Rice Barfi Recipe: ಅಕ್ಕಿಯಿಂದ ಈ ರುಚಿಯಾದ ಬರ್ಫಿ ತಯಾರಿಸಿ ಹೊಸ ವರ್ಷದಂದು ಬಾಯಿ ಸಿಹಿ ಮಾಡಿಕೊಳ್ಳಿ
ಈ ವಿಶೇಷ ದಿನದಂದು ಬಾಯಲ್ಲಿ ಇಟ್ಟರೆ ಗರಗುವ, ಮೃದುವಾದ ಅಕ್ಕಿ ಬರ್ಫಿ ತಯಾರಿಸಿ ಬಾಯಿ ಸಿಹಿ ಮಾಡಿಕೊಳ್ಳಿ. ತಯಾರಿಸಲು ಬಹಳ ಸುಲಭ. ಮಕ್ಕಳಿಗಂತೂ ಈ ಸಿಹಿ ಇಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ.
ಇಂದು ಹೊಸ ವರ್ಷ. ಜನರು ಸಂಭ್ರಮದಿಂದಲೇ 2023ನ್ನು ಬರಮಾಡಿಕೊಂಡಿದ್ದಾರೆ. ಹಾಗೇ ನಿನ್ನೆ ರಾತ್ರಿಯಿಂದಲೇ ಕೆಲವರು ಪಾರ್ಟಿ, ಪಬ್‌ನಲ್ಲಿ ಹೊಸ ವರ್ಷವನ್ನು ಎಂಜಾಯ್ ಮಾಡುತ್ತಿದ್ದಾರೆ. ಕೆಲವರು ಮನೆಯಲ್ಲೇ ಸಿಹಿ ತಿಂದು, ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕ ಹೊಸ ವರ್ಷವನ್ನು ಆಚರಿಸುತ್ತಿದ್ದಾರೆ.
ಏನಾದರೂ ವಿಶೇಷ ದಿನಗಳಿದ್ದಾಗ ಏನು ಸಿಹಿ ಮಾಡೋದು ಅನ್ನೋದು ಕನ್ಫ್ಯೂಸ್ ಆಗುತ್ತದೆ. ಈ ಹೊಸ ವರ್ಷಕ್ಕೆ ನೀವು ಹೊಸ ಸಿಹಿ ಟ್ರೈ ಮಾಡಿದರೆ ಹೇಗೆ. ಈ ವಿಶೇಷ ದಿನದಂದು ಬಾಯಲ್ಲಿ ಇಟ್ಟರೆ ಗರಗುವ, ಮೃದುವಾದ ಅಕ್ಕಿ ಬರ್ಫಿ ತಯಾರಿಸಿ ಬಾಯಿ ಸಿಹಿ ಮಾಡಿಕೊಳ್ಳಿ. ತಯಾರಿಸಲು ಬಹಳ ಸುಲಭ. ಮಕ್ಕಳಿಗಂತೂ ಈ ಸಿಹಿ ಇಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ. ಅಕ್ಕಿ ಬರ್ಫಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೀಗಿದೆ.
ಬೇಕಾಗುವ ಸಾಮಗ್ರಿಗಳು
ಅಕ್ಕಿ - 1 ಕಪ್
ಬೆಲ್ಲ - 1/2 ಕಪ್
ತೆಂಗಿನ ತುರಿ - 1 ಕಪ್
ತುಪ್ಪ - 2 ಟೇಬಲ್ ಸ್ಪೂನ್
ಕೊಬ್ಬರಿ ಪುಡಿ - 1 ಟೇಬಲ್ ಸ್ಪೂನ್
ಗೋಡಂಬಿ ಚೂರುಗಳು - 10
ಏಲಕ್ಕಿ ಪುಡಿ - 1/4 ಟೀ ಸ್ಪೂನ್
ಉಪ್ಪು - ಚಿಟಿಕೆ
ತಯಾರಿಸುವ ವಿಧಾನ
ಅಕ್ಕಿಯನ್ನು 2-3 ಬಾರಿ ತೊಳೆದು 2 ಗಂಟೆಗಳ ಕಾಲ ನೆನೆಯಲು ಬಿಡಿ.
ಒಂದು ಪಾತ್ರೆಗೆ ಬೆಲ್ಲದ ಪುಡಿ, ಅರ್ಧ ಕಪ್ ನೀರು ಸೇರಿಸಿ ಕರಗಿಸಿಕೊಂಡು ಶೋಧಿಸಿಕೊಳ್ಳಿ (ಪಾಕ ಮಾಡಿಕೊಳ್ಳಬೇಡಿ).
ತೆಂಗಿನತುರಿಗೆ ಒಂದು ಕಪ್ ನೀರು ಸೇರಿಸಿ ನುಣ್ಣಗೆ ಗ್ರೈಂಡ್ ಮಾಡಿಕೊಂಡು ತೆಂಗಿನಹಾಲು ( 1 ಗ್ಲಾಸ್) ತೆಗೆದುಕೊಳ್ಳಿ.
ತುಪ್ಪ ಬಿಸಿ ಮಾಡಿಕೊಂಡು ಗೋಡಂಬಿಯನ್ನು ಕಂದು ಬಣ್ಣ ಬರುವರೆಗೂ ಫ್ರೈ ಮಾಡಿಕೊಳ್ಳಿ (ಗೋಡಂಬಿ ಆಪ್ಷನ್, ನಿಮಗೆ ಬೇಕಿದ್ದರೆ ಬಳಸಬಹುದು)
ನೆನೆಸಿದ ಅಕ್ಕಿಯನ್ನು ನೀರು ಶೋಧಿಸಿ ಮಿಕ್ಸಿಯನ್ನು ನೀರು ಹಾಕದೆ ಪುಡಿ ಮಾಡಿಕೊಳ್ಳಿ.
ನಂತರ ಇದಕ್ಕೆ 6 ಸ್ಪೂನ್ ನೀರು ಸೇರಿಸಿ ಮತ್ತೊಮ್ಮೆ ಪೇಸ್ಟ್ ಮಾಡಿಕೊಳ್ಳಿ.
ತೆಂಗಿನಹಾಲು, ಗ್ರೈಂಡ್ ಮಾಡಿಕೊಂಡ ಅಕ್ಕಿಹಿಟ್ಟನ್ನು ಬೆಲ್ಲದ ನೀರಿನೊಂದಿಗೆ ಸೇರಿಸಿ ಸ್ಟೋವ್ ಮೇಲಿಟ್ಟು ಬಿಡದಂತೆ ತಿರುವುತ್ತಿರಿ.
ಮಿಶ್ರಣ ಗಟ್ಟಿಯಾಗುತ್ತಿದ್ದಂತೆ ಚಿಟಿಕೆ ಉಪ್ಪು, ಏಲಕ್ಕಿ ಪುಡಿ, ತುಪ್ಪ ಸೇರಿಸಿ ತಿರುವಿ.
ಮಿಶ್ರಣ ತಳ ಬಿಡುತ್ತಿದ್ದಂತೆ ಒಂದು ಪ್ಲೇಟ್ ಅಥವಾ ಟ್ರೇಗೆ ಮಿಶ್ರಣವನ್ನು ಹರಡಿ ಅದರ ಮೇಲೆ ಫ್ರೈ ಮಾಡಿಕೊಂಡ ಗೋಡಂಬಿಯನ್ನು ಇಟ್ಟು ಒಮ್ಮೆ ಮೃದುವಾಗಿ ಪ್ರೆಸ್ ಮಾಡಿ.
ಮೇಲೆ ಕೊಬ್ಬರಿ ಪುಡಿ ಉದುರಿಸಿ, ಸ್ವಲ್ಪ ಸಮಯದ ನಂತರ ನಿಮಗಿಷ್ಟವಾದ ಆಕಾರಕ್ಕೆ ಕತ್ತರಿಸಿದರೆ ಅಕ್ಕಿ ಬರ್ಫಿ ರೆಡಿ
ಗಮನಿಸಿ: ಸಕ್ಕರೆಯಿಂದ ಕೂಡಾ ಈ ರೆಸಿಪಿ ತಯಾರಿಸಬಹುದು.
ವಿಭಾಗ