ನಮ್ಮನ್ನು ನಾವು ನಂಬುವುದು ಬಹಳ ಮುಖ್ಯ: ಕನಸು ನನಸಾಗಲು ಪ್ರತಿದಿನ ಈ ತಂತ್ರಗಳನ್ನು ಅಭ್ಯಾಸ ಮಾಡಿ - ಮನದ ಮಾತು ಅಂಕಣ
ಭವ್ಯಾ ವಿಶ್ವನಾಥ್ ಬರಹ: ಧೃಢೀಕರಣಗಳು (Affirmations) ಎಂದರೆ ಧನಾತ್ಮಕವಾದ ಮತ್ತು ನಿರ್ದಿಷ್ಟವಾದ ಹೇಳಿಕೆಗಳು. ನಮ್ಮ ಧೃಢವಾದ ಆಕಾಂಕ್ಷೆಗಳನ್ನು ಖಚಿತಪಡಿಸಿ, ಇವುಗಳನ್ನು ಅಭಿವ್ಯಕ್ತಿಸುವಲ್ಲಿ ಧೃಢೀಕರಣಗಳು ನೆರವಾಗುತ್ತವೆ.

ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಆಸೆ-ಆಕಾಂಕ್ಷೆಗಳನ್ನು ಹೊತ್ತು ಬದುಕನ್ನು ಸಾಗಿಸುತ್ತಿರುತ್ತಾನೆ. ಸಿರಿವಂತರು ಅಥವಾ ಬಡವರು, ಸಾಮಾನ್ಯ ವ್ಯಕ್ತಿಗಳು ಅಥವಾ ಸಾಧಕರೇ ಆಗಿರಬಹುದು, ವಿದ್ಯಾವಂತರು ಅಥವಾ ಅವಿದ್ಯಾವಂತರೇ ಆಗಿರಬಹುದು. ಎಲ್ಲರಿಗೂ ಕೂಡ ಅವರದೇ ಆದ ಆಕಾಂಕ್ಷೆಗಳು, ಗುರಿಗಳು ಇದ್ದೇ ಇರುತ್ತದೆ. ಈ ಆಕಾಂಕ್ಷೆಗಳು ಪುಟ್ಟದು ಅಥವಾ ದೊಡ್ಡದೂ ಆಗಿರಬಹುದು. ಆದರೆ ಎಲ್ಲವೂ ಆಕಾಂಕ್ಷೆಗಳೇ ಎನ್ನುವುದನ್ನು ನೆನಪಿನಲ್ಲಿಡಬೇಕು. ಮಕ್ಕಳಿಗೆ ಕ್ರೀಡೆ, ಕಲೆ, ಶೈಕ್ಷಣಿಕ ಆಕಾಂಕ್ಷೆಗಳಿದ್ದರೆ, ವಯಸ್ಕರಿಗೆ ದೈಹಿಕ ಆರೋಗ್ಯ, ಫಿಟ್‌ನೆಸ್, ಸೌಂದರ್ಯ, ಉದ್ಯೋಗ, ಆರ್ಥಿಕ ವಿಚಾರದ ಬಗ್ಗೆ ಆಕಾಂಕ್ಷೆಗಳಿರುತ್ತವೆ. ಮಧ್ಯಮ ವಯಸ್ಸಿನವರಿಗೆ ಆರ್ಥಿಕ ವಿಚಾರ ಅಂದರೆ ಮನೆ ಕಟ್ಟುವುದು ಇಂತಹ ಆಕಾಂಕ್ಷೆ ಇದ್ದರೆ, ಪೋಷಕರಿಗೆ ಮಕ್ಕಳ ಏಳಿಗೆ ಮತ್ತು ಮದುವೆ ಮಾಡಬೇಕೆನ್ನುವ ಆಸೆಗಳು ಇರುತ್ತವೆ. ಅಜ್ಜಿ-ತಾತಂದಿರಿಗೆ ಮೊಮಕ್ಕಳ ಆಸೆಗಳಿರುತ್ತವೆ. ಕಾಯಿಲೆಯಿಂದ ನರಳುತ್ತಿರುವವರು ವಾಸಿಯಾಗಲೆಂದು ಬಯಸುತ್ತಿರುತ್ತಾರೆ. ಈ ಆಕಾಂಕ್ಷೆಗಳು ಈಡೇರಬೇಕೆಂದು ದೃಢ ಸಂಕಲ್ಪ ಇರಿಸಿಕೊಂಡರೆ ಗುರಿ ಮುಟ್ಟುವುದು ಅಥವಾ ಕನಸುಗಳನ್ನು ನನಸಾಗಿ ಮಾಡಿಕೊಳ್ಳುವುದು ದೂರದ ಮಾತಲ್ಲ.
ಸ್ವಯಂ ಧೃಢೀಕರಣ ಎಂದರೇನು?
ಧೃಢೀಕರಣಗಳು (Affirmations) ಎಂದರೆ ಧನಾತ್ಮಕವಾದ ಮತ್ತು ನಿರ್ದಿಷ್ಟವಾದ ಹೇಳಿಕೆಗಳು. ನಮ್ಮ ಧೃಢವಾದ ಆಕಾಂಕ್ಷೆಗಳನ್ನು ಖಚಿತಪಡಿಸಿ, ಇವುಗಳನ್ನು ಅಭಿವ್ಯಕ್ತ ಮಾಡುವಲ್ಲಿ ಧೃಢೀಕರಣಗಳು ಅನುವು ಮಾಡಿಕೊಡುತ್ತವೆ. ಸ್ವಯಂ ದೃಢೀಕರಣವು ನಮ್ಮ ಸ್ವಯಂ ಬೆಳವಣಿಗೆಗೆ ಸಂಬಂಧಿಸಿದ ಮೆದುಳಿನ ವ್ಯವಸ್ಥೆಗಳನ್ನು ಸಕ್ರಿಯೆಗೊಳಿಸಿ, ನಮ್ಮ ಭವಿಷ್ಯದ ದೃಷ್ಟಿಕೋನವನ್ನು ಬಲಪಡಿಸುತ್ತದೆ. ವಿಪತ್ತುಗಳಲ್ಲಿಯೂ ಸಹನೆ ಮತ್ತು ಬುದ್ಧಿವಂತಿಕೆಯನ್ನು ಕಳೆದುಕೊಳ್ಳದೇ, ಧೃಢ ಸಂಕಲ್ಪ ಮತ್ತು ನಿಷ್ಠೆಯೊಂದಿಗೆ ನಮ್ಮ ಗುರಿಗಳತ್ತ ಸಾಗುವುದಕ್ಕೆ ಧೃಢೀಕರಣವು ಅನುವು ಮಾಡಿಕೊಡುತ್ತದೆ.
ಸ್ವಯಂ ಅಥವಾ ಯಾವುದಾದರೂ ವಿಷಯದ ಕುರಿತು ಧನಾತ್ಮಕ ಹೇಳಿಕೆ ನೀಡುವುದೇ ಧೃಢೀಕರಣಗಳು. ಇವುಗಳನ್ನು ಪದೇ ಪದೇ ಉಚ್ಚರಿಸಿದಾಗ, ನಿಮ್ಮೊಳಗೆ ಸಕಾರಾತ್ಮಕ ಶಕ್ತಿ ಹುಟ್ಟುಕೊಳ್ಳುವುದಲ್ಲದೇ, ಆತ್ಮವಿಶ್ವಾಸವೂ ಕೂಡ ಗಟ್ಟಿಯಾಗುತ್ತದೆ. ಯಾವ ವಿಷಯಕ್ಕೆ ನೀವು ಧೃಢೀಕರಣ ಮಾಡುತ್ತೀರೋ ಆ ವಿಷಯದ ಕುರಿತು ಮನಸ್ಸು ಅಚಲವಾಗುತ್ತದೆ.
ನಮ್ಮ ವೇದ-ಪುರಾಣಗಳಲ್ಲಿ ಬರುವ ಮಂತ್ರಗಳು ಶ್ಲೋಕಗಳು ಧೃಢಿಕರಣಗಳಿಗೆ ಉತ್ತಮವಾದ ಉದಾಹರಣೆ. ಮಂತ್ರಗಳನ್ನು ಪಠಣೆ ಮಾಡಿದಾಗ ನಮ್ಮ ಮಿದುಳಿನಲ್ಲಿ ಧನಾತ್ಮಕವಾದ ಚಲನೆಯಾಗುತ್ತದೆ. ಪರಿಣಾಮವಾಗಿ ನಮ್ಮಲ್ಲಿ ಸ್ಪಷ್ಟತೆ, ಹುಮಸ್ಸು, ಉತ್ಸಾಹ, ಛಲ, ಅಭಯ ಹುಟ್ಟುತ್ತದೆ. ಇದನ್ನೇ 'Feel good factorʼ ಎಂದು ಕರೆಯಲಾಗುತ್ತದೆ. ಇದರಿಂದಾಗಿ ನಮ್ಮ ಮನಸ್ಥಿತಿ ಪ್ರಶಾಂತವಾಗಿಯೂ, ಸಂತೋಷವಾಗಿಯೂ ಮತ್ತು ಉತ್ಸಾಹದಿಂದಲೂ ತುಂಬಿರುತ್ತದೆ ಮತ್ತು ಭವಿಷ್ಯದ ಹಾದಿಯಲ್ಲಿ ಭರವಸೆ ಮತ್ತು ಹುರುಪಿನಿಂದ ಸಾಗುತ್ತದೆ.
ಕೆಲವು ಮಹತ್ವವಾದ ಸಂಸ್ಕೃತದ ಸಾಲುಗಳು ಧೃಢಿಕರಣದ ಉದಾಹರಣೆಯಾಗಿವೆ.
- ಈಶ್ವರನ (ಭಗವಂತನ) ಕೃಪೆ ನನ್ನ ಶಕ್ತಿ (ಈಶ್ವರ ಅಸ್ತಿ ಮಮ ಶಕ್ತಿ)
- ಎಂದಿಗೂ ವಿನಾಶವಾಗುವುದಿಲ್ಲ (ನ ಕದಾಪಿ ಖಂಡಿತಃ)
- ದುರಾಸೆಯಿಂದ ಯಶಸ್ಸನ್ನು ಪಡೆಯುವುದಿಲ್ಲ (ಲುಬ್ದಸ್ಯ ನಶ್ಯತಿ ಯಶಃ)
- ಭಗವಂತ ನಮಗೆ ಮಾರ್ಗದರ್ಶನ ನೀಡಲಿ ಮತ್ತು ರಕ್ಷಿಸಲಿ (ಧೀಯೋ ಯೋ ನಃ ಪ್ರಚೋದಯಾತ್)
- ಚಾರಿತ್ರ್ಯವೇ ನಮ್ಮ ಜೀವನದ ಅತಿದೊಡ್ಡ ಆಭರಣ (ಶೀಲಂ ಪರಮಂ ಭೂಷಣಂ)
ಇವುಗಳನ್ನು ಒತ್ತಡ ಹಾಗೂ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಪ್ರತಿನಿತ್ಯವೂ ನಿರ್ದಿಷ್ಟ ಅವಧಿಯಲ್ಲಿ ಪದೇಪದೇ ಮನಸ್ಸಿನಲ್ಲಿ ಅಥವಾ ಗಟ್ಟಿಯಾಗಿ ಹೇಳಬಹುದು, ಬರೆಯಲೂಬಹುದು. ಇದರಿಂದ ಪರಿಸ್ಥಿತಿಯನ್ನು ಎದುರಿಸುವ ಸ್ಪಷ್ಟತೆ, ಆತ್ಮಸ್ಥೈರ್ಯ ಮತ್ತು ಆತ್ಮವಿಶ್ವಾಸವು ನಮ್ಮೊಳಗೆ ಉದ್ಭವವಾಗುತ್ತವೆ. ದುಃಖ, ಭಯ, ಗೊಂದಲ, ಅಭದ್ರತೆ, ಆತಂಕ, ದುಗುಡಗಳು ಕ್ರಮೇಣವಾಗಿ ನಮ್ಮಿಂದ ದೂರವಾಗುತ್ತವೆ. ಹಾಗೆಯೇ, ನಾನು ಒಂಟಿಯಲ್ಲ, ನನ್ನ ಮೇಲೆ ಭಗವಂತನ ಅಗಾಧ ಶಕ್ತಿಯ ಕೃಪೆಯಿದೆ ಎನ್ನುವ ವಿಶ್ವಾಸ ಹುಟ್ಟುತ್ತದೆ.
ನಮ್ಮ ಸುಪ್ತ ಮನಸ್ಸು (sub conscious mind) ಈ ಧೃಢೀಕರಣಗಳನ್ನು ಗ್ರಹಿಸಿ, ವಾಸ್ತವದಲ್ಲಿ ಸಾಧಿಸಲು ಪ್ರಚೋದಿಸುತ್ತದೆ. ಅಲ್ಲದೆ, ಅಭಿವ್ಯಕ್ತಿಗಾಗಿ ಪ್ರಬಲವಾದ ದೃಢೀಕರಣಗಳನ್ನು ಅಭ್ಯಾಸ ಮಾಡುವಾಗ ಅವು ಸರಿಯಾದ ಭಾವನೆಗಳನ್ನು ಪ್ರಚೋದಿಸಬೇಕು ಎಂಬುದನ್ನು ನೆನಪಿಡಿ. ಸಾಕಷ್ಟು ಸಕಾರಾತ್ಮಕ ಭಾವನೆಗಳನ್ನು ಪ್ರಚೋದಿಸದ ದೃಢೀಕರಣವು ಕೆಲಸ ಮಾಡುವುದಿಲ್ಲ.
ನೀವು ಇದನ್ನು ಹೆಚ್ಚಾಗಿ ಮಾಡುತ್ತಿದ್ದರೆ, ನಿಮ್ಮ ಸುಪ್ತಮನಸ್ಸು ನೀವು ಪದೇ ಪದೇ ಹೇಳುತ್ತಿರುವ ಅಂಶಗಳನ್ನು ನಂಬಲು ಪ್ರಾರಂಭಿಸುತ್ತದೆ. ಆದ್ದರಿಂದ ಇದು ನಿಮ್ಮ ಸುಪ್ತಮನಸ್ಸನ್ನು ಮರು ಪ್ರೋಗ್ರಾಮ್ ಮಾಡಲು ಮತ್ತು ಹೆಚ್ಚಿನ ಸಮೃದ್ಧಿಯನ್ನು ಆಕರ್ಷಿಸಲು ಉತ್ತಮ ಮಾರ್ಗವಾಗಿದೆ.
ಮಾರ್ಗದರ್ಶಿ ದೃಢೀಕರಣಗಳು
ಇದಕ್ಕಾಗಿ ನೀವು ಮಾರ್ಗದರ್ಶಿ (guided) ದೃಢೀಕರಣಗಳನ್ನು ಬಳಸಬಹುದು ಅಥವಾ ನಿಮ್ಮ ಸ್ವಯಂ ದೃಢೀಕರಣಗಳನ್ನು ಬಳಸಬಹುದು
ಪ್ರಯತ್ನಗಳ ಜೊತೆ ಜೊತೆಗೆ ಧೃಢೀಕರಣಗಳನ್ನು ಅಭ್ಯಾಸ ಮಾಡಬೇಕು. ದೃಢೀಕರಣಗಳನ್ನು ಪಾಲಿಸಲು ನೀವು ಈ ಕೆಲವು ಸರಳ ನಿಯಮಗಳನ್ನು ಅನುಸರಿಸಬೇಕು.
1. ಧೃಢೀಕರಣಗಳನ್ನು ವರ್ತಮಾನ ಕಾಲದಲ್ಲಿ ಹೇಳಿ.
2. ಸಕಾರಾತ್ಮಕವಾಗಿ ರೂಪಿಸಿ.
3. ಹೆಚ್ಚು ಪರಿಣಾಮಕಾರಿಯಾಗಲು ʼನಾನುʼ ಎಂದು ಬಳಸಿ.
ದೃಢೀಕರಣವು ನಿಮ್ಮ ಸುಪ್ತ ಮನಸ್ಸಿಗೆ ʼನಾವು ಏನನ್ನು ಬಯಸುತ್ತಿದ್ದೇವೆ ಮತ್ತು ಅದು ಹೇಗಿರಬೇಕುʼ ಎನ್ನುವುದನ್ನು ತನ್ನ ಹೇಳಿಕೆಯ ಮೂಲಕ ವ್ಯಕ್ತಪಡಿಸುತ್ತದೆ ಮತ್ತು ನೀವು ಅದನ್ನು ಭವಿಷ್ಯ ಕಾಲದ ಬದಲು ವರ್ತಮಾನದಲ್ಲಿ ಹೇಳುತ್ತಿರುವುದರಿಂದ, ಪ್ರಸ್ತುತದಲ್ಲಿ ಆ ವಿಷಯವು ಹೇಗಿದೆ ಎನ್ನುವ ಪದವನ್ನು ಗ್ರಹಿಸಿ, ಅದನ್ನು ವಾಸ್ತವದಲ್ಲಿ ನಿಜ ಮಾಡಲು ನಿಮ್ಮ ಮನಸ್ಸನ್ನು ಪ್ರಚೋದಿಸುತ್ತದೆ. ದೃಢೀಕರಣವು ನಿಮ್ಮಲ್ಲಿ ಅತ್ಯಂತ ಬಲವಾದ ಸಕಾರಾತ್ಮಕ ಭಾವನೆಯನ್ನು ಪ್ರಚೋದಿಸುತ್ತದೆ. ಹುರುಪು ಹುಮಸ್ಸಿನಿಂದ ನೀವು ಮುನ್ನುಗುವಂತೆ ಮಾಡಿ ನೀವು ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ.
ಪ್ರೀತಿ, ಸಂತೋಷ, ಕುರಿತು ಮಾಡುವ ಧೃಢೀಕರಣಗಳು
- ನಾನು ಪ್ರೀತಿಗೆ ಅರ್ಹ ಮತ್ತು ಅದನ್ನು ಹೇರಳವಾಗಿ ನೀಡುವ ಮತ್ತು ಸ್ವೀಕರಿಸುವ ಸಾಮರ್ಥ್ಯ ಹೊಂದಿದ್ದೇನೆ.
- ನನ್ನನ್ನು ಸುತ್ತುವರೆದಿರುವ ಎಲ್ಲಾ ಪ್ರೀತಿಗೆ ನಾನು ಕೃತಜ್ಞನಾಗಿದ್ದೇನೆ.
- ನಾನು ನನ್ನ ಜೀವನದಲ್ಲಿ ಸಕಾರಾತ್ಮಕ ಮತ್ತು ಪ್ರೀತಿಯ ಸಂಬಂಧಗಳನ್ನು ಆಕರ್ಷಿಸುತ್ತೇನೆ.
- ನಾನು ಸಕಾರಾತ್ಮಕತೆಯ ಮೇಲೆ ಕೇಂದ್ರೀಕರಿಸಲು ಮತ್ತು ಪ್ರತಿ ಕ್ಷಣದಲ್ಲಿ ಸಂತೋಷವನ್ನು ಕಂಡುಕೊಳ್ಳಲು ಆಯ್ಕೆ ಮಾಡುತ್ತೇನೆ.
- ಸಂತೋಷವು ನನ್ನ ಜನ್ಮಸಿದ್ಧ ಹಕ್ಕು ಮತ್ತು ನನ್ನ ಜೀವನದ ಎಲ್ಲಾ ಅಂಶಗಳಲ್ಲಿ ಅದನ್ನು ಅನುಭವಿಸಲು ನಾನು ಅರ್ಹನಾಗಿದ್ದೇನೆ.
- ನಾನು ಪ್ರೀತಿ, ಸಂತೋಷ ಮತ್ತು ಸಕಾರಾತ್ಮಕತೆಯಿಂದ ಸುತ್ತುವರೆದಿದ್ದೇನೆ ಮತ್ತು ನನ್ನ ಜೀವನದಲ್ಲಿ ಸಂತೋಷವನ್ನು ತರುವ ಎಲ್ಲಾ ಆಶೀರ್ವಾದಗಳಿಗೆ ನಾನು ಕೃತಜ್ಞನಾಗಿದ್ದೇನೆ.
ವೈಯಕ್ತಿಕ ಆರೋಗ್ಯ ಮತ್ತು ಬೆಳವಣಿಗೆ
- ನನ್ನ ಆರೋಗ್ಯ ಸರಿಪಡಿಸಿಕೊಳ್ಳುವ ಸಾಮರ್ಥ್ಯ ನನಗಿದೆ. ಆದಷ್ಟು ಬೇಗ ಸುಧಾರಿಸಿಕೊಳ್ಳುತ್ತೇನೆ.
- ನನ್ನ ದೇಹವು ಬಲಿಷ್ಠವಾಗಿದೆ ಮತ್ತು ಆರೋಗ್ಯಕರವಾಗಿದೆ ಮತ್ತು ನಾನು ಅದನ್ನು ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಳ್ಳುತ್ತೇನೆ.
- ಪ್ರತಿದಿನ, ಪ್ರತಿಯೊಂದು ರೀತಿಯಲ್ಲಿ ನಾನು ಆರೋಗ್ಯವಾಗುತ್ತಿದ್ದೇನೆ ಮತ್ತು ಬಲಶಾಲಿಯಾಗುತ್ತಿದ್ದೇನೆ.
- ನನ್ನ ಒಟ್ಟಾರೆ ಯೋಗಕ್ಷೇಮಕ್ಕೆ ಅನುಗುಣವಾದ ಆರೋಗ್ಯಕರ ಆಹಾರ ಮತ್ತು ಅಭ್ಯಾಸಗಳಿಂದ ನನ್ನ ದೇಹವನ್ನು ಪೋಷಿಸಲು ಸೂಕ್ತವಾದ ಜೀವನಶೈಲಿಯನ್ನು ಆರಿಸಿಕೊಳ್ಳುತ್ತೇನೆ.
- ನನ್ನಲ್ಲಿರುವ ಭಯಗಳನ್ನು ನಿವಾರಿಸುವ ಸಾಮರ್ಥ್ಯ ನನಗಿದೆ. ಖಂಡಿತವಾಗಿಯೂ ಈ ಭಯಗಳಿಂದ ಹೊರಬರುತ್ತೇನೆ.
- ನನ್ನಲ್ಲಿರುವ ಅತಿಯಾದ ಕೋಪವನ್ನು ನಿಯಂತ್ರಿಸುವ ಶಕ್ತಿಯನ್ನು ನನ್ನಲಿದೆ. ಕೋಪವನ್ನು ನಿಯಂತ್ರಿಸುತ್ತೇನೆ.
- ಕಾರು ಡ್ರೈವಿಂಗ್ ಮಾಡಲೇಬೇಕೆಂಬ ನನ್ನ ಆಸೆಯನ್ನು ನನ್ನಲಿರುವ ಭಯ ನನ್ನನ್ನು ಹಿಂದೆಳೆಯುತ್ತಿದೆ. ಈ ಭಯದಿಂದ ಹೊರಬಂದು ಆದಷ್ಟು ಬೇಗ ಡ್ರೈವಿಂಗ್ ಮಾಡುತ್ತೇನೆ.
ಆರ್ಥಿಕ ಸಮೃದ್ಧಿಯ ಧೃಢೀಕರಣಗಳು
- ನಾನು ನನ್ನ ಹಣಕಾಸಿನ ಮೇಲೆ ನಿಯಂತ್ರಣ ಹೊಂದಿದ್ದೇನೆ ಮತ್ತು ನನ್ನ ಆರ್ಥಿಕ ಗುರಿಗಳನ್ನು ತಲುಪುವ ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ.
- ನನ್ನ ಸುಧಾರಿತ ಆರ್ಥಿಕ ಬೆಳವಣಿಗೆಗೆ ನಾನು ಕೃತಜ್ಞನಾಗಿದ್ದೇನೆ.
- ನಾನು ಸಂಪತ್ತು ಮತ್ತು ಆರ್ಥಿಕ ಯಶಸ್ಸಿಗೆ ಅರ್ಹನಾಗಿದ್ದೇನೆ.
ಭವ್ಯಾ ವಿಶ್ವನಾಥ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.