Mothers Day 2024: ಭಾರತದಲ್ಲಿ ಅಮ್ಮಂದಿರ ದಿನಾಚರಣೆ ಯಾವಾಗ, ಮದರ್ಸ್ ಡೇ ವರ್ಷದಲ್ಲಿ 2 ಬಾರಿ ಬರುತ್ತಾ? ಈ ದಿನದ ಇತಿಹಾಸ, ಮಹತ್ವ ಹೀಗಿದೆ
ಜಗತ್ತಿನಲ್ಲಿ ತಾಯಿ ಪ್ರೀತಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ತಾಯಿ ಪ್ರೀತಿ ಎಂಬುದು ಅದ್ಭುತ ಶಕ್ತಿ. ತಾಯಿಯ ಪ್ರೀತಿ, ಮಮತೆಯ ಮಹತ್ವವನ್ನು ತಿಳಿಸಿ, ಗೌರವಿಸುವ ಉದ್ದೇಶದಿಂದ ಪ್ರತಿ ವರ್ಷ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ತಾಯಂದಿರ ದಿನಾಚರಣೆ ಯಾವಾಗ, ಬೇರೆ ದೇಶದಲ್ಲಿ ಮದರ್ಸ್ ಡೇ ಯಾವಾಗ ಆಚರಿಸುತ್ತಾರೆ, ಈ ದಿನದ ಇತಿಹಾಸ, ಮಹತ್ವ ಇಲ್ಲಿದೆ.
ʼಅಮ್ಮ ಎಂದರೆ ಮೈಮನವೆಲ್ಲಾ ಹೂವಾಗುವುದಮ್ಮʼ ಎಂಬ ಸಿನಿಮಾ ಹಾಡನ್ನು ನೀವು ಕೇಳಿರಬಹುದು. ಅಮ್ಮ ಎಂದರೆ ಜಗತ್ತಿನ ಅದ್ಭುತ ಶಕ್ತಿ. ಜಗತ್ತಿನಲ್ಲಿ ಅಮ್ಮನಿಗಿಂತ ಶ್ರೇಷ್ಠವಾದದ್ದು ಯಾವುದೂ ಇಲ್ಲ. ತಾಯಂದಿರ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ಮೇ ತಿಂಗಳ 2ನೇ ಭಾನುವಾರವನ್ನು ಅಮ್ಮಂದಿರ ದಿನ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ತಾಯಂದಿರ ತ್ಯಾಗ, ಪ್ರೀತಿಗೆ ಬೆಲೆ ಕಟ್ಟುವುದು ಕಷ್ಟ. ತಾಯಂದಿರಿಗೆ ಕೃತಜ್ಞತೆ, ಮೆಚ್ಚುಗೆ ಸೂಚಿಸುವ ಉದ್ದೇಶದಿಂದ ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಅಮ್ಮಂದಿರಿಗೆ ವಿಶೇಷ ಉಡುಗೊರೆ ನೀಡುವುದು, ಅವರೊಂದಿಗೆ ಗುಣಮಟ್ಟದ ಸಮಯ ಕಳೆಯುವುದು, ಅವರಿಷ್ಟದ ಜಾಗಕ್ಕೆ ಪಿಕ್‌ನಿಕ್ ಕರೆದುಕೊಂಡು ಹೋಗುವುದು ಹೀಗೆ ಅವರಿಗೆ ಇಷ್ಟವಾಗುವಂತೆ ದಿನ ಕಳೆಯವ ಮೂಲಕ ಅರ್ಥಪೂರ್ಣವಾಗಿ ಆಚರಿಸಬಹುದು. ಈ ವರ್ಷ ಮದರ್ಸ್ ಡೇ ಯಾವ ತಾರೀಕಿನಂದು ಬರುತ್ತದೆ, ತಾಯಂದಿರ ದಿನದ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ.
2024ರಲ್ಲಿ ತಾಯಂದಿರ ದಿನ ಯಾವಾಗ?
ಆಫ್ರಿಕಾ, ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಅಮೆರಿಕಾ ಮುಂತಾದ ಕಡೆಗಳಲ್ಲಿ ಮೇ ತಿಂಗಳ ಎರಡನೇ ಭಾನುವಾರವನ್ನು ಅಮ್ಮಂದಿರ ಎಂದು ಆಚರಿಸಲಾಗುತ್ತದೆ. 1908ರಲ್ಲಿ, ಯುಎಸ್ಎ ಮೂಲದ ಕಾರ್ಯಕರ್ತೆ ಅನ್ನಾ ಜಾರ್ವಿಸ್ ತನ್ನ ತಾಯಿಯನ್ನು ಗೌರವಿಸುವ ಸಲುವಾಗಿ ಈ ದಿನದ ಆಚರಣೆಯನ್ನು ಜಾರಿಗೊಳಿಸಿದರು. ಅನ್ನಾ ಅವರ ತಾಯಿಯ ಸಾವಿನ ದಿನವನ್ನು ಆಕೆ ವಿಶೇಷ ಸೇವೆಗಾಗಿ ಮೀಸಲಿಡುತ್ತಾರೆ. ಅಂದು ಸ್ಮಾರಕ ಸೇವೆಯನ್ನು ಆಕೆ ಆಯೋಜಿಸುತ್ತಾರೆ. ಅದಕ್ಕಾಗಿ ಅಪಾರ ಜನಸಮೂಹ ಸೇರಿತ್ತು. ಆಕೆ ತಾಯಂದಿರ ದಿನದ ಆಚರಣೆಗೆ ಸ್ಪೂರ್ತಿಯಾದರು ಎಂದು ಹೇಳಲಾಗುತ್ತದೆ. ಈ ವರ್ಷ ಮೇ 12 ರಂದು ಅಮ್ಮಂದಿರ ದಿನವನ್ನು ಆಚರಿಸಲಾಗುತ್ತದೆ.
ತಾಯಂದಿರ ದಿನವನ್ನು ಏಕೆ ಆಚರಿಸಲಾಗುತ್ತದೆ?
ತಾಯಂದಿರ ದಿನಾಚರಣೆಯ ಹಿಂದೆ ಹಲವು ಕಥೆಗಳಿವೆ. ಪ್ರಾಚೀನ ಗ್ರೀಕ್ ನಾಗರಿಕತೆಯಲ್ಲಿ ದೇವತೆಗಳ ತಾಯಿಯಾದ ರಿಯಾ ದೇವಿಯನ್ನು ಗೌರವಿಸಲು ವಸಂತ ಮಾಸದಲ್ಲಿ ಈ ದಿನವನ್ನು ಆಚರಿಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಅಲ್ಲದೇ ಇದು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಮದರ್ರಿಂಗ್ ಸಂಡೆ ಎಂದು ಜನಪ್ರಿಯವಾಗಿತ್ತು. ವಿದೇಶಗಳಲ್ಲಿ ಈ ದಿನದಂದು ಜನರು ಚರ್ಚ್‌ಗೆ ಭೇಟಿ ನೀಡುವ ವಿಶೇಷ ದಿನವೂ ಹೌದು.
ಇದು ಪೌರಾಣಿಕ ಕಥೆಯಾದ್ರೆ ಇತ್ತೀಚಿನ ಕಥೆಯ ಪ್ರಕಾರ ಇದು ಜೂಲಿಯಾ ವಾರ್ಡ್ ಹೋವ್ ಹಾಗೂ ಅನ್ನಾ ಜಾರ್ವಿಸ್ ಅವರ ಕಥೆಯನ್ನು ಹೇಳುತ್ತದೆ. ಇದು ಅಮೆರಿಕದಲ್ಲಿ ತಾಯಂದಿರ ದಿನದ ಆಚರಣೆಯ ಕಥೆಯನ್ನು ವಿವರಿಸುತ್ತದೆ. 1870 ರಲ್ಲಿ, ಜೂಲಿಯಾ ವಾರ್ಡ್ ಹೋವ್ ಅವರು ತಾಯಿಯ ದಿನವನ್ನು ವಾರ್ಷಿಕವಾಗಿ ಆಚರಿಸಲು ಕರೆ ನೀಡಿದರು.ಜೂಲಿಯೆಟ್ ಕ್ಯಾಲ್ಹೌನ್ ಬ್ಲೇಕ್ಲಿ 1800 ರ ದಶಕದಲ್ಲಿ ಮಿಚಿಗನ್‌ನ ಅಲ್ಬಿಯಾನ್‌ನಲ್ಲಿ ತಾಯಂದಿರ ದಿನವನ್ನು ಪ್ರಾರಂಭಿಸಿದರು ಎಂದು ಹೇಳಲಾಗುತ್ತದೆ. ಆ ದಿನದಂದು ತಮ್ಮ ತಾಯಂದಿರನ್ನು ಗೌರವಿಸಲುವಾಗಿ ಅವರು ಜನರನ್ನು ಸೇರಿಸುತ್ತಾರೆ. ಮುಂದೆ ಅದುವೇ ಅಮ್ಮಂದಿರ ದಿನಾಚರಣೆಯಾಗಿ ಮುಂದುವರಿಯುತ್ತದೆ ಎಂದು ಹೇಳಲಾಗುತ್ತದೆ.
ಮದರ್ಸ್ ಡೇಯನ್ನು ವರ್ಷದಲ್ಲಿ 2 ಬಾರಿ ಆಚರಿಸಲಾಗುವುದೇ?
ಪ್ರಪಂಚದಾದ್ಯಂತ 40ಕ್ಕೂ ಹೆಚ್ಚು ದೇಶಗಳಲ್ಲಿ ತಾಯಂದಿರ ದಿನವನ್ನು ವಿವಿಧ ದಿನಗಳಲ್ಲಿ ಆಚರಿಸಲಾಗುತ್ತದೆ. ಈ ದಿನವನ್ನು ಸಾಮಾನ್ಯವಾಗಿ ಮೇ ತಿಂಗಳ ಎರಡನೇ ಭಾನುವಾರದಂದು ಆಚರಿಸಲಾಗುತ್ತದೆ. ಅದಾಗ್ಯೂ ಕೆಲವು ದೇಶಗಳಲ್ಲಿ ಇದನ್ನು ಮಾರ್ಚನ್‌ನಲ್ಲಿ ಆಚರಿಸಲಾಗುತ್ತದೆ. ಉದಾಹರಣೆಗೆ, ಭಾರತ, ಕೆನಡಾ, ಆಸ್ಟ್ರೇಲಿಯಾ ಮತ್ತು ಯುನೈಟೆಡ್ ಸ್ಟೇಟ್ಸ್ ಮೇ ಎರಡನೇ ಭಾನುವಾರದಂದು ತಾಯಂದಿರ ದಿನವನ್ನು ಆಚರಿಸುತ್ತವೆ. ಆದರೆ, ಯುನೈಟೆಡ್ ಕಿಂಗ್‌ಡಮ್, ಕೋಸ್ಟರಿಕಾ, ಜಾರ್ಜಿಯಾ, ಸಮೋವಾ ಮತ್ತು ಥೈಲ್ಯಾಂಡ್‌ನಲ್ಲಿ ಈಸ್ಟರ್ ಭಾನುವಾರದ ಮೂರು ವಾರಗಳ ಮೊದಲು ತಾಯಿಯ ದಿನವನ್ನು ಆಚರಿಸಲಾಗುತ್ತದೆ.
ಅಮ್ಮಂದಿರ ದಿನದ ಮಹತ್ವ
ತಾಯಂದಿರ ದಿನವು ಸಮಾಜಕ್ಕೆ ಅಮ್ಮನ ಅಮೂಲ್ಯ ಕೊಡುಗೆಗಳನ್ನು ಗೌರವಿಸಲು ಮತ್ತು ಸ್ಮರಿಸಲು ಒಂದು ಅವಕಾಶವಾಗಿದೆ. ಅವರು ಮಕ್ಕಳ ಜೀವನವನ್ನು ರೂಪಿಸುವಲ್ಲಿ, ಮೌಲ್ಯಗಳನ್ನು ತುಂಬುವಲ್ಲಿ, ಬೆಂಬಲ ಒದಗಿಸುವಲ್ಲಿ ಮತ್ತು ಬೆಳವಣಿಗೆಯನ್ನು ಪೋಷಿಸುವಲ್ಲಿ ಅಮ್ಮಂದಿರ ಪಾತ್ರ ಮಹತ್ವದ್ದು. ಅವರ ಅಚಲವಾದ ಮಮತೆ, ನಿಸ್ವಾರ್ಥ ಪ್ರೀತಿಯು ಕುಟುಂಬಕ್ಕೆ ಮೂಲಾಧಾರವಾಗಿದೆ. ಇದು ತಲೆಮಾರುಗಳವರೆಗೆ ಬಾಂಧವ್ಯ ಸೃಷ್ಟಿಸಲು ನೆರವಾಗುತ್ತದೆ. ಯಾವುದೇ ಕುಟುಂಬ ಸಂತೋಷ, ನೆಮ್ಮದಿಯಿಂದು ಇರಲು ತಾಯಂದಿರ ಪಾತ್ರ ಮಹತ್ವದ್ದು. ಅಮ್ಮಂದಿರಿಗೆ ಕೃತಜ್ಞರಾಗಿರಲು ನೆನಪಿಡುವ ಸಮಯ.
ವಿಭಾಗ