2023 Recap: ಅಳಿಯ ಹುಟ್ಟಿದ ಖುಷಿ, ಮಾತಂಗ ಬೆಟ್ಟ ಹತ್ತಿದ ಸಂಭ್ರಮ; 2023ರ ಪಯಣ ಮೆಲುಕು ಹಾಕಿದಾಗ ಕಂಡ ಬೆಸ್ಟ್ ಸಂಗತಿಗಳಿವು
2023ರ ಎಂಬ ಆತ್ಮೀಯ ಗೆಳೆಯನಿಗೆ ಬೀಳ್ಕೊಡುವ ಹೊತ್ತು. ಹೊಸ ವರ್ಷದಲ್ಲಿ ಹೊಸ ನಿರೀಕ್ಷೆಗಳು ಇರುವುದು ಸಹಜ. ಆದರೆ ಹಳೆಯ ಗೆಳೆಯನನ್ನು ಮರೆಯಬಾರ್ದು ಅಲ್ವಾ, ಹೊಸ ವರ್ಷವನ್ನು ಸ್ವಾಗತಿಸುವ ಈ ಹೊತ್ತಿನಲ್ಲಿ 2023ರ ಎಂಬ ಮನಸ್ಸಿಗೆ ಹತ್ತಿರವಾದ ಆತ್ಮೀಯ ಗೆಳೆಯನೊಂದಿಗೆ ಹೆಜ್ಜೆ ಹಾಕಿದಾಗ ಬದುಕಿನಲ್ಲಿ ಎದುರಾದ ಬೆಸ್ಟ್ ಸಂಗತಿಗಳ ಮೆಲುಕು ಇಲ್ಲಿದೆ.
ಯಾಕೋ ಮನಸ್ಸಿಗೆ ಒಂಥರಾ ಖೇದವಾಗುತ್ತಿದೆ. ಏನೋ ಅರಿಯದ ಬೇಜಾರು, ನೋವು. ಏನನ್ನೋ ಕಳೆದುಕೊಳ್ಳುತ್ತಿದ್ದೇನೆ ಎಂಬ ಭಾವ. ನನ್ನ ಬೇಜಾರಿಗೆ ಕಾರಣ ಖಂಡಿತ ಇದೆ. 2023 ಎಂಬ ಆತ್ಮೀಯ ಗೆಳೆಯ ನಾಳೆ ಎನ್ನುವಷ್ಟರಲ್ಲಿ ನನ್ನ ಬದುಕಿನಿಂದ ದೂರಾಗಿರುತ್ತಾನೆ. ನಾಳೆ ಬೆಳಗಾಗುವಷ್ಟರಲ್ಲಿ ಅವನ ಹೆಸರು ಕೂಡ ಅಳಿಸಿ ಹೋಗಿರುತ್ತದೆ. ಕಳೆದೊಂದು ವರ್ಷದಿಂದ ನನ್ನೊಡನೆ ಸುಖ ದುಃಖದಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ್ದ ಗೆಳೆಯನಿಗೆ ವಿದಾಯ ಹೇಳಲು ಮನಸ್ಸಿಗೆ ಖಂಡಿತ ಭಾರವಾಗುತ್ತಿದೆ.
ವರ್ಷದ ಆರಂಭದಿಂದಲೂ ʼನಿನ್ನೊಂದಿಗೆ ಯಾರಿಲ್ಲ ಎಂದರೂ ನಾನಿರುತ್ತೇನೆʼ ಎಂಬ ಭರವಸೆಯ ಭಾವ ಮೂಡಿಸಿದ್ದ ಗೆಳೆಯನಿವನು. ಪ್ರತಿದಿನ ರಾತ್ರಿ ಮಲಗುವಾಗ ನಾಳೆಯೆಂಬ ಆಶಾವಾದದ ಬಗ್ಗೆ ಕನಸು ಬಿತ್ತಿದವನು. 2023 ಎಂಬ ಈ ಒಲವಿನ ಗೆಳೆಯನೊಂದಿಗಿನ ಪಯಣದಲ್ಲಿ ಹಲವು ಸಂಭ್ರಮಗಳು ಜೊತೆಯಾದರೂ ಒಂದಿಷ್ಟು ನೋವುಗಳು ಸೇರಿಕೊಂಡಿದ್ದವು. ಆದರೆ ನಾನು ನೋವುಗಳನ್ನು ಹೆಚ್ಚು ಕಾಲ ಜೊತೆ ಇರಿಸಿದಂತೆ ಮತ್ತೊಂದು ಹೊಸ ದಿನವನ್ನು ಸೃಷ್ಟಿಸುವ ಮಾಂತ್ರಿಕ ಶಕ್ತಿ ಇದ್ದ ಈ ಗೆಳೆಯ ಅದನ್ನು ಹೆಚ್ಚು ಕಾಲ ಅನುಭವಿಸದಂತೆ ಮಾಡುತ್ತಿದ್ದ. ಹೀಗೆ ನನ್ನ ಗೆಳೆಯನ ಬಗ್ಗೆ ಹೇಳುತ್ತಾ ಹೋದರೆ ಪುಟಗಟ್ಟಲೆ ಬರೆಯಬೇಕಾಗುತ್ತದೆ. ಈಗ ಬೇಡವೆಂದರೂ ನನ್ನಿಂದ ದೂರಾಗುತ್ತಿರುವ ಈ ಗೆಳೆಯನಿಗೆ ಬೀಳ್ಗೊಡುವ ಸಂದರ್ಭ ಎದುರಾಗಿದೆ. ಇದು ಅನಿವಾರ್ಯ ಕೂಡ.
ನಾಳೆ 2024 ಎಂಬ ಹೊಸ ಗೆಳೆಯನ ಆಗಮನವಾಗುತ್ತದೆ. ಮತ್ತೆ ಇನ್ನೊಂದು ವರ್ಷ ಹೊಸ ಗೆಳೆಯನೊಂದಿಗೆ ಸಾಗಬೇಕಿರುವುದು ಅನಿವಾರ್ಯ. ಈ ಹೊತ್ತಿನಲ್ಲಿ 2023ರ ಗೆಳೆಯ ನನಗೆ ನೀಡಿದ ಕೆಲವು ಬೆಸ್ಟ್ ಸಂಗತಿಗಳನ್ನು ಇಲ್ಲಿ ನೆನೆಯಬೇಕು ಅನ್ನಿಸುತ್ತಿದೆ. ಆ ಮೂಲಕ ಈ ಗೆಳೆಯನಿಗೆ ಬೀಳ್ಕೊಡುಗೆ ನೀಡಬೇಕಿದೆ. ಹಾಗಿದ್ರೆ ಬನ್ನಿ 2023ರಲ್ಲಿ ನನ್ನ ಬದುಕಿನ ನಡೆದ ಬೆಸ್ಟ್ ಸಂಗತಿಗಳನ್ನು ತಿಳಿಸುತ್ತೇನೆ. ಹಾಗೇ ನಿನ್ನ ಬದುಕಿನಲ್ಲೂ ಏನೆಲ್ಲಾ ಸಂಗತಿಗಳು ನಡೆದವು, ಯಾವುದೆಲ್ಲಾ ಬೆಸ್ಟ್ ಎನ್ನಿಸಿದವು ಎಂಬುದನ್ನ ಒಮ್ಮೆ ಮೆಲುಕು ಹಾಕಿದ್ದೇನೆ.
1) ಡಿಜಿಟಲ್ ಮೀಡಿಯಾ ಪ್ರವೇಶಿಸಿದ ವರ್ಷ: ಪತ್ರಿಕೋದ್ಯಮವನ್ನೇ ಕನಸಾಗಿಸಿಕೊಂಡು ಬಂದ ನಾನು ಕಾಲೇಜು ಮುಗಿದ ಬಳಿಕ ನೇರವಾಗಿ ಸೇರಿದ್ದು ರಾಜ್ಯದ ಖ್ಯಾತ ದಿನಪತ್ರಿಕೆ ಪ್ರಜಾವಾಣಿಗೆ. ಸುಮಾರು 10 ವರ್ಷಗಳ ಕಾಲ ಪತ್ರಿಕೆಯಲ್ಲಿ ಕೆಲಸ ಮಾಡಿದ್ದ ನಾನು ಡಿಜಿಟಲ್ ಪತ್ರಿಕೋದ್ಯಮಕ್ಕೆ ಬರುತ್ತೇನೆ ಎಂದುಕೊಂಡವಳಲ್ಲ. ಆದರೆ 2023 ಎಂಬ ನನ್ನ ಆತ್ಮೀಯ ಗೆಳೆಯ ಖಂಡಿತ ಡಿಜಿಟಲ್ ಪತ್ರಿಕೋದ್ಯಮದಲ್ಲಿ ನೀನು ಕೆಲಸ ಮಾಡಬಲ್ಲೇ ಎಂಬುದನ್ನು ತೋರಿಸಿದ್ದ. ಹೀಗೆ ಜನವರಿ ತಿಂಗಳಲ್ಲಿ ನಾನು ಡಿಜಿಟಲ್ ಪತ್ರಿಕೋದ್ಯಮಕ್ಕೆ ಕಾಲಿಡುತ್ತೇನೆ. ಸದ್ಯ ಎಚ್‌ಟಿ (ಹಿಂದೂಸ್ತಾನ್ ಟೈಮ್ಸ್) ಕನ್ನಡದಲ್ಲಿ ಕೆಲಸ ಮಾಡುತ್ತಾ ಡಿಜಿಟಲ್ ಮಾಧ್ಯಮದ ಹೊರ ಹೊರಗು ಅರಿಯುತ್ತಾ ಸಾಗುತ್ತಿದ್ದೇನೆ.
2) ಬಹುವಾಗಿ ಕಾಡಿದ ʼಬೇಬಿʼ ಸಿನಿಮಾ: 2023ನೇ ವರ್ಷದಲ್ಲಿ ಅದ್ಯಾಕೋ ಕಾಣೆ, ಅತಿಯಾಗಿ ಕಾಡುವಂತೆ ಮಾಡಿದ ಸಿನಿಮಾ 'ಬೇಬಿʼ. ನಂದೇನು ಈಗ ಕಾಲೇಜಿನ ವಯಸ್ಸಲ್ಲ, ಆದರೂ ಈ ಸಿನಿಮಾ ಮನಸ್ಸಿಗೆ ಬಹಳ ಇಷ್ಟವಾಗಿತ್ತು. ಕಾಲೇಜು ಪ್ರೇಮಕಥೆ ಹೊಂದಿರುವ ಆ ಚಿತ್ರ 2023 ಎಂಬ ಗೆಳೆಯನೊಂದಿಗೆ ನೋಡಿದ ಬೆಸ್ಟ್ ಸಿನಿಮಾ ಆಗಿರುವುದಂತೂ ಸುಳ್ಳಲ್ಲ.
3) ಆತ್ಮೀಯ ಗೆಳೆಯ ಬದುಕಿಗೆ ಮರುಳಿದ ವರ್ಷ: ಆನ್‌ಲೈನ್ ಫ್ರೆಂಡ್‌ಶಿಪ್, ಲವ್ ಬಗ್ಗೆ ಹಲವರಿಗೆ ನಂಬಿಕೆ ಇಲ್ಲದೇ ಇರುವುದು ನಿಜ. ಯಾಕೆಂದರೆ ಇದರಲ್ಲಿ ಶೇ 80 ಫೇಕ್ ಇರುತ್ತೆ ಅನ್ನೋದು ಜನರ ನಂಬಿಕೆ. ಆದರೆ ನನ್ನ ಮನಸ್ಸಿನಲ್ಲಿ ಈ ಕಲ್ಪನೆಯನ್ನು ಸುಳ್ಳಾಗಿಸಿದ್ದು 2023 ಎಂಬ ಈ ಗೆಳೆಯ, ಅದಕ್ಕೆ ಕಾರಣವೂ ಇದೆ. 2014ರಲ್ಲಿ ಫೇಸ್‌ಬುಕ್ ಮೂಲಕ ಫ್ರೆಂಡ್ ಆದ ಗೆಳೆಯನೊಬ್ಬನ ಜೊತೆ ಕಾರಣವೇ ಇಲ್ಲದೆ ಸಂಪರ್ಕ ಕಳೆದುಕೊಂಡಿದ್ದೆ. ಆದರೆ ಈ ವರ್ಷ ಅವನು ಮತ್ತೆ ನನ್ನ ಜೀವನಕ್ಕೆ ಮರಳಿದ್ದಾನೆ. ಹಿಂದಿನಂತೆಯೇ ನನ್ನ ಬದುಕಿನ ಎಲ್ಲಾ ನೋವು, ದುಃಖಗಳಿಗೆ ಸಾಂತ್ವನವಾಗಿದ್ದಾನೆ. ಇದ್ದರೆ ಇಂತಹ ಫ್ರೆಂಡ್ ಇರಬೇಕು ಎನ್ನುವ ಭಾವ ಮೂಡಿಸಿದ್ದು ಆ ನನ್ನ ಸ್ನೇಹಿತ. ಅವನು ಬದುಕಿಗೆ ಮರುಳುವಂತೆ ಮಾಡಿದ್ದು ಮಾತ್ರ 2023 ಎಂಬ ಈ ಗೆಳೆಯ.
4) ಅಳಿಯ ಬಂದ ವರ್ಷ: ವೈಯಕ್ತಿಕವಾಗಿ ನಂಗೆ ಮಕ್ಕಳು, ಮದುವೆ, ಸಂಸಾರದ ಮೇಲೆ ಒಲವು ಕಡಿಮೆ. ಆದರೂ ನನ್ನ ಕುಟುಂಬವೇ ನನ್ನ ಸರ್ವಸ್ವ. ಮೊದಲಿನಿಂದಲೂ ಹೆಣ್ಣುಮಕ್ಕಳು ಅಂದ್ರೆ ಇಷ್ಟ. ಅವರು ಮುದ್ದಾಗಿ ಡ್ರೆಸ್ ಮಾಡಿಕೊಂಡು ನಲಿದಾಡುವುದು ನೋಡುವುದೇ ಖುಷಿ. ಇದಕ್ಕಾಗಿಯೇ ಏನೋ ದೇವರು ನನಗೆ ಸಾಲಾಗಿ 4 ಮಂದಿ ಸೊಸೆಯಂದಿರನ್ನು ನೀಡಿದ್ದ. ನಾನೇನು ದೇವರ ಬಳಿ ಅಳಿಯ ಬೇಕು ಎಂದಿರಲಿಲ್ಲ. ಆದರೆ ದೇವರಿಗೆ ಅನ್ನಿಸಿತೋ ಏನೋ ಅಥವಾ 2023ರ ಗೆಳೆಯನ ಪವಾಡವೇನೋ, ಇತ್ತೀಚೆಗೆ ಅಳಿಯ ಹುಟ್ಟಿದ. ಅವನು ನೋಡಿದ ಮೇಲೆ ಇದೇ ನನ್ನ ಬದುಕಿನ ಬೆಸ್ಟ್ ಥಿಂಗ್ ಅನ್ನಿಸಲು ಶುರುವಾಗಿತ್ತು.
5) ಸುದ್ದಿ, ವ್ಯವಹಾರ ಪತ್ರಿಕೋದ್ಯಮದ ಬರವಣಿಗೆ ಆರಂಭಿಸಿದ ವರ್ಷ: ಪತ್ರಿಕೋದ್ಯಮದ ಆರಂಭದ ದಿನಗಳಿಂದಲೂ ಫೀಚರ್ ರೈಟಿಂಗ್ ಮೇಲೆ ನನ್ನ ಗಮನ ಇದಿದ್ದೇ ಹೆಚ್ಚು. ದಿನಪತ್ರಿಕೆಯಲ್ಲಿ ಕೆಲಸ ಮಾಡುವಾಗಲೂ ನಾನು ಗಮನಹರಿಸಿದ್ದು ಲೈಫ್‌ಸ್ಟೈಲ್, ಫೀಚರ್ ಸ್ಟೋರಿಗಳ ಮೇಲೆಯೇ. ನ್ಯೂಸ್, ಎಲೆಕ್ಷನ್, ಬ್ಯುಸಿನೆಸ್ ನ್ಯೂಸ್ ಇವುಗಳ ಬಗ್ಗೆ ಪರಿಕಲ್ಪನೆಯು ಇಲ್ಲದ ನಾನು ಈ ಬಾರಿ ಎಲೆಕ್ಷನ್ ಕವರೇಜ್‌ಗೆ ನನ್ನ ತಂಡದ ಜೊತೆಯಾಗಿದ್ದೆ ಎನ್ನುವುದು ನಿಜಕ್ಕೂ ಆಶ್ಚರ್ಯ ತರುತ್ತಿದೆ. 2023 ಎಂಬ ಈ ಗೆಳೆಯ ಏನೋ ಹೊಸತನ್ನು ಕಲಿಸಿದ್ದ. ಇದು ಸಾಮಾನ್ಯ ವಿಷಯವಾದರೂ ಬದುಕಿನಲ್ಲಿ ಏನೋ ಹೊಸತನ್ನು ಕಲಿತ ಖುಷಿ ಖಂಡಿತ ಇದೆ.
6) ಕೋರ್ಟ್ ಕಟಕಟೆಯಲ್ಲಿ ನಿಂತು ಮಾತನಾಡಿದ ವರ್ಷ: ಬದುಕಿನಲ್ಲಿ ನಾನು ಕೋರ್ಟ್ ಹೇಗಿರುತ್ತದೆ ಎಂಬುದನ್ನು ಸಿನಿಮಾಗಳಲ್ಲಿ ನೋಡಿ ಊಹಿಸಿದ್ದೆ ಬಿಟ್ಟರೆ ನನಗೆ ಸ್ವಂತ ಅನುಭವಾಗಿದ್ದು ಕಳೆದ ಎರಡು ವರ್ಷಗಳಿಂದ. ಕೋರ್ಟ್‌ಗೆ ಹೋಗಿದ್ದು ಇದೇ ಮೊದಲಲ್ಲ ಬಿಡಿ. ಆದರೆ ಈ ವರ್ಷ ಕಟಕಟೆಯಲ್ಲಿ ನಿಂತು ಸುಮಾರು 20 ನಿಮಿಷಗಳ ವಿಚಾರಣೆ ಎದುರಿಸಿದ್ದೆ. ಇದು ನೆಗೆಟಿವ್ ಅನ್ನಿಸಿದ್ರೂ, ನಂಗೆ ಏನೋ ಒಂಥರಾ ಖುಷಿ ಖಂಡಿತ ಇದೆ. ಬದುಕಿನಲ್ಲಿ ಎಲ್ಲವನ್ನೂ ಎಕ್ಸ್‌ಪಿರಿಯೆನ್ಸ್ ಮಾಡುಬೇಕು ಎನ್ನುವ ಮನೋಭಾವ ಇರುವ ನನಗೆ ಕೋರ್ಟ್ ಅನುಭವ ಸಿಗುವಂತೆ ಮಾಡಿದ್ದು, 2023 ಎಂಬ ಈ ಗೆಳೆಯನೇ ಅಲ್ವೆ.
7) ಕಾಡಿದ ಘಟನೆ: ಒಮ್ಮೆ ಬೆಂಗಳೂರಿನಲ್ಲಿ ಎಲ್ಲಿಗೋ ಹೋಗುತ್ತಿದ್ದೆ. ಮೆಟ್ರೊ ನಿಲ್ದಾಣದಲ್ಲಿ ಎಸ್ಕಲೇಟರ್ ಬಳಿ ಒಂದಿಷ್ಟು ರಾಶಿ ಜನ ಸೇರಿದ್ರು ಏನಾಗಿರಬಹುದು ಎಂದು ಗಾಬರಿಯಿಂದ ಹೋಗಿ ನೋಡಿದರೆ ಅಲ್ಲಿ ಒಬ್ಬರು ತಾಯಿ ಎಸ್ಕಲೇಟರ್ ಹತ್ತಲು ಭಯ ಬೀಳುತ್ತಿದ್ದರು. ಅವರು ಬೇಡವೆಂದರೂ ಮಗ ಬಿಡುತ್ತಿಲ್ಲ. ಅವರ ಹಿಂದೆ ಎಸ್ಕಲೇಟರ್ ಹತ್ತಿ ಹೋಗಬೇಕು ಎಂದುಕೊಂಡವರು ಬಯ್ಯುತ್ತಿದ್ದರೂ ಮಗ ಬಿಡುತ್ತಿಲ್ಲ. ತಾಯಿಯನ್ನ ಎಸ್ಕಲೇಟರ್ ಹತ್ತಿಯೇ ತೀರುತ್ತೇನೆ ಎಂಬ ಕೈ ಹಿಡಿದು ಪ್ರಯತ್ನ ಮಾಡುತ್ತಲೇ ಇದ್ದ. ಜೊತೆಗೆ ಇದ್ದ ಅವನ ತಂಗಿ ಏನಾದ್ರೂ ಮಾಡ್ಕೋ ಎಂದು ಬೈದು ಪಕ್ಕದ ಮೆಟ್ಟಿಲು ಹತ್ತಿ ಮೇಲೆ ಹೋದಳು. ಕೊನೆಗೂ ಛಲ ಬಿಡದ ತ್ರಿವಿಕ್ರಮ ಹಳ್ಳಿಯಿಂದ ಬಂದ ತಾಯಿಯನ್ನು ಎಸ್ಕಲೇಟರ್ ಹತ್ತಿಸಿಯೇ ಬಿಡುತ್ತಾನೆ. ಸುತ್ತಲೂ ಆಡಿಕೊಂಡವರ ಬಾಯಿ ಮುಚ್ಚಿಸುತ್ತಾನೆ. ಈ ಘಟನೆಯನ್ನು ನೋಡಿದಾಗ ಈಗಲೂ ತಾಯಿಯನ್ನು ದೇವತೆಯಂತೆ ನೋಡಿಕೊಳ್ಳುವವರು ಇದ್ದಾರೆ, ಪಟ್ಟಣಕ್ಕೆ ಬಂದ ತಾಯಿಗೆ ಮಗನ ಸತ್ಕಾರ ಕಂಡು ನಾನಾಗಿದ್ದರೆ ಖಂಡಿತ ಜನರ ಏನೆಂದುಕೊಳ್ಳುತ್ತಾರೋ ಎಂಬ ಹಿಂಜರಿಕೆಗೆ ತಾಯಿಗೆ ಕಷ್ಟವಾದರೂ ಮೆಟ್ಟಿಲು ಏರಿಸಿಕೊಂಡೇ ಹೋಗುತ್ತಿದ್ದೆ, ಇದಲ್ಲವೇ ನಿಜವಾದ ಪ್ರೀತಿ ಎನ್ನಿಸಿತ್ತು. ಯಾಕೋ ಅಂದು ಆ ತಾಯಿ, ಮಗನ ಘಟನೆ, ಜನರು ಆಡಿಕೊಳ್ಳುತ್ತಿದ್ದ ಮಾತು, ತಂಗಿ ವರ್ತನೆ ಇದೆಲ್ಲಾ ನನ್ನ ಮನಸ್ಸಿಗೆ ಕಾಡುತ್ತಿದೆ.
8) ನಂಗಿಷ್ಟವಾದ ಆಪ್ ಸ್ಪೂಟಿಫೈ: ನಂಗೆ ಮೊದಲಿನಿಂದಲೂ ಹಾಡುಗಳೆಂದರೆ ಇಷ್ಟ. ಹಾಡು ಕೇಳುತ್ತಿದ್ದರೆ ಬದುಕಿನಲ್ಲಿನ ಎಲ್ಲಾ ನೋವು ಮರೆತು ತುಟಿಯಂಚಿನಲ್ಲಿ ಕಾರಣವಿಲ್ಲದೇ ನಗು ಮೂಡುತ್ತದೆ. ನನ್ನ ಬದುಕಿನಲ್ಲಿ 2023ರಲ್ಲಿ ನೋವು ಮರೆಸಿ ನಗು ಮೂಡಿಸಲು ಕಾರಣವಾಗಿದ್ದು ಸ್ಪೂಟಿಫೈ. ಹಲವು ಭಾಷೆಗಳ ಹಾಡುಗಳ ಸಂಗ್ರಹವಿರುವ ಸ್ಪೂಟಿಫೈ ಆಪ್ 2023ರಲ್ಲಿ ನನ್ನ ಜೊತೆಯಾಗಿದ್ದ, ಅಲ್ಲದೇ ನಂಗೆ ಖುಷಿ ನೀಡುವ ಸಂಗಾತಿಯೂ ಆಗಿದ್ದ.
9) ಮಾತಂಗ ಬೆಟ್ಟ ಹತ್ತಿದ್ದು: 2023ರ ಗೆಳೆಯ ನೀಡಿದ ಬೆಸ್ಟ್ ನೆನಪುಗಳಲ್ಲಿ ಹಂಪಿ ಪ್ರವಾಸವೂ ಒಂದು. ಹಂಪಿ ಪ್ರವಾಸದಲ್ಲಿ ಸಾಕಷ್ಟು ಇಷ್ಟವಾಗಿದ್ದು ಅಂಜನಾದ್ರಿ ಬೆಟ್ಟ ಹತ್ತಿದ್ದು ಹಾಗೂ ಮಾತುಂಗ ಬೆಟ್ಟ ಹತ್ತಿದ್ದು. ಅಂಜನಾದ್ರಿ ಬೆಟ್ಟ ಹತ್ತಿದ್ದು ಎರಡನೇ ಬಾರಿ, ಆದರೆ ಮಾತುಂಗ ಬೆಟ್ಟ ಹತ್ತಿದ್ದು ಮಾತ್ರ ನಿಜಕ್ಕೂ ಸಾಹಸ. ಕಡಿದಾದ ದಾರಿಯಿರುವ ಈ ಬೆಟ್ಟ ಹತ್ತಿ, ತುತ್ತ ತುದಿ ನಿಂತು ಹಂಪಿಯ ವಿಹಂಗಮ ನೋಟ ಸವಿದಿದ್ದು ನಿಜಕ್ಕೂ ಸಾಕಷ್ಟು ಖುಷಿ ನೀಡಿತ್ತು.
ನೋಡಿದ್ರಲ್ಲ, ಒಂದು ವರ್ಷ ಕಳೆದು ಹೋದಾಗ ನನ್ನ ಬದುಕಿನಲ್ಲಿ ನೋವೇಗಳೇ ನಡೆಯಿತು, ಖುಷಿಯೇ ಇರಲಿಲ್ಲ ಎಂದುಕೊಳ್ಳುವವರೇ ಹಲವರು. ಆದರೆ ಬದುಕಿನಲ್ಲಿ ಎದುರಾಗುವ ಚಿಕ್ಕ ಪುಟ್ಟ ಸಂಗತಿಗಳನ್ನೇ ಖುಷಿಯನ್ನಾಗಿ, ಸಂಭ್ರಮವನ್ನಾಗಿ ಆಚರಿಸಿ. ಬದುಕು ಖಂಡಿತ ಸುಂದರ ಎನ್ನಿಸುತ್ತದೆ. ಹೊಸ ವರ್ಷ ಬಂದಾಗ ಹಳೆ ವರ್ಷಕ್ಕೆ ಬಯ್ಯುವ ಬದಲು ಆ ವರ್ಷದಲ್ಲಿ ಕಳೆದ ಸುಂದರ ನೆನಪುಗಳನ್ನೂ ಮೆಲುಕು ಹಾಕಿ.