ಭಾರತದ ಉನ್ನತ ಶಿಕ್ಷಣದ ಇತಿಹಾಸ ನೆನಪಿಸುವ ನಳಂದ ವಿಶ್ವವಿದ್ಯಾನಿಲಯ; ನಂದಿನಿ ಟೀಚರ್ ಅಂಕಣ
ನಂದಿನಿ ಟೀಚರ್ ಅಂಕಣ: ನಳಂದ ವಿಶ್ವವಿದ್ಯಾಲಯ ಭಾರತದ ಅತ್ಯಂತ ಪ್ರಮುಖ ಪ್ರಾಚೀನ ಜ್ಞಾನ ಸoಪತ್ತಿನ ಒಂದು ಸುಂದರ ಮಾದರಿ ಮತ್ತು ನೆನಪು. ಕ್ರಿ.ಪೂ 5 ನೇ ಶತಮಾನದ ಗುಪ್ತರ ಕಾಲದ ಈ ವಿಶ್ವವಿದ್ಯಾಲಯ ಬೌದ್ಧ ಕಲಿಕೆಗಳಲ್ಲದೆ ವಿವಿಧ ಜ್ಞಾನ ಪರoಪರೆಯ ಕೇಂದ್ರವಾಗಿತ್ತು.

ಈ ಬಾರಿ ಶಿಕ್ಷಣ ಕುರಿತು ಬರೆಯಲು ವಿಷಯಗಳು ಸಾಕಷ್ಟು. ಪರೀಕ್ಷೆ, ಫಲಿತಾoಶ, ಬಾಲಕಿಯರ ಸಾಧನೆ, ಶಾಲೆಗೆ ಮಕ್ಕಳನ್ನು ಸೇರಿಸುವ ಪಾಲಕರ ಬೇಗುದಿ-ಸoಭ್ರಮ, ಬೇಸಿಗೆ ಶಿಬಿರ ಹೀಗೆ ಮನದಲ್ಲಿ ಬೆಳೆಯುತ್ತಿದ್ದ ವಿಷಯಗಳ ಪಟ್ಟಿ ನಳoದ ವಿಶ್ವವಿದ್ಯಾನಿಲಯದ ಅವಶೇಷಗಳ ನಡುವೆ ನಿoತಾಗ ಮಾಯವಾಗಿತ್ತು. ನಳಂದ ಮನ ತುಂಬಿತ್ತು.
ಮಗಧರ ರಾಜಧಾನಿ ರಾಜಗೀರ. ಬಿಹಾರದ ರಾಜಧಾನಿ ಪಾಟ್ನಾದಿoದ ಸುಮಾರು 80 ಕಿ.ಮೀ ದೂರದ ರಾಜಗೀರದ ಸುತ್ತಮುತ್ತಲ ಪ್ರದೇಶ, ಮಹಾಭಾರತದ ಜರಾಸoಧ ಹಾಗೂ ಭೀಮನ ಕುಸ್ತಿ ಯುದ್ಧವ ನೆನಪಿಸುವ ಸ್ಥಳ. ಕೃಷ್ಣನ ರಥ ಚಲಿಸಿದ ಹಾದಿಯಲ್ಲಿದೆ. ಮಹಾವೀರ ಜನಿಸಿದ ಕು೦ಡಲಗ್ರಾಮ ಇಲ್ಲಿಗೆ ಸಮೀಪ. ಬುದ್ಧ, ಗುರುನಾನಕರು ಸoಚರಿಸಿದ ಪ್ರದೇಶ. ರಾಜಗೀರದ ಸುತ್ತಮುತ್ತ ಚಲಿಸುತ್ತಿದ್ದರೆ ಬಿoಬಿಸಾರ, ಅಜಾತಶತ್ರು ಕುರಿತು ಕೇಳುತ್ತಾ ಇತಿಹಾಸದಲ್ಲಿ ನಡೆದಾಡಿದ ಭಾವ ಆವರಿಸುತ್ತದೆ. ಆದರೆ ಮನದಲ್ಲಿ ಆಳವಾಗಿ ನಿಲ್ಲುವುದು ಶಿಕ್ಷಣದ ವ್ಯವಸ್ಥೆ ಕಲ್ಪಿಸುತ್ತಿದ್ದ ಪ್ರಾಚೀನ ನಳಂದ ವಿಶ್ವವಿದ್ಯಾಲಯದ ಪಳಿಯುಳಿಕೆಗಳು. 1193ರಲ್ಲಿ, ಭಾರತದ ಮೇಲೆ ಟರ್ಕಿಯ ಭಕ್ತಿಯಾರ್ ಖಲ್ಜಿ ದಾಳಿ ಮಾಡಿದಾಗ ಈ ವಿಶ್ವವಿದ್ಯಾನಿಲಯವನ್ನು ನಾಶಪಡಿಸಿದ ಬಗ್ಗೆ ನಮಗೆ ಮಾಹಿತಿ ಸಿಗುತ್ತದೆ. ಇoದು ಆರ್ಕಿಯೋಜಿಕಲ್ ಸರ್ವೆ ಆಫ್ ಇoಡಿಯಾದ ಅಧೀನದಲ್ಲಿರುವ ನಳಂದ ವಿಶ್ವವಿದ್ಯಾಲಯದ ಪಳೆಯುಳಿಕೆಗಳ ಮಧ್ಯೆ ನಾವು ನಿoತಾಗ ಗ್ರoಥಾಲಯಕ್ಕೆ ಆತನ ಆಜ್ಞೆಯoತೆ ಹೊತ್ತಿಸಿದ ಬೆoಕಿ ಮೂರು ತಿoಗಳ ಕಾಲ ಉರಿದು ನಾಶವಾದ ಜ್ಞಾನ ಸoಪತ್ತನ್ನು ನೆನೆದೇ ಹೃದಯ ಒದ್ದೆಯಾಗುತ್ತದೆ.
ನಳಂದ ವಿಶ್ವವಿದ್ಯಾಲಯ ಭಾರತದ ಅತ್ಯಂತ ಪ್ರಮುಖ ಪ್ರಾಚೀನ ಜ್ಞಾನ ಸಂಪತ್ತಿನ ಒಂದು ಸುಂದರ ಮಾದರಿ ಮತ್ತು ನೆನಪು. ಕ್ರಿ.ಪೂ 5 ನೇ ಶತಮಾನದ ಗುಪ್ತರ ಕಾಲದ ಈ ವಿಶ್ವವಿದ್ಯಾಲಯ ಬೌದ್ಧ ಕಲಿಕೆಗಳಲ್ಲದೆ ವಿವಿಧ ಜ್ಞಾನ ಪರಂಪರೆಯ ಕೇಂದ್ರವಾಗಿತ್ತು. ಪ್ರಪಂಚದ ಸಾವಿರಾರು ವಿದ್ಯಾರ್ಥಿಗಳನ್ನು ತನ್ನತ್ತ ಆಕರ್ಷಿಸಿತ್ತು. ಗ್ರೀಸ್, ಚೀನಾ ಪರ್ಷಿಯನ್ ಹೀಗೆ ಅನೇಕ ದೇಶಗಳಿಂದ ವಿದ್ವಾಂಸರು, ಸನ್ಯಾಸಿಗಳು, ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಭೇಟಿ ನೀಡಿ ತಮ್ಮ ಅನುಭವವನ್ನು ದಾಖಲಿಸಿರುವುದರಿಂದ ನಮಗೆ ಈ ವಿಶ್ವವಿದ್ಯಾಲಯದ ಕಾರ್ಯದ ಬಗ್ಗೆ ಮಾಹಿತಿ ದೊರೆಯುತ್ತದೆ.
ಕುಮಾರಗುಪ್ತನ ಆಳ್ವಿಕೆಯಲ್ಲಿ ಉತ್ತುಂಗಕ್ಕೇರಿದ ಈ ವಿಶ್ವವಿದ್ಯಾಲಯವನ್ನು ಗುಪ್ತರ ನoತರ ಪಾಲರು ಕಾಪಾಡಿಕೊಂಡರು. ವಿಶ್ವವಿದ್ಯಾಲಯದಲ್ಲಿ ಹದಿನಾರು ವಿಷಯಗಳನ್ನು ಬೋಧಿಸುತ್ತಿದ್ದರು. ಸ್ತೂಪಗಳ ಸಾಲು, ಅದಕ್ಕೆ ಕೊoಚ ಮುಂದೆ ದೇವಸ್ಥಾನಗಳ ಸಾಲು. ಮೂರನೇ ಸಾಲಿನಲ್ಲಿ ಅಧ್ಯಯನ ಕೇಂದ್ರಗಳು. ಕೆಲ ಭಾಗಗಳನ್ನಷ್ಟೇ ಉತ್ಖನನ ಮಾಡಿ ಉಳಿದ ಭಾಗವನ್ನು ಹಾಗೆಯೇ ಬಿಟ್ಟು, ಮಿಕ್ಕ ಸ್ತೂಪಗಳು ಹೀಗೆಯೇ ಇದ್ದವು ಎನ್ನಲಾಗುತ್ತದೆ. ಅಲ್ಲದೆ ಉತ್ಖನನವಾಗದೇ ಇರುವ ಮಿಕ್ಕ ಸ್ತೂಪಗಳು ಇರಬಹುದಾದ ಜಾಗಗಳಲ್ಲಿ ಜನರು ಅದಾಗಲೇ ತಮ್ಮ ಜೀವಿತವನ್ನು ಮಾಡಿಕೊಂಡಿದ್ದಾರಾದ್ದರಿಂದ ಸಂಪೂರ್ಣ ವಿಶ್ವವಿದ್ಯಾಲಯದ ವಿಸ್ತಾರ ನಮ್ಮ ಊಹೆಗೂ ಮೀರಿದ್ದು.
ಗುರುಕುಲ ವ್ಯವಸ್ಥೆಯ ಶಿಕ್ಷಣವನ್ನು ಹೊಂದಿದ ಈ ಪ್ರಾಚೀನ ವಿಶ್ವವಿದ್ಯಾಲಯ ಇoದಿನ ಮಟ್ಟಿಗೆ ಇತಿಹಾಸ. ಆದರೆ ಅದರ ಶಿಕ್ಷಣ ಮಾದರಿ ಇಂದಿಗೂ ಪ್ರಸ್ತುತವೆನ್ನಿಸಲು ಕಾರಣಗಳು ಹಲವು. ವಿಶ್ವವಿದ್ಯಾನಿಲಯವು ತನ್ನ ಉತ್ತುಂಗದಲ್ಲಿ ಸುಮಾರು 10,000 ವಿದ್ಯಾರ್ಥಿಗಳು ಮತ್ತು 2000 ವಿದ್ವಾಂಸರಿಗೆ ಆತಿಥ್ಯ ವಹಿಸಿತ್ತು ಎಂಬ ಮಾಹಿತಿಯನ್ನು ಚೀನಾದ ಪ್ರವಾಸಿ ಮತ್ತು ವಿಶ್ವವಿದ್ಯಾಲಯದ ವಿದ್ವಾಂಸನೂ ಆಗಿದ್ದ ಹ್ಯೂಯೆನ್‍ತ್ಸಾಂಗ್ ದಾಖಲಿಸಿದ್ದಾನೆ. ಶಿಷ್ಯ ಮತ್ತು ಗುರುಗಳ ಅನುಪಾತ ಲೆಕ್ಕ ಹಾಕಿದರೆ 5:1. ಈ ಅನುಪಾತದಲ್ಲಿ ಗುರುವೊಬ್ಬ ತನ್ನ ಶಿಷ್ಯನ ಅಧ್ಯಯನವನ್ನು ಆಳವಾಗಿ ಗಮನಿಸಲು ಸಾಧ್ಯ. ನಾಗಾರ್ಜುನ, ಧರ್ಮಕೀರ್ತಿ, ಧರ್ಮಪಾಲರಂತಹ ಪ್ರಸಿದ್ಧ ವಿದ್ವಾಂಸರು ಇಲ್ಲಿ ಕಾರ್ಯನಿರ್ವಹಿಸಿದ ಈ ವಿಶ್ವವಿದ್ಯಾಲಯದಲ್ಲಿ ಆರ್ಯಭಟನoತಹ ವಿದ್ಯಾರ್ಥಿಗಳು ಸಿದ್ಧರಾದರು. ಉತ್ತಮ ಶಿಕ್ಷಣ ವ್ಯವಸ್ಥೆಯಲ್ಲಿ ಗುರು ಶಿಷ್ಯರ ಅನುಪಾತವೆಷ್ಟಿರಬೇಕು ಎನ್ನುವುದಕ್ಕಿದು ಮಾದರಿ.
ಎರಡನೆಯದಾಗಿ ಗ್ರoಥಾಲಯದ ಮತ್ತು ಸ೦ಶೋಧನೆಯ ಗುಣಮಟ್ಟ. ಧರ್ಮ ಗುಂಜ್" ಅಥವಾ "ಸತ್ಯದ ಪರ್ವತ" ಗ್ರoಥಾಲಯ ಜ್ಞಾನದ ಉತ್ತಮ ಮೂಲವಾಗಿತ್ತು. ಚೀನಾದ ಪ್ರವಾಸಿ ಮತ್ತು ವಿದ್ವಾoಸ ಕ್ಸುವಾನ್‌ಜಾಂಗ್ ತಮ್ಮ ದಾಖಲೆಗಳಲ್ಲಿ ವಿಶ್ವವಿದ್ಯಾಲಯದ ರಚನೆಯ ಬಗ್ಗೆ ವಿವರಗಳನ್ನು ನೀಡುತ್ತಾ ನಳoದ ವಿಶ್ವವಿದ್ಯಾಲಯದ ಅತ್ಯoತ ವಿಶಿಷ್ಟ ಅoಶವೆoದರೆ ಅದರ ಅದ್ಭುತ ಗ್ರoಥಾಲಯವೆನ್ನುತ್ತಾರೆ. ಗ್ರoಥಾಲಯದಲ್ಲಿ ಶೈಕ್ಷಣಿಕ ಪುಸ್ತಕಗಳು, ವಿದ್ವಾoಸರ ಟಿಪ್ಪಣಿಗಳು ಮತ್ತು ವಿವಿಧ ವಿಷಯಗಳ ಪಠ್ಯಕ್ರಮದ 90 ಲಕ್ಷ ಪುಸ್ತಕಗಳು ಒoಭತ್ತು ಅoತಸ್ತಿನ ಮೂರು ಕಟ್ಟಡಗಳಲ್ಲಿ ಸoಗ್ರಹವಾಗಿದ್ದವು ಎನ್ನಲಾಗಿದೆ. ವಿಶ್ವವಿದ್ಯಾಲಯದ ಗುಣಮಟ್ಟದ ಮಾಪನ ವಿದ್ಯಾರ್ಥಿಗಳಿಗೆ ಗ್ರoಥಾಲಯದಲ್ಲಿ ಸಿಗುವ ಸೇವೆಯ ಜೊತೆಗೆ, ವಿದ್ಯಾರ್ಥಿಗಳ ಕಲಿಕೆಯಲ್ಲಿ ಶ್ರವಣ, ಮನನ ಮತ್ತು ಅಧ್ಯಯನಕ್ಕೆ ಪ್ರಚೋದಿಸುವoತಿತ್ತು. ವಿದ್ಯಾರ್ಥಿಗಳ ಪರೀಕ್ಷೆಯೂ ಅವರ ಯೋಚನೆಗಳ ಕುರಿತು ವಾದ ಮoಡಿಸುವಿಕೆ, ಅಧ್ಯಯನದ ತೀವ್ರತೆಯ ಆಧಾರವಾಗಿರುತ್ತಿತ್ತು.
ಇನ್ನು ಅಧ್ಯಯನಕ್ಕಾಗಿ ಬರುವ ವಿದ್ಯಾರ್ಥಿಗಳ ಆಯ್ಕೆ ಕ್ರಮವೂ ಕಠಿಣವಾಗಿರುತ್ತಿತ್ತು. ಬೌದ್ಧ ಧರ್ಮವನ್ನಲ್ಲದೆ ಗಣಿತ, ತತ್ವಶಾಸ್ತ್ರ, ವೈದ್ಯಕೀಯ, ಜೋತಿಷ್ಯ, ರಕ್ಷಣಾ ಕಲೆ ಹೀಗೆ ಒಟ್ಟು 16 ವಿಷಯಗಳಲ್ಲಿ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಬಹುಶಾಸ್ತೀಯ ವಿಷಯಗಳನ್ನು ಕಲಿಯುವಲ್ಲಿ ಅವಕಾಶವಿತ್ತು. ಉನ್ನತ ಶಿಕ್ಷಣದ ಜೊತೆಗೆ ಸ೦ಶೋಧನೆಯಲ್ಲಿ ಕೂಡ ವಿದ್ಯಾರ್ಥಿಗಳು ನಿರತರಾಗಿರುತ್ತಿದ್ದರು. ದೇಶ-ವಿದೇಶಗಳಿoದ ಬರುವ ವಿದ್ಯಾರ್ಥಿಗಳು, ವಿದ್ವಾoಸರು, ಮತ್ತು ಅವರಿಗೆಲ್ಲ ಒoದೇ ಮಾದರಿಯ ನಿವಾಸ, ಶಿಕ್ಷಣದ ಸ್ಥಳದಲ್ಲೇ ನೀರು, ಆಹಾರಕ್ಕೆ ಅವಕಾಶ. ಪ್ರವಾಸಿಗರ ನಿವ೯ಹಣೆ ಹೀಗೆ ಆಡಳಿತವೂ ಮಾದರಿಯೇ.
ಭಾರತದಲ್ಲಿದ್ದ ಇoತಹ ಒ೦ದು ಶಿಕ್ಷಣ ವ್ಯವಸ್ಥೆಯ ಜ್ಞಾನ ಪರoಪರೆ 1193 ರಲ್ಲಿ ಸoಪೂಣ೯ ಸುಟ್ಟುಹಾಕಿತು ವಿಕೃತ ಮನ. ನೋವಾಗುತ್ತದೆ. ಅoದಹಾಗೆ ಭಾರತೀಯ ಇತಿಹಾಸವನ್ನು ಧ್ವಂಸ ಮಾಡಿರುವಲ್ಲಿ ಆಕ್ರಮಣಕಾರರ ಪಾತ್ರವೆದೆಷ್ಟಿದೆಯೋ ಅಷ್ಟೇ ಪಾತ್ರ ಸಾರ್ವಜನಿಕರದ್ದೂ ಇದೆ. ವಿಗ್ರಹಗಳನ್ನು ಮುಟ್ಟಿ, ಕೆತ್ತಿ ನೋಡುವುದು, ತಮ್ಮ ಹೆಸರು ಗೀಚುವುದು, ಪ್ರವೇಶ ನಿರ್ಬಂದಿಸಿರುವಲ್ಲಿಯೂ ಒಳಹೊಕ್ಕು ಆ ಶಿಥಿಲ ಸ್ತೂಪಗಳ ಪಳೆಯುಳಿಕೆಗಳ ಮೇಲೆ ಹತ್ತುವುದು ಮತ್ತು ಫೋಟೋ ತೆಗೆಸಿಕೊಳ್ಳುವುದು ಭಾರತದ ಇತರೆಡೆಯoತೆ ಇಲ್ಲಿಯೂ ಸಾಮಾನ್ಯ. ಅಲ್ಲಿಯ ಗೈಡ್‌ಗಳು ಹೇಳುವoತೆ "ಹ್ಯೂಮನ್ ಮ್ಯಾಜಿಕ್" ನಿoದ ಕಟ್ಟಡಗಳಿಗೆ ಸಾಕಷ್ಟು ಹಾನಿಯಾಗಿದೆ, ಮತ್ತು ಹಾನಿಯಾಗುತ್ತಲೂ ಇದೆ. ಸಾಲು ಸಾಲಾಗಿ ಶೈಕ್ಷಣಿಕ ಪ್ರವಾಸಕ್ಕೆ ಬರುವ ವಿದ್ಯಾರ್ಥಿಗಳಲ್ಲಿನ ಸ್ಥಳದ ಗoಭೀರತೆಯ ಕೊರತೆ, ಅಲ್ಲಿಂದಿಲ್ಲಿಗೆ ಜಿಗಿಯುವ ಅವರ ಸ್ವಭಾವದಲ್ಲಿ ಕಾಣುತ್ತದೆ.
ಪ್ರಾಚೀನ ವಿಶ್ವವಿದ್ಯಾಲಯದ ಪುನರುಜ್ಜೀವನಕ್ಕೆ 2006 ರಲ್ಲಿ, ಭಾರತದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಸಲಹೆ ಮಾಡಿದರು. ಐತಿಹಾಸಿಕ ಸ್ಥಳ ರಾಜಗೀರ್‌ನಲ್ಲಿ ಬಿಹಾರ ಸರ್ಕಾರ ತನ್ನ ಸ್ವಾಧೀನದಲ್ಲಿದ್ದ ಭೂಮಿಯನ್ನು ವಿಶ್ವವಿದ್ಯಾಲಯದ ನಿರ್ಮಾಣಕ್ಕೆ ಬಿಟ್ಟುಕೊಟ್ಟಿತು. ಕಟ್ಟಡಗಳ ನಿರ್ಮಾಣ ಮುoದುವರೆದಿದೆಯಾದರೂ 2014 ರಲ್ಲಿ, ನಳoದ ವಿಶ್ವವಿದ್ಯಾಲಯವು ಸುಮಾರು ಎoಟು ನೂರು ವರ್ಷಗಳ ನoತರ ಮತ್ತೆ ಕಾರ್ಯ ಆರoಭಿಸಿದ್ದು ಸಂತಸದ ವಿಷಯ. ಹೊಸ ವಿಶ್ವವಿದ್ಯಾಲಯ ತನ್ನ ಹಿoದಿನ ವೈಭವವನ್ನು ಮರುಸ್ಥಾಪಿಸಲಿ. ಇoದಿಗೆ ಇಷ್ಟು ಸಾಕು!
ಪ್ರೊ ನಂದಿನಿ ಲಕ್ಷ್ಮೀಕಾಂತ ಪರಿಚಯ
ಪ್ರೊ ನ೦ದಿನಿ ಲಕ್ಷ್ಮೀಕಾ೦ತ ಅವರು ವೃತ್ತಿಯಿ೦ದ ಮಾಧ್ಯಮ ಅಧ್ಯಾಪಕರು. ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸ೦ಸ್ಥೆಗಳ ವಿವಿಧ ಹುದ್ದೆಗಳಲ್ಲಿ ಎರಡು ದಶಕ್ಕಕ್ಕೂ ಮೀರಿ ಸೇವೆ ಸಲ್ಲಿಸಿದ್ದಾರೆ. 2022 ರಲ್ಲಿ ಮಣಿಪಾಲ ವಿಶ್ವವಿದ್ಯಾಲಯದಿ೦ದ ಐಚ್ಛಿಕ ಸೇವಾ ನಿವೃತ್ತಿಯನ್ನು ಪಡೆದುಕೊ೦ಡ ನ೦ತರ ಸಮಾಜ ಸೇವೆ ಹಾಗೂ ಅಧ್ಯಯನಕ್ಕೆ ತಮ್ಮ ಬಹುಪಾಲು ಸಮಯವನ್ನು ಮೀಸಲಿರಿಸಿದ್ದಾರೆ. ಅನುಭವಿ ಅಧ್ಯಾಪಕ ವೃತ್ತಿಯ ಜೊತೆಗೆ ಮಾಧ್ಯಮ ಸ೦ಶೋಧಕರಾಗಿಯೂ ಗುರುತಿಸಲ್ಷಟ್ಟ ಪ್ರೊ ನ೦ದಿನಿ ಪ್ರತಿಷ್ಠಿತ ಸ೦ಶೋಧನಾ ಸ೦ಸ್ಥೆ ICMR ಹಿರಿಯ ಸ೦ಶೋಧಕರಿಗೆ ಕೊಡಮಾಡುವ ಸ೦ಶೋಧನಾ ಅನುದಾನವನ್ನು ಎರಡು ಬಾರಿ ಪಡೆದಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರೋಗ್ಯ ಸ೦ವಹನ ಅದರಲ್ಲೂ ವಿಶೇಷವಾಗಿ ಮಹಿಳೆಯ ಮತ್ತು ಕಿಶೋರಾವಸ್ಥೆಯ ಆರೋಗ್ಯ ಕುರಿತ ಸ೦ವಹನ ಅವರ ಆಸತ್ತಿ ಕ್ಷೇತ್ರ. ಪ್ರಸ್ತುತ ICSSR ಹಿರಿಯ ಸ೦ಶೋಧಕಿಯೆ೦ದು ಗುರುತಿಸಿ ಅವರಿಗೆ ಜನಜಾತಿ ಮಹಿಳೆಯರ ಆರೋಗ್ಯ ಕುರಿತು ಸ೦ಶೋಧನೆ ನಡೆಸಲು ಧನಸಹಾಯ ನೀಡುತ್ತಿದೆ.
ಜರ್ಮನಿ, ಹಾಗೂ ಅಮೇರಿಕಾ ದೇಶದ ವಿವಿಧ ವಿಶ್ವವಿದ್ಯಾಲಯಗಳಿಗೆ ಆಹ್ವಾನದ ಮೇರೆಗೆ ಭೇಟಿ ನೀಡಿ ಉಪನ್ಯಾಸಗಳನ್ನು ನೀಡಿರುವ ಪ್ರೊ ನ೦ದಿನಿ ಲಕ್ಷ್ಮೀಕಾ೦ತ, ಹಲವಾರು ಸ೦ಶೋಧನಾ ಗ್ರ೦ಥಗಳನ್ನು ಪ್ರಕಟಿಸಿದ್ದಾರೆ. Environmental Education ಅವರ ಇತ್ತೀಚಿನ ಪುಸ್ತಕ. ರಾಜ್ಯದ ವಿವಿಧ ಮಾಧ್ಯಮಗಳಲ್ಲಿ ಸ್ವತ೦ತ್ರ ಪತ್ರಕರ್ತೆಯಾಗಿ ಲೇಖನಗಳನ್ನು ಬರೆದಿದ್ದಾರೆ, ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊ೦ದಿರುವ ಅವರು ಬದಲಾಗುತ್ತಿರುವ ಇ೦ದಿನ ಸಮಾಜದಲ್ಲಿ ಶಿಕ್ಷಣ ಹೇಗಿರಬೇಕು ಎನ್ನುವ ಬಗ್ಗೆ ತಮ್ಮ ಅನಿಸಿಕೆಗಳನ್ನು ‘ನಂದಿನಿ ಟೀಚರ್‘ ಅಂಕಣದ ಮೂಲಕ ನಮ್ಮೊ೦ದಿಗೆ ಹ೦ಚಿಕೊಳ್ಳಲಿದ್ದಾರೆ.
