Monday Motivation: ವಿದ್ಯಾರ್ಥಿಗಳೇ, ಪರೀಕ್ಷೆಗಳು ಜೀವನದ ಭಾಗವಷ್ಟೇ; ಅನುತ್ತೀರ್ಣರಾದ ಮಾತ್ರಕ್ಕೆ ಬದುಕು ಮುಗಿಯುವುದಿಲ್ಲ ನೆನಪಿರಲಿ
ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ, ಪಿಯುಸಿಯಂತಹ ಕಾಲಘಟ್ಟದಲ್ಲಿ ವಾರ್ಷಿಕ ಪರೀಕ್ಷೆಗಳು ಬಹಳ ಮುಖ್ಯ ಎನ್ನಿಸುತ್ತವೆ. ಹಾಗಾಗಿ ಈ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿ ಆತಂಕ, ಭಯ ಹೆಚ್ಚಿರುವುದು ಸಹಜ. ಫೇಲ್ ಆಗಿ ಬಿಟ್ಟರೆ, ಕಡಿಮೆ ಅಂಕ ಬಂದರೆ ಎಂಬ ಭಯವೂ ಇರುತ್ತದೆ. ಆದರೆ ಒಂದು ವಿಚಾರ ನೆನಪಿಡಿ, ಪರೀಕ್ಷೆಗಳಷ್ಟೇ ನಮ್ಮ ಬದುಕನ್ನ ನಿರ್ಧರಿಸುವುದಲ್ಲ.
ಇತ್ತೀಚಿನ ದಿನಗಳಲ್ಲಿ ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳು ಆತ್ಮಹತ್ಯೆಯಂತಹ ತಪ್ಪು ನಿರ್ಧಾರ ತೆಗೆದುಕೊಳ್ಳುವ ಪರಿಪಾಠ ಹೆಚ್ಚಾಗಿದೆ. ಎಕ್ಸಾಂನಲ್ಲಿ ಫೇಲ್ ಆದ ಕೂಡಲೇ ಬದುಕೇ ಮುಗಿಯಿತು ಎಂದುಕೊಳ್ಳುತ್ತಾರೆ. ಆದರೆ ಜೀವನದಲ್ಲಿ ಉನ್ನತ ಸ್ಥಾನಕ್ಕೇರಿ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಸಾಧಕರಲ್ಲಿ ಹಲವರು ಪರೀಕ್ಷೆಗಳಲ್ಲಿ ಫೇಲ್ ಆದವರು ಎಂಬುದು ಸುಳ್ಳಲ್ಲ. ಪರೀಕ್ಷೆಯಲ್ಲಿ ಒಮ್ಮೆ ಫೇಲ್ ಆದ ಕೂಡಲೇ ಜೀವನ ಮುಗಿಯಿತು, ಬದುಕು ಹಾಳಾಯಿತು ಎಂಬ ಅರ್ಥವಲ್ಲ. ಒಮ್ಮೆ ಫೇಲ್ ಆದರೂ ರೀ ಎಕ್ಸಾಂ ಬರೆಯುವ ಅವಕಾಶ ಇದೆ. ಆದರೆ ಒಮ್ಮೆ ಬದುಕು ಮುಗಿದರೆ, ಆ ಬದುಕನ್ನು ಮರಳಿ ತರಲು ಸಾಧ್ಯವಿಲ್ಲ.
ಮರಳಿ ಯತ್ನವ ಮಾಡು
ಬದುಕು ಬಹಳ ವಿಶಾಲ, ಒಮ್ಮೆ ಸೋತರೆ ಮರಳಿ ಯತ್ನವ ಮಾಡು ಎಂಬ ಮನೋಭಾವ ಹೊಂದಬೇಕು. ಪರೀಕ್ಷೆಗಳಲ್ಲಿ ಸೋತರು ಬದುಕಿನಲ್ಲಿ ಗೆದ್ದು, ಅದೆಷ್ಟೋ ಸಾಧನೆಗಳನ್ನು ಮಾಡಿದ ಹಲವು ಸ್ಫೂರ್ತಿದಾಯಕ ವ್ಯಕ್ತಿತ್ವಗಳು ನಮ್ಮ ಕಣ್ಣ ಮುಂದಿವೆ. ಪರೀಕ್ಷೆಗಳು ಎಂದಿಗೂ ಜೀವನವನ್ನು ನಿರ್ಧಾರ ಮಾಡುವುದಿಲ್ಲ. ಪರೀಕ್ಷೆಗಳು ಬದುಕಿನ ಭಾಗವೇ ಹೊರತು ಅವೇ ಬದುಕಲ್ಲ, ನೆನಪಿರಲಿ. ಪರೀಕ್ಷೆಗಳೆಂದರೆ ಶಾಲೆಯಲ್ಲಿ ಕಲಿತದ್ದನ್ನು, ನಿಮ್ಮ ಸಾಮರ್ಥ್ಯವನ್ನು ತೋರಿಸಲು ಒಂದು ಅವಕಾಶವಷ್ಟೇ. ಈ ಬಾರಿ ಫೇಲ್ ಆದರೆ ಮತ್ತೆ ಮರು ಪರೀಕ್ಷೆ ಬರೆದು ಪಾಸ್ ಮಾಡಿಕೊಳ್ಳಬಹುದು.
ದುಡುಕುವ ಮುನ್ನ ಅಮ್ಮ-ಅಪ್ಪನ ಮುಖ ನೋಡಿ
ಆದರೆ ಫೇಲ್ ಆದರೆ ಎನ್ನುವ ಕಾರಣಕ್ಕೆ ಅಥವಾ ಕಡಿಮೆ ಅಂಕ ಬಂತು ಎಂಬ ಕಾರಣಕ್ಕೆ ಆತಂಕ, ಭಯ, ಸಿಟ್ಟು, ಸೋಲಿನ ಮನೋಭಾವದಿಂದ ಯಾವುದಾದರೂ ಕೆಟ್ಟ ನಿರ್ಧಾರ ತೆಗೆದುಕೊಂಡರೆ, ಹೋದ ಜೀವ ಮತ್ತೆ ಮರಳಿ ಬರುವುದಿಲ್ಲ. ಪರೀಕ್ಷೆಯಲ್ಲಿ ಫೇಲ್ ಆದರೆ ಪೋಷಕರು ಒಂದಿಷ್ಟು ದಿನ ಅಸಮಾಧಾನ ತೋರಿಸಬಹುದು. ನಂತರ ಅವರೂ ಅರ್ಥ ಮಾಡಿಕೊಂಡು ನಿಮ್ಮನ್ನು ಮುನ್ನೆಡುಸುತ್ತಾರೆ. ಆದರೆ ಜೀವ ಕಳೆದುಕೊಂಡರೆ ಅಮ್ಮ-ಅಪ್ಪ, ಮನೆಯವರ ಪರಿಸ್ಥಿತಿಯನ್ನು ಯೋಚನೆ ಮಾಡಿ. ಎಳೆ ವಯಸ್ಸಿನಲ್ಲಿ ಮಕ್ಕಳು ದೂರಾದರೇ ಆ ನೋವನ್ನು ತಡೆಯಲು ತಂದೆ-ತಾಯಿಗಳಿಗೆ ನಿಜಕ್ಕೂ ಅಸಾಧ್ಯ ಎನ್ನಿಸುವುದು ಸುಳ್ಳಲ್ಲ. ಹಾಗಾಗಿಯೇ ಫೇಲ್ ಆದೆ ಎನ್ನುವ ಕಾರಣಕ್ಕೆ ದುಡುಕಿ ನಿರ್ಧಾರಗಳನ್ನು ಎಂದಿಗೂ ತೆಗೆದುಕೊಳ್ಳಬಾರದು.
ಜೀವನದಲ್ಲಿ ಒತ್ತಡ, ಆತಂಕವನ್ನು ಗೆದ್ದರೆ ನೀವು ಖಂಡಿತ ಎಲ್ಲವನ್ನೂ ಗೆಲ್ಲಬಲ್ಲಿರಿ. ಪರೀಕ್ಷಾ ಫಲಿತಾಂಶಗಳು ಬಂದ ನಂತರ ನೀವು ತೆಗೆದುಕೊಳ್ಳುವ ನಿರ್ಧಾರಗಳನ್ನು ನಿಮ್ಮ ಭವಿಷ್ಯವನ್ನು ನಿರ್ಧಾರ ಮಾಡಬಲ್ಲವು. ನೀವು ತೆಗೆದುಕೊಳ್ಳುವ ನಿರ್ಧಾರಗಳೇ ನಿಮ್ಮ ನಿಜವಾದ ಪರೀಕ್ಷೆ. ಜೀವನದಲ್ಲಿ ಎದುರಾಗುವ ದೊಡ್ಡ ದೊಡ್ಡ ಪರೀಕ್ಷೆಗಳ ಮುಂದೆ ಶಾಲೆಯ ಪರೀಕ್ಷೆ ಏನೂ ಅಲ್ಲ, ಅದಕ್ಕೆ ಇನ್ನೊಂದು ಅವಕಾಶ ಖಂಡಿತ ಇದೆ. ಜೀವನದಲ್ಲಿ ಎದುರಾಗುವ ಎಲ್ಲಾ ಪರೀಕ್ಷೆಗಳನ್ನ ಗೆಲ್ಲುತ್ತಾ ಗೆಲ್ಲುತ್ತಾ ಮುಂದೆ ಸಾಗಬೇಕು.
ಪರೀಕ್ಷೆಗಳಲ್ಲಿ ಪಾಸ್ ಆಗಲು ಅಥವಾ ಉತ್ತಮ ಅಂಕ ಗಳಿಸಲು ಏನು ಬೇಕೋ ಅದನ್ನು ಮನಸ್ಫೂರ್ತಿಯಾಗಿ ಮಾಡಿ. ಗೆದ್ದರೆ ಕೇಳುವುದು ಚಪ್ಪಾಳೆ, ಸೋತರೆ ಸಿಗುವುದು ಅನುಭವಗಳು. ಆ ಕಾರಣಕ್ಕೆ ಫೇಲ್ ಆದ್ರೂ ಖುಷಿಯಾಗಿರುವುದು ಮುಖ್ಯ.
ಜೀವನದಲ್ಲಿ ಶಿಕ್ಷಣ ಅತ್ಯಗತ್ಯ. ಉತ್ತಮ ಅಂಕಗಳು ಬೇಕು, ನಿಮ್ಮ ಪ್ರಯತ್ನ ನೀವು ಮಾಡಿ. ಉತ್ತಮ ಪ್ರಯತ್ನದ ನಂತರವೂ ಫೇಲ್ ಆದರೆ ಚಿಂತೆ ಬೇಡ. ಪರೀಕ್ಷೆಯಲ್ಲಿ ಫೇಲ್ ಆಗುವುದು ಓದಿನ ಭಾಗ ಎಂದುಕೊಳ್ಳಿ, ಮತ್ತೆ ಪಾಸ್ ಮಾಡಿಕೊಳ್ಳುತ್ತೇನೆ ಎಂಬ ದೃಢನಿರ್ಧಾರಕ್ಕೆ ಬನ್ನಿ.
ಮೊದಲೇ ಹೇಳಿದಂತೆ ಬದುಕನ್ನು ನಿರ್ಧರಿಸುವುದು ಪರೀಕ್ಷೆಯಲ್ಲ. ನಿಮ್ಮ ಆಲೋಚನಗಳೇ ನಿಮ್ಮ ಗೆಲುವನ್ನು ನಿರ್ಧಾರ ಮಾಡುತ್ತವೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಅಂತಿದ್ದರೆ, ನೀವು ತೆಗೆದುಕೊಳ್ಳುವ ನಿರ್ಧಾರಗಳು ಉತ್ತಮವಾಗಿರಬೇಕು. ಪರೀಕ್ಷೆಯಲ್ಲಿ ಆಗುವುದು ಅಥವಾ ಕಡಿಮೆ ಅಂಕ ಬರುವುದು ನಿಜಕ್ಕೂ ಸಣ್ಣ ವಿಚಾರ, ಈ ಕಾರಣಕ್ಕೆ ಆತ್ಮಹತ್ಯೆಯಂತಹ ದುಡುಕು ನಿರ್ಧಾರ ಎಂದಿಗೂ ಮಾಡದಿರಿ. ಫೇಲ್ ಆಗುವವರಿಗಾಗಿಯೇ ಸಪ್ಲಿಮೆಂಟರಿ ಪರೀಕ್ಷೆಗಳಿರುವುದು. ಆದರೆ ಜೀವಕ್ಕೆ ಸಪ್ಲಿಮೆಂಟರಿ ಎಂಬುದಿಲ್ಲ, ಒಮ್ಮೆ ಉಸಿರು ನಿಂತರೆ ಮುಗಿಯಿತು. ದೇವರು ಕೂಡ ನಿಮ್ಮ ಉಸಿರನ್ನು ಮರಳಿ ನೀಡಲಾರ.
ಪರೀಕ್ಷ, ಪ್ರೀತಿ ಇಂತಹ ವಿಚಾರಗಳಲ್ಲಿ ಸೋಲುವುದು ಸಹಜ. ಅದಕ್ಕಾಗಿ ಆತ್ಮಹತ್ಯೆ ಖಂಡಿತ ಪರಿಹಾರವಲ್ಲ. ಪರೀಕ್ಷೆಗಳು ಮತ್ತೆ ಬರುತ್ತವೆ. ಪ್ರೀತಿ ಮತ್ತೆ ಹುಟ್ಟುತ್ತದೆ. ಆದರೆ ನಿಮ್ಮನ್ನು ಹೆತ್ತವರಿಗೆ ನಿಮ್ಮಂತಹ ಮಗಳು ಅಥವಾ ಮಗ ಮತ್ತೆ ಸಿಗಲು ಸಾಧ್ಯವಿಲ್ಲ. ಪರೀಕ್ಷೆಗಳು ನಿಮ್ಮ ಜೀವನವನ್ನು ನಿರ್ಧರಿಸುವುದಿಲ್ಲ. ಅವು ನಮ್ಮ ಯಶಸ್ಸಿನ ಅಳತೆಗೋಲು ಅಲ್ಲ. ನಿಮ್ಮ ಆಲೋಚನೆಗಳು ಮಾತ್ರ ನೀವು ಯಾರೆಂದು ನಿರ್ಧರಿಸುತ್ತವೆ. ಸೋಲು ಎಂದರೆ ಗೆಲುವಿಗೆ ಹತ್ತಿರವಾಗುವುದು. ಸೋಲಿನಿಂದಲೇ ಪಾಠ ಕಲಿತು ಸೋಲನ್ನ ಸೋಲಿಸುವ ಮನೋಭಾವ ಹೊಂದಬೇಕು. ಬದುಕಿನಲ್ಲಿ ಮರಳಿ ಯತ್ನಗಳಿಂದ ಮಾತ್ರ ಯಶಸ್ಸು ಸಾಧ್ಯ ನೆನಪಿರಲಿ.