New Year Resolution: ಹೊಸ ವರ್ಷದ ನಿರ್ಣಯಗಳಿಗೆ ಬದ್ಧರಾಗಿ ಉಳಿಯುವುದು ಹೇಗೆ? ಈ ಟಿಪ್ಸ್ ಫಾಲೋ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  New Year Resolution: ಹೊಸ ವರ್ಷದ ನಿರ್ಣಯಗಳಿಗೆ ಬದ್ಧರಾಗಿ ಉಳಿಯುವುದು ಹೇಗೆ? ಈ ಟಿಪ್ಸ್ ಫಾಲೋ ಮಾಡಿ

New Year Resolution: ಹೊಸ ವರ್ಷದ ನಿರ್ಣಯಗಳಿಗೆ ಬದ್ಧರಾಗಿ ಉಳಿಯುವುದು ಹೇಗೆ? ಈ ಟಿಪ್ಸ್ ಫಾಲೋ ಮಾಡಿ

New Year 2024 Resolutions: ಹೊಸ ವರ್ಷಕ್ಕೆ ಹೊಸ ಸಂಕಲ್ಪಗಳನ್ನು ತೊಡುವ ಪ್ಲಾನ್​ನಲ್ಲಿದ್ದೀರೇ? ಪ್ರತಿ ವರ್ಷದಂತೆ ಈ ವರ್ಷದ ರೆಸಲ್ಯೂಷನ್​ಗೆ ಕೂಡ ಹೆಚ್ಚು ದಿನಗಳ ಆಯುಷ್ಯವಿಲ್ಲ ಎಂಬ ಬೇಜಾರು ಇದೆಯೇ? ಹಾಗಾದಲ್ಲಿ ಹೊಸ ವರ್ಷದ ನಿರ್ಣಯಗಳಿಗೆ ಬದ್ಧರಾಗಿ ಉಳಿಯಲು ನೀವು ಈ ಕೆಳಗೆ ನೀಡಲಾದ ಕೆಲವು ಸಲಹೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಹೊಸ ವರ್ಷದ ನಿರ್ಣಯ (ಪ್ರಾತಿನಿಧಿಕ ಚಿತ್ರ/istockphoto)
ಹೊಸ ವರ್ಷದ ನಿರ್ಣಯ (ಪ್ರಾತಿನಿಧಿಕ ಚಿತ್ರ/istockphoto)

ಹೊಸ ವರ್ಷ ಸಮೀಪಿಸಲು ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಹೊಸ ವರ್ಷ ಬರುತ್ತಿದೆ ಎಂದಾಕ್ಷಣ ಅನೇಕರು ನ್ಯೂ ಯಿಯರ್​ ರೆಸಲ್ಯೂಷನ್​ ಅಂತಾ ಶುರುಮಾಡಿಕೊಳ್ಳುತ್ತಾರೆ. ಅಂದರೆ ಈ ಇಡೀ ವರ್ಷ ನಾನು ಈ ಕೆಲಸಗಳನ್ನು ಮಾಡುವುದಿಲ್ಲ. ಈ ರೀತಿ ಬದಲಾಗುತ್ತೇನೆ. ಒಳ್ಳೆಯ ಕೆಲಸಗಳನ್ನೇ ಮಾಡುತ್ತೇನೆ. ಹೀಗೆ ನಾನಾ ರೀತಿಯ ಷರತ್ತುಗಳನ್ನು ತಮಗೆ ತಾವೇ ವಿಧಿಸಿಕೊಳ್ಳುತ್ತಾರೆ. ಇನ್ನೂ ಅನೇಕರು ಈ ವರ್ಷ ತಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸಿಯೇ ತೀರುತ್ತೇವೆ ಎಂಬ ಷರತ್ತನ್ನು ಹಾಕಿಕೊಳ್ಳುತ್ತಾರೆ.

ಜೀವನದಲ್ಲಿ ಗುರಿ ಇರಬೇಕು ಅದು ಒಳ್ಳೆಯದೇ. ಆದರೆ ನಿಮಗೂ ಒಂದು ಗುರಿಯಿತ್ತು ಎನ್ನುವುದು ಮರೆತು ಹೋಗುವಂತೆ ಇರಬಾರದು. ಅನೇಕರು ಹೊಸ ವರ್ಷಕ್ಕೆ ವಿವಿಧ ಷರತ್ತುಗಳನ್ನು ತಮಗೆ ತಾವೇ ಹಾಕಿಕೊಂಡು ಫೆಬ್ರವರಿ ಬರುತ್ತಿದ್ದಂತೆಯೇ ಅದನ್ನು ಮರೆತುಬಿಡುತ್ತಾರೆ. ಹೀಗಾಗಿ ಅವರ ಹೊಸ ವರ್ಷದ ಸಂಕಲ್ಪಗಳು ಅಲ್ಲಿಗೇ ಠುಸ್​ ಆಗಿ ಬಿಡಬಹುದು. ನೀವು ಇದೇ ಸಾಲಿಗೆ ಸೇರಿದವರಾಗಿದ್ದರೆ ನಿಮ್ಮ ಹೊಸ ವರ್ಷದ ಸಂಕಲ್ಪಗಳು ಹೇಗೆ ವರ್ಷದ ಕೊನೆಯವರೆಗೂ ಮುಂದುವರಿಯಬೇಕು, ಹೊಸ ವರ್ಷದ ನಿರ್ಣಯಗಳಿಗೆ ಬದ್ಧರಾಗಿ ಉಳಿಯುವುದು ಹೇಗೆ ಎನ್ನುವುದಕ್ಕೆ ಇಲ್ಲಿ ಕೆಲವೊಂದು ಸಲಹೆಗಳನ್ನು ನೀಡಿದ್ದೇವೆ.

ಸಣ್ಣ ಗುರಿಗಳಿಂದ ನಿಮ್ಮ ಸಂಕಲ್ಪಗಳು ಆರಂಭಗೊಳ್ಳಲಿ : ನಿಮ್ಮಿಂದ ಯಾವುದು ಸಾಧ್ಯವೋ ಅಂತಹ ಗುರಿಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು. ನಿಮ್ಮ ಸಾಮರ್ಥ್ಯ, ನಿಮ್ಮ ಅರ್ಹತೆ ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ನ್ಯೂ ಯಿಯರ್​ ರೆಸಲ್ಯೂಷನ್​ ಇಟ್ಟುಕೊಳ್ಳಬೇಕು. ಸುಮ್ಮನೇ ಮನೆಯಲ್ಲಿ ಕುಳಿತು ಈ ಬಾರಿ ನಾನು ಒಲಂಪಿಕ್​ನಲ್ಲಿ ಪದಕ ಗೆಲ್ಲುತ್ತೇನೆ ಎಂದುಕೊಳ್ಳುವುದು ಹೊಸ ವರ್ಷದ ಸಂಕಲ್ಪವಲ್ಲ. ನಿಮ್ಮ ಸಾಮರ್ಥ್ಯ ಏನು ಎನ್ನುವುದು ನಿಮಗೆ ಚೆನ್ನಾಗಿ ತಿಳಿದಿರುತ್ತದೆ. ಅದೇ ರೀತಿ ನಿಮ್ಮ ಸಂಕಲ್ಪ ಕೂಡ ಇರಲಿ.

ನಿಮ್ಮ ಸಂಕಲ್ಪಕ್ಕೆ ತಕ್ಕಂತೆ ನಿಮ್ಮ ಪ್ಲಾನ್ ಇರಲಿ : ಉದಾಹರಣೆ ನೀವು ಈ ವರ್ಷ ತೂಕ ಇಳಿಕೆ ಮಾಡಿಕೊಳ್ಳಬೇಕು ಎಂಬ ಸಂಕಲ್ಪ ಮಾಡಿದ್ದೀರಿ ಎಂದುಕೊಳ್ಳೋಣ. ಈಗ ನೀವು ನಿಮ್ಮ ದಿನಚರಿಯಲ್ಲಿ ವ್ಯಾಯಾಮವನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ಪ್ಲಾನ್​ ಮಾಡಬೇಕು. ದಿನಕ್ಕೆ ಮೂವತ್ತು ನಿಮಿಷಗಳನ್ನು ನೀವು ವ್ಯಾಯಾಮಕ್ಕೆಂದು ತೆಗೆದಿಡಬೇಕು. ಈ ರೀತಿ ಸರಿಯಾಗಿ ಪ್ಲಾನ್​ ಮಾಡಿಕೊಳ್ಳುವ ಮೂಲಕ ನಿಮ್ಮ ಗುರಿ ತಲುಪಲು ಸಾಧ್ಯವಿದೆ.

ನಿಮ್ಮ ಸಂಕಲ್ಪಗಳಿಗೆ ನೀವು ಪ್ರಾಮಾಣಿಕರಾಗಿರಬೇಕು : ನೀವು ಕೆಲವೊಂದು ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಬಗ್ಗೆ ಸಂಕಲ್ಪ ತೊಟ್ಟಾಗ ಖಂಡಿತವಾಗಿಯೂ ನೀವು ನಿಮ್ಮ ಜೀವನದಲ್ಲಿ ಕೆಲವೊಂದು ಮಹತ್ವದ ಬದಲಾವಣೆಯನ್ನು ಮಾಡಿಕೊಳ್ಳಬೇಕು. ಹೀಗಿ ಮೊದಲು ನೀವು ನಿಮಗೆ ಪ್ರಾಮಾಣಿಕರಾಗಿ ಇರಬೇಕು. ನಿಮ್ಮ ಸಂಕಲ್ಪಗಳಿಗೆ ನೀವೇ ಮೋಸ ಮಾಡಬಾರದು.

ನಿಮಗೆ ನೀವೇ ಶಪಥ ತೊಟ್ಟುಕೊಳ್ಳಿ : ನಿಮ್ಮ ರೆಸಲ್ಯೂಷನ್​ ಗುರಿಯನ್ನು ನೀವು ತಲುಪಬೇಕು ಎಂದರೆ ನಿಮಗೆ ನೀವು ಶಪಥ ಹಾಕಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಯಾವುದೇ ತಿಂಗಳಲ್ಲಿಯೂ ನಾನು ನನ್ನ ರೆಸಲ್ಯೂಷನ್​ಗಳಿಗೆ ಭಂಗ ತರುವುದಿಲ್ಲ ಎಂಬ ಆತ್ಮವಿಶ್ವಾಸ ಮೊದಲು ನಿಮಗೆ ಇರಬೇಕು. ಆಗ ಮಾತ್ರ ನೀವು ಅಂದುಕೊಂಡ ಗುರಿಯನ್ನು ಸಾಧಿಸಲು ಸಾಧ್ಯವಿದೆ.

ಧನಾತ್ಮಕ ಚಿಂತನೆಯಿರಲಿ : ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಖಂಡಿತವಾಗಿಯೂ ಹೇಳಿದಷ್ಟು ಸುಲಭವಲ್ಲ. ಹೀಗಾಗಿ ನೀವು ಸದಾ ಕಾಲ ಧನಾತ್ಮಕವಾಗಿಯೇ ಯೋಚನೆ ಮಾಡಬೇಕು. ಒಂದೆರಡು ತಿಂಗಳಿಗೆ ಯಾರಿಗೂ ಅವರ ಸಂಕಲ್ಪದ ಗುರಿ ಮುಟ್ಟಲು ಸಾಧ್ಯವಿಲ್ಲ. ಹೀಗಾಗಿ ಋಣಾತ್ಮಕ ಯೋಚನೆಯನ್ನು ಮೊದಲು ತಲೆಯಿಂದ ತೆಗೆದು ಹಾಕಬೇಕು. ನೀವು ತಾಳ್ಮೆ ಕಾಯ್ದುಕೊಂಡರೆ ನೀವೆಂದುಕೊಂಡ ಗುರಿಯನ್ನು ನೀವು ಖಂಡಿತ ಸಾಧಿಸಲಿದ್ದೀರಿ.

Whats_app_banner