Rani Chennamma Express: ರಾಣಿ ಚೆನ್ನಮ್ಮ ಡೈಲಿ ಎಕ್ಸ್‌ಪ್ರೆಸ್ ರೈಲು ಸಂಚಾರ ಮಹಾರಾಷ್ಟ್ರದ ಸಾಂಗ್ಲಿಯವರೆಗೆ ವಿಸ್ತರಣೆ
ಬೆಂಗಳೂರು ನಿಂದ ಮಹಾರಾಷ್ಟ್ರದ ಮಿರಜ್ ವರೆಗೆ ಸಂಚರಿಸುತ್ತಿದ್ದ ರಾಣಿ ಚೆನ್ನಮ್ಮ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಸಾಂಗ್ಲಿಯವರೆಗೆ ವಿಸ್ತರಿಸಲಾಗಿದೆ. ಕರ್ನಾಟಕದ ನಿಲ್ದಾಣಗಳ ನಿಲುಗಡೆ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲನ್ನು (Rani Chennamma Express) ಮಹಾರಾಷ್ಟ್ರದ ಸಾಂಗ್ಲಿಯವರೆಗೆ ವಿಸ್ತರಿಸಬೇಕೆಂಬ ಈ ಭಾಗದ ಪ್ರಮಾಣಿಕರ ಬಹುದಿನಗಳ ಬೇಡಿಕೆ ಈಡೇರಿದೆ. ರೈಲ್ವೆ ಸಚಿವಾಲಯ ಕೆಎಸ್‌ಆರ್ ಬೆಂಗಳೂರು-ಮಿರಜ್-ಕೆಎಸ್‌ಆರ್ ಬೆಂಗಳೂರು ರಾಣಿ ಚೆನ್ನಮ್ಮ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಸಾಂಗ್ಲಿಯವರೆಗೆ ವಿಸ್ತರಿಸಲಾಗಿದೆ ಎಂದು ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ ಮಂಜುನಾಥ್ ಕನಮಡಿ ಅಧಿಕೃತ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರ್ಚ್ 12 ರಿಂದಲೇ ರೈಲು ಸಂಖ್ಯೆ 16589 ಕೆಎಸ್‌ಆರ್ ಬೆಂಗಳೂರು-ಸಾಂಗ್ಲಿ ರಾಣಿ ಚೆನ್ನಮ್ಮ ಡೈಲಿ ಎಕ್ಸ್‌ಪ್ರೆಸ್ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ರಾತ್ರಿ 11 ಗಂಟೆಗೆ ಹೊರಟು ಮರು ದಿನ ಮಧ್ಯಾಹ್ನ 12.50ಕ್ಕೆ ಸಾಂಗ್ಲಿಗೆ ಆಗಮಿಸಲಿದೆ. ರೈಲು ಸಂಖ್ಯೆ 16590 ಸಾಂಗ್ಲಿ-ಕೆಎಸ್‌ಆರ್ ಬೆಂಗಳೂರು ರಾಣಿ ಚೆನ್ನಮ್ಮ ಡೈಲಿ ಎಕ್ಸ್‌ಪ್ರೆಸ್ 2024ರ ಮಾರ್ಚ್ 13 ರಂದು ಮಧ್ಯಾಹ್ನ 3 ಗಂಟೆಗೆ ಸಾಂಗ್ಲಿ ರೈಲ್ವೆ ನಿಲ್ದಾಣದಿಂದ ಹೊರಟು ಮರು ದಿನ ಬೆಳಗ್ಗೆ 6.30ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ. ಪ್ರಯಾಣಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮಂಜುನಾಥ್ ಅವರು ಹೇಳಿದ್ದಾರೆ.
ಈ ಮೊದಲು ಕೆಎಸ್‌ಆರ್ ಬೆಂಗಳೂರು ರಾಣಿ ಚೆನ್ನಮ್ಮ ಡೈಲಿ ಎಕ್ಸ್‌ಪ್ರೆಸ್ ಮಹಾರಾಷ್ಟ್ರದ ಮಿರಜ್ ವರೆಗೆ ಮಾತ್ರ ಸಂಚರಿಸುತ್ತಿತ್ತು. ಇದೀಗ ಸಾಂಗ್ಲಿಯವರೆಗೆ ವಿಸ್ತರಿಸಲಾಗಿದೆ. ಬೆಂಗಳೂರಿನಿಂದ ಸಾಂಗ್ಲಿವರೆಗೆ ಒಟ್ಟು 26 ನಿಲುಗಡೆಗಳನ್ನು ನೀಡಲಾಗಿದ್ದು, 13 ಗಂಟೆ 25 ನಿಮಿಷಗಳನ್ನು ತೆಗೆದುಕೊಳ್ಳಲಿದೆ. ಈ ರೈಲು ಸಂಚರಿಸುವ ಮಾರ್ಗದ ಕರ್ನಾಟಕದ ನಿಲ್ದಾಣಗಳ ಸಮಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ರಾಣಿ ಚೆನ್ನಮ್ಮ ಡೈಲಿ ಎಕ್ಸ್‌ಪ್ರೆಸ್ ರೈಲು ಕರ್ನಾಟಕದಲ್ಲಿ ಎಷ್ಟು ಕಡೆ ನಿಲುಗಡೆ?
ಈ ಎಕ್ಸ್‌ಪ್ರೆಸ್ ರೈಲು ಯಶವಂತಪುರ, ತುಮಕೂರು, ತಿಪಟೂರು, ಅರಸೀಕೆರೆ, ಬಿರೂರ್ ಜಂಕ್ಷನ್, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಮೈಲಾರ ಹಾವೇರಿ, ಹುಬ್ಬಳ್ಳಿ ಜಂಕ್ಷನ್, ಧಾರವಾಡ, ಅಲ್ನಾವರ್ ಜಂಕ್ಷನ್, ಲೊಂಡಾ ಜಂಕ್ಷನ್, ಖಾನಾಪುರ್, ಬೆಳಗಾವಿ, ಗೋಕಾಕ್ ರೋಡ್, ಘಟ್ಟಪ್ರಭ, ಚಿಕ್ಕೋಡಿ ರೋಡ್, ರಾಯಭಾಗ, ಚಿಂಚೋಳಿ, ಕುಡಚಿ, ಉಗರ್ ಖುರ್ದ್, ಮಿರಜ್ ಜಂಕ್ಷನ್ ನಿಲುಗಡೆಯನ್ನು ನೀಡಲಾಗಿದೆ.
ಮಾರ್ಚ್ 12 ರಿಂದ ಕಲಬುರಗಿ-ಬೆಂಗಳೂರು ನಡುವೆ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಕರ್ನಾಟಕದಲ್ಲಿ ಒಟ್ಟು 8 ವಂದೇ ಭಾರತ್ ರೈಲುಗಳು ಸಂಚಾರ ಮಾಡುತ್ತಿವೆ. 2022ರ ನವೆಂಬರ್ 11 ರಂದು ಮೈಸೂರು-ಚೆನ್ನೈ ನಡುವಿನ ಮೊದಲ ವಂದೇ ಭಾರತ್ ರೈಲು ಸಂಚಾರ ಆರಂಭಿಸಿತ್ತು.
(This copy first appeared in Hindustan Times Kannada website. To read more like this please logon to kannada.hindustantimes.com )