ಕೆಎಂಎಫ್‌ 1 ಲೀಟರ್ ಹಾಲನ್ನು ಖರೀದಿಸಿ, ನಮ್ಮ ಮನೆಗೆ ತಂದುಕೊಡುವುದಕ್ಕೆ ತೆಗೆದುಕೊಳ್ಳುವ ಹಣ ಬರೋಬ್ಬರಿ 25 ರೂ; ಕೃಷ್ಣ ಭಟ್ ಅಭಿಮತ
ಕನ್ನಡ ಸುದ್ದಿ  /  ಜೀವನಶೈಲಿ  /  ಕೆಎಂಎಫ್‌ 1 ಲೀಟರ್ ಹಾಲನ್ನು ಖರೀದಿಸಿ, ನಮ್ಮ ಮನೆಗೆ ತಂದುಕೊಡುವುದಕ್ಕೆ ತೆಗೆದುಕೊಳ್ಳುವ ಹಣ ಬರೋಬ್ಬರಿ 25 ರೂ; ಕೃಷ್ಣ ಭಟ್ ಅಭಿಮತ

ಕೆಎಂಎಫ್‌ 1 ಲೀಟರ್ ಹಾಲನ್ನು ಖರೀದಿಸಿ, ನಮ್ಮ ಮನೆಗೆ ತಂದುಕೊಡುವುದಕ್ಕೆ ತೆಗೆದುಕೊಳ್ಳುವ ಹಣ ಬರೋಬ್ಬರಿ 25 ರೂ; ಕೃಷ್ಣ ಭಟ್ ಅಭಿಮತ

Nandini Milk Price Hike: ನಂದಿನಿ ಹಾಲು ಮತ್ತು ಮೊಸರುಗಳ ಬೆಲೆ ಏರಿಕೆ ಮಾಡಿದ ಕೆಎಂಎಫ್‌ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಈ ಪೈಕಿ ಫ್ರೀಲ್ಯಾನ್ಸ್ ಟ್ರಾನ್ಸ್‌ಲೇಟರ್ ಕೃಷ್ಣ ಭಟ್ ಕೆಎಂಎಫ್‌ ಹಾಲು ಪೂರೈಕೆಯ ಹಣಕಾಸಿನ ಲೆಕ್ಕಾಚಾರವನ್ನು ಮುಂದಿಟ್ಟಿದ್ದಾರೆ. ಅದರ ವಿವರ ಇಲ್ಲಿದೆ.

ಕೆಎಂಎಫ್‌ ನಂದಿನಿ ಹಾಲು ಮತ್ತು ಮೊಸರುಗಳ ಬೆಲೆ ಏರಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. (ಸಾಂಕೇತಿಕ ಚಿತ್ರ)
ಕೆಎಂಎಫ್‌ ನಂದಿನಿ ಹಾಲು ಮತ್ತು ಮೊಸರುಗಳ ಬೆಲೆ ಏರಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. (ಸಾಂಕೇತಿಕ ಚಿತ್ರ)

Nandini Milk Price Hike: ಕೆಎಂಎಫ್‌ ತನ್ನ ನಂದಿನಿ ಬ್ರಾಂಡ್‌ನ ಹಾಲು ಮತ್ತು ಮೊಸರುಗಳ ಬೆಲೆಗಳನ್ನು ಲೀಟರಿಗೆ 4 ರೂಪಾಯಿ ಏರಿಸುವುದಾಗಿ ಘೋಷಿಸಿದೆ. ಇದು ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಈ ಬೆಲೆ ಏರಿಕೆ ವಿಚಾರ ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ತಾಣಗಳಲ್ಲೂ ಈ ವಿಚಾರವಾಗಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಇವುಗಳ ಪೈಕಿ ಫ್ರೀಲ್ಯಾನ್ಸ್ ಟ್ರಾನ್ಸ್‌ಲೇಟರ್ ಕೃಷ್ಣ ಭಟ್ ಅವರು ಕೆಎಂಎಫ್‌ ಒಂದು ಲೀಟರ್ ಹಾಲು ಖರೀದಿಸಿ ನಮ್ಮ ಮನೆಗೆ ತಂದುಕೊಟ್ಟರೆ ಎಷ್ಟು ಹಣ ತಗೊಳ್ಳುತ್ತಿದೆ ಎಂಬ ಹಣಕಾಸಿನ ಲೆಕ್ಕಾಚಾರ ನೀಡಿದ್ದಾರೆ. ಆ ವಿವರ ಇಲ್ಲಿದೆ.

ಕೆಎಂಎಫ್‌ 1 ಲೀಟರ್ ಹಾಲನ್ನು ಖರೀದಿಸಿ, ನಮ್ಮ ಮನೆಗೆ ತಂದುಕೊಡುವುದಕ್ಕೆ ತೆಗೆದುಕೊಳ್ಳುವ ಹಣ ಬರೋಬ್ಬರಿ 25 ರೂ

ಕೆಎಂಎಫ್‌ ಒಂದು ಹಾಲನ್ನು ಖರೀದಿಸಿ, ನಮ್ಮ ಮನೆಗೆ ತಂದುಕೊಡುವುದಕ್ಕೆ ತೆಗೆದುಕೊಳ್ಳುವ ಹಣ ಎಷ್ಟು ಗೊತ್ತೇ? ಬರೋಬ್ಬರಿ 25 ರೂ.! ಅಂದರೆ, ಕಾರ್ಪೊರೇಟ್ ಲೆಕ್ಕಾಚಾರದಲ್ಲಿ ಹೇಳುವುದಾದರೆ, ಕೆಎಂಎಫ್‌ನ ಆಪರೇಟಿಂಗ್ ಎಕ್ಸ್‌ಪೆನ್ಸ್‌ 65%!

ಇದು ಕಂಪನಿಯೊಂದು ಅಪಾಯದಲ್ಲಿದೆ ಎಂಬುದರ ಸೂಚನೆ. ದರ ಏರಿಕೆ ಪ್ರಸ್ತಾಪ ಮಾಡಿದಾಗ ಯಾರೂ ಕೂಡ ನಿಮ್ಮ ಆಪರೇಟಿಂಗ್ ಎಕ್ಸ್‌ಪೆನ್ಸ್ ಕಡಿಮೆ ಮಾಡಿಕೊಳ್ಳಿ ಎಂದು ತಾಕೀತು ಮಾಡಿಲ್ಲ. ಇಷ್ಟು ನಷ್ಟವಾಗುತ್ತಿದೆ. ಹೀಗಾಗಿ, ನಮಗೆ ದರ ಏರಿಕೆ ಮಾಡದೇ ಬೇರೆ ದಾರಿಯಿಲ್ಲ ಎಂದರು. ಸರಿ ಎಂದು ಒಪ್ಪಿದರು!!

ಕೆಎಂಎಫ್‌ ಪ್ರತಿ ದಿನ 90 ಲಕ್ಷ ಲೀಟರ್ ಹಾಲನ್ನು ಖರೀದಿ ಮಾಡುತ್ತದೆ. ರೈತರಿಗೆ ಒಂದು ಲೀಟರ್ ಹಾಲಿಗೆ 33 ರೂ. ಕೊಡುತ್ತದೆ. ಮಾರಾಟ ಮಾಡುವುದು 54 ರೂ.ಗೆ. ಖರೀದಿ ಮಾಡಿದ ಹಾಲಿನ ಪೈಕಿ ಅರ್ಧದಷ್ಟು ಸುಮಾರು 40-45 ಲಕ್ಷ ಲೀಟರ್ ಹಾಲು ಪ್ಯಾಕೆಟ್ ಹಾಲಿನ ರೂಪದಲ್ಲಿ ಮಾರಾಟವಾಗುತ್ತದೆ. ಮತ್ತೊಂದು 20 ಲಕ್ಷ ಲೀಟರ್ ಹಾಲು ಮೊಸರು ಹಾಗೂ ಮಜ್ಜಿಗೆ ಇತರ ವಿಧಾನದಲ್ಲಿ ಮಾರಾಟವಾಗುತ್ತದೆ. ಉಳಿದ ಹಾಲು ಇತರ ಉತ್ಪನ್ನಗಳಿಗೆ ಹೋಗುತ್ತದೆ.

ಇನ್ನು ಇದರ ಮೇಲಿನಿಂದ ಕೆಎಂಎಫ್‌ ಎಮ್‌ಡಿ ಜಗದೀಶ್ ಹೇಳುವ ಪ್ರಕಾರ, ಒಂದು ಪ್ಯಾಕೆಟ್ ಹಾಲಿನ ಮೇಲೆ 1-2 ರೂ. ನಷ್ಟ ಆಗುತ್ತಿದೆ. ಉಳಿದ ಉತ್ಪನ್ನಗಳಲ್ಲಿ ಲಾಭ ಬರುತ್ತಿದೆ. ಅಂದರೆ, ಒಟ್ಟು ಒಂದು ಪ್ಯಾಕೆಟ್ ಹಾಲನ್ನು ನಾವು ಖರೀದಿ ಮಾಡಿದಾಗ ಕೆಎಂಎಫ್‌ಗೆ ವ್ಯತ್ಯಾಸದ ಮೊತ್ತ 21 ರೂಪಾಯಿ ಮೇಲೆ ಇನ್ನೂ 2-4 ರೂ. ಹೆಚ್ಚು ವೆಚ್ಚವಾಗುತ್ತದೆ. 25 ರೂ. ಎಂದುಕೊಂಡರೂ ಕೆಎಂಎಫ್‌ನ ಕಾರ್ಯಾಚರಣೆ ವೆಚ್ಚವೇ ಸುಮಾರು 65% ಆಯಿತು!

ಕೆಎಂಎಫ್‌ ವಹಿವಾಟಿನ ಲಾಭದ ಲೆಕ್ಕಾಚಾರ ಹೀಗಿದೆ

ಇಲ್ಲಿ ಇನ್ನೊಂದು ಆಸಕ್ತಿಕ ಸಂಗತಿಯೆಂದರೆ, 2021 ರಲ್ಲಿ ಕೆಎಂಎಫ್‌ನ ಲಾಭ 5356 ಕೋಟಿ ರೂ. 2022 ರಲ್ಲಿ 6600 ಕೋಟಿ ರೂ, 2023 ರ ಮೊದಲ 9 ತಿಂಗಳಲ್ಲಿ 4800 ಕೋಟಿ ರೂ. ಆದಾಯ ಗಳಿಸಿದೆ. 40 ಲಕ್ಷ ಲೀಟರ್ ಹಾಲನ್ನು ಬೇರೆ ಬೇರೆ ರೂಪದಲ್ಲಿ ಮಾರಾಟ ಮಾಡಿದ ಕೆಎಂಎಫ್‌ಗೆ ಪ್ರತಿ ಲೀಟರ್ ಹಾಲಿಗೆ 34.25 ರೂ. ಲಾಭ ಬಂದಂತಾಯಿತು. ಅಂದರೆ, ಆಪರೇಟಿಂಗ್ ವೆಚ್ಚ, ರೈತರಿಗೆ ಕೊಟ್ಟ ದರ ಹಾಗೂ ಲಾಭದ (25+33+34) ಲೆಕ್ಕ ಹಾಕಿದರೆ, 92 ರೂ. ಬಂದಂತಾಯಿತು!

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, 65% ಆಪರೇಟಿಂಗ್ ವೆಚ್ಚ! 40 ಲಕ್ಷ ಲೀಟರ್ ಹಾಲು ಒಂದು ದಿನದಲ್ಲಿ ಖರೀದಿಯಾಗಿ ಮಾರಾಟವಾಗುವುದಕ್ಕೆ 65% ರಷ್ಟು ವೆಚ್ಚವಾಗುತ್ತದೆ ಎಂಬುದು ಒಂದು ಕಂಪನಿಯ ಆರ್ಥಿಕತೆ ವಿಷಯದಲ್ಲಿ ಆತಂಕದ ಸಂಗತಿ.

ಇದೇ ಖಾಸಗಿ ಕಂಪನಿಗಳನ್ನು ಗಮನಿಸಿ. ಹಲವು ಕಂಪನಿಗಳು ಜಾನುವಾರುಗಳನ್ನು ಸಾಕಿಕೊಂಡು ಹಾಗೂ ರೈತರಿಗೆ ಕೆಎಂಎಫ್‌ಗಿಂತ ಹೆಚ್ಚಿನ ದರದಲ್ಲಿ ಖರೀದಿಸಿಕೊಂಡು, ಕೆಎಂಎಫ್‌ನಷ್ಟು ಉತ್ತಮ ಸಾಗಣೆ ಜಾಲ ಮತ್ತು ವಾಲ್ಯೂಮ್ ಇಲ್ಲದಿದ್ದಾಗಲೂ 80-90 ರೂ. ದರದಲ್ಲಿ ಹಾಲನ್ನು ವಿತರಿಸುತ್ತಿವೆ. ಅವುಗಳ ಆಪರೇಟಿಂಗ್‌ ವೆಚ್ಚ ಬರಿ 10% ಇದೆ.

ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಕೆಎಂಎಫ್‌ನಿಂದ ರೈತರಿಗೆ ಮೋಸವಾಗುತ್ತಿದೆ. 25 ರೂ. ತಿಂದು ತೇಗುವ ಕೆಎಂಎಫ್‌ ಈ ವೆಚ್ಚವನ್ನು ಕಡಿಮೆ ಮಾಡಿಕೊಂಡು ರೈತರಿಗೆ ನೀಡಬಹುದಿತ್ತು. ಪಕ್ಕದ ತಮಿಳುನಾಡಿನಲ್ಲಿ ರೈತರಿಂದ ಹಾಲು ಖರೀದಿ ಮಾಡುವ ದರ ಹೆಚ್ಚಿದೆ. ಅಷ್ಟೇ ಯಾಕೆ, ಮೊನ್ನೆ ಮೊನ್ನೆಯಷ್ಟೇ ಅಮೂಲ್‌ ವಿಚಾರಕ್ಕೆ ಭಾರಿ ವಿರೋಧ ಮಾಡಿದರಲ್ಲ. ಅಮೂಲ್‌ 45 ರೂ.ವರೆಗೆ ರೈತರಿಗೆ ಹಣ ಕೊಟ್ಟು ಹಾಲು ಖರೀದಿ ಮಾಡುತ್ತದೆ. ಅಮೂಲ್‌ ಉತ್ಪನ್ನ ಮಾರಾಟವಾಗುವ ಒಂದು ರೂ.ಗೆ 80 ಪೈಸೆಯನ್ನು ರೈತರಿಗೆ ಕೊಡಬೇಕು ಎಂಬ ತತ್ವಕ್ಕೆ ಬದ್ಧವಾಗಿದೆ. ಇಲ್ಲಿ ಅಮೂಲ್ ಹೊಗಳುತ್ತಿಲ್ಲ. ಆದರೆ, ಯಾವುದೇ ಒಂದು ಕಂಪನಿಯ ಆಪರೇಟಿಂಗ್ ವೆಚ್ಚ 20% ಕ್ಕಿಂತ ಹೆಚ್ಚಾಯಿತು ಎಂದಾದರೆ, ಅದು ಕಳವಳಕಾರಿ ಸಂಗತಿ ಎಂಬುದಷ್ಟೇ ಹೇಳಲು ಹೊರಟ ವಿಷಯ.

ಕೆಎಂಎಫ್‌ನ ಈ ಪ್ರಮಾಣದ ಕಾರ್ಯಾಚರಣೆ ವೆಚ್ಚವನ್ನು ಗಮನಿಸಿದರೆ, ಆದಷ್ಟು ಬೇಗ ಕೆಎಂಎಫ್‌ ಅನ್ನು ಒಂದೋ ಮುಚ್ಚಬೇಕು ಅಥವಾ ಇತರ ಹಾಲು ಒಕ್ಕೂಟ ಸಂಸ್ಥೆಗಳು ರಾಜ್ಯ ಪ್ರವೇಶಿಸುವುದಕ್ಕೆ ಅವಕಾಶ ಮಾಡಿಕೊಡಬೇಕು. ಆಗ ರೈತರಿಗೆ ಇದರಿಂದ ನೆರವಾಗುತ್ತದೆ.

ಕೆಎಂಎಫ್‌ನಿಂದಾಗಿ ಸದ್ಯ ರೈತರೂ ಬಳಲುತ್ತಿದ್ದಾರೆ. ಇನ್ನೊಂದೆಡೆ, ಗ್ರಾಹಕನೂ ಬಳಲುತ್ತಿದ್ದಾನೆ.

- ಕೃಷ್ಣ ಭಟ್‌, ಫ್ರೀಲ್ಯಾನ್ಸ್ ಟ್ರಾನ್ಸ್‌ಲೇಟರ್, ಬೆಂಗಳೂರು

(ಗಮನಿಸಿ: ಈ ಲೇಖನದಲ್ಲಿರುವ ಅಂಶಗಳು ಲೇಖಕರ ವೈಯಕ್ತಿಕ ಅಭಿಪ್ರಾಯವೇ ಹೊರತು, ಹಿಂದೂಸ್ತಾನ್ ಟೈಮ್ಸ್ ಕನ್ನಡದ ಅಭಿಪ್ರಾಯವಲ್ಲ. ಮಾಹಿತಿ ದೃಷ್ಟಿಯಿಂದ ಇಲ್ಲಿ ಹಂಚಿಕೊಳ್ಳಲಾಗಿದೆ)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner