ಸುಭಾಷ್‌ ಚಂದ್ರ ಬೋಸ್‌ ವ್ಯಕ್ತಿಚಿತ್ರ: ದೇಶಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿಕಾರಿ ನಾಯಕನ ಬದುಕಿನ ಪುಟಗಳು
ಕನ್ನಡ ಸುದ್ದಿ  /  ಜೀವನಶೈಲಿ  /  ಸುಭಾಷ್‌ ಚಂದ್ರ ಬೋಸ್‌ ವ್ಯಕ್ತಿಚಿತ್ರ: ದೇಶಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿಕಾರಿ ನಾಯಕನ ಬದುಕಿನ ಪುಟಗಳು

ಸುಭಾಷ್‌ ಚಂದ್ರ ಬೋಸ್‌ ವ್ಯಕ್ತಿಚಿತ್ರ: ದೇಶಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿಕಾರಿ ನಾಯಕನ ಬದುಕಿನ ಪುಟಗಳು

ನೇತಾಜಿ ಎನ್ನುವ ಹೆಸರು ಕೇಳಿದರೇ ಅದೊಂದು ರೀತಿಯ ರೋಮಾಂಚನ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕೇಳಿಬರುವ ಪ್ರಮುಖ ಕ್ರಾಂತಿಕಾರಿ ನಾಯಕ ಸುಭಾಷ್ ಚಂದ್ರ ಬೋಸ್, ಇಂದಿಗೂ ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಸುಭಾಷ್ ಅವರ ಜೀವನ ಆಧರಿಸಿ ಹಲವು ಸಿನಿಮಾ, ಪುಸ್ತಕಗಳು ಪ್ರಕಟಗೊಂಡಿವೆ.

ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿರುವ ನೇತಾಜಿ ಸುಭಾಷ್ ಚಂದ್ರ ಬೋಸ್
ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ (Ashok Munjani)

ಸುಭಾಷ್ ಚಂದ್ರ ಬೋಸ್.. ಹೆಸರಿನಲ್ಲಿಯೇ ಒಂದು ಆಕರ್ಷಣೆ ಮಾತ್ರವಲ್ಲ, ವಿಶೇಷತೆಯನ್ನು ಹೊಂದಿರುವ ವ್ಯಕ್ತಿತ್ವ. ಭಾರತೀಯರಲ್ಲಿ ಸ್ವಾಭಿಮಾನ, ಸ್ವಾತಂತ್ರ್ಯದ ಕಿಚ್ಚು ಹೆಚ್ಚಾಗಲು ಕಾರಣವಾದ ಓರ್ವ ಅಪ್ರತಿಮ ದೇಶಪ್ರೇಮಿ. ಜನವರಿ 23, 1897ರಂದು ಒಡಿಶಾದ ಕಟಕ್‌ನಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಜನನವಾಯಿತು. ಬೋಸ್ ಅವರನ್ನು ಭಾರತೀಯರು ಪ್ರೀತಿಯಿಂದ ನೇತಾಜಿ ಎಂದು ಕರೆಯುತ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಬೋಸ್ ಕೈಗೊಂಡ ಕ್ರಾಂತಿಕಾರಿ ನಿರ್ಧಾರಗಳಿಂದಾಗಿ ಇಂದಿಗೂ ಅವರ ಕೊಡುಗೆಯನ್ನು ದೇಶವಾಸಿಗಳು ಸ್ಮರಿಸುತ್ತಾರೆ. ನೇತಾಜಿ ಅವರ ಜೀವನ ಚಿತ್ರಣ ಇಲ್ಲಿದೆ. 

ಇಂಗ್ಲೆಂಡ್‌ನಲ್ಲಿ ಉನ್ನತ ಶಿಕ್ಷಣ

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಇಂಗ್ಲೆಂಡ್‌ನಲ್ಲಿ 1920ರಲ್ಲಿ ಐಸಿಎಸ್ ಪದವಿ ಪಡೆದು ಅಲ್ಲಿ ನೌಕರಿ ಲಭ್ಯವಾದರೂ, ಅದನ್ನು ತಿರಸ್ಕರಿಸಿ ಭಾರತಕ್ಕೆ ಮರಳಿದರು.

ಆರು ತಿಂಗಳು ಜೈಲಿನಲ್ಲಿ..

ನಂತರ ಚಿತ್ತರಂಜನ್ ದಾಸ್ ಅವರ ಸೂಚನೆಯಂತೆ ದೇಶದಲ್ಲಿ ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಯುವಕರನ್ನು ಸಂಘಟಿಸಿ, ತಮ್ಮದೇ ಪಡೆ ರೂಪಿಸಿಕೊಂಡು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಅವರಿಗೆ ಬ್ರಿಟಿಷರು ಆರು ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದರು.

ನನಗೆ ರಕ್ತವನ್ನು ಕೊಡಿ, ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ

ಸ್ವಾತಂತ್ರ್ಯ ಪಡೆಯಬೇಕಾದರೆ ಅಹಿಂಸಾ ಮಾರ್ಗದಿಂದ ಪ್ರಯೋಜನವಿಲ್ಲ. ಬ್ರಿಟಿಷರನ್ನು ಭಾರತದ ಓಡಿಸಲು, ಸ್ವಾತಂತ್ರ್ಯ ಗಳಿಸಲು ಕ್ರಾಂತಿಕಾರಿ ಮಾರ್ಗವೇ ದಾರಿ ಎಂದು ಕಂಡುಕೊಂಡಿದ್ದರು. ಅದಕ್ಕಾಗಿ ಸಮಾನಮನಸ್ಕ ಯುವಕರ ಸಂ‌ಘಟನೆಯನ್ನು ಬೋಸ್ ರೂಪಿಸಿದ್ದರು. ಇದೇ ಸಂದರ್ಭದಲ್ಲಿ ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ್ಯ ಹೋರಾಟ ಕೈಗೊಂಡಿದ್ದ ಗಾಂಧೀಜಿಯವರ ಬೋಸ್ ಭಿನ್ನಾಭಿಪ್ರಾಯ ಹೊಂದುವಂತಾಯಿತು. ಹೀಗಾಗಿ ಬೋಸ್ ಅವರು ಯುವಕರಲ್ಲಿ ನನಗೆ ರಕ್ತವನ್ನು ಕೊಡಿ, ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂದು ಕೇಳಿಕೊಂಡರು. ಬೋಸ್ ಅವರ ಕರೆಗೆ ಓಗೊಟ್ಟು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಅವರೊಡನೆ ಕೈಜೋಡಿಸಿದರು.

ಬ್ರಿಟಿಷರಿಗೆ ತಲೆನೋವಾಗಿದ್ದ ಬೋಸ್

ಬೋಸ್ ಅವರ ಕ್ರಾಂತಿಯ ಹೋರಾಟ ಬ್ರಿಟಿಷರಿಗೆ ನಿಜಕ್ಕೂ ದೊಡ್ಡ ಸಮಸ್ಯೆಯಾಗಿತ್ತು. ಭಾರತೀಯರು ನಮ್ಮ ಮಾತು ಕೇಳುತ್ತಾರೆ. ಪ್ರತಿಭಟಿಸುವುದಿಲ್ಲ ಎಂದುಕೊಂಡಿದ್ದ ಅವರಿಗೆ, ಬೋಸ್ ಅವರ ವಿವಿಧ ರೀತಿಯ ಸ್ವಾತಂತ್ರ್ಯ ಚಳುವಳಿಯನ್ನು ಕಂಡು ಕಂಗಾಲಾದರು. ಹೀಗಾಗಿ ಹಲವು ಬಾರಿ ಬ್ರಿಟಿಷರಿಂದ ಎಚ್ಚರಿಕೆಯನ್ನು ಪಡೆದುಕೊಂಡಿದ್ದ ಬೋಸ್, 1925ರಿಂದ 1927ರವರೆಗೆ ಜೈಲಿನಲ್ಲಿ ಕಳೆಯುವಂತಾಯಿತು. 

ಇಂಡಿಯನ್ ನ್ಯಾಷನಲ್ ಆರ್ಮಿ

ಕ್ರಾಂತಿಕಾರಿ ಹೋರಾಟಕ್ಕೆ ಮುನ್ನುಡಿಯಿರಿಸಿದ್ದ ಬೋಸ್ ಅವರಿಗೆ ಯುವಕರು ದೊಡ್ಡ ಸಂಖ್ಯೆಯಲ್ಲಿ ಬೆಂಬಲ ನೀಡಿದರು. ಹೀಗಾಗಿ ಅವರಿಗೆ ಸೂಕ್ತ ರೀತಿಯ ಸೇನಾ ತರಬೇತಿ ನೀಡಲು ಮತ್ತು ವ್ಯವಸ್ಥಿತ ರೀತಿಯ ಹೋರಾಟ ಕೈಗೊಳ್ಳಲು ಬೋಸ್ ಅವರು ಇಂಡಿಯನ್ ನ್ಯಾಷನಲ್ ಆರ್ಮಿ ಅಂದರೆ ಐಎನ್‌ಎ ಸ್ಥಾಪಿಸಿದರು. ಸೇನೆಗಾಗಿ ಬೋಸ್ ಅವರು ಜರ್ಮನಿಗೆ ತೆರಳಿ ಹಿಟ್ಲರ್ ಸಹಾಯವನ್ನು ಪಡೆದಿದ್ದರು. ನಂತರ ಜಪಾನ್‌ನಲ್ಲಿ ಸೈನಿಕರಿಗೆ ತರಬೇತಿಯನ್ನೂ ನೀಡಿದ್ದರು.

ವಿಮಾನ ಅಪಘಾತದಲ್ಲಿ ಮರಣ

ಅಪ್ರತಿಮ ದೇಶಪ್ರೇಮಿ ಮತ್ತು ಕ್ರಾಂತಿಕಾರಿ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಮಟ್ಟಹಾಕಲು ಬ್ರಿಟಿಷರು ಸತತ ಪ್ರಯತ್ನ ನಡೆಸುತ್ತಲೇ ಇದ್ದರು. ಬೋಸ್ ಅವರು 1945ರಲ್ಲಿ ನಡೆದ ವಿಮಾನ ಅಪಘಾತದಲ್ಲಿ ನಿಧನರಾದರು ಎಂದು ಹೇಳಲಾಗಿದೆ. ಆದರೆ ಬೋಸ್ ಅವರ ಸಾವಿನ ಕುರಿತು ಹಲವು ಕಥೆಗಳು ಕೇಳಿಬಂದವು. ಬೋಸ್ ಅವರ ಕಣ್ಮರೆ ಬಗ್ಗೆ ಇಂದಿಗೂ ಹಲವು ಅನುಮಾನಗಳಿವೆ. ಬೋಸ್ ಅವರ ಹೋರಾಟ, ದೇಶಪ್ರೇಮದಿಂದಾಗಿ ಇಂದಿಗೂ ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.

Whats_app_banner