ಮೈಕ್ರೋ ಫೈನಾನ್ಸ್ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ಕೆಟ್ಟ ಸಾಲಗಳ ಪರಿಣಾಮ ಏನಾಗಬಹುದು, ಇದಕ್ಕೆ ಕಡಿವಾಣ ಹಾಕುವುದು ಹೇಗೆ – ರಂಗನೋಟ ಅಂಕಣ
ಕನ್ನಡ ಸುದ್ದಿ  /  ಜೀವನಶೈಲಿ  /  ಮೈಕ್ರೋ ಫೈನಾನ್ಸ್ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ಕೆಟ್ಟ ಸಾಲಗಳ ಪರಿಣಾಮ ಏನಾಗಬಹುದು, ಇದಕ್ಕೆ ಕಡಿವಾಣ ಹಾಕುವುದು ಹೇಗೆ – ರಂಗನೋಟ ಅಂಕಣ

ಮೈಕ್ರೋ ಫೈನಾನ್ಸ್ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ಕೆಟ್ಟ ಸಾಲಗಳ ಪರಿಣಾಮ ಏನಾಗಬಹುದು, ಇದಕ್ಕೆ ಕಡಿವಾಣ ಹಾಕುವುದು ಹೇಗೆ – ರಂಗನೋಟ ಅಂಕಣ

ರಂಗನೋಟ ಅಂಕಣ: ಬ್ಯಾಂಕ್‌ಗಳಲ್ಲಿ ಸಂಗ್ರಹವಾಗಿರುವ ನಾನ್ ಪರ್ಫಾರ್ಮಿಂಗ್ ಆಸೆಟ್‌ಗಳು ವೇಗವಾಗಿ ಬೆಳೆಯುತ್ತಿವೆ. ಇದನ್ನು ಕಡಿಮೆ ಮಾಡುವುದು ಹೇಗೆ ಎಂಬ ಮಾರ್ಗ ಕಂಡುಕೊಳ್ಳಬೇಕು. ಸಾಲ ಮನ್ನಾ ಎನ್ನುವ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಬಿಡಬೇಕು. ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಮೂಗುದಾರ ತೊಡಿಸುವುದು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದು ಎರಡು ಅಲುಗಿನ ಖತ್ತಿ.

ರಂಗನೋಟ ಅಂಕಣ
ರಂಗನೋಟ ಅಂಕಣ

ಭಾರತೀಯ ಮುಖ್ಯವಾಹಿನಿ ಹಣಕಾಸು ಸಂಸ್ಥೆಗಳು ಅಂದರೆ ನಮ್ಮ ಬ್ಯಾಂಕುಗಳು ಕಳೆದ 12 ವರ್ಷದಿಂದ ನಾನ್ ಪರ್ಫಾರ್ಮಿಂಗ್ ಅಸೆಟ್ ಬಹಳ ಕಡಿಮೆಯಾಗಿದೆ ಎಂದು ಬೀಗುತ್ತಿವೆ. ನಾನ್ ಪರ್ಫಾರ್ಮಿಂಗ್ ಅಸೆಟ್ ಎಂದರೆ ಕೆಟ್ಟ ಸಾಲ ಎಂದರ್ಥ. ಸರಳವಾಗಿ ಹೇಳಬೇಕೆಂದರೆ ಕೆಲವೊಮ್ಮೆ ಕೊಟ್ಟ ಸಾಲ ವಸೂಲಾತಿ ಆಗದೆ ಉಳಿದು ಬಿಡುತ್ತದೆ. ಇವುಗಳನ್ನ ಒಟ್ಟಾಗಿ ನಾನ್ ಪರ್ಫಾರ್ಮಿಂಗ್ ಅಸೆಟ್ ಎನ್ನುತ್ತೇವೆ.

12 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಸಾಲ ಮರುಪಾವತಿ ಆಗದಿದ್ದರೆ ಅದನ್ನು ಸಬ್ ಸ್ಟ್ಯಾಂಡರ್ಡ್ ಅಸೆಟ್ ಎಂದು ವರ್ಗಿಕರಿಸಲಾಗುತ್ತದೆ , ಬಾಕಿ ಉಳಿದ ಮೊತ್ತದ 15 ರಿಂದ 25 ಭಾಗ ಪ್ರಾವಿಷನ್ ಒದಗಿಸಿ ತನ್ನ ನಿವ್ವಳ ಲಾಭ ತೋರಿಸುತ್ತದೆ . 12 ತಿಂಗಳು ಮೀರಿದ ಸಾಲಗಳನ್ನು ಡೌಟ್‌ ಫುಲ್‌ ಎಂದು ವರ್ಗಿಕರಿಸಲಾಗುತ್ತದೆ. ಇಲ್ಲಿ 25 ರಿಂದ 100 ಪ್ರತಿಶತ ಪ್ರಾವಿಷನ್ ಮಾಡಬೇಕಾಗುತ್ತದೆ. ಇವೆಲ್ಲವೂ ನಾನ್ ಪರ್ಫಾರ್ಮಿಂಗ್ ಅಸೆಟ್ ಎನ್ನಿಸಿಕೊಳ್ಳುತ್ತವೆ.

ಮುಖ್ಯವಾಹಿನಿ ಬ್ಯಾಂಕುಗಳಲ್ಲಿ ಈ ರೀತಿಯ ಕೆಟ್ಟ ಸಾಲ ಕಡಿಮೆಯಾಗಿದೆ ಎನ್ನುವ ಹೆಗ್ಗಳಿಕೆ ಒಂದು ಕಡೆಯಾದರೆ , ಇನ್ನೊಂದು ಕಡೆ ಭಾರತದ ಕಡಿಮೆ ಆದಾಯ ಹೊಂದಿರುವ ಜನರಿಗೆ ಸಾಲ ನೀಡುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳಲ್ಲಿ ಈ ಕೆಟ್ಟ ಸಾಲದ ಮೊತ್ತ ಹೆಚ್ಚಾಗಿದೆ. ಮುಖ್ಯವಾಹಿನಿ ಹಣಕಾಸು ಸಂಸ್ಥೆಗಳಲ್ಲಿ ಎಲ್ಲರಿಗೂ ಸಾಲ ಸಿಗುವುದಿಲ್ಲ. ಹೀಗಾಗಿ ಮುಖ್ಯವಾಹಿನಿ ಬಾಂಕ್‌ಗಳಲ್ಲಿ ಸಾಲ ಪಡೆಯಲಾಗದ , ಅವರು ಕೇಳಿದ ಎಲ್ಲಾ ಕಾಗದ ಪತ್ರಗಳನ್ನು ನೀಡಲಾಗದ ಭಾರತದ ಒಂದು ಬಹು ದೊಡ್ಡ ವರ್ಗ ಈ ಮೈಕ್ರೋ ಫೈನಾನ್ಸ್ ಕಂಪನಿಗಳ ಸೇವೆಯನ್ನು ಪಡೆದುಕೊಳ್ಳುತ್ತಾರೆ. ಸಣ್ಣ ಉದ್ದಿಮೆಗಳು ಮತ್ತು ಕಡಿಮೆ ಆದಾಯ ಹೊಂದಿರುವವರಿಗೆ ಸಾಲದ ಜೊತೆಗೆ ಮತ್ತಿತರ ಹಣಕಾಸು ಸೇವೆಯನ್ನು ಈ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ನೀಡುತ್ತವೆ. ಬಂಧನ್ ಬ್ಯಾಂಕ್ , ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಒಂದೆರೆಡು ಪ್ರಸಿದ್ಧ ಮೈಕ್ರೋ ಫೈನಾನ್ಸ್ ಸಂಸ್ಥೆಗಳು.

ಗಮನಿಸಿ ನೋಡಿ ನಮ್ಮ ದೇಶದಲ್ಲಿರುವ ಪ್ರತಿಯೊಬ್ಬ ನಾಗರೀಕನಿಗೂ ಇಲ್ಲಿನ ಸೇವೆ ಸರಿಯಾಗಿ ಸಿಕ್ಕಬೇಕು ಆ ರೀತಿ ವ್ಯವಸ್ಥೆಯನ್ನು ಕಟ್ಟಬೇಕು. ಆದರೆ ನಮ್ಮ ದೇಶದಲ್ಲಿ ಮುಖ್ಯವಾಹಿನಿ ವ್ಯವಸ್ಥೆಯಿಂದ ಬಹು ಜನರು ಸೇವೆಯನ್ನು ಪಡೆಯಲಾಗುವುದಿಲ್ಲ. ಆಗ ಅದಕ್ಕೆ ಪರ್ಯಾಯವಾಗಿ ಇತರ ಸಂಸ್ಥೆಗಳು ಹುಟ್ಟಿಕೊಳ್ಳುತ್ತವೆ. ಆಶ್ಚರ್ಯ ಎಂದರೆ ಮುಖ್ಯವಾಹಿನಿ ಸಂಸ್ಥೆಗೆ ಸಿಕ್ಕಂತೆ ಅದಕ್ಕೂ ಒಪ್ಪಿಗೆ , ಪ್ರಮಾಣಪತ್ರ ಎಲ್ಲವೂ ಕಾನೂನು ರೀತಿಯಲ್ಲೇ ಸಿಗುತ್ತದೆ. ಈ ರೀತಿಯ ಎರಡು ವ್ಯವಸ್ಥೆಯನ್ನು ಸೃಷ್ಟಿಸುವ ಅಗತ್ಯವಾದರೂ ಏನು? ಹೆಚ್ಚಿನ ಬಡ್ಡಿಯನ್ನು, ಶುಲ್ಕವನ್ನು ಪಡೆದುಕೊಳ್ಳುವುದು ಆಗಿದೆ. ಹೆಚ್ಚಿನ ಹಣದ ಆಸೆಗೆ ಒಂದಷ್ಟು ರಿಯಾಯ್ತಿ ನೀಡಿ ಅರ್ಹರಲ್ಲದವರಿಗೆ ಸಾಲ ನೀಡಿದ ಮೇಲೆ ಅದರ ವಸೂಲಾತಿಯಲ್ಲಿ ಏರುಪೇರಾದಾಗ ಅವು ನಾನ್ ಪರ್ಫಾರ್ಮಿಂಗ್ ಆಸೆಟ್ ಆಗುತ್ತವೆ. ಹೀಗೆ 31 ದಿನದಿಂದ 180 ದಿನದಲ್ಲಿ ವಸೂಲಾಗದೆ ಉಳಿದ ಹಣದ ಮೊತ್ತ ಸೆಪ್ಟೆಂಬರ್ 2024 ರಲ್ಲಿ 29 ಸಾವಿರ ಕೋಟಿ ಎನ್ನುತ್ತದೆ ಅಂಕಿ–ಅಂಶ. ಕಳೆದ ವರ್ಷ ಇದೆ ಸಮಯದಲ್ಲಿ 15 ಸಾವಿರ ಕೋಟಿ ಇತ್ತು ಎನ್ನುವುದು ಹೆಚ್ಚಾಗುತ್ತಿರುವ ಕೆಟ್ಟ ಸಾಲವನ್ನು ಸೂಚಿಸುತ್ತದೆ. ಹೀಗೆ ಹೆಚ್ಚಾದ ಕೆಟ್ಟ ಸಾಲದ 62 ಪ್ರತಿಶತ ಮುಖ್ಯವಾಗಿ ಉತ್ತರ ಪ್ರದೇಶ , ತಮಿಳು ನಾಡು ಮತ್ತು ಒಡಿಶಾ ರಾಜ್ಯಗಳಿಂದ ಎನ್ನುವುದು ಗಮನಿಸಬೇಕು. ಸಾಲಮನ್ನ ಮಾಡಬಹುದು ಎನ್ನುವ ಜನರ ಲೆಕ್ಕಾಚಾರ, ರಾಜಕೀಯ ಪಕ್ಷಗಳ ವೋಟ್ ಬ್ಯಾಂಕ್ ಟ್ರಿಕ್, ಮಳೆ–ಬೆಳೆ ಇಲ್ಲದ ಕಾರಣ , ಒಟ್ಟಾರೆ ಉತ್ಪಾದನೆಯಲ್ಲಿ ಕುಸಿತ ಇನ್ನಿತರ ಕಾರಣದಿಂದ ಹಣದ ಹರಿವಿನಲ್ಲಿ ಕೊರತೆ ಉಂಟಾಗಿದ್ದು ಇದು ಕಂತು ಕಟ್ಟುವಲ್ಲಿ ವಿಳಂಬ ಉಂಟು ಮಾಡಿದೆ. ಹೀಗಾಗಿ ನಾನ್ ಪರ್ಫಾರ್ಮಿಂಗ್ ಅಸೆಟ್ ಹೆಚ್ಚಾಗಿದೆ.

ಸಹಜವಾಗಿ ಈ ಮೈಕ್ರೋ ಫೈನಾನ್ಸ್ ಕಂಪನಿಗಳು ಈಗ ಸಾಲ ಕೊಡುವುದರಲ್ಲಿ ಹಿಡಿತವನ್ನು ಮಾಡಲು ಶುರು ಮಾಡಿವೆ. ಇದು ಸಮಾಜದ ಮುಖ್ಯವಾಹಿನಿ ಬ್ಯಾಂಕುಗಳ ಜೊತೆ ಒಡನಾಟ ಇಟ್ಟುಕೊಳ್ಳಲು ಆಗದ ವರ್ಗಕ್ಕೆ ಹೊಡೆತ ನೀಡಲಿದೆ. ಒಟ್ಟಾರೆ ವ್ಯವಸ್ಥೆಯಲ್ಲಿನ ಲೋಪದೋಷವನ್ನು ಇದು ಎತ್ತಿ ತೋರಿಸುತ್ತಿದೆ. ವ್ಯವಸ್ಥೆಯನ್ನು ಸರಿಯಾಗಿ ಕಟ್ಟಿದಾಗ ಪರ್ಯಾಯ ಸೃಷ್ಟಿಯಾಗುತ್ತಿರಲಿಲ್ಲ ಎನ್ನುವ ಸಾಮಾನ್ಯಜ್ಞಾನ ನಮ್ಮಲ್ಲಿ ಇಲ್ಲದೇ ಹೋಗುತ್ತಿರುವುದು ಈ ಎಲ್ಲಾ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ.

ಇದು ಮುಖ್ಯವಾಹಿನಿ ಬ್ಯಾಂಕುಗಳ ಮೇಲೆ ಕೂಡ ಪರಿಣಾಮ ಬೀರುತ್ತದೆ. ಹೀಗೆ ವಸೂಲಾಗದೆ ಉಳಿದ ಸಾಲದ ಮೊತ್ತ ಹೆಚ್ಚಿದಷ್ಟು ಗ್ರಾಹಕನಿಗೆ, ಬ್ಯಾಂಕ್ ಷೇರು ಖರೀದಿ ಮಾಡುವ ಹೂಡಿಕೆದಾರನಿಗೆ ಎಲ್ಲರಿಗೂ ಬ್ಯಾಂಕ್‌ ಮೇಲಿನ ನಂಬಿಕೆ ಕಡಿಮೆ ಆಗುತ್ತದೆ. ನಾನು ಇಟ್ಟ ಹಣ ನನ್ನ ಸಮಯಕ್ಕೆ ಮರಳಿ ದೊರಕುವುದೇ ಎನ್ನುವ ಪ್ರಶ್ನೆ ಹುಟ್ಟಿದರೆ ಮುಗಿಯಿತು, ನೆನಪಿಡಿ ವಿತ್ತ ವಲಯ ಕಾರ್ಯ ನಿರ್ವಹಿಸುತ್ತಿರುವುದು ನಂಬಿಕೆಯ ಆಧಾರದ ಮೇಲೆ, ಗ್ರಾಹಕನ ನಂಬಿಕೆಗೆ ಪೆಟ್ಟು ಬಿದ್ದರೆ ಏನಾಗಬಹುದು ಎನ್ನುವುದನ್ನು ನಮಗೆ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಆಗಿರುವ ಘಟನೆಗಳು ಸಾಕ್ಷಿ ಒದಗಿಸಿವೆ. ಇದೆಲ್ಲಾ ದಶಕಗಳಿಂದ ನಡೆಯುತ್ತಾ ಬಂದಿದೆ ಮತ್ತೆ ಈಗೇಕೆ ದಿಢೀರನೆ ‘ಜಡ ಮೊತ್ತ‘ ದ ಬಗ್ಗೆ ಇಷ್ಟೊಂದು ಕಾಳಜಿ? ಎನ್ನುವುದಕ್ಕೆ ಉತ್ತರ ನಮ್ಮ ಬ್ಯಾಂಕ್‌ಗಳಲ್ಲಿ ಸಂಗ್ರಹವಾಗಿರುವ ನಾನ್ ಪರ್ಫಾರ್ಮಿಂಗ್ ಆಸೆಟ್‌ಗಳು ಬೆಳೆಯುತ್ತಿರುವ ವೇಗ! ಇದನ್ನು ಕಡಿಮೆ ಮಾಡುವುದು ಹೇಗೆ ಎನ್ನುವುದರ ಮಾರ್ಗ ನಾವು ಕಂಡುಕೊಳ್ಳಬೇಕು. ಸಾಲ ಮನ್ನಾ ಎನ್ನುವ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಬಿಡಬೇಕು. ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಮೂಗುದಾರ ತೊಡಿಸುವುದು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದು ಎರಡು ಅಲುಗಿನ ಖತ್ತಿ.

ರಂಗಸ್ವಾಮಿ ಮೂಕನಹಳ್ಳಿ ಪರಿಚಯ

ಆಪ್ತರ ವಲಯದಲ್ಲಿ, ವಿದ್ಯಾರ್ಥಿಗಳಲ್ಲಿ 'ರಂಗಣ್ಣ' ಎಂದೇ ಖ್ಯಾತರಾದವರು ಹಣಕಾಸು ಸಮಾಲೋಚಕ ಮತ್ತು ಆರ್ಥಿಕ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸುವ ಬರಹಗಾರ ಶ್ರೀಯುತ ರಂಗಸ್ವಾಮಿ ಮೂಕನಹಳ್ಳಿ. ಬೆಂಗಳೂರಿನ ಪೀಣ್ಯದಲ್ಲಿ ಬಾಲ್ಯ ಕಳೆದವರು ರಂಗಸ್ವಾಮಿ. ತುಮಕೂರು ಜಿಲ್ಲೆ, ಶಿರಾ ತಾಲ್ಲೂಕು ಮೂಕನಹಳ್ಳಿ ಇವರ ಮೂಲ ಗ್ರಾಮ. ಹೀಗಾಗಿ ತಮ್ಮ ಹೆಸರಿನೊಂದಿಗೆ ಮೂಕನಹಳ್ಳಿ ಹೆಸರನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಶ್ರೀಮಂತಿಕೆ ಅಥವಾ ಪ್ರಭಾವದ ಯಾವುದೇ ಹಿನ್ನೆಲೆ ಇಲ್ಲದೆ ಬಹುಕಷ್ಟದಿಂದ ಜೀವನದಲ್ಲಿ ಮೇಲೆ ಬಂದವರು ರಂಗಸ್ವಾಮಿ ಮೂಕನಹಳ್ಳಿ. ಬ್ರಿಟನ್‌ನಲ್ಲಿ 'ಪ್ರಮಾಣೀಕೃತ ಆಂತರಿಕ ಲೆಕ್ಕಪರಿಶೋಧಕ' (Certified Internal Auditor) ಪ್ರಮಾಣಪತ್ರ ಪಡೆದಿದ್ದಾರೆ. ಕನ್ನಡದೊಂದಿಗೆ ಸ್ಪೇನಿಶ್, ಇಂಗ್ಲಿಷ್, ಹಿಂದಿ, ಪೂರ್ಚುಗೀಸ್ ಮತ್ತು ಇಟ್ಯಾಲಿಯನ್ ಭಾಷೆಗಳಲ್ಲಿ ಸಂವಹನ ನಡೆಸಬಲ್ಲರು. ಪ್ರಸ್ತುತ ಮೈಸೂರಿನಲ್ಲಿ ವಾಸವಿದ್ದಾರೆ. ಕನ್ನಡದಲ್ಲಿ 26 ಪುಸ್ತಕಗಳನ್ನು ಬರೆದಿದ್ದಾರೆ. ಪ್ರತಿದಿನ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುವ 'ದಿನಕ್ಕೊಂದು ಶುಭನುಡಿ' ವಿಡಿಯೊ ಸರಣಿ ಜನಪ್ರಿಯ. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ 'ರಂಗ ನೋಟ' ಪಾಕ್ಷಿಕ ಅಂಕಣ ಬರೆಯುತ್ತಿದ್ದಾರೆ.

Whats_app_banner