ಭಾರತಕ್ಕೆ ದಕ್ಕಿತು ಮೊದಲ ಮಿಸ್‌ ಗ್ರ್ಯಾಂಡ್‌ ಇಂಟರ್‌ನ್ಯಾಶನಲ್‌ ಪ್ರಶಸ್ತಿ, ಪಂಜಾಬ್‌ನ ರಾಚೆಲ್ ಗುಪ್ತಾಗೊಂದು ಸಲಾಂ; ದೀಪಾ ಹಿರೇಗುತ್ತಿ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ಭಾರತಕ್ಕೆ ದಕ್ಕಿತು ಮೊದಲ ಮಿಸ್‌ ಗ್ರ್ಯಾಂಡ್‌ ಇಂಟರ್‌ನ್ಯಾಶನಲ್‌ ಪ್ರಶಸ್ತಿ, ಪಂಜಾಬ್‌ನ ರಾಚೆಲ್ ಗುಪ್ತಾಗೊಂದು ಸಲಾಂ; ದೀಪಾ ಹಿರೇಗುತ್ತಿ ಬರಹ

ಭಾರತಕ್ಕೆ ದಕ್ಕಿತು ಮೊದಲ ಮಿಸ್‌ ಗ್ರ್ಯಾಂಡ್‌ ಇಂಟರ್‌ನ್ಯಾಶನಲ್‌ ಪ್ರಶಸ್ತಿ, ಪಂಜಾಬ್‌ನ ರಾಚೆಲ್ ಗುಪ್ತಾಗೊಂದು ಸಲಾಂ; ದೀಪಾ ಹಿರೇಗುತ್ತಿ ಬರಹ

2013 ರಿಂದ ನಡೆಯುತ್ತಿರುವ ಮಿಸ್‌ ಗ್ರ್ಯಾಂಡ್‌ ಇಂಟರ್‌ನ್ಯಾಶನಲ್‌ ಸೌಂದರ್ಯ ಸ್ಪರ್ಧೆಯಲ್ಲಿ ಭಾರತದ ಹುಡುಗಿ ರಾಚೆಲ್ ಗುಪ್ತಾ ಮೊದಲ ಸ್ಥಾನ ಗಳಿಸಿದ್ದಾರೆ. ಆ ಮೂಲಕ ಕಳೆದ 10 ವರ್ಷಗಳಲ್ಲಿ ಇದೇ ಮೊದಲು ಬಾರಿಗೆ ಭಾರತಕ್ಕೆ ಮಿಸ್‌ ಗ್ರ್ಯಾಂಡ್‌ ಇಂಟರ್‌ನ್ಯಾಶನಲ್‌ ಪ್ರಶಸ್ತಿ ದಕ್ಕಿದೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ದೀಪಾ ಹಿರೇಗುತ್ತಿ.

ಮಿಸ್‌ ಗ್ರ್ಯಾಂಡ್‌ ಇಂಟರ್‌ನ್ಯಾಶನಲ್‌ ಪ್ರಶಸ್ತಿ ಪಡೆದ ರಾಚೆಲ್ ಗುಪ್ತಾ
ಮಿಸ್‌ ಗ್ರ್ಯಾಂಡ್‌ ಇಂಟರ್‌ನ್ಯಾಶನಲ್‌ ಪ್ರಶಸ್ತಿ ಪಡೆದ ರಾಚೆಲ್ ಗುಪ್ತಾ

ಮಿಸ್ ವರ್ಲ್ಡ್‌, ಮಿಸ್‌ ಯೂನಿವರ್ಸ್‌ನಂತೆ ಮಿಸ್‌ ಗ್ರ್ಯಾಂಡ್‌ ಇಂಟರ್‌ನ್ಯಾಶನಲ್‌ ಎನ್ನುವ ಸೌಂದರ್ಯ ಸ್ಪರ್ಧೆ ಕೂಡ ನಡೆಯುತ್ತದೆ. 2013ರಿಂದ ಥಾಯ್ಲೆಂಡ್‌ ದೇಶದಲ್ಲಿ ಈ ಸ್ಪರ್ಧೆ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಭಾರತಕ್ಕೆ ಮಿಸ್‌ ಗ್ರ್ಯಾಂಡ್‌ ಇಂಟರ್‌ನ್ಯಾಶನಲ್‌ ಪ್ರಶಸ್ತಿ ಬಂದಿದೆ. ಈ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿರುವುದು ಪಂಜಾಬಿನ ರಾಚೆಲ್ ಗುಪ್ತಾ. ಇವರ ಬಗ್ಗೆ ಹಾಗೂ ಸೌಂದರ್ಯ ಸ್ಪರ್ಧೆಯ ಹೆಸರಿನಲ್ಲಿ ಹಿಂದೊಮ್ಮೆ ವಲ್ಗಾರಿಟಿ ಪ್ರದರ್ಶಿಸಿದ್ದ ಮಿಸ್‌ ಗ್ರ್ಯಾಂಡ್‌ ಇಂಟರ್‌ನ್ಯಾಶನಲ್‌ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಗಳಿಸಿದ್ದ ಮಯನ್ಮಾರ್‌ನ ಬೆಡಗಿ ಬಗ್ಗೆ ಬರೆದುಕೊಂಡಿದ್ದಾರೆ ದೀಪಾ ಹಿರೇಗುತ್ತಿ. ಅವರ ಬರಹವನ್ನು ನೀವೂ ಓದಿ.

ದೀಪಾ ಹಿರೇಗುತ್ತಿ ಬರಹ

ಇದು ಈ ವರ್ಷದ ಮಿಸ್‌ ಗ್ರ್ಯಾಂಡ್‌ ಇಂಟರ್‌ನ್ಯಾಶನಲ್‌ ವಿಜೇತೆ ಭಾರತದ ರಾಚೆಲ್‌ ಗುಪ್ತಾ ಅವರ ಫೋಟೊ. 2013ರಲ್ಲಿ ಪ್ರಾರಂಭವಾದ ಈ ಸ್ಪರ್ಧೆ ಥೈಲ್ಯಾಂಡ್‌ನಲ್ಲಿ ನಡೆಯುತ್ತದೆ. ಈ ಸಲ ನಡೆದದ್ದು ಹನ್ನೆರಡನೇ ವರ್ಷದ ಸ್ಪರ್ಧೆ. ಭಾರತಕ್ಕೆ ಮೊದಲ ಬಾರಿ ಈ ಕಿರೀಟ ಸಿಕ್ಕಿರುವುದು. ಎರಡನೇ ಸ್ಥಾನ ಪಡೆದಾಕೆ ಮಿಸ್‌ ಫಿಲಿಫೈನ್ಸ್. ಮೂರನೇ ಸ್ಥಾನ ಪಡೆದ ಮಿಸ್‌ ಮ್ಯಾನ್ಮಾರ್‌ ವೇದಿಕೆ ಮೇಲೇ ಅತ್ತು ಕರೆದು ತಪ್ಪು ಆಯ್ಕೆಯಾಗಿದೆ ಎಂದೆಲ್ಲ ರಗಳೆ ಮಾಡಿಬಿಟ್ಟಳು. ಅವಳನ್ನು ಮಾಧ್ಯಮಗಳು ಡ್ರಾಮಾ ಕ್ವೀನ್‌ ಎಂದು ಕರೆದದ್ದು ಸೂಕ್ತವೇ ಇದೆ.

ಈ ಮಿಸ್‌ ಮ್ಯಾನ್ಮಾರ್‌ ಬಗ್ಗೆ ಇನ್ನೊಂದು ಸಂಗತಿ ಹೇಳಬೇಕಿತ್ತು. ಇವತ್ತು ಫೇಸ್‌ಬುಕ್‌ ತುಂಬ ಮಿಸ್‌ ಗ್ರ್ಯಾಂಡ್‌ ಇಂಟರ್‌ನ್ಯಾಶನಲ್‌ ಸ್ಪರ್ಧೆಯ ವಿಡಿಯೋಗಳೇ. ಹೀಗೇ ಫೇಸ್‌ಬುಕ್‌ ಸ್ಕ್ರೋಲ್‌ ಮಾಡುವಾಗ ಮಿಸ್‌ ಗ್ರಾಂಡ್‌ ಇಂಟರ್‌ನ್ಯಾಶನಲ್‌ ಸ್ಪರ್ಧೆಯ ಸ್ವಿಮ್ ಸೂಟ್‌ ವಾಕ್‌ ದೃಶ್ಯ ಬಂತು. ವಾಕ್‌ ಮಾಡುತ್ತಿದ್ದಾಕೆ ಇದೇ ಮಿಸ್‌ ಮ್ಯಾನ್ಮಾರ್‌! ಎಷ್ಟು ಕೆಟ್ಟದಾಗಿ ಮುಖದಲ್ಲಿ ಸೆನ್ಸುಯಸ್‌ ಆಗಿ ಅತಿಯಾಗಿ ಭಾವನೆಗಳನ್ನು ತೋರಿಸುತ್ತ ವಾಕ್‌ ಮಾಡಿದಳೆಂದರೆ ಅಸಹ್ಯವಾಗಿ ಹೋಯಿತು. ಒಂದು ಹಂತದಲ್ಲಂತೂ ಆಕೆ ತುಟಿ ಕಚ್ಚಿದ್ದನ್ನು ನೋಡಿ ವಲ್ಗಾರಿಟಿ ಏನಾದರೂ ಮನುಷ್ಯರೂಪ ಪಡೆದಿದ್ದರೆ ಹೀಗೆಯೇ ಕಾಣುತ್ತಿತ್ತೇನೋ ಅನ್ನಿಸಿತು. ಸ್ವಿಮ್‌ ಸೂಟ್‌ ಹಾಕಿದ್ದ ಅವಳ ದೇಹ ಸುಂದರವಾಗಿತ್ತು. ಆದರೆ ಅವಳು ವ್ಯಕ್ತಪಡಿಸಿದ ಮುಖಭಾವ ನಿಜಕ್ಕೂ ಬ್ಯೂಟಿ ಪೇಜೆಂಟ್‌ ಈ ಮಟ್ಟಕ್ಕಿಳಿಯಿತೇ ಎಂದು ಅನ್ನಿಸುವಂತಿತ್ತು.

ಈ ವಿಶ್ವ ಸುಂದರಿ ಸ್ಪರ್ಧೆಗಳ ಬಗ್ಗೆ ಈಗಾಗಲೇ ಬೇಕಾದಷ್ಟು ನೆಗೆಟಿವ್‌ ಅಂಶಗಳಿವೆ. ಮಹಿಳೆಯರು ಇಂತಹ ಒಂದು ನಿರ್ದಿಷ್ಟ ದೇಹಾಕೃತಿಯ ಅಚ್ಚಿನಲ್ಲಿಯೇ ಇರಬೇಕು ಎನ್ನುವುದನ್ನು ಪ್ರಮೋಟ್‌ ಮಾಡುವ ಇಂತಹ ಸ್ಪರ್ಧೆಗಳು ಬೇಕೇ ಎಂಬ ಚರ್ಚೆಗಳು ನಡೆಯುತ್ತಿರುವಾಗಲೇ ಸ್ಪರ್ಧಿಗಳು ಈ ಮಟ್ಟಕ್ಕೆ ಇಳಿದುಬಿಟ್ಟರೆ ಪರಿಣಾಮ ಮತ್ತೂ ಕೆಟ್ಟದಾಗುತ್ತದೆ. ಅದೇನೇ ಇರಲಿ ನೀಳಕಾಲುಗಳ ಪಂಜಾಬೀ ಹುಡುಗಿ, ಭಾರತದ ಚೆಲುವೆಗೆ ಅಭಿನಂದನೆಗಳು.