ಏನಿದು ಈಡಿಯಟ್ ಸಿಂಡ್ರೋಮ್‌, ಆರೋಗ್ಯ ಸಮಸ್ಯೆಗಳ ಬಗ್ಗೆ ಗೂಗಲ್‌ ಸರ್ಚ್ ಮಾಡೋದು ಎಷ್ಟು ಅಪಾಯಕಾರಿ – ಕಾಳಜಿ ಅಂಕಣ
ಕನ್ನಡ ಸುದ್ದಿ  /  ಜೀವನಶೈಲಿ  /  ಏನಿದು ಈಡಿಯಟ್ ಸಿಂಡ್ರೋಮ್‌, ಆರೋಗ್ಯ ಸಮಸ್ಯೆಗಳ ಬಗ್ಗೆ ಗೂಗಲ್‌ ಸರ್ಚ್ ಮಾಡೋದು ಎಷ್ಟು ಅಪಾಯಕಾರಿ – ಕಾಳಜಿ ಅಂಕಣ

ಏನಿದು ಈಡಿಯಟ್ ಸಿಂಡ್ರೋಮ್‌, ಆರೋಗ್ಯ ಸಮಸ್ಯೆಗಳ ಬಗ್ಗೆ ಗೂಗಲ್‌ ಸರ್ಚ್ ಮಾಡೋದು ಎಷ್ಟು ಅಪಾಯಕಾರಿ – ಕಾಳಜಿ ಅಂಕಣ

ಡಿಜಿಟಲ್ ಯುಗದಲ್ಲಿ ನಮ್ಮ ಬೆರಳ ತುದಿಯಲ್ಲೇ ಸಾಕಷ್ಟು ವೈದ್ಯಕೀಯ ಮಾಹಿತಿಗಳು ಸಿಗುತ್ತವೆ. ಆದರೆ ಈ ಮಾಹಿತಿಗಳು ಕೆಲವೊಮ್ಮೆ ನಮ್ಮನ್ನು ದಾರಿ ತಪ್ಪಿಸಬಹುದು. ಆರೋಗ್ಯ ಸಮಸ್ಯೆಗಳ ಬಗ್ಗೆ ಅತಿಯಾಗಿ ಗೂಗಲ್‌ ಸರ್ಚ್ ಮಾಡೋದಕ್ಕೆ ಐಡಿಯಟ್‌ ಸಿಂಡ್ರೋಮ್‌ ಅಂತಾರೆ. ಏನಿದು ಈಡಿಯಟ್ ಸಿಂಡ್ರೋಮ್, ಪರಿಣಾಮಗಳೇನು ಎಂಬ ಮಾಹಿತಿ ನೀಡಿದ್ದಾರೆ ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್.

ಏನಿದು ಈಡಿಯಟ್ ಸಿಂಡ್ರೋಮ್‌ (ಸಾಂಕೇತಿಕ ಚಿತ್ರ)
ಏನಿದು ಈಡಿಯಟ್ ಸಿಂಡ್ರೋಮ್‌ (ಸಾಂಕೇತಿಕ ಚಿತ್ರ)

ಆನ್‌ಲೈನ್‌ ಪ್ರಪಂಚ ಎಂಬುದು ಅಗಾಧ, ಇಲ್ಲಿ ಸಿಗುವ ಮಾಹಿತಿಗಳೂ ಹೇರಳ. ಅವುಗಳಲ್ಲಿ ಕೆಲವು ಉಪಯುಕ್ತ, ಕೆಲವು ನಿರುಪಯುಕ್ತ, ಇನ್ನೂ ಕೆಲವು ಅಪಾಯಕಾರಿ. ಈ ಮಾಹಿತಿಗಳನ್ನು ಕೆಲವು ವಿಷಯಗಳಿಗೆ ಬಳಸುವುದು ಸರಿ. ಆದರೆ ದೇಹ, ಮನಸ್ಸು ಎಂದು ಬಂದಾಗ ಈ ಮಾಹಿತಿಗಳನ್ನು ಅಳವಡಿಸಿಕೊಳ್ಳುವುದು ಎಷ್ಟು ಸರಿ?

ಸಾಫ್ಟ್‌ವೇರ್‌ ಉದ್ಯೋಗಿಯೊಬ್ಬರಿಗೆ ಡೆಂಗ್ಯೂ ಬಂದು ಒಂದು ತಿಂಗಳು ಒದ್ದಾಡಿದರು. ಅದಾದ ನಂತರ ವೈದ್ಯಕೀಯ ಶುಶ್ರೂಷೆ ಪಡೆದು ಗುಣಮುಖರಾದರು. ಆದರೆ ಮತ್ತೊಂದು ಸಮಸ್ಯೆ ಕಾಡತೊಡಗಿತು. ಅದು ತಮ್ಮ ಆರೋಗ್ಯದ ಕುರಿತು ಬಹಳ ಭಯ, ಚಿಂತೆ, ಯೋಚನೆ, ತನಗೇನೋ ಆಗಿ ಹೋದೀತೆಂಬ ಅನಗತ್ಯ ಆತಂಕ ಸೃಷ್ಟಿಸಲು ಕಾರಣವಾಯ್ತು. ಇದರ ಜೊತೆಗೆ ಒಂದೆರೆಡು ಪ್ಯಾನಿಕ್ ಅಟ್ಯಾಕ್‌ಗಳೂ ಆದವು.

ಇದರಿಂದ ಅವರು ಅತಿಯಾಗಿ ಕಾಯಿಲೆಗಳ ಬಗ್ಗೆ ಗೂಗಲ್ ಸರ್ಚ್ ಮಾಡತೊಡಗಿದರು. ವಿವಿಧ ಕಾಯಿಲೆಗಳ ಲಕ್ಷಣಗಳನ್ನು ಓದಿ ತಮಗೂ ಈ ಕಾಯಿಲೆ ಬಂದಿರಬಹುದೆಂಬ ಭಾವನೆಯಲ್ಲಿ ಭಯಪಡತೊಡಗಿದರು. ಸಿಕ್ಕ ಸಿಕ್ಕ ಆಯುರ್ವೇದ ಔಷಧಿ, ಸೊಪ್ಪು, ಗಿಡಮೂಲಿಕೆ ಮದ್ದುಗಳನ್ನು ಸೇವಿಸಿದರು. ಕೊನೆಗೆ ಅದು ಅವರ ದೈಹಿಕ ಆರೋಗ್ಯಕ್ಕೆ ಮಾತ್ರ ಹಾನಿ ಮಾಡಲಿಲ್ಲ, ಜೊತೆಗೆ ಮಾನಸಿಕವಾಗಿ ಕುಗ್ಗಲೂ ಕಾರಣವಾಯ್ತು. ಇದು ಹೆಲ್ತ್ ಆಂಕ್ಸೈಟಿಗೆ ಕಾರಣವಾಯಿತು. ಇದರಿಂದ ಹೊರ ಬರಲು ಆ ವ್ಯಕ್ತಿ ತೆಗೆದುಕೊಂಡ ಸಮಯ ಬರೋಬ್ಬರಿ ಆರು ತಿಂಗಳುಗಳು.

ಈ ಮೇಲಿನ ಪೂರ್ಣ ಲಕ್ಷಣಗಳನ್ನು ಈಡಿಯೆಟ್ ಸಿಂಡ್ರೋಮ್ (Internet Derived Information Obstruction Treatment (IDIOT) Syndrome) ಎನ್ನುತ್ತಾರೆ. ಇದಕ್ಕೆ ಸೈಬರ್ ಕಾಂಡ್ರಿಯಾ ಎಂದೂ ಕರೆಯುತ್ತಾರೆ.

ಈ ಡಿಜಿಟಲ್ ಯುಗದಲ್ಲಿ, ನಮ್ಮ ಬೆರಳ ತುದಿಯಲ್ಲಿ ವೈದ್ಯಕೀಯ ಮಾಹಿತಿಗಳು ಸಾಕಷ್ಟು ಸಿಗುತ್ತವೆ. ಇದು ನಮ್ಮನ್ನು ಮಾಹಿತಿಯ ಮೂಲಕ ಸಶಕ್ತಗೊಳಿಸಬೇಕಾದರೂ, ಕೆಲವೊಮ್ಮೆ ತಪ್ಪಾಗಿ ಬಳಕೆ ಆದಲ್ಲಿ ಇದಕ್ಕೆ ವಿರುದ್ಧವಾಗಿ ಕೆಲಸ ಮಾಡಿಬಿಡುತ್ತವೆ. ಅಷ್ಟೇ ಅಲ್ಲ - ಗೊಂದಲ, ಅನಗತ್ಯ ಭೀತಿ ಮತ್ತು ತಪ್ಪಾದ ಸ್ವಯಂ-ರೋಗನಿರ್ಣಯವನ್ನು ಸೃಷ್ಟಿಸುತ್ತದೆ.

ಐಡಿಐಒಟಿ ಸಿಂಡ್ರೋಮ್ ಎಂದರೇನು?

ಜನರು ತಮ್ಮ ರೋಗಲಕ್ಷಣಗಳನ್ನು ಅತಿಯಾಗಿ ಗೂಗಲ್ ಮಾಡಿದಾಗ, ವೈದ್ಯಕೀಯ ಮಾಹಿತಿಯನ್ನು ತಪ್ಪಾಗಿ ಅರ್ಥೈಸಿಕೊಂಡಾಗ ಮತ್ತು ಅನಗತ್ಯವಾಗಿ ಗಾಬರಿಗೊಂಡಾಗ ಅಥವಾ ನಿಜವಾದ ವೈದ್ಯಕೀಯ ಸಹಾಯವನ್ನು ಪಡೆಯಲು ವಿಳಂಬ ಮಾಡುವುದಕ್ಕೆ ಈಡಿಯಟ್ ಸಿಂಡ್ರೋಮ್ ಎಂದು ಕರೆಯುತ್ತಾರೆ. ಇದರಿಂದ ಸ್ಪಷ್ಟತೆ ಸಿಗುವ ಬದಲು ಹೆಚ್ಚು ಆತಂಕಕ್ಕೆ ದಾರಿ ಆಗುತ್ತದೆ.

ಈ ಸಿಂಡ್ರೋಮ್‌ನ ಲಕ್ಷಣಗಳು

1. ತಮಗೆ ತಾವೇ ರೋಗದ ಬಗ್ಗೆ ಕಲ್ಪಿಸಿಕೊಳ್ಳುವುದು. ಅಸ್ಪಷ್ಟ, ಅಪೂರ್ಣ ಅಥವಾ ಸಂಬಂಧವಿಲ್ಲದ ರೋಗಲಕ್ಷಣಗಳ ಆಧಾರದ ಮೇಲೆ ತಮಗೆ ತೀವ್ರವಾದ ಅನಾರೋಗ್ಯವಿದೆ ಎಂದು ನಂಬುವುದು.

2. ವೈದ್ಯರನ್ನು ಬದಲಾಯಿಸುತ್ತಲೇ ಇರುವುದು ಅಥವಾ ಅವರನ್ನು ಭೇಟಿ ಆಗದೇ ಇರುವುದು. ಡಾಕ್ಟರ್‌ಗಿಂತ ಆನ್‌ಲೈನ್‌ ತಾಣಗಳ ಮಾಹಿತಿಯನ್ನೇ ನಂಬುವುದು.

3. ಅತಿಯಾದ ಔಷಧಿ ಅಥವಾ ತಪ್ಪು ಮಾಹಿತಿಯ ಚಿಕಿತ್ಸೆ. ಪರಿಶೀಲಿಸದ ಮನೆಮದ್ದುಗಳು ಅಥವಾ ಸ್ವಯಂ-ಸೂಚಿಸಿದ ಔಷಧಿಗಳನ್ನು ಬಳಸುವುದು.

4. ಆರೋಗ್ಯದ ಬಗ್ಗೆ ಅತಿಯಾದ ಆತಂಕ (ಸೈಬರ್ ಕಾಂಡ್ರಿಯಾ): ಸಣ್ಣ ರೋಗಲಕ್ಷಣಗಳ ಬಗ್ಗೆಯೂ ನಿರಂತರವಾಗಿ ಭಯ ಪಡುತ್ತಲೇ ಇರುವುದು.

5. ದೃಢೀಕರಣ ಬಯಾಸ್: ತಮಗೆ ಇಂತಹ ರೋಗವಿದೆ, ಇಂದು ನಿರ್ಧರಿಸಿ ಅದಕ್ಕೆ ತಕ್ಕ ಮಾಹಿತಿಗಾಗಿ ಮಾತ್ರ ಹುಡುಕುವುದು. ಇನ್ನುಳಿದ ಮಾಹಿತಿಗಳನ್ನು ಎಚ್ಚರಿಕೆಯನ್ನು ನಿರ್ಲಕ್ಷ್ಯ ಮಾಡುವುದು.

ಇದು ಹೇಗೆ ಉಂಟಾಗುತ್ತದೆ?

ಮಿತಿಮೀರಿದ ಮಾಹಿತಿಯ ಮಹಾಪೂರ: ಇಂಟರ್ನೆಟ್‌ಗಳಲ್ಲಿ ಸರಿ ತಪ್ಪು, ಸತ್ಯ–ಮಿಥ್ಯೆಗಳಿಂದ ಕೂಡಿದ ಮಾಹಿತಿ ಇದ್ದು ಸರಿಯಾದ ಮಾಹಿತಿಗಳನ್ನು ಅರ್ಥೈಯಿಸಲು ಕಷ್ಟವಾಗುತ್ತದೆ. ಆಗಿ ತಮಗೆ ಸರಿ ಎಂದು ತೋರುವ ಮಾಹಿತಿಯನ್ನಷ್ಟೇ ಪಡೆಯಲು ಮುಂದಾಗುತ್ತಾರೆ.

ವೈದ್ಯಕೀಯ ಜ್ಞಾನದ ಕೊರತೆ: ವೈದ್ಯಕೀಯ ಪರಿಭಾಷೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು, ಇದು ತಪ್ಪು ಊಹೆಗಳಿಗೆ ಕಾರಣವಾಗುತ್ತದೆ.

ತೀವ್ರ ಆತಂಕ ಹುಟ್ಟಿಸುವ ಆರೋಗ್ಯ ಕುರಿತಾದ ಲೇಖನಗಳು: ಇವು ಆತಂಕಕಾರಿಯಾದ ಸಾಮಾನ್ಯ ಪರಿಸ್ಥಿತಿಗಳಿಗಿಂತ ತೀವ್ರತರವಾದ ಪ್ರಕರಣಗಳ ಮೇಲೆ ಕೇಂದ್ರೀಕರಿಸುವುದರಿಂದ ಓದುವ ಜನರಲ್ಲಿ ಭಯ ಆತಂಕ ಮೂಡಿಸುತ್ತವೆ.

ಭಯದಿಂದಲೇ ಶುರುವಾಗುವ ಹುಡುಕಾಟಗಳು: ಆತಂಕಕ್ಕೊಳಗಾದಾಗ ಮನಸ್ಸಿನಲ್ಲಿ ಒಂದು ಸರಳ ತಲೆನೋವು ಸಹ ಬ್ರೈನ್ ಟ್ಯೂಮರ್ ಇರಬಹುದು ಎಂಬ ಭಾವನೆ ಹುಟ್ಟಿಸಬಹುದು.

ಐಡಿಐಒಟಿ ಸಿಂಡ್ರೋಮ್ ಅನ್ನು ಹೇಗೆ ದೂರ ಮಾಡುವುದು?

1. ರೋಗಲಕ್ಷಣದ ಹುಡುಕಾಟವನ್ನು ಮಿತಿಗೊಳಿಸುವುದು: ಅಂತರ್ಜಾಲವನ್ನು ಸಾಮಾನ್ಯ ಆರೋಗ್ಯ ಮಾಹಿತಿಗಾಗಿ ಮಾತ್ರ ಬಳಸಬೇಕು, ಹೊರತು ತುರ್ತು ರೋಗ ನಿರ್ಧಾರಕ್ಕಾಗಿಯೋ ಅಥವಾ ಚಿಕಿತ್ಸೆಗಾಗಿಯೋ ಅಲ್ಲ.

2. ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ದೃಢಪಡಿಸಿಕೊಳ್ಳುವುದು: ವಿಶ್ವ ಆರೋಗ್ಯ ಸಂಸ್ಥೆ, ಸಿಡಿಸಿ ಅಥವಾ ನಂಬಿಕಾರ್ಹ ಆಸ್ಪತ್ರೆ ವಿಶ್ವಾಸಾರ್ಹ ವೈದ್ಯಕೀಯ ಜಾಲತಾಣಗಳ ಮಾಹಿತಿಯನ್ನು ನೋಡಿ.

3. ವೈದ್ಯರನ್ನು ಸಂಪರ್ಕಿಸುವುದು ರೋಗಲಕ್ಷಣಗಳು ಮುಂದುವರಿದರೆ, ಸುಮ್ಮನೆ ಗೂಗಲ್ ಮಾಡಿ ಹೆದರಿಕೊಳ್ಳುವ ಬದಲು ವೃತ್ತಿಪರ ಚಿಕಿತ್ಸಕರ ಸಲಹೆಯನ್ನು ಪಡೆಯುವುದು.

4. ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಿ: ಪ್ರತಿಯೊಂದು ರೋಗಲಕ್ಷಣವೂ ಕೆಟ್ಟ ಸನ್ನಿವೇಶಕ್ಕೆ ಕಾರಣವಾಗುವುದಿಲ್ಲ ಎಂಬುದನ್ನು ನೆನಪಿಡಿ

5. ಡಿಜಿಟಲ್ ಡಿಟಾಕ್ಸ್ ಅನ್ನು ಅಭ್ಯಾಸ ಮಾಡಿ: ಆತಂಕವನ್ನು ಕಡಿಮೆ ಮಾಡಲು ಅನಗತ್ಯ ವೈದ್ಯಕೀಯ ಹುಡುಕಾಟಗಳನ್ನು ಕಡಿಮೆ ಮಾಡಿ.

ಈಡಿಯಟ್ ಸಿಂಡ್ರೋಮ್‌ನ ವಿಪರ್ಯಾಸವೆಂದರೆ, ನಾವು ಹೆಚ್ಚು ತಿಳುವಳಿಕೆ ಪಡೆದು ಬುದ್ದಿವಂತರಾಗಬಹುದು ಎಂದು ಅಂತರ್ಜಾಲದಲ್ಲಿ ಓದುವ ವಿಷಯಗಳೇ ನಮ್ಮನ್ನು ಮಾಹಿತಿ ಮೂರ್ಖರನ್ನಾಗಿ ಮಾಡುವುದು. ಸಹಾಯವಾಗುತ್ತದೆ ಎಂದುಕೊಳ್ಳುವ ವಿಷಯಗಳೇ ಅಪಾಯಕಾರಿ ಆಗುವುದು .

ಮುಂದಿನ ಸಲ ನೀವೇನಾದರೂ ಆನ್‌ಲೈನ್‌ನಲ್ಲಿ ರೋಗ ಲಕ್ಷಣಗಳನ್ನು ಹುಡುಕಿ ಇದು ಈ ರೋಗ ಇರಬಹುದು ಎಂದು ನಿರ್ಣಯಿಸುವಾಗ ನೆನಪಿಡಿ ಅಂತರ್ಜಾಲವು ಮಾಹಿತಿ ಒದಗಿಸುತ್ತದೆ. ಆದರೆ ಕೇವಲ ವೈದ್ಯರು ಮಾತ್ರ ಚಿಕಿತ್ಸೆಯನ್ನು ಒದಗಿಸಬಹುದು.

ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990

ಕಾಳಜಿ ಅಂಕಣ: ಡಾ ರೂಪ ರಾವ್‌
ಕಾಳಜಿ ಅಂಕಣ: ಡಾ ರೂಪ ರಾವ್‌
Whats_app_banner