Microsoft: ವಿಂಡೋಸ್‌ನಿಂದ ವರ್ಡ್‌ಪ್ಯಾಡ್ ತೆಗೆಯಲಿದೆ ಮೈಕ್ರೋಸಾಫ್ಟ್: ಬದಲಿಗೆ ಬಳಕೆದಾರರು ಏನು ಬಳಸಬಹುದು ಎಂಬ ಮಾಹಿತಿ ಇಲ್ಲಿದೆ
Microsoft: ಮೈಕ್ರೋಸಾಫ್ಟ್ ಕಂಪನಿಯು ವರ್ಡ್‌ಪ್ಯಾಡ್ ಅಪ್ಲಿಕೇಶನ್ ತೆಗೆಯುತ್ತಿರುವುದು ಬಳಕೆದಾರರಿಗೆ ಗೊಂದಲ ಉಂಟು ಮಾಡಿದೆ. ಅದರ ಬದಲಿಗೆ ಯೂಸರ್ಸ್ ಯಾವ ಅಪ್ಲಿಕೇಶನ್ ಬಳಸಬಹುದು ಎಂಬುದರ ಬಗ್ಗೆ ವಿವರ ಇಲ್ಲಿದೆ.
Microsoft: ಸತ್ಯ ನಾಡೆಲ್ಲಾ ನೇತೃತ್ವದ ಮೈಕ್ರೋಸಾಫ್ಟ್ ಕಂಪನಿ ತನ್ನ ವರ್ಡ್‌ಪ್ಯಾಡ್ ಅಪ್ಲಿಕೇಶನ್ ತೆಗೆದುಹಾಕುವುದಾಗಿ ಘೋಷಿಸಿದೆ. ವರ್ಡ್ ಪ್ಯಾಡ್, ಬೇಸಿಕ್ ವರ್ಡ್ ಪ್ರೊಸೆಸರ್ ಸುಮಾರು ಮೂರು ದಶಕಗಳಿಂದ ವಿಂಡೋಸ್ ಆಪರೇಟಿಂಗ್ ಸಿಸ್ಟಂನ ಭಾಗವಾಗಿದೆ.
ಇದೀಗ ಮೈಕ್ರೋಸಾಫ್ಟ್ ವಿಂಡೋಸ್‌ನ ಕೆಲವು ವೈಶಿಷ್ಟ್ಯಗಳೊಂದಿಗೆ ವರ್ಡ್ ಪ್ಯಾಡ್ ಅನ್ನು ತೆಗೆದುಹಾಕುವುದಾಗಿ ಕಂಪನಿ ಹೇಳಿದೆ. ಮೂಲತಃ ವಿಂಡೋಸ್ 95 ಜೊತೆಗೆ 1995 ರಲ್ಲಿ ಇದನ್ನು ಪರಿಚಯಿಸಲಾಯಿತು. ಇದೀಗ ಈ ನಿರ್ಧಾರ ವರ್ಡ್ ಪ್ರೊಸೆಸರ್ ಸಾಫ್ಟ್ ವೇರ್ ಗೆ ಅಂತ್ಯ ಹಾಡಲು ಮೈಕ್ರೋಸಾಫ್ಟ್ ತೀರ್ಮಾನಿಸಿದೆ.
ವಿಂಡೋಸ್ ಆಪರೇಟಿಂಗ್ ಸಿಸ್ಟಂನ ಯಾವ ಆವೃತ್ತಿಯನ್ನು ತೆಗೆದುಹಾಕಲಾಗುವುದು ಎಂಬುದನ್ನು ಮಾತ್ರ ನಿರ್ದಿಷ್ಟಪಡಿಸಲಾಗಿಲ್ಲ. ವಿಂಡೋಸ್ 11, ಆವೃತ್ತಿ 24H2 ಮತ್ತು ವಿಂಡೋಸ್ ಸರ್ವರ್ 2025 ನಲ್ಲಿ ಆರಂಭವಾಗುವ ವಿಂಡೋಸ್‌ನ ಎಲ್ಲಾ ಆವೃತ್ತಿಗಳಿಂದ ವರ್ಡ್‌ಪ್ಯಾಡ್ ಅನ್ನು ತೆಗೆದುಹಾಕಲಾಗುತ್ತದೆ ಎಂದು ಹೇಳಲಾಗಿದೆ.
ವರ್ಡ್ ಪ್ಯಾಡ್ ಅಪ್ಲಿಕೇಶನ್‌ಗೆ ತಿಲಾಂಜಲಿ
ವರ್ಡ್ ಪ್ಯಾಡ್ ಅನ್ನು ತೆಗೆದುಹಾಕುವ ಭಾಗವಾಗಿ, wordpad.exe, wordpadfilter.dll ಮತ್ತು write.exe ಸೇರಿದಂತೆ ಆಪರೇಟಿಂಗ್ ಸಿಸ್ಟಮ್ ನಿಂದ ಕೆಳಗಿನ ಬೈನರಿಗಳನ್ನು ಸಹ ತೆಗೆದುಹಾಕಲಾಗುತ್ತದೆ. ವರ್ಡ್ ಪ್ಯಾಡ್‌ನಲ್ಲಿರುವ ಕೆಲವೇ ಕೆಲವು ಬದಲಾವಣೆಗಳನ್ನು ಹೊರತುಪಡಿಸಿದರೆ ಹೆಚ್ಚಿನ ಆಯ್ಕೆಗಳಿಲ್ಲ. ಹೀಗಾಗಿ ಈ ಅಪ್ಲಿಕೇಶನ್‌ಗೆ ತಿಲಾಂಜಲಿ ಇಡಲು ಮೈಕ್ರೋಸಾಫ್ಟ್ ಮುಂದಾಗಿದೆ. 24H ನ ಹೊಸ ಆವೃತ್ತಿಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತದೆ. ಹೀಗಾಗಿ ಬಳಕೆದಾರರು ಕೆಲವು ತಿಂಗಳಷ್ಟೇ ವರ್ಡ್ ಪ್ಯಾಡ್ ಅನ್ನು ಬಳಸಬಹುದಾಗಿದೆ ಎನ್ನಲಾಗಿದೆ. ಇದರ ಜೊತೆಗೆ ನೋಟ್‌ಪ್ಯಾಡ್‌ನ ನವೀಕರಿಸಿದ ಆವೃತ್ತಿ, ಗೂಗಲ್ ಡಾಕ್ಸ್ ಮತ್ತು ಆಫೀಸ್ 365 ಸೂಟ್ ಕೂಡ ಸೇರಿದೆ ಎಂದು ಹೇಳಲಾಗಿದೆ.
ಇನ್ನು ಹೊಸ ಬದಲಾವಣೆಗಳೊಂದಿಗೆ ಹೊಂದಿಕೊಳ್ಳಲು ಬಳಕೆದಾರರಿಗೆ ಸ್ವಲ್ಪ ಸಮಯ ಬೇಕಾಗಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ವಿಂಡೋಸ್ ಇನ್ನು ಮುಂದೆ built-in, ಡಿಫಾಲ್ಟ್ RTF ರೀಡರ್ ಅನ್ನು ಹೊಂದಿರುವುದಿಲ್ಲ. ಅಧಿಕೃತ ವರದಿಯ ಪ್ರಕಾರ, .doc ಮತ್ತು .rtf ನಲ್ಲಿ ಮೈಕ್ರೋಸಾಫ್ಟ್ ವರ್ಡ್ ಅನ್ನು ಬಳಸಲು ಮೈಕ್ರೋಸಾಫ್ಟ್ ಶಿಫಾರಸು ಮಾಡಿದೆ. ಅಂದರೆ, ಸ್ಟ್ಯಾಂಡರ್ಡ್ ಡಾಕ್ಯುಮೆಂಟ್ ಗಳಿಗೆ ಮೈಕ್ರೋಸಾಫ್ಟ್ ವರ್ಡ್ ಬಳಸಿ, ಸರಳ ಡಾಕ್ಯುಮೆಂಟ್ ಗಳಿಗೆ (.txt) ನೋಟ್ ಪ್ಯಾಡ್ ಬಳಸುವಂತೆ ತನ್ನ ಬಳಕೆದಾರರಿಗೆ ಸೂಚಿಸಿದೆ.
ನೋಟ್‌ಪ್ಯಾಡ್‌ನಲ್ಲಿ ಹೊಸ ಅಪ್‌ಡೇಟ್
ಇದರ ಜೊತೆಗೆ VBScript ವೈಶಿಷ್ಟ್ಯ ಲಭ್ಯವಿರುತ್ತದೆ. ಹೊಸ ಆವೃತ್ತಿಯು ವಿಂಡೋಸ್‌ನ ಭದ್ರತಾ ವೈಶಿಷ್ಟ್ಯಗಳನ್ನು ಅಪ್‌ಗ್ರೇಡ್ ಮಾಡುತ್ತದೆ ಎಂದು ನಂಬಲಾಗಿದೆ. ನೋಟ್ ಪ್ಯಾಡ್‌ನಲ್ಲಿ ಹೊಸ ಅಪ್‌ಡೇಟ್ ತಂದ ಬಳಿಕ ವರ್ಡ್ ಪ್ಯಾಡ್ ತೆಗೆಯಲು ಕಂಪನಿ ಯೋಜಿಸಿದೆ. ಈ ಮೂಲಕ ಕಳೆದ ಹಲವು ವರ್ಷಗಳಿಂದ ಅಪ್ಡೇಟ್ ಆಗದ ವರ್ಡ್ ಪ್ಯಾಡ್ ಅನ್ನು ಮೈಕ್ರೋಸಾಫ್ಟ್ ವಿಂಡೋಸ್ ಮುಂದಿನ ವರ್ಷನ್ ನಲ್ಲಿ ತೆಗೆದುಹಾಕಲು ತೀರ್ಮಾನಿಸಿದೆ.