ಅಮ್ಮಂದಿರ ದಿನ ಯಾವಾಗ? ಈ ದಿನದ ಹಿನ್ನೆಲೆ, ಮಹತ್ವವೇನು? ಮದರ್ಸ್‌ ಡೇ ವಿಶೇಷವಾಗಿಸೋದು ಹೇಗೆ? ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  ಅಮ್ಮಂದಿರ ದಿನ ಯಾವಾಗ? ಈ ದಿನದ ಹಿನ್ನೆಲೆ, ಮಹತ್ವವೇನು? ಮದರ್ಸ್‌ ಡೇ ವಿಶೇಷವಾಗಿಸೋದು ಹೇಗೆ? ಇಲ್ಲಿದೆ ಮಾಹಿತಿ

ಅಮ್ಮಂದಿರ ದಿನ ಯಾವಾಗ? ಈ ದಿನದ ಹಿನ್ನೆಲೆ, ಮಹತ್ವವೇನು? ಮದರ್ಸ್‌ ಡೇ ವಿಶೇಷವಾಗಿಸೋದು ಹೇಗೆ? ಇಲ್ಲಿದೆ ಮಾಹಿತಿ

ಅಮ್ಮ ಎಂದರೆ ಶಕ್ತಿ, ಅಮ್ಮ ಎಂದರೆ ಮಮತೆ, ಅಮ್ಮ ಎಂದರೆ ಉಸಿರು, ಅಮ್ಮ ಎಂದರೆ ಸೃಷ್ಟಿ. ನಮ್ಮನ್ನು ಈ ಪ್ರಪಂಚಕ್ಕೆ ಕರೆತಂದ ತಾಯಿಯೆಂಬ ಅದ್ಭುತ ಜೀವಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರತಿವರ್ಷ ಅಮ್ಮಂದಿರ ದಿನ ಆಚರಿಸಲಾಗುತ್ತದೆ. ಹಾಗಾದರೆ ಅಮ್ಮಂದಿರ ದಿನ ಯಾವಾಗ, ಈ ದಿನದ ಇತಿಹಾಸ, ಮಹತ್ವವೇನು ನೋಡಿ.

ಅಮ್ಮಂದಿರ ದಿನ ಯಾವಾಗ? ಈ ದಿನದ ಹಿನ್ನೆಲೆ, ಮಹತ್ವವೇನು? ಮದರ್ಸ್‌ ಡೇ ವಿಶೇಷವಾಗಿಸೋದು ಹೇಗೆ?
ಅಮ್ಮಂದಿರ ದಿನ ಯಾವಾಗ? ಈ ದಿನದ ಹಿನ್ನೆಲೆ, ಮಹತ್ವವೇನು? ಮದರ್ಸ್‌ ಡೇ ವಿಶೇಷವಾಗಿಸೋದು ಹೇಗೆ? (PC: Canva )

ಅಮ್ಮ ಈ ಜಗತ್ತಿನ ಮೊದಲ ಸೃಷ್ಟಿ. ನವಮಾಸ ತನ್ನ ಹೊಟ್ಟೆಯಲ್ಲಿ ಕಂದಮ್ಮ ಹೊತ್ತು ಈ ಸುಂದರ ಪ್ರಪಂಚಕ್ಕೆ ಕರೆ ತರುವ ಅದ್ಭುತ ಜೀವ ತಾಯಿ. ಆಕೆಯೊಂದು ವಿಶೇಷ ಶಕ್ತಿ. ಈ ಜಗತ್ತಿನಲ್ಲಿ ಅತ್ಯಂತ ನೋವು ಕಾಣುವವಳು ಅವಳೇ, ಅತ್ಯಂತ ಖುಷಿ ಕಾಣುವವಳು ಅವಳೇ. ಅಮ್ಮನೆಂಬ ಜಗತ್ತಿನ ಅದ್ಭುತಕ್ಕೆ ಗೌರವ ಸಲ್ಲಿಸುವ ಹಾಗೂ ಅಮ್ಮನ ಮಹತ್ವವನ್ನು ಜಗತ್ತಿಗೆ ಸಾರಿ ಹೇಳುವ ಉದ್ದೇಶದಿಂದ ಪ್ರತಿ ವರ್ಷ ಅಮ್ಮಂದಿರ ದಿನವನ್ನು ಆಚರಿಸಲಾಗುತ್ತದೆ.

ಈ ವರ್ಷ ಅಮ್ಮಂದಿರ ದಿನ ಯಾವಾಗ, ಈ ದಿನವನ್ನು ಆಚರಿಸುವ ಪ್ರಮುಖ ಉದ್ದೇಶವೇನು, ಈ ದಿನದ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ.

ಅಮ್ಮಂದಿರ ದಿನ ಯಾವಾಗ?

ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ಅಮ್ಮಂದಿರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಮೇ 11 ಕ್ಕೆ ಅಮ್ಮಂದಿರ ದಿನವಿದೆ.

ಅಮ್ಮಂದಿರ ದಿನದ ಆಚರಣೆಗೆ ಸ್ಪೂರ್ತಿ ಇವರು

1908ರಿಂದ ಅಮ್ಮಂದಿರ ದಿನವನ್ನು ಆಚರಿಸಲಾಗುತ್ತಿದೆ. ಅಮೆರಿಕ ಮೂಲದ ಹೋರಾಟಗಾರ್ತಿ ಅನ್ನಾ ಜಾರ್ವಿಸ್ ಮೊದಲ ಬಾರಿಗೆ ಅಮ್ಮಂದಿರ ದಿನವನ್ನು ಆಚರಿಸಿದರು. ತನ್ನ ತಾಯಿಯ ಮಾನವೀಯ ಕೆಲಸಗಳಿಂದ ಪ್ರೇರಿತರಾದ ಆಕೆ ಅಮ್ಮನಿಗೆ ಗೌರವ ಸೂಚಿಸುವ ಸಲುವಾಗಿ ಅಮ್ಮಂದಿರ ದಿನ ಆಚರಣೆಯನ್ನು ಜಾರಿಗೆ ತಂದರು. 1914ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ವುಡ್ರೋ ವಿಲ್ಸನ್ ಮೇ ತಿಂಗಳ ಎರಡನೇ ಭಾನುವಾರವನ್ನು ತಾಯಂದಿರ ದಿನ ಎಂದು ಅಧಿಕೃತವಾಗಿ ಘೋಷಿಸಿದರು. ಈ ದಿನವನ್ನು ವಿಶ್ವದಾದ್ಯಂತ ತಾಯಂದಿರಿಗೆ ಕೃತಜ್ಞತೆ ಹಾಗೂ ಗೌರವ ಸಲ್ಲಿಸುವ ಸಲುವಾಗಿ ಆಚರಿಸಲಾಗುತ್ತದೆ.

ತಾಯಂದಿರ ದಿನಾಚರಣೆಯ ಹಿನ್ನೆಲೆ

ಅಮ್ಮಂದಿರ ದಿನ ಆಚರಿಸಲು ಅನ್ನಾ ಜಾರ್ವಿಸ್ ಸ್ಫೂರ್ತಿಯಾದರೂ ತಾಯಂದಿರ ದಿನದ ಬಗ್ಗೆ ಕೆಲವು ಐತಿಹಾಸಿಕ ಕಥೆಗಳು ಇವೆ.

ಚೀನ, ಗ್ರೀಕ್‌ ನಾಗರಿಕತೆಯಲ್ಲಿ ದೇವತೆಗಳ ತಾಯಿಯಾದ ರಿಯಾ ದೇವಿಯನ್ನು ಗೌರವಿಸಲು ವಸಂತ ಮಾಸದಲ್ಲಿ ಈ ದಿನವನ್ನು ಆಚರಿಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಅಲ್ಲದೇ ಇದು ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಮದರ್ರಿಂಗ್‌ ಸಂಡೆ ಎಂದು ಜನಪ್ರಿಯವಾಗಿತ್ತು. ವಿದೇಶಗಳಲ್ಲಿ ಈ ದಿನದಂದು ಜನರು ಚರ್ಚ್‌ಗೆ ಭೇಟಿ ನೀಡುವ ವಿಶೇಷ ದಿನವೂ ಹೌದು.

ಮದರ್ಸ್‌ ಡೇಯನ್ನು ವರ್ಷದಲ್ಲಿ 2 ಬಾರಿ ಆಚರಿಸಲಾಗುವುದೇ?

ಪ್ರಪಂಚದಾದ್ಯಂತ 40ಕ್ಕೂ ಹೆಚ್ಚು ದೇಶಗಳಲ್ಲಿ ತಾಯಂದಿರ ದಿನವನ್ನು ವಿವಿಧ ದಿನಗಳಲ್ಲಿ ಆಚರಿಸಲಾಗುತ್ತದೆ. ಈ ದಿನವನ್ನು ಸಾಮಾನ್ಯವಾಗಿ ಮೇ ತಿಂಗಳ ಎರಡನೇ ಭಾನುವಾರದಂದು ಆಚರಿಸಲಾಗುತ್ತದೆ. ಅದಾಗ್ಯೂ ಕೆಲವು ದೇಶಗಳಲ್ಲಿ ಇದನ್ನು ಮಾರ್ಚ್‌ನಲ್ಲಿ ಆಚರಿಸಲಾಗುತ್ತದೆ. ಉದಾಹರಣೆಗೆ, ಭಾರತ, ಕೆನಡಾ, ಆಸ್ಟ್ರೇಲಿಯಾ ಮತ್ತು ಯುನೈಟೆಡ್ ಸ್ಟೇಟ್ಸ್ ಮೇ ಎರಡನೇ ಭಾನುವಾರದಂದು ತಾಯಂದಿರ ದಿನವನ್ನು ಆಚರಿಸುತ್ತವೆ. ಆದರೆ, ಯುನೈಟೆಡ್ ಕಿಂಗ್‌ಡಮ್, ಕೋಸ್ಟರಿಕಾ, ಜಾರ್ಜಿಯಾ, ಸಮೋವಾ ಮತ್ತು ಥೈಲ್ಯಾಂಡ್‌ನಲ್ಲಿ ಈಸ್ಟರ್ ಭಾನುವಾರದ ಮೂರು ವಾರಗಳ ಮೊದಲು ತಾಯಿಯ ದಿನವನ್ನು ಆಚರಿಸಲಾಗುತ್ತದೆ.

ಅಮ್ಮಂದಿರ ದಿನದ ಮಹತ್ವ

ಅಮ್ಮಂದಿರ ದಿನ ಅಥವಾ ಮದರ್ಸ್ ಡೇ ಎಂದರೆ ನಮ್ಮನ್ನು ಹೆತ್ತು ಹೊತ್ತು ಸಲಹಿ, ಜೀವನವನ್ನು ರೂಪಿಸಲು ಸಾಕಷ್ಟು ಕಷ್ಟ ಪಡುವ ತಾಯಿ ಎಂಬ ಜೀವಕ್ಕೆ ಗೌರವ ಸಲ್ಲಿಸುವ ದಿನ. ಈ ವಿಶೇಷ ದಿನದಂದು ನಮ್ಮ ಜೀವನದಲ್ಲಿ ತಾಯಿಯ ಮಹತ್ವವೇನು ಎಂಬುದನ್ನು ಸಾರಿ ಹೇಳಬಹುದು.

ಕುಟುಂಬ ಹಾಗೂ ಮಕ್ಕಳಿಗಾಗಿ ತಾಯಿಯ ನಿಸ್ವಾರ್ಥ ಪ್ರೀತಿ, ಮಾರ್ಗದರ್ಶನ ಮತ್ತು ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ದಿನ ನಮ್ಮನ್ನು ಹೆತ್ತ ತಾಯಿ ಮಾತ್ರವಲ್ಲ ಸಾಕು ತಾಯಿ, ಅಜ್ಜಿ, ಚಿಕ್ಕಮ್ಮ, ದೊಡ್ಡಮ್ಮ ಹೀಗೆ ತಾಯಿಯಾಗಿ ನಮ್ಮ ಬದುಕಲ್ಲಿ ಮಹತ್ವದ ಪಾತ್ರ ವಹಿಸುವ ಪ್ರತಿ ಜೀವಗಳಿಗೂ ವಿಶೇಷ ಗೌರವ ಸಲ್ಲಿಸಿ ಆಧರಿಸಬಹುದು.

ಅಮ್ಮಂದಿರ ದಿನವನ್ನು ಆಚರಿಸುವುದು ಹೇಗೆ?

ಅಮ್ಮಂದಿರ ದಿನದ ಸಲುವಾಗಿ ತಾಯಿಗೆ ವಿಶೇಷ ಉಡುಗೊರೆಗಳನ್ನು ನೀಡಬಹುದು. ಈ ದಿನ ಅಮ್ಮನನ್ನು ಹೊರಗಡೆ ಊಟಕ್ಕೆ ಕರೆದುಕೊಂಡು ಹೋಗಬಹುದು. ಅಮ್ಮ ಬಹಳ ದಿನದಿಂದ ಹೋಗಬೇಕು ಅಂದುಕೊಳ್ಳುತ್ತಿದ್ದ ಜಾಗಕ್ಕೆ ಕರೆದುಕೊಂಡು ಹೋಗಿ ಸರ್ಪ್ರೈಸ್ ನೀಡಬಹುದು. ಅಮ್ಮನಿಗೆ ಇಷ್ಟವಾದ ಖಾದ್ಯವನ್ನು ನೀವೇ ನಿಮ್ಮ ಕೈಯಾರೆ ತಯಾರಿಸಿ ಕೊಟ್ಟು ತಿನ್ನುವಂತೆ ಹೇಳಬಹುದು.

ಅಮ್ಮನನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಬಹುದು. ಅಮ್ಮನ ಇಷ್ಟದ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಆಕೆಯನ್ನು ಖುಷಿ ಪಡಿಸಬಹುದು, ಅಮ್ಮನ ಜೊತೆ ಔಟಿಂಗ್ ಹೋಗಬಹುದು. ಹೀಗೆ ಅಮ್ಮಂದಿರ ದಿನ ಆಚರಣೆಗೆ ಹತ್ತು, ಹಲವು ಅವಕಾಶಗಳಿವೆ. ಒಟ್ಟಾರೆ ಅಮ್ಮ ಖುಷಿ ಪಡುವ ದಿನ ಇದಾಗಬೇಕು.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.