Pre-teen: ಪ್ರೀ ಟೀನ್ ಎಂದರೇನು? ಪೋಷಕರು ಈ ವಯಸ್ಸಿನ ಮಕ್ಕಳನ್ನು ಹೇಗೆ ನಿಭಾಯಿಸಬೇಕು; ಮನದ ಮಾತು
Pre-teen age: ಪ್ರೀ ಟೀನ್ಎಂದರೇನು ? ಈ ವಯಸ್ಸಿನ್ನಲಾಗುವ ಬೆಳವಣಿಗೆ ಮತ್ತು ಬದಲಾವಣೆಗಳೇನು? ಪೋಷಕರು ಈ ವಯಸ್ಸಿನ ಮಕ್ಕಳನ್ನು ಯಾವ ರೀತಿಯಲ್ಲಿ ನಿಭಾಯಿಸಬೇಕು ? ನಿಮ್ಮ ಮನಸ್ಸಿನಲ್ಲಿರುವ ಈ ಪ್ರಶ್ನೆಗಳಿಗೆ ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್ ಅವರು ಉತ್ತರಿಸಿದ್ದಾರೆ.
ಹದಿಹರೆಯದ ಪೂರ್ವ ಅವಧಿ ಅಂದರೆ ಮಕ್ಕಳ 10 ರಿಂದ 12ನೇ ವರ್ಷಗಳ ಅವಧಿಯಾಗಿದ್ದು, ಇದನ್ನು ‘ಪ್ರೀ ಟೀನ್’ ಎಂದು ಕರೆಯಾಲಾಗುತ್ತದೆ. ಬಾಲ್ಯ ಮತ್ತು ಪ್ರೌಢಾವಸ್ಥೆಯ ನಡುವಿನ ಹಂತವಾಗಿದೆ. ಈ ಸಮಯದಲ್ಲಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಕಂಡು ಬರುತ್ತದೆ. ಮಕ್ಕಳ ಸಾಮಾಜಿಕ ನಡುವಳಿಕೆ, ವ್ಯಕ್ತಿತ್ವದಲ್ಲಿಯೂ ಸಹ ಸಾಕಷ್ಟು ಬದಲಾವಣೆಗಳನ್ನು ನೋಡಬಹುದು. ದೈಹಿಕ ಬೆಳವಣಿಗೆ ಮತ್ತು ಬದಲಾವಣೆಯಿಂದಾಗಿ ಮಕ್ಕಳು ದೈಹಿಕ ಸೌಂದರ್ಯದ ಬಗ್ಗೆ ಹೆಚ್ಚು ಗಮನವಹಿಸುತ್ತಾರೆ. ಲೈಗಿಂಕತೆಯ ಬಗ್ಗೆ ಕುತೂಹಲವೂ ಸಹ ಉಂಟಾಗುತ್ತದೆ. ಸ್ವಾವಲಂಬಿಗಳಾಗುವುದು, ಪೋಷಕರಿಂದ ಸ್ವಾತಂತ್ರ್ಯ ಬಯಸುವುದು, ಮನಸ್ಥಿತಿಯಲ್ಲಿ ಏರು ಪೇರು, ಚಂಚಲ ಮನಸ್ಸು , ಏಕಾಗ್ರತೆಯ ಕೊರತೆ ಇತ್ಯಾದಿ ಬದಲಾವಣೆಗಳನ್ನು ಪೋಷಕರು ಕಾಣಬಹುದು.
ದೈಹಿಕ ಬದಲಾವಣೆಗಳು
ಪ್ರೌಢಾವಸ್ಥೆಯಲ್ಲಿ ನಿಮ್ಮ ಮಕ್ಕಳು ಗಮನಿಸುವಂತಹ ಸ್ವಾಭಾವಿಕ ಮತ್ತು ಆರೋಗ್ಯಕರವಾದ ಬದಲಾವಣೆಗಳನ್ನು ಹೊಂದಿರುತ್ತಾರೆ. ನಿಮ್ಮ ಮಕ್ಕಳ ಮೆದುಳಿನಲ್ಲಿನ ಕೆಲವು ಪ್ರಮುಖ ಬದಲಾವಣೆಗಳು ನಿಮ್ಮ ಮಕ್ಕಳಲ್ಲಿ ಲೈಂಗಿಕ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದಾಗ ಪ್ರೌಢಾವಸ್ಥೆಯು ಪ್ರಾರಂಭವಾಗುತ್ತದೆ. ಇದು ಸಾಮಾನ್ಯವಾಗಿ ಹೆಣ್ಣು ಮಕ್ಕಳಲ್ಲಿ 10-11 ವರ್ಷಗಳು ಮತ್ತು ಗಂಡು ಮಕ್ಕಳಲ್ಲಿ ಸುಮಾರು 11-12 ವರ್ಷಗಳಲ್ಲಿ ಸಂಭವಿಸುತ್ತದೆ. ಆದರೆ ಪ್ರೌಢಾವಸ್ಥೆಯ ಪ್ರಾರಂಭವು ಹುಡುಗಿಯರಲ್ಲಿ 8-13 ವರ್ಷಗಳು ಮತ್ತು ಹುಡುಗರಲ್ಲಿ 9-14 ವರ್ಷಗಳವರೆಗೆ ಇರುತ್ತದೆ.
ಮಾನಸಿಕ / ಭಾವಾತ್ಮಕ ಬದಲಾವಣೆಗಳು
ಪ್ರಮುಖವಾಗಿ ಕೆಳಕಂಡ ಬದಲಾವಣೆಗಳು ಮಕ್ಕಳ ನಡುವಳಿಕೆಯಲ್ಲಿ ಕಂಡುಬರುತ್ತದೆ:
1) ಸಾಮಾಜಿಕ ಚಟುವಟಿಕೆಗಳಿಂದ ತಪ್ಪಿಸಿಕೊಳ್ಳುವುದು ಅಥವಾ ಸಮಾಜದ ಜನರೊಂದಿಗೆ ಬೆರೆಯದು ಇರುವುದು
2) ದಿನಚರಿ ಚಟುವಟಿಕೆಗಳಲ್ಲಿ, ಆಯ್ಕೆ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಸ್ವಾತಂತ್ರ್ಯ ಬಯಸುವುದು
3) ಅತಿಯಾದ ಕುತೂಹಲದ ನಡವಳಿಕೆ
4) ಗೆಳೆಯರನ್ನು ಮೆಚ್ಚಿಸುವ ಗುಣ , ಅವರೊಂದಿಗೆ ಹೊಂದಿಕೊಳ್ಳುವ ಬಯಕೆ ಹೆಚ್ಚಿರುತ್ತದೆ
5) ಅಸಾಹಾಯಕತನದಿಂದ ಬರುವ ಸಿಟ್ಟು
6) ವಿಭಿನ್ನ ರೀತಿಯಲ್ಲಿ ತಮ್ಮನ್ನು ತಾವು ಸಮಥಿ೯ಸಿಕೊಳ್ಳುವುದು
7) ಹೋಲಿಕೆ - ತಮ್ಮನ್ನು ಇತರ ಮಕ್ಕಳೊಂದಿಗೆ ಹೋಲಿಸಿಕೊಳ್ಳುವುದು
8) ಹೆಚ್ಚಿನ ಅಪಾಯ, ರಿಸ್ಕ್ ತೆಗೆದುಕೊಳ್ಳುವ ನಡವಳಿಕೆಗಳು
9) ಹೆಚ್ಚು ಬಂಡಾಯದ ಸ್ವಭಾವ ಅಥವಾ "ನಿಯಮಗಳನ್ನು ಮುರಿಯುವ" ಬಯಕೆ
10) ಅವರು ಒಮ್ಮೆ ಪ್ರೀತಿಸಿದ ಹವ್ಯಾಸಗಳಲ್ಲಿ ಹಠಾತ್ ನಿರಾಸಕ್ತಿ ಹೊಂದುವುದು. ಅದರ ಬದಲು ಹೊಸ ಆಸಕ್ತಿಗಳನ್ನು ಹುಡುಕುತ್ತಾರೆ
11) ನಿದ್ರೆಯನ್ನು ಹೆಚ್ಚು ಮಾಡಲು ಇಚ್ಚಿಸುತ್ತಾರೆ
12) ಇತರರ ಮುಂದೆ "ಮುಜುಗರ" ಅನುಭವಿಸುವ ಭಯ ಹೆಚ್ಚಿರುತ್ತದೆ
13) ಹಾರ್ಮೋನ್ ಏರಿಳಿತದ ಕಾರಣದಿಂದಾಗಿ ಭಾವನಾತ್ಮಕವಾಗಿಯೂ ಹೆಚ್ಚು ಏರಿಳಿತಗಳಾಗುತ್ತವೆ
14) ದೇಹದ ತೂಕ ಮತ್ತು ದೈಹಿಕ ನೋಟದ ಮೇಲೆ ಹೆಚ್ಚಿನ ಗಮನವಿರುತ್ತದೆ
15) ಈ ಮಕ್ಕಳು ಮೇಲಿ೦ದ ಮೇಲೆ ಅವಮಾನದಂತಹ ಭಾವನೆಗಳನ್ನು ಅನುಭವಿಸುತ್ತಾರೆ.
ಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆಯಿಂದಾಗಿ ಮಕ್ಕಳು ಹೆಚ್ಚು ಸ್ವಾತಂತ್ರ್ಯವನ್ನು ಬಯಸುತ್ತಾರೆ. ಈ ಬಯಕೆಯಿಂದಾಗಿ ಅವರು ತಮ್ಮ ಕುಟುಂಬದ ಹೊರಗಿನ ಪ್ರಪಂಚಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ, ಅಂದರೆ ಸ್ನೇಹ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಾರೆ.
ಸಂಬಧಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ಮತ್ತು ತಿಳುವಳಿಕೆಯನ್ನು ಹೊಂದುತ್ತಾರೆ. ವಿವಾಹ, ವಿಚ್ಛೇದನಗಳ ಬಗ್ಗೆ ವಾಸ್ತವಿಕ ಅರಿವು ಸಹ ಮೂಡುತ್ತದೆ. ಆದರೆ ಅವರು ಹೆಚ್ಚು ಅರ್ಥಮಾಡಿಕೊಂಡಿದ್ದರೂ ಸಹ ಇವುಗಳನ್ನು ಅನುಭವಿಸುವ ಭಾವನಾತ್ಮಕ ಬುಧ್ದಿವಂತಿಕೆ ಮತ್ತು ನಿಭಾಯಿಸುವ ಸಾಮಥ್ಯ೯ವನ್ನು ಹೊಂದಿರುವುದಿಲ್ಲ.
ಈ ಅವಧಿಯಲ್ಲಿ, ಮಕ್ಕಳು ಪೋಷಕರು ಮತ್ತು ಇತರ ವಯಸ್ಕರಿಂದ ಕಲಿಯುವ ವಿಷಯಗಳ ಆಧಾರದ ಮೇಲೆ ನೈತಿಕ ಮೌಲ್ಯಗಳ ಆಂತರಿಕ ಸಂಹಿತೆಯನ್ನು ರೂಪಿಸಿಕೊಳ್ಳುತ್ತಾರೆ.
ಕೆಲ ಮಕ್ಕಳು ಧೀಡೀರನೇ ನಾಚಿಕೆ ಸಂಕೋಚ ಸ್ವಭಾವ ಬೆಳೆಸಿಕೊಳ್ಳಬಹುದು. ಮನಸ್ಸು ಕೂಡ ಅತೀ ಸೂಕ್ಷ್ಮವಾಗಬಹುದು. ಚಿಕ್ಕ ಪುಟ್ಟ ವಿಷಯಗಳಿಗೂ ಕೋಪ ಮಾಡಿಕೊಳ್ಳುವುದು, ಅಸಮಾಧಾನ, ಕಿರಿ ಕಿರಿ ಮಾಡುವುದು, ಅಳುವುದು, ಹಠ ಹಿಡಿಯುವುದು, ಇತ್ಯಾದಿ ಸಾಮಾನ್ಯವಾಗಿರುತ್ತದೆ.
ವಿರುದ್ಧ ಲಿಂಗದ ವ್ಯಕ್ತಿಗಳನ್ನು ಸೇರದಿರುವುದು, ಸಂಕೋಚದಿಂದ ವತಿ೯ಸುವುದು ಅಥವ ಜಗಳವಾಡುವುದು, ಸಂಶಯಾಸ್ಪದವಾಗಿ ನೋಡುವುದನ್ನು ಸಹ ಕಾಣಬಹುದು
ಅಲ್ಲದೆ, ಮೆದುಳಿನೊಳಗಿನ ಬದಲಾವಣೆ ಮತ್ತು ಬೆಳವಣಿಗೆಯಿಂದಾಗಿ, ಈ ಅವಧಿಯಲ್ಲಿ ಮಕ್ಕಳು ಪ್ರಬುಧ್ಧತೆಯಿಂದ ಭಾವನೆಗಳನ್ನು ವ್ಯಕ್ತಪಡಿಸುವ ಮತ್ತು ನಿರ್ವಹಿಸುವ ಕೌಶಲ್ಯಗಳನ್ನು ಹೊಂದಿರುವುದಿಲ್ಲ. ಆದ್ದರಿಂದ ಹದಿಹರೆಯದವರಿಗೆ ಇನ್ನೂ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನಿರ್ವಹಿಸಲು ಪೋಷಕರ ಸಹಾಯ ಮತ್ತು ಮಾಗ೯ದಶ೯ನದ ಅಗತ್ಯವಿದೆ.
ಸಾಮಾಜಿಕ ಬದಲಾವಣೆಗಳು
ಈ ವಯಸ್ಸಿನ ಮಕ್ಕಳು ತಮ್ಮ ಅಸ್ತಿತ್ವವನ್ನು ಗುರುತ್ತಿಸಿಕೊಳ್ಳುವ ಪ್ರಯತ್ನದಲ್ಲಿ ಇರುತ್ತಾರೆ. “ನಾನು ಯಾರು ?”, “ನಾನು ಯಾವ ವಗ೯ಕ್ಕೆ (ಗುಂಪು) ಸೇರಿದ್ದವನು/ಳು?” ಹೀಗೆ ನಾನ ಬಗೆಯ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿರುತ್ತಾರೆ. ಈ ಪ್ರಕ್ರಿಯೆಯ ಭಾಗವಾಗಿ ಹೊಸ ಅಥವಾ ವಿಭಿನ್ನ ಉಡುಪು ಶೈಲಿಗಳು, ಸಂಗೀತ, ಕಲೆ, ಸ್ನೇಹ ಗುಂಪುಗಳು ಮತ್ತು ಮುಂತಾದವುಗಳನ್ನು ಪ್ರಯತ್ನಿಸಬಹುದು. ಅವರು ಹೆಚ್ಚಿನ ಸ್ವಾತಂತ್ರ್ಯ ಮತ್ತು ಜವಾಬ್ದಾರಿಯನ್ನು ಬಯಸಬಹುದು. ನಿಮ್ಮ ಮಗುವಿಗೆ ಅವರ ಗುರುತನ್ನು ಮತ್ತು ಜಗತ್ತಿನಲ್ಲಿ ಅವರ ಸ್ಥಾನದ ಅರ್ಥವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವಲ್ಲಿ ಪೋಷಕರು ಪ್ರಮುಖ ಪಾತ್ರವನ್ನು ಹೊಂದಿರುತ್ತಾರೆ
ಪೋಷಕರಿಗೆ ಟಿಪ್ಸ್
1) ಪೋಷಕರ ಸಹಾನುಭೂತಿ ಮತ್ತು ಸಂಯಮ ಅತ್ಯವಶ್ಯಕ. ಮಕ್ಕಳ ಮನಸ್ಸನ್ನು ತಿಳುವಳಿದುಕೊಳ್ಳುವುದಕ್ಕೆ ಸತತ ಪ್ರಯತ್ನವಿರಬೇಕು.
2) ಮಕ್ಕಳು ನಿರ್ಧಾರ ಕೈಗೊಳ್ಳುವಲ್ಲಿ ಮಾರ್ಗದರ್ಶನ ನೀಡಿ. ಸಾಧಕ-ಬಾಧಕಗಳನ್ನು ಮೌಲ್ಯಮಾಪನ ಮಾಡುವುದು ಅಭ್ಯಾಸ ಮಾಡಿ
3) ನಿಮ್ಮ ಮಕ್ಕಳನ್ನು ಹೇಗೆ ಇರಬೇಕೆಂದು ಬಯಸಿತ್ತೀರೋ ಅದನ್ನು ಭೋದನೆಗಿಂತಲೂ ನಿಮ್ಮ ನಡುವಳಿಕೆಯ ಮೂಲಕ ಮಾದರಿಯಾಗಿ ತೋರಿಸಿಕೊಡಿ
4) ನಿಮ್ಮ ಮಕ್ಕಳನ್ನು ಅವರ ಗೆಳೆಯರ ಮುಂದೆ ಉದ್ದೇಶಪೂರ್ವಕವಾಗಿ ಮುಜುಗರಗೊಳಿಸಬೇಡಿ
5) ಸೆಕ್ಸ್, ಡ್ರಗ್ಸ್ ಮತ್ತು ಆಲ್ಕೋಹಾಲ್ ಬಗ್ಗೆ ಮುಕ್ತವಾಗಿ ಸಂಭಾಷಣೆಗಳನ್ನು ನಡೆಸಿ
6) ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮದ ಬಳಕೆಯನ್ನು ಮೇಲ್ವಿಚಾರಣೆ ಮಾಡಿ
7) ವಿಷಯಗಳನ್ನು ಕುರಿತು ಮಕ್ಕಳೊಂದಿಗೆ ಸಂವಹನ ನಡೆಸುವುದು ಈ ಪರಿವರ್ತಕ ವರ್ಷಗಳಲ್ಲಿ ನಿಮ್ಮ ಮಕ್ಕಳನ್ನು ಮಾರ್ಗದರ್ಶನ ಮಾಡಲು ಸಹಾಯ ಮಾಡಲು ಸಹಾಯ ಮಾಡುತ್ತದೆ
8) ನಿಮ್ಮ ಮಗುವಿನ ಮಾನಸಿಕ ಅಥವಾ ದೈಹಿಕ ಯೋಗಕ್ಷೇಮದ ಆಧಾರದ ಮೇಲೆ ನಿಮಗೆ ಸಹಾಯ ಬೇಕಾದರೆ, ಹೆಚ್ಚಿನ ಸಲಹೆಗಾಗಿ ಆಪ್ತಸಮಾಲೋಚಕರನ್ನು ಸಂಪರ್ಕಿಸಿ
Note: ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 98808 07003.
ಭವ್ಯಾ ವಿಶ್ವನಾಥ್: ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
ವಿಭಾಗ