ಅನ್ಯರ ವಿಚಾರಕ್ಕೆ ಮನಸ್ಸನ್ನು ಬಾಡಿಗೆ ಕೊಡದಿರಿ, ನಮಗಾಗಿ ನಾವು ಬದುಕುವುದು ಕಲಿಯಿರಿ –ಕಾಳಜಿ ಅಂಕಣ
ಕನ್ನಡ ಸುದ್ದಿ  /  ಜೀವನಶೈಲಿ  /  ಅನ್ಯರ ವಿಚಾರಕ್ಕೆ ಮನಸ್ಸನ್ನು ಬಾಡಿಗೆ ಕೊಡದಿರಿ, ನಮಗಾಗಿ ನಾವು ಬದುಕುವುದು ಕಲಿಯಿರಿ –ಕಾಳಜಿ ಅಂಕಣ

ಅನ್ಯರ ವಿಚಾರಕ್ಕೆ ಮನಸ್ಸನ್ನು ಬಾಡಿಗೆ ಕೊಡದಿರಿ, ನಮಗಾಗಿ ನಾವು ಬದುಕುವುದು ಕಲಿಯಿರಿ –ಕಾಳಜಿ ಅಂಕಣ

ಡಾ ರೂಪಾ ರಾವ್ ಬರಹ: ಯಾರೋ ಏನೋ ಹೇಳುತ್ತಾರೆ ಎನ್ನುವ ಕಾರಣಕ್ಕೆ ನಮ್ಮ ಮನಸ್ಸನ್ನು ಬಾಡಿಗೆ ಕೊಟ್ಟು, ಖುಷಿಯನ್ನೂ ಕಳೆದುಕೊಂಡು ಯಾರಿಗೋಸ್ಕರವೋ ಬದುಕುವುದಕ್ಕಿಂತ, ವರ್ತಮಾನದಲ್ಲಿ ನಾವು ಹೇಗಿದ್ದೇವೆ ಎಂದು ಯೋಚಿಸುತ್ತಾ, ಈ ಕ್ಷಣ ಖುಷಿಯಾಗಿ ಬದುಕುವುದು ಮುಖ್ಯ.

ಕಾಳಜಿ ಅಂಕಣ: ಡಾ ರೂಪ ರಾವ್‌
ಕಾಳಜಿ ಅಂಕಣ: ಡಾ ರೂಪ ರಾವ್‌

Kalaji Column: ಒಂದಿನ ನೀವು ಹೊಸ ಬಟ್ಟೆ ಧರಿಸಿದ್ದೀರಿ ಎಂದುಕೊಳ್ಳಿ. ಆ ದಿನ ಹೊರಗೆ ಬಂದ ಕೂಡಲೇ ಯಾರೋ ನಿಮ್ಮ ಸ್ನೇಹಿತನೋ ಸ್ನೇಹಿತೆಯೋ ‘ಹೋ ಈ ಡ್ರೆಸ್‌ ಅನ್ನು ನಿನ್ನೆ ಚಿಕ್ಕಪೇಟೆ ಫುಟ್‌ಪಾತ್‌ನಲ್ಲಿ ನೋಡಿದ್ದೆ. 200 ರೂ ಸೇಲ್ ಇತ್ತು‘ ಅಂದ ಕೂಡಲೇ ನಿಮ್ಮ ಹೊಸ ಬಟ್ಟೆಯ ಉತ್ಸಾಹ ಜರ್ರನೆ ಇಳಿದು ಹೋಗುತ್ತದೆ. ಅಂದೆಲ್ಲಾ ನಿಮ್ಮ ತಲೆಯಲ್ಲಿ ಆ ವ್ಯಕ್ತಿ ಆಡಿತ ಆ ಮಾತುಗಳೇ ಪದೇ ಪದೇ ಗುನುಗುನಿಸುತ್ತಿರುತ್ತದೆ.

ಒಂದು ದಿನ ನಿಮ್ಮ ಬಳಿ ಇರುವ ಸಣ್ಣ ಕಾರಿನಲ್ಲಿ ಹೋಗಿ ನಿಮ್ಮ ಸ್ನೇಹಿತನೊಬ್ಬನನ್ನು ಮೀಟ್ ಆಗುತ್ತೀರಿ. ಆತ ‘ತನ್ನ ಕಾರಿನ ಬಗ್ಗೆ ಹೇಳುತ್ತಾ, ನನ್ನ ಬಳಿ ಐ20 ಕಾರಿದೆ‘ ಎಂದು ಹೇಳುತ್ತಾನೆ. ಆ ದಿನ ಪೂರ್ತಿ ನಿಮ್ಮ ತಲೆಯಲ್ಲಿ ನಿಮ್ಮ ಸ್ನೇಹಿತ ಹೇಳಿದ ಕಾರಿನ ಬಗ್ಗೆಯೇ ಇರುತ್ತದೆ.

ನೀವು ಲೇಖನ ಬರೆಯುವವರು ಅಂದ್ಕೊಳ್ಳಿ. ಯಾರೋ ನಿಮ್ಮ ಲೇಖನಕ್ಕೆ ಕಾಮೆಂಟ್ ಮಾಡಿರುತ್ತಾರೆ. ಇದನ್ನೆಲ್ಲಾ ಯಾಕೆ ಬರಿತೀರಾ, ಅರ್ಥವೂ ಆಗೊಲ್ಲ, ಸಮಯವೂ ವ್ಯರ್ಥ ಅಂತ ಹೇಳಿ ಇರ್ತಾರೆ. ಈ ಮಾತು ನಿಮ್ಮ ಮನಸ್ಸನ್ನು ಹೊಕ್ಕಿರುತ್ತದೆ.

ಇನ್ನೊಂದು ಉದಾಹರಣೆ, ಆಕೆ ಕಂಪನಿಯಲ್ಲಿ ಯಾವುದೋ ಪ್ರಾಜೆಕ್ಟ್ ಪ್ರೆಸೆಂಟ್ ಮಾಡಬೇಕು. ಅವಳ ಪ್ರತಿ ಕೆಲಸಕ್ಕೂ ಮೂಗೂ ಮುರಿಯುವ ಆ ಸಹೋದ್ಯೋಗಿ ಎದುರುಗಡೆಯೇ ಕೂತಿದ್ದಾನೆ. ಅವಳ ಮನಸ್ಸಿನ ತುಂಬ ಅವನ ಅಪಹಾಸ್ಯದ ನಗುವೇ ತುಂಬಿದೆ. ಬಾಸ್ ಏನು ಅಂದುಕೊಳ್ಳಬಹುದೋ ಏನೋ, ಸಹೋದ್ಯೋಗಿ ಏನು ಅಂದುಕೊಳ್ಳುತ್ತಾರೋ ಏನೋ, ಅವರಿಗಾಗಿ ನಾನು ಹೀಗೆಲ್ಲಾ ವರ್ತಿಸಲೇಬೇಕಿದೆ. ಎಂದೋ ಯಾರೋ ಮಾಡಿದ ಅವಮಾನ, ಜಗಳ, ತೋರಿಸಿದ ಅಹಂಕಾರ, ಯಾರೋ ತೋರಿಸದ ಕಾಳಜಿ, ಯಾರೋ ತೋರಿದ ಮೆಚ್ಚುಗೆ…

ಹೀಗೆ ಪ್ರತಿ ದಿನ ಪ್ರತಿ ಕ್ಷಣ ನಮ್ಮ ತಲೆಯನ್ನು ಯಾರೋ ಆಕ್ರಮಿಸಿರುತ್ತಾರೆ. ಅದರಿಂದ ಬಾಡಿಗೆ ಬರುತ್ತಾ ಊಹೂಂ ಬದಲಿಗೆ ಬಾಡಿಗೆ ಕೊಡಬೇಕು. ಆ ಬಾಡಿಗೆಯೇ ಭಯ, ಆತಂಕ, ಅತಿಯಾದ ಆಲೋಚನೆ.

ಏನಿದು ವ್ಯಾಲಿಡೇಶನ್‌ 

ನಮ್ಮ ಆಲೋಚನೆಗಳನ್ನು ಯೋಚನೆಗಳನ್ನಾಗಿ ಮಾರ್ಪಡಿಸುವ ಶಕ್ತಿ ತಲೆಯಲ್ಲಿ ತುಂಬಿರುವ ವ್ಯಕ್ತಿಗಳಿಗೆ ಕೊಟ್ಟು, ನಾವೇ ನಿಸ್ಸಹಾಯಕರಾಗಿ ಬಿಡುವ ಈ ಕ್ರಿಯೆಗೆ ಬಲೆಗೆ ಸಿಕ್ಕಿಹಾಕಿಕೊಳ್ಳುವಿಕೆ (Enmeshment) ಎಂದೂ ಕರೆಯಬಹುದು.

ಹೀಗೆ ತಲೆಯನ್ನು ಇತರ ವ್ಯಕ್ತಿ, ವಿಷಯಗಳಿಗೆ ಬಾಡಿಗೆ ಕೊಟ್ಟು ನಿಸ್ಸಹಾಯಕರಾಗುವ ಜನ ಸಾಮಾನ್ಯವಾಗಿ ಚಿಕ್ಕಂದಿನಲ್ಲಿ ವ್ಯಾಲಿಡೇಶನ್ (ಇತರರಿಂದ ಒಪ್ಪಿಗೆ) ಅದೂ ತಂದೆ ತಾಯಿಯಿಂದ ವ್ಯಾಲಿಡೇಶನ್ ಸಿಗದೆ ತಳಮಳಿಸಿರುತ್ತಾರೆ. ಜನರನ್ನು ಅಂದರೆ ಬೇರೆಯವರನ್ನು ತಲೆಯಲ್ಲಿ ಇರಿಸಿಕೊಂಡೇ ಇರುವ ವ್ಯಕ್ತಿಗಳ ನಡವಳಿಕೆ ಸಾಮಾನ್ಯವಾಗಿ ಹೀಗಿರುತ್ತದೆ.

ಪ್ರತಿಯೊಬ್ಬರೂ ತಮ್ಮನ್ನು ಇಷ್ಟಪಡಲೇಬೇಕಾದ ಅಗತ್ಯವನ್ನು ಹೊಂದಿರುವುದು. ಯಾರಿಗಾದರೂ ಇಷ್ಟವಾಗದಿರುವುದು ಅವರಿಗೆ ತುಂಬಾ ಬೇಸರ ಉಂಟಾಗುತ್ತದೆ. ಅವರು ಸಾಮಾನ್ಯವಾಗಿ ಇತರರ ಆದ್ಯತೆಗಳಿಗೆ ಮೊದಲ ಸ್ಥಾನ ನೀಡುತ್ತಾರೆ (ಇತರರಿಗಾಗಿ ತ್ಯಾಗ ಮಾಡುತ್ತಾರೆ)

ಎಲ್ಲರ ಅಳು, ನೋವು, ಕೋಪ, ತೊಂದರೆಯ ಭಾವನೆಗಳಿಗೆ ಅವರು ತಾವೇ ಜವಾಬ್ದಾರಿ ಅಂದುಕೊಳ್ಳುತ್ತಾರೆ. ಇದರಿಂದ ಬಹಳ ಕಾಲದ ಅಪರಾಧಿ ಮನೋಭಾವ ಮತ್ತು ಇತರರಿಗೆ ನೋವು ಮಾಡಿಬಿಟ್ಟೆನೇನೋ ಎಂಬ ಆತಂಕ ಹೊಂದಿರುತ್ತಾರೆ. ಪರಸ್ಪರ ಘರ್ಷಣೆ, ಮನಸ್ತಾಪ ಜಗಳಗಳನ್ನು ತಪ್ಪಿಸಲು ತಮ್ಮ ಅಭಿಪ್ರಾಯಗಳನ್ನು ಮುಚ್ಚಿಡುತ್ತಾರೆ.

ಯಾವುದೇ ವಿಷಯದ ಬಗ್ಗೆ ಬೇಸರ ಇದ್ದರೂ ಸಹ ಬಹಳ ಸಲ ನೇರವಾಗಿ ನೇರವಾಗಿ ವ್ಯಕ್ತಪಡಿಸುವುದಿಲ್ಲ.

ಅವರಿಗೆ ಯಾವುದೇ ಕೆಲಸ ಸಾಧ್ಯ ಇಲ್ಲದಿದ್ದಾಗಲೂ ಸಹ ಕೇಳಿದವರಿಗೆ ‘ಇಲ್ಲ‘ ಎಂದು ಹೇಳುವುದಿಲ್ಲ. ಅವರಿಗೆ ಬೇಕಾದುದನ್ನು ನೇರವಾಗಿ ಕೇಳುವುದಕ್ಕೆ ಹಿಂಜರಿಕೆ ಇರುತ್ತದೆ.

ಮನಸಿನಲ್ಲಿ ಆ ವಿಷಯ ಒಪ್ಪದಿದ್ದರೂ ಸಹ ಗುಂಪಿನಲ್ಲಿ ತಾವು ಸೇರಬೇಕೆಂಬ ತವಕದಿಂದ ಆಯಿತು ಎಂದೆನ್ನುತ್ತಾರೆ. ತಮ್ಮ ಸ್ವಂತ ಗ್ರಹಿಕೆ ಮತ್ತು ಅಭಿಪ್ರಾಯ, ತಿಳುವಳಿಕೆಯನ್ನು ಏನೂ ಇಲ್ಲ ಕಡಿಮೆ ಅತ್ಯಲ್ಪವೆಂದು ಪರಿಗಣಿಸುತ್ತಾರೆ.

ಇತರರ ಅಭಿಪ್ರಾಯಗಳನ್ನು ತಮ್ಮ ಸ್ವಂತ ಅಭಿಪ್ರಾಯಕ್ಕಿಂತ ಹೆಚ್ಚು ವ್ಯಾಲಿಡ್ (ಮುಖ್ಯ ಎಂಬಂತೆ) ಎಂದು ಭಾವಿಸಿ ಗೌರವಿಸುತ್ತಾರೆ. ಹೀಗೆ ಜನರಿಗೆ ಅವರ ಮಾತಿಗೆ, ಅವರ ವ್ಯಾಲಿಡೇಶನ್‌ಗೆ ಅಥವಾ ಅವರು ಕೊಟ್ಟ ನೋವಿಗೆ ನಮ್ಮ ತಲೆಯಲ್ಲಿ ಈ ಜಾಗ ಕೊಟ್ಟು ನಮ್ಮ ನೆಮ್ಮದಿಯನ್ನೂ ಬಾಡಿಗೆಯಾಗಿ ಕೊಡುವ ಅಗತ್ಯವಿಲ್ಲ.

ತಲೆಯಲ್ಲಿ ಝಾಂಡಾ ಊರಿರುವವರನ್ನು ಹೇಗೆ ಓಡಿಸಬಹುದು

  • ನಮ್ಮ ಭಾವನಾತ್ಮಕ ಇತಿ ಮಿತಿ, ಹಿತ ಮಿತಗಳನ್ನು ಅರಿತಿರಬೇಕು
  • ಯಾರದ್ದೋ ಮಾತಿನ ನೆನಪು, ಭಯ ನಮ್ಮ ವೈಯಕ್ತಿಕ ಶಾಂತಿಯನ್ನು ಕಸಿದುಕೊಳ್ಳುವಾಗ ನಾವು ಅದನ್ನು ಎಲ್ಲಿಗೆ ನಿಲ್ಲಿಸಬೇಕು ಎಂದು ಗೊತ್ತಿರಬೇಕು.
  • ಇತರರ ಬಗ್ಗೆ ಆಲೋಚಿಸಬಹುದೇ ಹೊರತು ಅದು ಯೋಚನೆಯಾಗಿ ಬದಲಾಗಬಾರದು. ಹಾಗಾಗುವಾಗ ಅದನ್ನು ಅರಿತು ನಿಲ್ಲಿಸಬೇಕು.
  • ಎಲ್ಲವನ್ನೂ ಸರಿ ಮಾಡಿಕೊಳ್ಳಲಾಗುವುದಿಲ್ಲ. ಪರ್ಫೆಕ್ಷನ್ ಎಂಬುದೇ ಇಲ್ಲ ಎಂದು ಒಪ್ಪಿಕೊಳ್ಳುವುದು ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
  • ಅತಿಯಾದ ಯೋಚನೆ, ಚಿಂತೆ ಕಾಡಿದಾಗ ಅದರ ಬದಲು ಪಾಸಿಟಿವ್ ಆಲೋಚನೆಗಳನ್ನು ಮತ್ತು ಉಪಯುಕ್ತ ಕೆಲಸಗಳಲ್ಲಿ ತೊಡಗುವುದು ಓವರ್ ಥಿಂಕಿಂಗ್ ಬಲೆಯಲ್ಲಿ ಬೀಳದ ಹಾಗೆ ನೋಡಿಕೊಳ್ಳುತ್ತದೆ.
  • ಸ್ವಂತ ಶಕ್ತಿಯ ಅರಿವು, ಸ್ವಂತ ಬಲಾಬಲಗಳ ತಿಳುವಳಿಕೆ ಇತರರ ಮಾತಿಗೆ ತಲೆಗೊಡಲು ಬಿಡುವುದಿಲ್ಲ.
  • ಏನೇ ಆಗಲಿ ವರ್ತಮಾನದಲ್ಲಿ ಏನು ನಡೆಯುತ್ತದೋ ಅದರ ಬಗ್ಗೆ ಗಮನ ಹರಿಸುವುದು ಮಾನಸಿಕ ಆರೋಗ್ಯಕ್ಕೆ ಮುಖ್ಯ
  • ಯಾರದ್ದೇ ಮಾತು ಅಥವಾ ವರ್ತನೆ ಅಥವಾ ಕೆಲಸ ನಮಗೆ ಇರಿಸು ಮುರಿಸು ಅಥವಾ ಅಸಮಾಧಾನ ತಂದಿದ್ದರೆ ಅವರೊಡನೆ ಕೂಡಲೇ ಈ ಬಗ್ಗೆ ಮಾತಾಡಿ ಬಿಡುವುದು, ಅದರ ಬಗೆಗಿನ ಯೋಚನೆಯನ್ನು ಹೊರದೂಡುತ್ತದೆ.
  • ನಮ್ಮ ವರ್ತನೆ ಉಡುಪು, ನಡೆ ನುಡಿಗಳು ಸಾಮಾಜಿಕ/ಕಾನೂನಿನ ಸ್ವಾಸ್ಥ್ಯಕ್ಕೆ ಧಕ್ಕೆ ತರದ ಹೊರತು ನಮ್ಮ ಪ್ರಕಾರ ನಾವು ನಡೆಯುವುದು ಯಾವಾಗಲೂ ಒಳ್ಳೆಯ ಆಯ್ಕೆ.

ಈಗಲಾದರೂ ನಮ್ಮ ತಲೆಯಲ್ಲಿ ಅನಾವಶ್ಯಕವಾಗಿ ಝಾಂಡಾ ಊರಿರುವವರನ್ನು ಓಡಿಸಿ, ನಮಗಾಗಿ ನಾವು ಬದುಕೋಣವೇ?

ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990

 

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner