ಬಿಸಿಬಿಸಿಯಾಗಿ ಕುಡಿದ್ರೆ ಸ್ವರ್ಗ ಅನ್ನಿಸೋ ರಸಂಗಳಿವು; ಸುರಿವ ಮಳೆ, ಕೊರೆಯುವ ಚಳಿಯಲ್ಲಿ ಮಿಸ್ ಮಾಡದೆ ಟ್ರೈ ಮಾಡಿ
ಮಳೆಗಾಲದಲ್ಲಿ ಸೂಪ್ ಕುಡಿಯುವ ಅಭ್ಯಾಸ ನಿಮಗಿರಬಹುದು. ನಿತ್ಯವೂ ಸೂಪ್ ತಯಾರಿಸಲು ಕಷ್ಟವಾದರೆ, ಸರಳವಾಗಿ ರಸಂ ಮಾಡಿ ಸವಿಯಬಹುದು. ಮಳೆಗಾಲದಲ್ಲಿ ನಿಮ್ಮ ಬಾಯಿ ರುಚಿ ಹೆಚ್ಚಿಸುವ ಸೂಪ್ ಐಡಿಯಾಗಳು ಇಲ್ಲಿವೆ.

ಮಳೆಗಾಲದಲ್ಲಿ ಬಾಯಾರಿಕೆ ಕಡಿಮೆಯಾದರೆ ಹಸಿವು ಹೆಚ್ಚು. ಹೊತ್ತುಹೊತ್ತಿಗೂ ಬಿಸಿಬಿಸಿಯಾಗಿ ಏನಾದರೂ ತಿನ್ನೋಣ ಎಂದು ಬಾಯಿ ಹುಡುಕುತ್ತಿರುತ್ತದೆ. ತಿನ್ನೋ ಆಹಾರ ಹೊಟ್ಟೆಗೆ ಹಿತವೆನಿಸುವುದರ ಜೊತೆಗೆ ಬಾಯಿಗೆ ರುಚಿಯಾಗಿಯೂ ಇರಬೇಕು. ಮಳೆಗಾಲದ ಚಳಿಯ ವಾತಾವರಣಕ್ಕೆ ಬಿಸಿಬಸಿಯಾಗಿ ಸೂಪ್, ರಸಂ ಕುಡಿಯಬೇಕು ಎಂದೆನಿಸುತ್ತದೆ. ಅನ್ನದ ಜೊತೆಗೆ ಸವಿಯುವ ಸೇವಿಸೋದು ಸಾಮಾನ್ಯ. ಆದರೆ ಮಳೆಗಾಲದಲ್ಲಿ ಬರೀ ರಸಂ ಅನ್ನು ಕೂಡಾ ಬಿಸಿಬಿಸಿಯಾಗಿ ಸವಿಯಬಹುದು. ದಕ್ಷಿಣ ಭಾರತದಲ್ಲಿ ಬಗೆಬಗೆಯ ರಸಂ ತಯಾರಿಸಲಾಗುತ್ತದೆ. ಭಾರತೀಯರಿಗೆ ಈ ರಸಂಗಳೇ ಸೂಪ್‌ನಂತೆ. ಇವು ರುಚಿ ಮಾತ್ರವಲ್ಲದೆ ನವೋಲ್ಲಾಸವನ್ನು ನೀಡುತ್ತದೆ. ಮಳೆಗಾಲದಲ್ಲಿ ನಿಮ್ಮ ಜೋಶ್ ಹೆಚ್ಚಿಸಬಲ್ಲ ರಸಂಗಳು ಇಲ್ಲಿವೆ.
ಟೊಮೆಟೊ ರಸಂ
ರಸಂಗಳಲ್ಲಿ ಟೊಮೆಟೋ ರಸಂಗೆ ಉನ್ನತ ಗೌರವ. ಬೇಯಿಸಿದ ಟೊಮೆಟೊ, ಹುಣಸೆಹಣ್ಣು ಮತ್ತು ಸರಳ ಮಸಾಲೆಗಳನ್ನು ಮಿಶ್ರಣ ಮಾಡಿ ಸುಲಭವಾಗಿ ಟೊಮೆಟೋ ರಸಂ ರೆಡಿ ಮಾಡಬಹುದು. ಬಾಯಿಗಿಟ್ಟಾಗ ಹುಳಿಯ ರುಚಿ ಕೊಡುವ ರಸಂ, ಮಳೆಗಾಲದ ಸಂಜೆಗೆ ಸೂಪ್‌ನಂಥಾ ಅನುಭವ ಕೊಡುತ್ತದೆ.
ನಿಂಬೆ ರಸಂ
ನಿಂಬೆ ರಸಂ ನೆನಪಿಸಿಕೊಂಡಾಗಲೇ ಉಲ್ಲಾಸ ಉಕ್ಕುತ್ತದೆ. ಮಳೆಗಾಲದಲ್ಲಿ ನಿಂಬೆಯ ಹುಳಿ ರಸಂ ದೇಹಕ್ಕೆ ನವೋಲ್ಲಾಸ ತಂದುಕೊಡುತ್ತದೆ. ನಿಂಬೆಯ ರುಚಿ ಮಾತ್ರವಲ್ಲದೆ ಸುವಾಸನೆ ಹಾಗೂ ರಸಂನಲ್ಲಿರುವ ಮಸಾಲೆಗಳು ಭಿನ್ನ ರುಚಿ ಕೊಡುತ್ತದೆ. ಮಳೆಗಾಲದಲ್ಲಿ ನಿಮ್ಮಲ್ಲಿ ಇನ್ನಷ್ಟು ಜೋಶ್ ಹೆಚ್ಚಿಸುತ್ತದೆ.
ಪೆಪ್ಪರ್ ರಸಂ
ಖಾರ ಬೇಕು, ಖಡಕ್ ಆಗಿರಬೇಕು ಎನ್ನುವವರಿಗೆ ಕರಿಮೆಣಸಿನ ರಸಮ್ ಉತ್ತಮ ಆಯ್ಕೆ. ಕರಿಮೆಣಸು ಪುಡಿ, ಜೀರಿಗೆ ಮತ್ತು ಇತರ ಮಸಾಲೆಗಳನ್ನು ಸೇರಿಸಿ ಸ್ವಲ್ಪ ಹುಣಸೆ ಹಣ್ಣು ಅಥವಾ ನಿಂಬೆ ರಸ ಸೇರಿಸಿ ಪೆಪ್ಪರ್ ರಸಂ ತಯಾರಿಸಬಹುದು.
ಬೆಳ್ಳುಳ್ಳಿ ರಸಂ
ಬೆಳ್ಳುಳ್ಳಿಯು ಬೆಚ್ಚಗಾಗಿಸುವ ಗುಣಲಕ್ಷಣಗಳಿಗೆ ಹೆಸರುವಾಸಿ. ಬೆಳ್ಳುಳ್ಳಿ ರಸಂ ಮಳೆಗಾಲಕ್ಕೆ ಅತ್ಯುತ್ತಮ ಆಯ್ಕೆ. ಹುರಿದ ಬೆಳ್ಳುಳ್ಳಿಯಿಂದ ಸರಳವಾಗಿ ತಯಾರಿಸಿದ ರಸಂ ಸಂಜೆ ವೇಳೆ ಕುಡಿಯಬಹುದು.
ಹುಣಸೆ ರಸಂ
ಹುಣಸೆ ಹಣ್ಣು, ಜೀರಿಗೆ ಹಾಗೂ ಕರಿಮೆಣಸಿನ ಪುಡಿಯನ್ನೇ ಪ್ರಮುಖ ಪದಾರ್ಥಗಳಾಗಿ ಬಳಸಿ ಸರಳವಾಗಿ ತಯಾರಿಸಬಹುದಾದ ಹುಣಸೆ ರಸಂ, ಬಾಯಿಗೆ ರುಚಿಕರ. ಅನ್ನದೊಂದಿಗೆ ಇದು ಉತ್ತಮ ಕಾಂಬಿನೇಷನ್. ನಾಲಿಗೆ ರುಚಿ ಕಳೆದುಕೊಂಡವರು ಇದನ್ನು ಮಾಡಿ ಕುಡಿಯಬಹುದು.
ಅನಾನಸ್ ರಸಂ
ರಸಂ ಹುಳಿಯಾಗಿದ್ದರೆ ಚೆಂದ. ಹುಳಿ ಹಣ್ಣು ಅನಾನಸ್‌ನಿಂದ ಸಿಹಿ ಮತ್ತು ಹುಳಿ ಮಿಶ್ರಣವಾಗುವ ರುಚಿಕರ ರಸಂ ಮಾಡಿ ಕುರಿಯಿರಿ. ಇದಕ್ಕೆ ಲಘುವಾಗಿ ಮಸಾಲೆಗಳನ್ನು ಸೇರಿಸಿದರೆ ಇನ್ನೂ ರುಚಿಕರ. ಹೆಚ್ಚುವರಿ ಟೊಮೆಟೋ ಅಥವಾ ಹುಣಸೆ ಹುಳಿ ಸೇರಿಸಬೇಕಾದ ಅಗತ್ಯವಿಲ್ಲ. ಅನಾನಸ್‌ನ ನೈಸರ್ಗಿಕ ರುಚಿಯು ರಸಂ ಮಸಾಲೆಯೊಂದಿಗೆ ಬೆರೆತಾಗ ಭಿನ್ನ ಸ್ವಾದ ಕೊಡುತ್ತದೆ.
ನುಗ್ಗೆಕಾಯಿ ರಸಂ
ನುಗ್ಗೆಕಾಯಿ ಸಾಂಬಾರ್‌ಗೆ ಮಾತ್ರವಲ್ಲದೆ ರಸಂ ತಯಾರಿಸಲು ಕೂಡಾ ಉತ್ತಮ ಆಯ್ಕೆ. ಇದರಲ್ಲಿ ಅಪಾರ ಪೌಷ್ಟಿಕಾಂಶಗಳಿವೆ. ಅಲ್ಲದೆ ಇದು ಬಾಯಿಗೂ ಬಲು ರುಚಿಕರ.
ಬೀಟ್ರೂಟ್ ರಸಂ
ಬೀಟ್ರೂಟ್ ರಸಂ ನೋಡುವಾಗಲೇ ಬಣ್ಣದಿಂದ ಕಾಣುತ್ತದೆ. ಮಕ್ಕಳಿಗೆ ಈ ಸೂಪ್ ಒಳ್ಳೆಯದು. ಬಣ್ಣ ಕೂಡಾ ಬರುವುದರಿಂದ ಬೀಟ್ರೂಟ್‌ನ ಆರೋಗ್ಯ ಪ್ರಯೋಜನಗಳು ಕೂಡಾ ಹೊಟ್ಟೆ ಸೇರುತ್ತವೆ. ಮಳೆಗಾಲಕ್ಕೆ ಉತ್ತಮ ಪೋಷಕಾಂಶವೂ ಹೌದು. ಹುಳಿ ಬರಲು ನಿಂಬೆ ಅಥವಾ ಹುಣಸೆ ಹಣ್ಣನ್ನು ಬಳಸಿ ಮಾಡಬಹುದು.
ಮಳೆಗಾಲದ ಆರೋಗ್ಯ ಕುರಿತ ಇನ್ನಷ್ಟು ಸುದ್ದಿಗಳು ಇಲ್ಲಿವೆ
ಇದನ್ನೂ ಓದಿ | ಮಳೆಗಾಲದಲ್ಲಿ ಹಲ್ಲು ಜುಂ ಅಂತಿದ್ರೆ ಹೀಗೆ ಮಾಡಿ; ಹಲ್ಲುಗಳ ಆರೋಗ್ಯ ಕಾಪಾಡಲು ಬೆಸ್ಟ್ ಟಿಪ್ಸ್ ಇವು
