ಮಧುಮೇಹಿಗಳಿಗೆ ಮಳೆಗಾಲವೇ ಸಮಸ್ಯೆಯಾಗಿ ಕಾಡಬಹುದು; ಮಳೆಯ ನಡುವೆ ಆರೋಗ್ಯವಾಗಿರಲು ಈ ಸಲಹೆಗಳನ್ನು ಪಾಲಿಸಿ
ಮಳೆಗಾಲದಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಸಕ್ಕರೆ ಕಾಯಿಲೆ ಇದ್ದವರು ಈ ಸಮಯದಲ್ಲಿ ಹೆಚ್ಚುವರಿ ಕಾಳಜಿ ವಹಿಸಬೇಕು. ಮಧುಮೇಹ ಇರುವವರು ಮಳೆಗಾಲದಲ್ಲಿ ಆರೋಗ್ಯವಾಗಿರಲು ಪಾಲಿಸಬೇಕಾದ ಸಲಹೆಗಳು ಇಲ್ಲಿವೆ.

ಮಳೆಗಾಲದಲ್ಲಿ ಬಾಯಿಯು ಗರಿಗರಿ ತಿನಿಸುಗಳನ್ನು ಹುಡುಕಾಡುತ್ತದೆ. ಮಳೆ ಸುರಿಯುತ್ತಿದೆ ಎಂದಾಗ, ಬಿಸಿಬಿಸಿ ಚಹಾ ಅಥವಾ ಕಾಫಿ ಜೊತೆಗೆ ಪಕೋಡ, ಸಮೋಸಾ ಸೇರಿದಂತೆ ಬೀದಿ ಬದಿ ಆಹಾರಗಳತ್ತ ಮನಸ್ಸು ಸೆಳೆಯುವುದು ಸಹಜ. ಹಾಗಂತಾ ಆರೋಗ್ಯ ಸಮಸ್ಯೆ ಇರುವವರು ತಮಗಿಷ್ಟ ಬಂದಂತೆ ಆಹಾರ ಸೇವನೆ ಮಾಡಿದರೆ, ಇನ್ನಷ್ಟು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಮಳೆಗಾಲದಲ್ಲಿ ಇನ್ನಷ್ಟು ಎಚ್ಚರದಿಂದಿರಬೇಕು. ಮಧುಮೇಹ ಇರುವವರು ಮಳೆಗಾಲದಲ್ಲಿ ಆರೋಗ್ಯದ ವಿಚಾರವಾಗಿ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಈ ಕಾಲದಲ್ಲಿ ಸೋಂಕುಗಳು ಹರಡುವ ಸಾಧ್ಯತೆ ಹೆಚ್ಚಿದ್ದು, ಆರೋಗ್ಯ ಸಮಸ್ಯೆಗಳು ಕಾಡುತ್ತವೆ.
ಮಧುಮೇಹ ಇರುವವರು ಆರೋಗ್ಯದ ವಿಚಾರವಾಗಿ ತುಂಬಾ ಎಚ್ಚರವಾಗಿರಬೇಕು. ತಮ್ಮ ದಿನಚರಿಯಲ್ಲಿ ಆಹಾರ ಹಾಗೂ ಔಷಧ ವಿಚಾರವಾಗಿ ಜಾಗರೂಕರಾಗಿರಬೇಕು. ಮಳೆಗಾಲದಲ್ಲಿ ಡಯಾಬಿಟಿಸ್ ರೋಗಿಗಳು ವಿವಿಧ ರೀತಿಯ ಸೋಂಕುಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಇಂತಹ ಸೋಂಕುಗಳು ಪ್ರತಿರಕ್ಷಣಾ ವ್ಯವಸ್ಥೆ ಮೇಲೆ ದಾಳಿ ಮಾಡಿ ಹೆಚ್ಚಿನ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಅವರ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಸಕ್ಕರೆ ಕಾಯಿಲೆ ರೋಗಿಗಳು ಹೆಚ್ಚು ಜಾಗರೂಕರಾಗಿರಬೇಕು.
ಮಳೆಗಾಲದಲ್ಲಿ ಈ ಅಂಶಗಳು ಗಮನದಲ್ಲಿರಲಿ
ಆರೋಗ್ಯಕರ ಆಹಾರ ಸೇವಿಸಿ
ಮಳೆಗಾಲದಲ್ಲಿ ತಿನ್ನುವ ಆಹಾರ ಹಾಗೂ ಕುಡಿಯುವ ಪಾನೀಯಗಳ ಬಗ್ಗೆ ಜಾಗರೂಕರಾಗಿರಬೇಕು. ಸಾಧ್ಯವಾದಷ್ಟು ಮನೆಯಲ್ಲಿ ತಯಾರಿಸಿದ ಆಹಾರವನ್ನು ಮಾತ್ರ ಸೇವಿಸುವುದು ಒಳ್ಳೆಯದು. ಆಹಾರದ ಗುಣಮಟ್ಟ, ನೈರ್ಮಲ್ಯ ಹಾಗೂ ಪೌಷ್ಟಿಕಾಂಶ ಪ್ರಮಾಣದ ಮೇಲೆ ಗಮನವಿರಲಿ. ಸಾಧ್ಯವಾದಷ್ಟು ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರವನ್ನು ಸೇವಿಸಿ. ತಿನ್ನುವ ಮೊದಲು ಎಲ್ಲಾ ಹಣ್ಣುಗಳು ಮತ್ತು ತರಕಾರಿಗಳನ್ನು ತೊಳೆಯಿರಿ. ಹುರಿದ ತಿಂಡಿಗಳನ್ನು ಕಡಿಮೆ ಮಾಡಿ. ಬೀದಿ ಆಹಾರವನ್ನು ಆದಷ್ಟು ತಪ್ಪಿಸಿ.
ಹೈಡ್ರೇಟೆಡ್ ಆಗಿರಿ
ಮಳೆಗಾಲದಲ್ಲಿ ಆರ್ದ್ರ ವಾತಾವರಣವಿರುತ್ತದೆ. ಹೀಗಾಗಿ ದೇಹವನ್ನು ಹೈಡ್ರೀಕರಿಸುವುದು ಅಗತ್ಯ. ಬಾಯಾರಿಕೆ ಆಗದಿದ್ದರೂ, ಸಾಕಷ್ಟು ನೀರು ಕುಡಿಯುವುದು ಒಳ್ಳೆಯದು. ಹೆಚ್ಚು ನೀರು ಸೇವನೆ ಮಧುಮೇಹದಿಂದ ಬಳಲುತ್ತಿರುವವರ ಆರೋಗ್ಯಕ್ಕೆ ಒಳ್ಳೆಯದು. ರೋಗಗಳ ಅಪಾಯದಿಂದ ತಪ್ಪಿಸಲು ಬಿಸಿ ನೀರನ್ನು ಕುಡಿಯಿರಿ. ಎಳನೀರು ಕೂಡಾ ಒಳ್ಳೆಯದು.
ಪಾದದ ಆರೈಕೆ
ಮಧುಮೇಹವಿದ್ದರೆ ಪಾದಗಳ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಬೇಕು. ಸಣ್ಣ ಗಾಯವಾದರೂ ಅದು ಗಂಭೀರ ಸಮಸ್ಯೆಗೆ ಕಾರಣವಾಗಬಹುದು. ರಕ್ತದಲ್ಲಿ ಅಧಿಕ ಸಕ್ಕರೆಯು ರಕ್ತ ಪರಿಚಲನೆಯಲ್ಲಿ ಅಡ್ಡಿಯುಂಟುಮಾಡುತ್ತದೆ. ಅಲ್ಲದೆ ಇದು ಪಾದಗಳಲ್ಲಿನ ನರಗಳಿಗೆ ಹಾನಿಗೊಳಿಸುತ್ತದೆ. ಹೀಗಾಗಿ ಮಧುಮೇಹದಿಂದ ಬಳಲುತ್ತಿರುವವರು ಮಳೆಗಾಲದಲ್ಲಿ ಹೊರಗಡೆ ಓಡಾಡುವಾಗ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಸೋಂಕು ಹರಡದಂತೆ ಎಚ್ಚರಿಕೆಯಿಂದರಿಬೇಕು.
- ಮಳೆಯ ಸಮಯದಲ್ಲಿ ಓಡಾಡಿದ ನಂತರ ಪಾದಗಳನ್ನು ಸ್ವಚ್ಛವಾಗಿ ತೊಳೆದು ಒಣಗಿಸಿ.
- ಬರಿಗಾಲಿನಲ್ಲಿ ಓಡಾಡಬೇಡಿ
- ಗಟ್ಟಿ ಪ್ಲಾಸ್ಟಿಕ್ ಪಾದರಕ್ಷೆಗಳನ್ನು ಧರಿಸದಿರಿ. ಕಾಲಿಗೆ ಆರಾಮದಾಯಕ ಎನಿಸುವ ಪಾದರಕ್ಷೆಗಳನ್ನು ಧರಿಸಿ.
- ಇಮ್ಮಡಿ ಒಡೆಯುವುದು, ಬೆರಳುಗಳಲ್ಲಿ ಗಾಯಗಳು ಹಾಗೂ ಹುಣ್ಣುಗಳು ಆಗಿವೆಯೇ ಎಂಬುದನ್ನು ಪ್ರತಿನಿತ್ಯ ಪರಿಶೀಲಿಸಿ.
- ಕಾಲು ಮತ್ತು ಕಾಲ್ಬೆರಳುಗಳಿಗೆ ನಿತ್ಯ ಮಸಾಜ್ ಮಾಡಿ.
ನಿತ್ಯ ವ್ಯಾಯಾಮ ಮಾಡಿ
ಹೊರಗಡೆ ಮಳೆ ಸುರಿಯುವಾಗ ಹಾಸಿಗೆಯಲ್ಲಿ ಸುಖನಿದ್ರೆ ಮಾಡಲು ಮನಸ್ಸು ಹಾತೊರೆಯಬಹುದು. ಹೀಗಾಗಿ ದೇಹಕ್ಕೆ ವ್ಯಾಮವನ್ನು ಹಲವರು ನಿರ್ಲಕ್ಷ್ಯ ಮಾಡಬಹುದು. ವ್ಯಾಯಾಮವು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ದೇಹಕ್ಕೆ ಸಹಾಯ ಮಾಡುತ್ತದೆ. ಇದೇ ವೇಳೆ ತೂಕ ನಷ್ಟವನ್ನು ಉತ್ತೇಜಿಸುವುದಲ್ಲದೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸುತ್ತದೆ. ಹೃದ್ರೋಗದ ಅಪಾಯ ಕಡಿಮೆ ಮಾಡುತ್ತದೆ.
ಗಾಯಗಳಿಗೆ ಚಿಕಿತ್ಸೆ
ಗಾಯಗಳನ್ನು ಸ್ವಚ್ಛಗೊಳಿಸಲು ಸೌಮ್ಯವಾದ ಸಾಬೂನು ಬಳಸಿ. ಗಾಯಗಳು ತ್ವರಿತವಾಗಿ ಗುಣವಾಗಲು ಆಂಟಿಬಯೋಟೆಕ್ ಕ್ರೀಮ್ ಅಥವಾ ಮುಲಾಮು ಬಳಸಿ.
ಕಣ್ಣಿನ ಆರೈಕೆ
ಮಳೆಗಾಲದಲ್ಲಿ ಕಣ್ಣಿನ ಸೋಂಕು ಕೂಡಾ ಆಗಬಹುದು. ಹೀಗಾಗಿ ಎಚ್ಚರ ಅಗತ್ಯ. ಕೈಗಳಿಂದ ಕಣ್ಣುಗಳನ್ನು ಮುಟ್ಟಬೇಡಿ. ಕೈಗಳನ್ನು ಆಗಾಗ ತೊಳೆಯಿರಿ. ಯಾವುದೇ ಸಮಸ್ಯೆ ಎದುರಾದರೂ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಿ.
ಮಳೆಗಾಲದ ಆರೋಗ್ಯ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಮಳೆಗಾಲದಲ್ಲಿ ಹೃದಯಾಘಾತ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳು ಹೆಚ್ಚಲು ಕಾರಣವಾಗುವ ಅಂಶವಿದು; ವಾತಾವರಣ ಬೆಚ್ಚಗಿರಲು ಈ ಉಪಾಯ ಪಾಲಿಸಿ
