ಮೈಸೂರಿನ ಸೊಪ್ಪು ಮೇಳದಲ್ಲಿದೆ ಹತ್ತಾರು ವೈವಿಧ್ಯ, ಸೊಪ್ಪಷ್ಟೇ ಅಲ್ಲ ಇನ್ನೂ ಇದೆ ಹಲವು ವಿಶೇಷ; ಕೃಷ್ಣಪ್ರಸಾದ್ ಗೋವಿಂದಯ್ಯ ಸಚಿತ್ರ ಬರಹ-mysuru news soppu mela at nanjaraj bahadur chatra mysore on september 21 and 22nd berake soppu hakkariki soppu rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮೈಸೂರಿನ ಸೊಪ್ಪು ಮೇಳದಲ್ಲಿದೆ ಹತ್ತಾರು ವೈವಿಧ್ಯ, ಸೊಪ್ಪಷ್ಟೇ ಅಲ್ಲ ಇನ್ನೂ ಇದೆ ಹಲವು ವಿಶೇಷ; ಕೃಷ್ಣಪ್ರಸಾದ್ ಗೋವಿಂದಯ್ಯ ಸಚಿತ್ರ ಬರಹ

ಮೈಸೂರಿನ ಸೊಪ್ಪು ಮೇಳದಲ್ಲಿದೆ ಹತ್ತಾರು ವೈವಿಧ್ಯ, ಸೊಪ್ಪಷ್ಟೇ ಅಲ್ಲ ಇನ್ನೂ ಇದೆ ಹಲವು ವಿಶೇಷ; ಕೃಷ್ಣಪ್ರಸಾದ್ ಗೋವಿಂದಯ್ಯ ಸಚಿತ್ರ ಬರಹ

ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಎರಡು ದಿನಗಳ ಕಾಲ (ಸೆಪ್ಟೆಂಬರ್ 21, 22) ಸೊಪ್ಪು ಮೇಳ ನಡೆಯುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಸಿಗುವ ನೂರಾರು ಸೊಪ್ಪುಗಳನ್ನು ಈ ಮೇಳದಲ್ಲಿ ಮಾರಾಟ ಹಾಗೂ ಪ್ರದರ್ಶನಕ್ಕೆ ಇಡಲಾಗಿತ್ತು. ಹಕ್ಕರಿಕಿ ಸೊಪ್ಪು, ಬೆರಕೆ ಸೊಪ್ಪು, ಸಕತ್ ಸೊಪ್ಪು ಹೀಗೆ ಜನರು ಭಿನ್ನ ಸೊಪ್ಪುಗಳನ್ನ ಕಣ್ತುಂಬಿಕೊಂಡರು.

ಮೈಸೂರಿನ ಸೊಪ್ಪು ಮೇಳದ ದೃಶ್ಯ
ಮೈಸೂರಿನ ಸೊಪ್ಪು ಮೇಳದ ದೃಶ್ಯ (PC: Krishna Prasad Govindaiah/Facebook)

ನಮ್ಮ ರಾಜ್ಯದಲ್ಲಿ ನೂರಾರು ಬಗೆಯ ಸೊಪ್ಪುಗಳು ದೊರೆಯುತ್ತವೆ. ಕೆಲವೊಂದು ಕಾಡಿನ ಸೊಪ್ಪುಗಳು, ಅವುಗಳ ಬಳಕೆ ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿರುತ್ತದೆ. ಬೇರೆಯವರಿಗೆ ಅದನ್ನು ಬಳಸಬಹುದು ಎಂಬ ಜ್ಞಾನವೂ ಇರುವುದಿಲ್ಲ. ಈ ರೀತಿ ಕಾಡು–ಮೇಡಿನಲ್ಲಿ ಸಿಗುವ ಹಲವು ಸೊಪ್ಪುಗಳು ಭಿನ್ನ ರುಚಿ ಮಾತ್ರವಲ್ಲ ಆರೋಗ್ಯ ಗುಣಗಳನ್ನೂ ಹೊಂದಿರುತ್ತವೆ. ಇಂತಹ ಸೊಪ್ಪುಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಹಾಗೂ ಸೊಪ್ಪುಗಳಿಂದ ತಯಾರಿಸಬಹುದಾದ ಖಾದ್ಯಗಳ ಬಗ್ಗೆ ಜನರಿಗೆ ತಿಳಿಸಬೇಕು ಎಂಬ ಉದ್ದೇಶದಿಂದ ಮೈಸೂರಿನಲ್ಲಿ ಎರಡು ದಿನಗಳ ಸೊಪ್ಪು ಮೇಳವನ್ನು ಆಯೋಜಿಸಲಾಗಿದೆ.

ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ನಡೆಯುತ್ತಿರುವ ಈ ಸೊಪ್ಪು ಮೇಳದ ಮೊದಲ ದಿನ ಯಾವ ಯಾವ ಸೊಪ್ಪುಗಳು ಮಾರಾಟ ಹಾಗೂ ಪ್ರದರ್ಶನಕ್ಕೆ ಬಂದಿದ್ದವು, ಸೊಪ್ಪನ್ನು ಹೊರತು ಪಡಿಸಿ ಇನ್ನು ಏನೆಲ್ಲಾ ವಿಶೇಷ ಇತ್ತು, ಯಾವೆಲ್ಲಾ ಖಾದ್ಯಗಳನ್ನು ಸೊಪ್ಪು ಮೇಳದಲ್ಲಿ ಸವಿಯಬಹುದು ಎಂಬುದನ್ನು ಚಿತ್ರ ಸಹಿತ ವಿವರಿಸಿದ್ದಾರೆ ಕೃಷ್ಣ ಪ್ರಸಾದ್ ಗೋವಿಂದಯ್ಯ. ಅವರ ಸಚಿತ್ರವನ್ನು ನೀವೂ ನೋಡಿ.

ಕೃಷ್ಣ ಪ್ರಸಾದ್ ಗೋವಿಂದಯ್ಯ ಬರಹ

ಸೊಪ್ಪಿನ ಮೇಳದ ಚಿತ್ರಗಳು. ಮೈಸೂರಿನ ಸೊಪ್ಪು ಮೇಳದ ಮೊದಲ ದಿನ‌, ನಮ್ಮ ನಿರೀಕ್ಷೆಗೂ ಮೀರಿ ಜನ ಬಂದರು.ಹೆಗ್ಗಡದೇವನಕೋಟೆ ರೈತ ಮಹಿಳೆಯರು ಮಾಡಿದ 'ಬೆರಕೆ ಸೊಪ್ಪು‌' ಸಾಂಬಾರ್ ಮತ್ತು ರಾಗಿ ಮುದ್ದೆ ಸ್ಟಾಲ್‌ಗೆ ಬರುತ್ತಿದ್ದಂತೆ ಖಾಲಿಯಾಗುತ್ತಿತ್ತು. ಧಾರವಾಡದ ಮಹಿಳಾ ಸಂಘದವರು ತಂದಿದ್ದ 'ಹಕ್ಕರಕಿ ಸೊಪ್ಪು' ಮೈಸೂರಿಗರಿಗೆ ಹೊಸದು. ಹಸಿಯಾಗಿ ತಿನ್ನಬಹುದಾದ ಈ ಸೊಪ್ಪನ್ನು ಕುಂಡದಲ್ಲಿ‌ ನೆಡಲು ಗ್ರಾಹಕರು ಕೊಂಡೊಯ್ದರು!

ಕನಕಪುರ ಕಾಡಿನ ಕೊಳಗೊಂಡನಹಳ್ಳಿ ಗುಂಪು ಮುದ್ದೆ-ಬಸ್ಸಾರು ಉಣಬಡಿಸಿತು. ಸಕತ್ ಸೊಪ್ಪು ಹತ್ತಾರು ಸೊಪ್ಪಿನ ಅಡುಗೆ ಮಾಡಿತ್ತು.‌ ಸಿರ್ಸಿಯ ಮನೋರಮಾ, ಕೊಟ್ಟ ಕಡಬು, ಬಿಳಿ ಎಲೆಯ ಬಜ್ಜಿ, ಕಷಾಯ ಮೊದಲಾದ ಮಲೆನಾಡಿನ‌ ಅಡುಗೆ ಬಡಿಸಿದರು.

ನೂರಕ್ಕೂ ಹೆಚ್ಚಿನ ಸೊಪ್ಪು ಪ್ರದರ್ಶನಕ್ಕೆ ಬಂದಿತ್ತು. ಮೇಳದ ವಿಷೇಷ ಎಂದರೆ ಅರಿಸಿನ ಎಲೆಯ ಐಸ್ ಕ್ರೀಂ ಮತ್ತು ಮಿಂಟ್ ಐಸ್ ಕ್ರೀಂ. ಸಹಜ ಸೀಡ್ಸ ಮಳಿಗೆಯಲ್ಲಿ ಸೊಪ್ಪಿನ‌ ಗಿಡವೊಂದಿದೆ. ಅದರ ಎಲೆ ಮುಟ್ಟಿದರೆ ಒಣ ಮೀನಿನ ಘಾಟು ವಾಸನೆ!

ಸೊಪ್ಪಿನ‌ ಕೃಷಿಯ ತರಬೇತಿ ಕಾರ್ಯಕ್ರಮ ಇತ್ತು. 40ಕ್ಕೂ‌ ಹೆಚ್ಚಿನ ರೈತರು ಸಾವಯವ ಸೊಪ್ಪು ಬೆಳೆಸಲು ಆಸಕ್ತಿ ತೋರಿ ಮುಂದೆ ಬಂದರು. ನಾಳೆ (ಸೆಪ್ಟೆಂಬರ್‌) ಮೇಳದ ಕೊನೆಯ ದಿನ. ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ, ಹಿರಿಯರಿಗಾಗಿ ಸೊಪ್ಪಿನ‌ ಅಡುಗೆ ಸ್ಪರ್ಧೆ ಇದೆ. ಬಿಡುವು ಮಾಡಿಕೊಂಡು ಬನ್ನಿ.

mysore-dasara_Entry_Point