ್ಥ ಮಾಡಿಕೊಳ್ಳುವೆ)

ಅರ್ಜುನ ಬಹುಶಃ ಬೆಚ್ಚಗಿನ ಭಾವ ಕೊಡುತ್ತಿದ್ದುದು ಆದ್ದರಿಂದಲೇ ಅವನಿಗೆ ಹೆಚ್ಚು ಫ್ಯಾನ್ ಫಾಲೋವರ್ ಇದ್ದರು, ಒಂದು ರೀತಿಯಲ್ಲಿ ಸ್ಟೇಬಲ್ ಮನೋಭಾವ ಇತ್ತು, ಸಾಮಾಜಿಕ ಪ್ರಬುದ್ದತೆಯೂ ಇತ್ತು ಆದರೆ ಕಮಿಟ್ಮೆಂಟ್ ಮತ್ತು ನಿಯಮ ಪಾಲನೆ ಕಡಿಮೆ. ಈತನಿಗೆ ಸಾಮಾಜಾಕ ಪ್ರಬುದ್ಧತೆ ಇತ್ತು. ಎಮೋಶನಲ್ ಪ್ರಬುದ್ದತೆ ಕಡಿಮೆ

ಭೀಮ, ದೈಹಿಕ ಪ್ರಬುದ್ಧತೆ ಜಾಸ್ತಿ, ನಿಯಮ ಪಾಲನೆ ಮತ್ತು ಕಮಿಟ್ಮೆಂಟ್ ಇದ್ದರೂ ಭಾವೋದ್ವೇಗ ಜಾಸ್ತಿ ಹಾಗು ಬೆಚ್ಚಗಿನ ಭಾವ ಇರುತ್ತಿರಲಿಲ್ಲ.

ಧರ್ಮರಾಜ ಕಮಿಟ್ಮೆಂಟ್ ಹಾಗು ನಿಯಮಪಾಲನೆಗೆ ಮತ್ತೊಂದು ಹೆಸರು ಹಾಗೇ ಎಮೋಷನ್ ತೀರ ಒಣ ಒಣ ಹಾಗೆಯೇ ಅವನೊಡನೆ ಆ ಸೆಕ್ಯೂರ್ ಬೆಚ್ಚಗಿನ ಅನುಭವ ಇರಲಿಲ್ಲ. ಆಧ್ಯಾತ್ಮಿಕ ಪ್ರಬುದ್ಧತೆ ಇದ್ದರೂ ಸಾಮಾಜಿಕ ಪ್ರಬುದ್ಧತೆ ಹಾಗೂ ಭಾವಾನಾತ್ಮಕ ಪ್ರಬುದ್ಧತೆ ಕಡಿಮೆ, ಸನ್ನಿವೇಶಾತ್ಮಕ ಪ್ರಬುದ್ಧತೆಯೂ ಕಡಿಮೆ

ನನಗನಿಸಿದ ಮಟ್ಟಿಗೆ ಪಾಂಡವರಲ್ಲಿ ಸಹದೇವ ಈ ಎಲ್ಲಾ ಬಗೆಯ ಪ್ರಬುದ್ಧತೆಗಳನ್ನು ಹೊಂದಿದ್ದ ಆದರೆ ಆ ಪ್ರಬುದ್ಧತೆಯ ಮೇಲೆ ಹೊಂದಿದ್ದ ಅಹಂನಿಂದ ಹಾಗೆಯೇ ಭವಿಷ್ಯವನ್ನು ನೋಡುವ ಸಾಮರ್ಥ್ಯ ಇದ್ದರೂ ಅದನ್ನು ಯಾರೊಡನೆಯೂ ಹಂಚಿಕೊಳ್ಳಲಾಗದ ವೇದನೆ ಇಂದಲೋ ಆತನ ಸಾಮಾಜಿಕ ಪ್ರಬುದ್ಧತೆ ಕಡಿಮೆ ಆಗಿತ್ತು.

ಶ್ರಿ ಕೃಷ್ಣ ಮಾತ್ರ ಎಲ್ಲಾ ಬಗೆಯ ಪ್ರಬುದ್ಧತೆ ಹೊಂದಿದ್ದ

ಶ್ರಿ ಕೃಷ್ಣ ಮಾತ್ರ ಎಲ್ಲಾ ಬಗೆಯ ಪ್ರಬುದ್ಧತೆ ಹೊಂದಿದ್ದಲ್ಲದೇ ಯಾವ ಪ್ರಬುದ್ಧತೆಯನ್ನು ಎಲ್ಲಿ ಯಾವಾಗ , ಎಷ್ಟು , ಹೇಗೆ ಪ್ರದರ್ಶಿಸಬೇಕು ಎಂಬುದನ್ನು ಚೆನ್ನಾಗಿ ಅರಿತಿದ್ದ ಚತುರ. ಆದ್ದರಿಂದಲೇ ಕೃಷ್ಣನಂತಹ ಪ್ರಬುದ್ಧ ವ್ಯಕ್ತಿತ್ವ ಮತ್ತೆ ಇಲ್ಲಿಯವರೆಗೆ ಕಂಡಿಲ್ಲ.

ನೀವು ನೋಡಿರಬಹುದು ಈ ಮೇಲಿನ ಗುಣಗಳು ಪ್ರಾಣಿಗಳಲ್ಲಿ ಇರುವುದಿಲ್ಲ, ಅಷ್ಟೇಕೆ ಚಿಕ್ಕಂದಿನಲ್ಲಿ ಇವು ಯಾವುವೂ ಯಾರಲ್ಲಿಯೂ ಇರುವುದಿಲ್ಲ . ನಿಧಾನವಾಗಿ ಕಲಿಯುತ್ತಾ ಬರುತ್ತೇವೆ‌ , ಅದು ನಮ್ಮ ಸುತ್ತ ಮುತ್ತಲಿನ ವಾತಾವರಣ, ನಾವು ನೋಡುವ ಜನ , ಓದಿದ ಪುಸ್ತಕಗಳು, ನಮ್ಮ ಅನುಭವ ಇವೆಲ್ಲವೂ ನಮ್ಮ ಮೆಚ್ಯೂರಿಟಿಯನ್ನು ಬೆಳೆಸುತ್ತಾ ಹೋಗುತ್ತದೆ. ಬೆಳೆಸಿಕೊಳ್ಳಬೇಕು.

ಆದ್ದರಿಂದಲೇ ವಯಸ್ಸಾಗುತ್ತಿದ್ದಂತೆ ಮನಸು ಮಾಗುತ್ತಾ ಮಾಡುತ್ತಾ ಪ್ರಬುದ್ಧತೆ ಆವರಿಸಿಕೊಳ್ಳುತ್ತದೆ, ಕೆಲವರಿಗೆ. ಬದುಕಿನಲಿ ಎಷ್ಟು ಕಷ್ಟಗಳನ್ನು ನೋಡಿರುತ್ತಾರೋ, ಇಲ್ಲ ಸವಾಲುಗಳನ್ನು ಎದುರಿಸಿರುತ್ತಾರೋ ಅಷ್ಟೂ ಪ್ರಬುದ್ಧತೆ ಬರುತ್ತೆ , ಅಫ್ಕೋರ್ಸ್ ಕೆಲವರನ್ನು ಹೊರತು ಪಡಿಸಿ.

ಇದಿಷ್ಟು ಈ ಪ್ರಬುದ್ಧತೆಯ ಇನ್ನೊಂದು ಮುಖ , ಅದು , ಹುಸಿ ಪ್ರಬುದ್ಧತೆಯನ್ನು ಪ್ರದರ್ಶನಕ್ಕಿಡು ಖಯಾಲಿ ಆರಂಭವಾಗಿದೆ. ಇದು ಟಾಕ್ಸಿಕ್ ಅವರಿಗೂ ಅವರ ಜೊತೆಯಲ್ಲಿರುವವರಿಗೂ, ಆದ್ದರಿಂದ ಇದನ್ನು ಟಾಕ್ಸಿಕ್ ಪ್ರಬುದ್ಧತೆ ಎಂದೇ ಕರೆಯೋಣ.

ಹೇಗಿರುತ್ತದೆ ಟಾಕ್ಸಿಕ್ ಪ್ರಬುದ್ಧತೆ

1. ಯಾವಾಗಲೂ ಕೇಳಲಿ, ಕೇಳದೇ ಇರಲಿ ತಮಗೆಲ್ಲಾ ಗೊತ್ತಿದೆ ಎನ್ನುವಂತೆ ಸಲಹೆ ಕೊಡಲು ಮುಂದಾಗುವುದು

2. ಯಾರದ್ದೋ ತೊಂದರೆಗೋ ಕಷ್ಟಕ್ಕೋ ವಿಪರೀತವಾಗಿ ಪಾಸಿಟಿವಿಟಿ ತೋರುವುದು ,

3. ತೀರಾ ಅತಿಯಾದ ಸಭ್ಯತೆ ಮತ್ತು ಸ್ವಯಂ ಹೇರಿಕೊಂಡ ಕಟ್ಟಳೆ- ಸದಾಚಾರಗಳನ್ನು ಇತರರಿಗೆ ಬೋಧಿಸುತ್ತಲೇ ಇರುವುದು

4. ಎಮೋಶನಲ್ಲಿ ಫಿಟ್ ಎಂದು ತೋರಿಸಿಕೊಳ್ಳಲು ಎಮೊಶನ್ ಅನ್ನೇ ಹತ್ತಿಕ್ಕುವುದು‌ . ಇಂತಹವರ ಬಳಿ ಕಷ್ಟ ಹೇಳಿಕೊಂಡರೆ ಮನಸು ಸಮಾಧಾನವಾಗುವುದಿರಲಿ ತಮಗೆ ಬದುಕಲೇ ಬರುವುದಿಲ್ಲವೇ ನೋ ಎಂಬ ಅನುಭವ ತರಿಸುತ್ತಾರೆ

5. ತಾವು ಪರಿಪೂರ್ಣರು, ಕುಂದಿಲ್ಲದವರು ಎಂಬ ಭ್ರಮೆಯ ಜೊತೆಗೆ ಪ್ರಪಂಚವನ್ನೆಲ್ಲಾ ಕುಂದು ಮುಕ್ತ ಮಾಡುವ ದೊಡ್ಡ ಹೊಣೆ ಹೊತ್ತಂತೆ ಚಡಪಡಿಸುತ್ತಾ ಜೊತೆಯಲ್ಲಿರುವವರಿಗೆ ಹಿಂಸೆ ಕೊಡುತ್ತಿರುತ್ತಾರೆ, ಚೇಳಿಗೆ ಪಾರುಪತ್ಯ ಕೊಟ್ಟರೂ ಕೊಡದಿದ್ದರೂ ಚುಚ್ಚುತ್ತದಲ್ಲ ಹಾಗೇ.

6. ತಾವಿರುವುದೇ ಇತರರನ್ನು ಕಾಪಾಡಲು , ಈ ಪ್ರಪಂಚದಲ್ಲಿ ಸದ್ವಿಚಾರ ಹೊರಡಲು ಅಥವಾ ಕೆಳಗಿರುವ ಜನರನ್ನು ಸಮಾಜದಮೇಲೆ ತರಿಸಲು ತಾವೊಬ್ಬರೇ ವೀರ/ ಧೀರೆ ಎಂಬೆಲ್ಲಾ ಹೊಣೆ ಇರುವಂತೆ ವರ್ತಿಸುತ್ತಾರೆ.

7. ತೀರಾ ಪಾಲಿಷ್ಡ್ ಮಾತುಗಳು ಒಂದು ರೀತಿ ನವರಂಗಿ ಆಟ ಅನ್ನುವ ಹಾಗಿನ ಮಾತುಗಳು

8. ತಾವು ಆಯ್ಕೆ ಮಾಡಿಕೊಳ್ಳದ ಇತರರ ಆಯ್ಕೆಗಳನ್ನು ಒಂದು ರೀತಿ ಕಡೆಗಣ್ಣನಿಂದಲೇ ನೋಡುತ್ತಿರುತ್ತಾರೆ, ತಾವು ಪ್ರಬುದ್ಧರು ಆದ್ದರಿಂದ ತಮ್ಮ ಆಯ್ಕೆಯೇ ಶ್ರೇಷ್ಠ ಎಂಬ ವಿಚಿತ್ರ ವ್ಯಸನ ಇರುತ್ತೆ.

10 ಭಾವನೆಗಳನ್ನು ತೋರಿಸಿದರೆ ಇವರಿಗೆ ಅದು ಅಪ್ರಬುದ್ದತೆಯ ಲಕ್ಷಣ.ಆದ್ದರಿಂದ ಯಾವಾಗಲೂ ಇವರು ಅರ್ಜುನ್ ಕಪೂರ್ ತರಹ ಮುಖವನ್ನು ಬಣ್ಣವಿಲ್ಲದ ಸಿಮೆಂಟ್ ಗೋಡೆಯಂತೆ ಇಟ್ಟಕೊಂಡಿರುತ್ತಾರೆ.

11 ಮಾತಿಗೆ ಮುಂಚೆ ಬದುಕಲ್ಲಿ ಯಾವದೂ ಶಾಶ್ವತ ಅಲ್ಲ, ಬದುಕೇ ನಶ್ವರ , ಕರ್ಮ ಮರಳಿ ಬರುತ್ತೆ , ಇದ್ದುದರಲ್ಲಿ ನೆಮ್ಮದಿ ಆಗಿರು , ಇಗ್ನೋರ್ ಮಾಡು ಅಂತೆಲ್ಲಾ ಶಂಖ ಊದುತ್ತಿರುತ್ತಾರೆ. ಹೀಗೆಲ್ಲಾ ಹೇಳಿದರೆ ಮಾತ್ರ ಪ್ರಬುದ್ಧತೆ ಎಂಬ ತಪ್ಪು ಕಲ್ಪನೆ ಸಹಾ ಹೊತ್ತಿರುತ್ತಾರೆ. ಅಸಲಿಗೆ ದಾರಿಯಲ್ಲಿ ಕಲ್ಲು ಎಸೆಯುವ ಜನರನ್ನು ನೀವು ನಿರ್ಲಕ್ಷಿಸಿದರೆ, ಕಲ್ಲು ಎಸೆಯುವುದನ್ನು ನಿಲ್ಲಿಸುವಷ್ಟು ಒಳ್ಳೆಯ ಜನರೇ ಇದ್ದಾರೆ ಲೋಕದಲ್ಲಿ ಎಂಬುದೂ ಭ್ರಮೆ, ಜನ ದೊಣ್ಣೆಕೇತವನ್ನ ಸುಲಭವಾಗೀ ಕೊಲ್ಲುವಷ್ಟು ಹಾವನ್ನು ಕೊಲ್ಲಲಾಗುವುದಿಲ್ಲ ಏಕೆಂದರೆ ಹಾವು ಹಿಂತಿರುಗಿ ಕಚ್ಚುತ್ತದೆ ಎಂಬ ಭಯ ಇರುತ್ತದೆ. ಇದು ತಿರುಗಿಸಿ ಮಾತನಾಡಲಾಗದ ಜನರಿಗೂ ಅನ್ವಯವಾಗುತ್ತದೆ.

ಈ ಟಾಕ್ಸಿಕ್ ಪ್ರಬುದ್ದರು ಇದ್ದರೆ ಇರಲಿ ಅವರು ಪಾಡಿಗೆ‌ ಅವರು ಇದ್ದಾರೆ ಯಾವ ರೀತಿಯ ತೊಂದರೆಯೂ ಇಲ್ಲ, ಆದರೆ ನಮ್ಮಬದುಕಿನ ವರ್ತುಲಕ್ಕೆ ಬಂದು ಹೇರಲು ಬಂದಾಗ ಕಿರಿಕಿರಿ ಆಗುತ್ತೆ. ಸಾಲದು ಅಂತ ಇಷ್ಟೆಲ್ಲಾ ಮಾಡಿಯೂ ತಮ್ಮ ವರ್ತನೆಯ‌ಂತೆ ಇರಲಾರದವರನ್ನು‌ ಅಪ್ರಬುದ್ಧರು ಎಂದು ಟೀಕಿಸುತ್ತಾರೆ. ಇದೊಂದು ರೀತಿಯ ತಾ ಕಳ್ಳ ಪರರ ನಂಬ ರೀತಿಯ ಜನ.

ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990