Mysore Pak: ಮೈಸೂರಿನಲ್ಲಿ ಒರಿಜಿನಲ್ ಮೈಸೂರು ಪಾಕ್ ದೊರೆಯುವ ಅಂಗಡಿಯೊಂದಿದೆ; ಮಹಾರಾಜರ ಕಾಲದಲ್ಲೇ ಶುರುವಾಗಿದ್ದ ಸ್ವೀಟ್ ಶಾಪ್ ಇದು
ಇಲ್ಲಿ ಈಗಲೂ ಮೂಲ ರೆಸಿಪಿ ಬಳಸಿ ರುಚಿಕರ ಮೈಸೂರು ಪಾಕ್ ತಯಾರಿಸಲಾಗುತ್ತದೆ. ಅರಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದವರೊಬ್ಬರು ಪುರಾತನ ಕಾಲದಲ್ಲಿ ಆರಂಭಿಸಿದ ಈ ಅಂಗಡಿಯನ್ನು ಈಗ ಅವರ ಮುಂದಿನ ಪೀಳಿಗೆಯವರು ನೋಡಿಕೊಳ್ಳುತ್ತಿದ್ದಾರೆ. (ಬರಹ: ಧಾತ್ರಿ, ಮೈಸೂರು)
ಮನೆಗೆ ಅತಿಥಿಗಳು ಬಂದರೂ ಇದು ಬೇಕು, ನಾವು ಯಾರನ್ನಾದರೂ ನೋಡಲು ಹೋಗುತ್ತಿದ್ದೇವೆಂದರೂ ಇದು ಬೇಕು, ಶುಭ ಸಮಾರಂಭಗಳ ಊಟದ ಎಲೆಯಲ್ಲಿ ಇದು ಇದ್ದರೇನೇ ಲಕ್ಷಣ, ಮನದನ್ನೆ ಮುನಿದಿದ್ದಾಗ ಮಲ್ಲಿಗೆ ಹೂವಿನೊಂದಿಗೆ ಇದನ್ನೂ ಕೊಂಡೊಯ್ಯಬೇಕು, ಮಕ್ಕಳನ್ನು ಖುಷಿ ಪಡಿಸಲು ಮನೆಗೆ ಇದನ್ನು ಕೊಂಡೊಯ್ದರೆ ಸಾಕು. ಅಬ್ಬಬ್ಬಾ! ಒಂದು ವಸ್ತುವಿನಿಂದ ಅದೆಷ್ಟೆಲ್ಲಾ ಉಪಯೋಗಗಳು! ಅಷ್ಟಕ್ಕೂ ಆ ವಸ್ತು ಏನು ಅಂತೀರಾ? ಅದೇ ನಮ್ಮ ನಿಮ್ಮೆಲ್ಲರ ನೆಚ್ಚಿನ ಸಿಹಿಯಾದ ನಮ್ಮೂರ ಹೆಮ್ಮೆಯ ಮೈಸೂರು ಪಾಕ್!
ಮೈಸೂರಿನ ಬ್ಯ್ರಾಂಡ್ ಮೈಸೂರು ಪಾಕ್
ಮುಟ್ಟಿದರೆ ಮೃದುವಾಗಿರುವ, ಬಾಯಲ್ಲಿ ಇಟ್ಟರೆ ಕರಗಿ ಸ್ವರ್ಗಕ್ಕೆ ಹೋಗಿ ಬಂದಂತೆ ಎನಿಸುವ ಈ ಮೈಸೂರು ಪಾಕ್ ಮೈಸೂರಿನ ಹೆಸರನ್ನು ಜಗತ್ತಿನಾದ್ಯಂತ ಪ್ರಸಿದ್ಧಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮೈಸೂರು ಸಿಲ್ಕ್, ಮೈಸೂರು ವೀಳ್ಯದೆಲೆ, ಮೈಸೂರು ಮಸಾಲೆ ದೋಸೆಯಂತೆ ಮೈಸೂರು ಪಾಕ್ ಕೂಡಾ ಅತ್ಯಂತ ಪ್ರಸಿದ್ಧ ಮೈಸೂರು ಬ್ರ್ಯಾಂಡ್. ಅಂದ ಹಾಗೆ ಇದೇನೂ ನಿನ್ನೆ ಮೊನ್ನೆಯ ಖಾದ್ಯವಲ್ಲ. ಶತ ಶತಮಾನಗಳಿಂದಲೂ ನಮ್ಮ ನಾಲಿಗೆಗಳನ್ನು ತಣಿಸುತ್ತಾ ಬಂದಿರುವ ಸುಪ್ರಸಿದ್ಧ ಸಿಹಿ. ಈ ಸಿಹಿಗೆ ಇದರದ್ದೇ ಆದ ಇತಿಹಾಸ ಇದೆ. ಇದರೊಂದಿಗೆ ಮೈಸೂರಿನ ಹೆಸರು ಬೆರೆತು ಹೋಗಿರುವುದಕ್ಕೆ ಒಂದು ಪ್ರಮುಖ ಕಾರಣ ಕೂಡಾ ಇದೆ.
ಅರಮನೆಯಲ್ಲಿ ಮೊದಲ ಬಾರಿಗೆ ತಯಾರಾದ ಸಿಹಿ
ಮೈಸೂರು ಒಡೆಯರ ಆಳ್ವಿಕೆಯಲ್ಲಿದ್ದ ಆ ಕಾಲದಲ್ಲಿ ಅರಮನೆಯ ವೈಭವೋಪೇತ ಅಡುಗೆ ಕೋಣೆಯಲ್ಲಿ ತಯಾರಾದ ಸಿಹಿ ತಿನಿಸೇ ಮೈಸೂರು ಪಾಕ್. ಇದನ್ನು ತಯಾರಿಸಿದ ಪಾಕತಜ್ಞನ ಹೆಸರು ಕಾಕಾಸುರ ಮಾದಪ್ಪ ಎನ್ನುತ್ತದೆ ಇತಿಹಾಸ. ಅಂದು ಮಹಾರಾಜರು, ಅಯ್ಯಾ ಮಾದಪ್ಪ, ಹೊಸದಾಗಿ ಏನಾದರೂ ಸಿಹಿ ಮಾಡ್ತೀಯಾ ಎಂದಾಗ ಕಾಕಾಸುರ ಮಾದಪ್ಪ ಮಾಡಿದ ತಿನಿಸು ಇದು. ಇಂದು ವಿಶ್ವಭೂಪಟದಲ್ಲಿ ಮೈಸೂರಿನ ಸ್ಥಾನವನ್ನು ಎತ್ತಿ ಹಿಡಿದಿದೆ. ಇತ್ತೀಚೆಗೆ ಟೇಸ್ಟ್ ಅಟ್ಲಾಸ್ ಬಿಡುಗಡೆ ಮಾಡಿದ್ದ ವಿಶ್ವಪ್ರಸಿದ್ಧ ಅತ್ಯುತ್ತಮ ತಿನಿಸುಗಳ ಪಟ್ಟಿಯಲ್ಲಿ ನಮ್ಮ ಮೈಸೂರು ಪಾಕ್ 14ನೇ ಸ್ಥಾನ ಪಡೆದಿದೆ. ಮೈಸೂರಿಗೆ ಬರುವ ಪ್ರವಾಸಿಗರು ತಪ್ಪದೆ ಮೈಸೂರು ಪಾಕ್ ತಿಂದು ಹೋಗುತ್ತಾರೆ.
ಗುರು ಸ್ವೀಟ್ಸ್ ಬಹಳ ಫೇಮಸ್
ಮೈಸೂರಿನ ಒರಿಜಿನಲ್ ಮೈಸೂರು ಪಾಕ್ ಸಿಗುವುದು ಚಿಕ್ಕ ಗಡಿಯಾರದ ಬಳಿ ಇರುವ ಗುರು ಸ್ವೀಟ್ ಮಾರ್ಟ್‌ನಲ್ಲಿ ಮಾತ್ರ. ಇಲ್ಲಿ ಈಗಲೂ ಮೂಲ ರೆಸಿಪಿ ಬಳಸಿ ರುಚಿಕರ ಮೈಸೂರು ಪಾಕ್ ತಯಾರಿಸಲಾಗುತ್ತದೆ. ಅರಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದವರೊಬ್ಬರು ಪುರಾತನ ಕಾಲದಲ್ಲಿ ಆರಂಭಿಸಿದ ಈ ಅಂಗಡಿಯನ್ನು ಈಗ ಅವರ ಮುಂದಿನ ಪೀಳಿಗೆಯವರು ನೋಡಿಕೊಳ್ಳುತ್ತಿದ್ದಾರೆ. ಇಲ್ಲಿ ಬಿಸಿ ಬಿಸಿ ಮೈಸೂರು ಪಾಕ್ ಸವಿಯಲು, ತಮ್ಮ ಜೊತೆಗೂ ಅದನ್ನು ಕೊಂಡೊಯ್ಯಲು ಜನರು ಸದಾ ಸಾಲುಗಟ್ಟಿ ನಿಂತಿರುತ್ತಾರೆ. ಇಷ್ಟು ಮಾತ್ರವಲ್ಲದೆ ನಮ್ಮ ಮೈಸೂರು ಪಾಕ್‌ಗೆ ಬಹಳ ಹಿಂದೆಯೇ ಜಿಐ ಟ್ಯಾಗ್ ಕೂಡಾ ದೊರೆತಿದೆ. ಇದು ಮೈಸೂರಿನ ಮುಕುಟದಲ್ಲೊಂದು ಪ್ರಮುಖ ಗರಿ.
ಅದೇನೇ ಆಗಲಿ, ಅದೆಷ್ಟೇ ಹೊಸ ಸಿಹಿ ತಿನಿಸುಗಳು ಬರಲಿ, ನಮ್ಮ ಮೈಸೂರು ಪಾಕ್‌ಗೆ ಯಾವುದೂ ಸಾಟಿಯಿಲ್ಲ. ಈಗಲೂ ಪ್ರಪಂಚದ್ಯಂತ ಆಹಾರ ಪ್ರಿಯರನ್ನು ತನ್ನತ ಸೆಳೆಯುವ ಮೈಸೂರು ಪಾಕ್ ತನ್ನೊಳಗೆ ಇಡೀ ಮೈಸೂರಿನ ಸ್ವಾದ, ಗತ ವೈಭವವನ್ನು ಅಡಗಿಸಿಕೊಂಡಿದೆ. ಕಡಲೆಹಿಟ್ಟು, ತುಪ್ಪ, ಸಕ್ಕರೆ ಸೇರಿಸಿ ಕುದಿಸುವಾಗ ಬರುವ ಮೈಸೂರು ಪಾಕ್‌ನ ಘಮಲು ಎಲ್ಲೆಲ್ಲೂ ಹಬ್ಬುತ್ತಲೇ ಇದೆ.