Depression: ಖಿನ್ನತೆ ಎಂದರೇನು, ಇದರ ಲಕ್ಷಣಗಳೇನು; ಖಿನ್ನತೆ ಅತಿಯಾದ್ರೆ ಏನೆಲ್ಲಾ ಪರಿಣಾಮಗಳಾಗಬಹುದು – ಮನದ ಮಾತು
ಭವ್ಯಾ ವಿಶ್ವನಾಥ್ ಬರಹ: ಖಿನ್ನತೆಯು ವ್ಯಕ್ತಿಯ ಆಲೋಚನೆಗಳು, ಭಾವನೆಗಳು ಮತ್ತು ನಡವಳಿಕೆಯ ಮೇಲೆ ಸಾಕಷ್ಟು ಪ್ರಭಾವ ಬೀರುವುದಲ್ಲದೇ, ವ್ಯಕ್ತಿಯನ್ನು ಸಂಪೂರ್ಣವಾಗಿ ತನ್ನ ಹತೋಟಿಯಲ್ಲಿಟ್ಟುಕೊಳ್ಳುತ್ತದೆ. ಖಿನ್ನತೆಗೆ ಒಳಗಾದವರ ಮನಸ್ಸು ಬಹಳ ದುರ್ಬಲ ಮತ್ತು ಸೂಕ್ಷ್ಮವಾಗಿರುತ್ತದೆ. ಮಾನಸಿಕವಾಗಿ ದೈಹಿಕವಾಗಿ ದೀರ್ಘಕಾಲದವರೆಗೆ ಒದ್ದಾಡಬೇಕಾಗುತ್ತದೆ.

ದಿನನಿತ್ಯ ನಮ್ಮ ಸುತ್ತಮುತ್ತಲ್ಲಿರುವ ಜನಗಳು ‘ನನಗೆ ಡಿಪ್ರೆಶನ್ ಆಗಿದೆ’, ‘ನಾನು ಡಿಪ್ರೆಶನ್‌ನಲ್ಲಿದ್ದೆ’ ಎಂದು ಹೇಳುವುದನ್ನು ಕೇಳುತ್ತಿರುತ್ತೇವೆ. ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು, ಸಣ್ಣ ವಯಸ್ಸಿನ ಮಕ್ಕಳು ಸಹಿತ ಪದೇಪದೇ ‘ಡಿಪ್ರೆಶನ್’ ಎನ್ನುವ ಪದ ಬಳಕೆ ಮಾಡುವುದನ್ನು ಕೇಳುತ್ತಿದ್ದೇವೆ. ಹಾಗಾದರೆ ಇದು ನಿಜವೇ? ಇವರು ಡಿಪ್ರೆಶನ್‌ನಿಂದ ನರಳುತ್ತಿರುವುದು ನಿಜವೇ? ಏನಿದು ‘ಡಿಪ್ರೆಶನ್’? ಇದರ ಲಕ್ಷಣಗಳೇನು? ಇದಕ್ಕೆ ಪರಿಹಾರವೇನು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಖಿನ್ನತೆ ಮತ್ತು ಸಾಮಾನ್ಯ ಬೇಸರದ ನಡುವಿನ ವ್ಯತ್ಯಾಸ
ದಿನನಿತ್ಯ ಅಥವಾ ಒಮ್ಮೊಮ್ಮೆ ಆಗುವ ಸಣ್ಣಪುಟ್ಟ ಬೇಸರ, ನಿರಾಸೆ, ದುಃಖಗಳೆಲ್ಲವೂ ಖಿನ್ನತೆಯಾಗುವುದಿಲ್ಲ. ಸಾಮಾನ್ಯವಾಗಿ ಆಗುವ ಬೇಸರಗಳು ಸ್ವಲ್ಪ ಕಾಲದವರೆಗೆ ಮಾತ್ರವಿದ್ದು ಕ್ರಮೇಣ ಮಾಸಿ ಹೋಗುತ್ತದೆ. ಇದು ನಿಮ್ಮ ದಿನಚರಿ, ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಆದರೆ ಈ ಬೇಸರದ ಮನಸ್ಥಿತಿ ಆಳವಾಗಿ ಬೇರೂರಿ ದೀರ್ಘಕಾಲದವರೆಗೆ ನಿಮ್ಮನ್ನು ಆವರಿಸಿದರೆ ಖಿನ್ನತೆಯಾಗುವ ಸಾಧ್ಯತೆಯಿದೆ.
ಹಾಗಾಗಿ ‘ಖಿನ್ನತೆ’ ಅಥವಾ ‘ಡಿಪ್ರೆಶನ್’ ಎಂದು ತೀರ್ಮಾನಿಸುವ ಮೊದಲು, ಈ ರೋಗದ ನಿಜವಾದ ಅರ್ಥ ಮತ್ತು ಲಕ್ಷಣವನ್ನು ಅರಿಯಿರಿ.
ಖಿನ್ನತೆ (ಡಿಪ್ರೆಶನ್) ಎಂದರೇನು?
ಖಿನ್ನತೆಯು ಒಂದು ಮಾನಸಿಕ ಅಸ್ವಸ್ಥತೆ. ಈ ರೋಗ ದಿಢೀರನೆ ಯಾರಲ್ಲೂ ಕಾಣಿಸುವುದಿಲ್ಲ. ಕ್ರಮೇಣ ಹಂತ ಹಂತವಾಗಿ ಬೆಳೆಯುತ್ತದೆ. ವೈದ್ಯರು ಖಿನ್ನತೆಯನ್ನು ಮೂರು ರೀತಿಯಲ್ಲಿ ವಿವರಿಸುತ್ತಾರೆ. ಅದು ಎಷ್ಟು ಗಂಭೀರವಾಗಿದೆ ಎಂಬುದರ ಮೇಲೆ ಅವಲಂಬಿತವಾಗಿದೆ.
- ಕಡಿಮೆ ತೀವ್ರತೆಯ ಖಿನ್ನತೆ (ಮೈಲ್ಡ್ ಡಿಪ್ರೆಶನ್) - ಇದು ನಿಮ್ಮ ದೈನಂದಿನ ಜೀವನದಲ್ಲಿ ಸ್ವಲ್ಪ ಪ್ರಭಾವ ಬೀರುತ್ತದೆ.
- ಮಧ್ಯಮ ಖಿನ್ನತೆ (ಮಾಡರೇಟ್ ಡಿಪ್ರೆಶನ್)- ಇದು ನಿಮ್ಮ ದೈನಂದಿನ ಜೀವನದ ಮೇಲೆ ಗಮನಾರ್ಹವಾದ ಪರಿಣಾಮ ಬೀರುತ್ತದೆ.
- ತೀವ್ರ ಖಿನ್ನತೆ (ಸಿವಿಯರ್ ಡಿಪ್ರೆಶನ್) - ಇದು ನೀವು ಪ್ರತಿನಿತ್ಯ ಜೀವನ ನಡೆಸುವುದಕ್ಕೆ ತೊಂದರೆ ಮಾಡುತ್ತದೆ.
ಖಿನ್ನತೆಗೆ ನಿರ್ದಿಷ್ಟ ಒಂದೇ ಕಾರಣ ಇರುವುದಿಲ್ಲ, ಬದಲಾಗಿ ಕಾರಣಗಳು ಹಲವಾರು ಇರುತ್ತವೆ. ವಂಶ ಪಾರಂಪರ್ಯವಾಗಿ ಅಥವಾ ಬೇರೆ ಕಾರಣಗಳಿಂದಲೂ ಉಂಟಾಗುವ ಸಾಧ್ಯತೆಯಿರುತ್ತದೆ.
(ಉದಾ: ಮಗುವಿಗೆ ಜನ್ಮ ನೀಡಿದ ನಂತರ (ಪೋಸ್ಟ್ ಮಾರ್ಟಮ್ ಡಿಪ್ರೆಶನ್), ಶೈಕ್ಷಣಿಕ ಅಥವಾ ಉದ್ಯೋಗದಲ್ಲಿ ಸೋಲನ್ನು ಅನುಭವಿಸಿದಾಗ, ಪ್ರೀತಿಸಿದ ವ್ಯಕ್ತಿ ದೂರಾದಾಗ, ಆತ್ಮೀಯರನ್ನು ಕಳೆದುಕೊಂಡಾಗ, ಜಾಗ ಬದಲಾವಣೆ ಸಂದರ್ಭದಲ್ಲಿ... ಇತ್ಯಾದಿ).
ಎಲ್ಲಾ ವಯಸ್ಸಿನವರಿಗೂ ಕಾಡಬಹುದು ಖಿನ್ನತೆ
ಖಿನ್ನತೆಯು ಕನಿಷ್ಠ 2 ರಿಂದ 3 ತಿಂಗಳಿನಿಂದ ಪ್ರಾರಂಭವಾಗಿ ವ್ಯಕ್ತಿಯನ್ನು ಬಹಳ ಕಾಲದವರೆಗೆ ಆವರಿಸಿಕೊಂಡು ದುರ್ಬಲರನ್ನಾಗಿ ಮಾಡುತ್ತದೆ.
ಖಿನ್ನತೆಯು ವ್ಯಕ್ತಿಯ ಆಲೋಚನೆಗಳು, ಭಾವನೆಗಳು ಮತ್ತು ನಡುವಳಿಕೆಯ ಮೇಲೆ ಸಾಕಷ್ಟು ಪ್ರಭಾವ ಬೀರುವುದಲ್ಲದೇ, ವ್ಯಕ್ತಿಯನ್ನು ಸಂಪೂರ್ಣವಾಗಿ ತನ್ನ ಹತೋಟಿಯಲ್ಲಿಟ್ಟುಕೊಳ್ಳುತ್ತದೆ. ಖಿನ್ನತೆಗೆ ಒಳಗಾದವರ ಮನಸ್ಸು ಬಹಳ ದುರ್ಬಲ ಮತ್ತು ಸೂಕ್ಷ್ಮವಾಗಿರುತ್ತದೆ. ಮಾನಸಿಕವಾಗಿ ದೈಹಿಕವಾಗಿ ದೀರ್ಘಕಾಲದವರೆಗೆ ಒದ್ದಾಡಬೇಕಾಗುತ್ತದೆ.
ಖಿನ್ನತೆಯಿಂದ ಹೊರಬರಲು ಮನಃಶಾಸ್ತ್ರಜ್ಞರು ನಿರ್ದೇಶಿಸಿದ ಔಷಧಿಗಳು ಮತ್ತು ಆಪ್ತಸಮಾಲೋಚನೆಯ ಅಗತ್ಯವಿರುತ್ತದೆ. ಖಿನ್ನತೆಯ ಲಕ್ಷಣಗಳನ್ನು ಮೊದಲ ಹಂತದಲ್ಲಿಯೇ ನೀವು ಗಮನಿಸಿದರೆ, ಶೀಘ್ರವಾಗಿ ಚಿಕೆತ್ಸೆ ತೆಗೆದುಕೊಳ್ಳುವುದನ್ನು ಮರೆಯಬೇಡಿ.
ಖಿನ್ನತೆಯ ಲಕ್ಷಣಗಳು
ದೈಹಿಕ ಲಕ್ಷಣಗಳು
- ತನ್ನ ದಿನಚರಿ, ಸ್ವಯಂ ಕಾಳಜಿ (ಸ್ನಾನ, ಆಹಾರ ಸೇವನೆ, ನಿದ್ರೆ) ಸ್ವಚ್ಚತೆ, ಶಿಸ್ತನ್ನು ನಿಭಾಯಿಸಲು ಸಾಧ್ಯವಾಗದೇ ಇರುವುದು
- ದೇಹದ ತೂಕ ಹೆಚ್ಚಬಹುದು
- ನಿದ್ರಾಹೀನತೆ ಅಥವಾ ಹೆಚ್ಚು ನಿದ್ರೆ ಮಾಡುವುದು
- ಹೆಚ್ಚು ಆಹಾರ ಸೇವಿಸುವುದು ಅಥವಾ ಸೇವಿಸದೇ ಇರುವುದು
- ಹೆಚ್ಚು ಆಯಾಸವಾದಂತೆ ಮತ್ತು ದೇಹದಲ್ಲಿ ಶಕ್ತಿಯಿಲ್ಲದಂತೆ ಭಾಸವಾಗುವುದು
ಹೀಗೆ ಖಿನ್ನತೆಯ ಲಕ್ಷಣ ಇರುವ ಜನರು ಮೂಡ್ ಸ್ವಿಂಗ್ಸ್, ನಿದ್ರೆ ಮತ್ತು ಆಹಾರ ಸೇವನೆಯಲ್ಲಿ ಬದಲಾವಣೆಗಳನ್ನು ಹೊಂದಿರುತ್ತಾರೆ ಮತ್ತು ಯಾವುದೇ ಕಾರಣವಿಲ್ಲದೆ ದೈಹಿಕವಾಗಿ ನೋವುಗಳನ್ನು ಸಹ ಅನುಭವಿಸಬಹುದು.
ನಡವಳಿಕೆ ಮತ್ತು ಮಾನಸಿಕ ಲಕ್ಷಣಗಳು
- ಸಾಮಾನ್ಯವಾಗಿ ಚಡಪಡಿಕೆ ಮತ್ತು ಕಿರಿಕಿರಿ ನಡುವಳಿಕೆಯನ್ನು ಹೊಂದಿರುತ್ತಾರೆ
- ತನ್ನಲ್ಲಿರುವ ಉತ್ಸಾಹ ಮತ್ತು ಲವಲವಿಕೆಯನ್ನು ಕಳೆದುಕೊಂಡು ಎಲ್ಲಾ ಚಟುವಟಿಕೆಯಲ್ಲೂ ನಿರುತ್ಸಾಹ ಹೊಂದಿರುತ್ತಾರೆ.
- ಒಟ್ಟಾರೆ ಯಾವ ಕೆಲಸ ಕಾರ್ಯಗಳನ್ನು ಸ್ವಯಂ ಪ್ರೇರಣೆಯಿಂದ ಮಾಡಲಾಗುವುದಿಲ್ಲ.
- ನಿರಂತರವಾಗಿ ಹತಾಶೆ ಮತ್ತು ಅಸಹಾಯಕತನದಿಂದ ಬಳಲುತ್ತಾರೆ
- ಆದಷ್ಟು ಏಕಾಂಗಿತನವನ್ನು ಬಯಸುತ್ತಾರೆ.
- ವೈಯಕ್ತಿಕ ಬದುಕು, ಉದ್ಯೋಗ, ಸಾಮಾಜಿಕ ಬದುಕಿನಲ್ಲಿ ಯಾವುದೇ ಆಸಕ್ತಿಯಿರುವುದಿಲ್ಲ.
- “ನಾನು ನಿಷ್ಪ್ರಯೋಜಕ, ಯೋಗ್ಯನಲ್ಲವೆಂದು ಭಾವಿಸಲು ಪ್ರಾರಂಭಿಸುತ್ತಾರೆ. ಕ್ರಮೇಣವಾಗಿ ತನ್ನ ಮೇಲೆ ಕೀಳು ಭಾವನೆ ಬೆಳೆಸಿಕೊಂಡು ಅಸಹಾಯಕತನ ಮತ್ತು ಜಿಗುಪ್ಸೆಗೆ ಗುರಿಯಾಗುತ್ತಾರೆ.
- ನನ್ನನ್ನು ಯಾರು ಅರ್ಥಮಾಡಿಕೊಳ್ಳುವುದಿಲ್ಲ, ನಾನು ಯಾರಿಗೂ ಬೇಡವಾದವನು/ಳು , ನಾನು ಏಕಾಂಗಿ, ನನಗೆ ಯಾರಿಲ್ಲವೆಂದು ಭಾವಿಸಿ ಮಾನಸಿಕವಾಗಿ ನರಳುತ್ತಾರೆ.
- ತಾನು ಇದುವರೆಗೂ ಆನಂದಿಸಿದ ಮತ್ತು ಆಸಕ್ತಿ ಹೊಂದಿದ ಚಟುವಟಿಕೆಗಳಲ್ಲಿ ನಿರಾಸಕ್ತಿ ತೋರಿಸುವ ಸಾಧ್ಯತೆ ಹೆಚ್ಚು.
- ಸ್ಥಿರವಾದ ಮನಸ್ಸನ್ನು ಹೊಂದಿರುವುದಿಲ್ಲ
- ಯಾರೂ ಬೇಕೆನ್ನಿಸುವುದಿಲ್ಲ ಮತ್ತು ಬದುಕು ಬೇಡವೆಂಬುವ ನಿರ್ಧಾರಕ್ಕೆ ತಲುಪುತ್ತಾರೆ
- ಸ್ವಯಂ ಹಾನಿ ಅಥವಾ ಆತ್ಮಹತ್ಯೆಯ ಆಲೋಚನೆಗಳು ಬರುವುದುಂಟು
ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಯನ್ನು ಹೇಗೆ ನೋಡಿಕೊಳ್ಳಬೇಕು?
ಸಹಾನುಭೂತಿ - ಕುಟುಂಬ ಸದಸ್ಯರು, ಸ್ನೇಹಿತರು, ಸಹೋದ್ಯೋಗಿಗಳು, ಬಂಧುಗಳು ಖಿನ್ನತೆಗೊಳಗಾಗಿರುವವರನ್ನು ಅನುಕಂಪ ಮತ್ತು ಸಹಾನುಭೂತಿಯಿಂದ ಕಾಣಬೇಕು. ಅವರ ಮನಸ್ಥಿತಿಯ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು, ಮಾನಸಿಕ ಬೆಂಬಲ, ಪ್ರೋತ್ಸಾಹ , ಪ್ರೀತಿ ಕಾಳಜಿಯನ್ನು ನೀಡಿದಷ್ಟು ಅವರು ಬೇಗ ಗುಣವಾಗುತ್ತಾರೆ.
ಒಂಟಿತನ ನಿವಾರಣೆ- ‘ನಾನು ಒಂಟಿ, ನನ್ನನ್ನು ಪ್ರೀತಿಸುವ, ಅರ್ಥ ಮಾಡಿಕೊಳ್ಳುವವರು ಯಾರಿಲ್ಲ, ನಾನು ಅಪ್ರಯೋಜಕ, ನಾನು ಬದುಕಿರುವುದು ವ್ಯಥ೯ ಎಂದು ಭಾವಿಸುವ ವ್ಯಕ್ತಿಗೆ ಸಾಕಷ್ಟು ಸಮಯ ನೀಡಿ ಮತ್ತು ಅವರ ಮಾತನ್ನು ಆಲಿಸಿ. ಇಂಥಹ ಸಂದರ್ಭದಲ್ಲಿ ಆತ್ಮೀಯರು ಸಾಧ್ಯವಾದಷ್ಟು ತಮ್ಮ ಸಮಯವನ್ನು ಖಿನ್ನತೆ ವ್ಯಕ್ತಿಯ ಬಳಿ ಕಳೆದು, ಅವರಿಗೆ ಮನಸ್ಸಲ್ಲಿರುವುದನ್ನು ಹಂಚಿಕೊಳ್ಳುವುದಕ್ಕೆ ಪ್ರೋತ್ಸಾಹಿಸಬೇಕು. ಅವರು ಹೇಳಿದ್ದನ್ನು ಗಮನವಿಟ್ಟು ಆಲಿಸಿ. ಇದರಿಂದ ಮನಸ್ಸು ಹಗುರವಾಗುವ ಸಾಧ್ಯತೆ ಇರುತ್ತದೆ.
ನಿಂದನೆ, ತೀರ್ಪನ್ನು ತಡೆಯಿರಿ– ಖಿನ್ನತೆಗೊಳಗಾಗಿರುವ ವ್ಯಕ್ತಿಯನ್ನು ಯಾವ ಕಾರಣಕ್ಕೂ ಸಹ ನಿಂದಿಸುವುದಾಗಲಿ, ಆಡಿಕೊಳ್ಳುವುದಾಗಲಿ ಅಥವಾ ಅವರ ಮನಸ್ಥಿತಿಯ ಕುರಿತು ನಿರ್ಣಾಯದ ಮಾತುಗಳನ್ನು ಆಡಬೇಡಿ. ಇದರಿಂದ ಅವರಿಗೆ ಭಾರಿ ಪ್ರಮಾಣದಲ್ಲಿ ಮತ್ತಷ್ಟು ದುಃಖದಿಂದ ಕುಗ್ಗುತ್ತಾರೆ.
ಆಶ್ವಾಸನೆ - ಭರವಸೆಯೇ ಇಲ್ಲದೇ ಬದುಕುವುದು ಬಹಳ ಕಷ್ಟ. ಬದುಕಿನಲ್ಲಿ ಭರವಸೆಯೇ ಇಲ್ಲದ ವ್ಯಕ್ತಿಗೆ ಆಶ್ವಾಸನೆ ನೀಡುವುದು ಬಾಯಾರಿಕೆಯಿಂದ ಬಳಲುತ್ತಿರುವವರಿಗೆ ನೀರು ಕುಡಿಸಿದ ಹಾಗೆ. ನಿಮ್ಮ ಸಹಾನುಭೂತಿಯ ನಡೆ ಮತ್ತು ಮಾತುಗಳಿಂದ ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ಭರವಸೆ ಮೂಡುವಂತೆ ನೋಡಿಕೊಳ್ಳಿ.
ಆತ್ಮಹತ್ಯೆ - ಭರವಸೆಯಿಂದಿರುವ ವ್ಯಕ್ತಿಯಲ್ಲಿ ತನ್ನ ಬದುಕನ್ನು ತಾನೇ ಅಂತ್ಯಗೊಳಿಸುವಂತಹ ಆಲೋಚನೆಗಳು ಮೂಡುವುದಿಲ್ಲ. ನೀವು ಸದಾ ಆ ವ್ಯಕ್ತಿಯ ಬೆಂಬಲಕ್ಕೆ ಇರುವಿರೆಂದು ಆಶ್ವಾಸನೆ ನೀಡಿ.
ಭವ್ಯಾ ವಿಶ್ವನಾಥ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.
