New Year 2025: ಹೊಸ ವರ್ಷದಂದು ಪೋಷಕರು ಮಕ್ಕಳಿಗೆ ನೀಡಲೇಬೇಕಾದ 5 ಭರವಸೆಗಳಿವು; ಇದರಿಂದ ಅವರ ಭವಿಷ್ಯ ಉಜ್ವಲವಾಗುತ್ತೆ
New year resolutions 2025: ಹೊಸ ಸಂಕಲ್ಪಗಳನ್ನು ಮಾಡುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತದೆ. ಪೋಷಕರು ಕೂಡ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೊಸ ವರ್ಷದ ದಿನ ಒಂದಿಷ್ಟು ನಿರ್ಣಯಗಳನ್ನು ಕೈಗೊಳ್ಳಬೇಕು, ಇದರಿಂದ ಅವರ ಭವಿಷ್ಯ ಉಜ್ವಲವಾಗುವಂತೆ ನೋಡಿಕೊಳ್ಳಬೇಕು. 2025ರಲ್ಲಿ ನಿಮ್ಮ ಮಕ್ಕಳಿಗಾಗಿ ನೀವು ಈ 5 ಸಂಕಲ್ಪಗಳನ್ನು ಮಾಡಿ.
ಹೊಸ ವರ್ಷ ಎಂದರೆ ಹೊಸತನದ ಆರಂಭ. ಹೊಸವರ್ಷದಲ್ಲಿ ಹೊಸತನ್ನೇನಾದರೂ ಮಾಡಬೇಕು ಎಂದುಕೊಂಡು ಹೊಸ ಯೋಜನೆಗಳನ್ನು ಶುರು ಮಾಡುವುದು ಸಹಜ. ಕಳೆದ ವರ್ಷದ ಏರಿಳಿತಗಳು, ತಪ್ಪುಗಳು, ಇಟ್ಟ ತಪ್ಪು ಹೆಜ್ಜೆಗಳನ್ನು ಪರಾರ್ಮಶಿಸಿಕೊಂಡು ಈ ವರ್ಷ ಸುಧಾರಣೆಯ ಹಾದಿ ಹಿಡಿಯಬೇಕು. ಹೊಸ ವರ್ಷದಲ್ಲಿ ಪೋಷಕರು ತಮ್ಮ ಮಕ್ಕಳಿಗಾಗಿ ಒಂದಿಷ್ಟು ನಿರ್ಣಯಗಳನ್ನು ತೆಗೆದುಕೊಳ್ಳಬಹುದು.
ನೀವು ಪೋಷಕರಾಗಿದ್ದರೆ ನಿಮ್ಮ ಮಗುವಿನ ಯಶಸ್ಸು ಮತ್ತು ಉಜ್ವಲ ಭವಿಷ್ಯಕ್ಕೆ ಸಂಬಂಧಿಸಿ ಹಲವು ಕನಸುಗಳನ್ನು ಕಂಡಿರುತ್ತೀರಿ. ನಿಮ್ಮ ಮಗುವಿನ ಭವಿಷ್ಯವನ್ನು ರೂಪಿಸುವಲ್ಲಿ ನಿಮ್ಮ ಪಾಲನೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮಕ್ಕಳ ಭವಿಷ್ಯವನ್ನು ಉಜ್ವಲವಾಗಿಸುವ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗಾಗಿ ಈ 5 ಭರವಸೆಗಳನ್ನು ನೀಡಬೇಕು. ಇದು ಮಕ್ಕಳನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಮಾಡುವುದು ಮಾತ್ರವಲ್ಲ, ನಿಮ್ಮನ್ನೂ ಕೂಡ ಜವಾಬ್ದಾರಿಯುತ ತಂದೆ–ತಾಯಿಯನ್ನಾಗಿ ರೂಪಿಸುತ್ತದೆ. ಅಂತಹ 5 ಭರವಸೆಗಳು ಯಾವುದು ನೋಡಿ.
ಮಕ್ಕಳ ಭಾವನೆಗಳನ್ನು ಗೌರವಿಸುವುದು
ಪೋಷಕರು ತಮ್ಮ ಮಕ್ಕಳ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ವಿಫಲವಾಗುವ ಕಾರಣ ಅನೇಕ ಬಾರಿ ತಂದೆ–ತಾಯಿ ಮತ್ತು ಮಕ್ಕಳ ನಡುವೆ ಅಂತರ ಉಳಿದು ಬಿಡುತ್ತದೆ. ಅವರು ತಮ್ಮ ವಯಸ್ಸು ಮತ್ತು ಅನುಭವದ ಪ್ರಕಾರ ಎಲ್ಲವನ್ನೂ ಅಳೆಯುತ್ತಾರೆ. ಆದರೆ ಮಗುವಿನ ವಯಸ್ಸು ಮತ್ತು ಅದರ ಭಾವನೆಗಳನ್ನು ಎಂದಿಗೂ ಪರಿಗಣಿಸುವುದಿಲ್ಲ. ಹಾಗಿದ್ದಾಗ ಮಕ್ಕಳು ತಮ್ಮ ಅನೇಕ ವಿಷಯಗಳನ್ನು ತಮ್ಮ ಹೆತ್ತವರೊಂದಿಗೆ ಹಂಚಿಕೊಳ್ಳುವುದನ್ನು ತಪ್ಪಿಸುತ್ತಾರೆ ಮತ್ತು ಕೆಲವೊಮ್ಮೆ ಹೊರಗಿನವರು ಸಹ ಇದರ ಲಾಭವನ್ನು ಪಡೆಯುತ್ತಾರೆ. ಆದ್ದರಿಂದ, ಈ ವರ್ಷ, ನಿಮ್ಮ ಮಗುವಿನ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ನೀವು ನಿಮ್ಮ ಕೈಲಾದಷ್ಟು ಪ್ರಯತ್ನಿಸುತ್ತೀರಿ ಎಂದು ಭರವಸೆ ನೀಡಿ. ಇದರಿಂದ ಮಗು ನಿಮಗೆ ಹತ್ತಿರವಾಗುತ್ತದೆ. ನಿಮ್ಮಿಂದ ಯಾವುದೇ ವಿಚಾರಗಳನ್ನು ಮುಚ್ಚಿಡುವುದಿಲ್ಲ.
ಮಕ್ಕಳೊಂದಿಗೆ ಗುಣಮಟ್ಟದ ಸಮಯ ಕಳೆಯುವುದು
ಇಂದಿನ ಬಿಡುವಿಲ್ಲದ ಜೀವನಶೈಲಿಯಲ್ಲಿ ಯಾರಿಗೂ ತಮ್ಮ ಕುಟುಂಬದವರೊಂದಿಗೆ ಒಂದಿಷ್ಟು ಕ್ಷಣ ಶಾಂತವಾಗಿ ಕುಳಿತುಕೊಳ್ಳಲು ಸಮಯವಿಲ್ಲ. ವೃತ್ತಿಜೀವನದ ಓಟದ ನಡುವೆ ಉಳಿದೆಲ್ಲವೂ ಹಿಂದೆ ಸರಿಯುತ್ತಿದೆ. ವೃತ್ತಿಜೀವನದ ಗುರಿಗಳನ್ನು ಹೊಂದುವುದು ಕೆಟ್ಟ ವಿಷಯವಲ್ಲ, ಆದರೆ ಪೋಷಕರಾದ ನೀವು ನಿಮ್ಮ ಮಕ್ಕಳ ಬಗ್ಗೆಯೂ ಕೆಲವು ಜವಾಬ್ದಾರಿಗಳನ್ನು ನಿರ್ವಹಿಸಬೇಕು. ಈ ವರ್ಷ ನಿಮ್ಮ ಮಕ್ಕಳೊಂದಿಗೆ ಸಾಧ್ಯವಾದಷ್ಟು ಗುಣಮಟ್ಟದ ಸಮಯ ಕಳೆಯುತ್ತೀರಿ ಎಂದು ಭರವಸೆ ನೀಡಿ. ಇದು ನಿಮ್ಮ ಮಕ್ಕಳೊಂದಿಗೆ ನಿಮ್ಮ ಬಾಂಧವ್ಯವನ್ನು ಬಲಪಡಿಸುತ್ತದೆ. ಅಲ್ಲದೆ ಅವರು ಭವಿಷ್ಯದಲ್ಲಿ ಆತ್ಮವಿಶ್ವಾಸ ತುಂಬಿದ, ಮಾನಸಿಕವಾಗಿ ಪ್ರಬಲ ವ್ಯಕ್ತಿಯಾಗುತ್ತಾರೆ.
ಮಕ್ಕಳ ಮಾನಸಿಕ, ದೈಹಿಕ ಆರೋಗ್ಯ ಕಾಳಜಿ ವಹಿಸುವುದು
ಇಂದಿನ ದಿನಗಳಲ್ಲಿ ಮಕ್ಕಳ ಜೀವನಶೈಲಿ ಹದಗೆಡುತ್ತಿದೆ. ಆಹಾರದಿಂದ ಹಿಡಿದು ದೈನಂದಿನ ಚಟುವಟಿಕೆಗಳವರೆಗೆ, ಮಾನಸಿಕ ಮತ್ತು ದೈಹಿಕ ಆರೋಗ್ಯ ಎರಡಕ್ಕೂ ಒಳ್ಳೆಯದಲ್ಲದ ಹಲವಾರು ವಿಷಯಗಳನ್ನು ಮಕ್ಕಳು ಅನುಸರಿಸುತ್ತಿದ್ದಾರೆ. ಪಾಲಕರು ತಮ್ಮ ಬಿಡುವಿಲ್ಲದ ಜೀವನಶೈಲಿಯಿಂದಾಗಿ ಈ ವಿಷಯಗಳನ್ನು ಹೆಚ್ಚಾಗಿ ನಿರ್ಲಕ್ಷಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ನೀವು ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ ಎಂದು ಈ ವರ್ಷ ನಿರ್ಣಯ ತೆಗೆದುಕೊಳ್ಳಿ. ಅವರ ಆಹಾರದ ಬಗ್ಗೆ ಗಮನ ಹರಿಸುತ್ತೇವೆ ಮತ್ತು ಧ್ಯಾನ, ತಾಲೀಮು, ಹೊರಾಂಗಣ ಆಟಗಳಂತಹ ವಿಷಯಗಳನ್ನು ಅವರ ದಿನಚರಿಯಲ್ಲಿ ಸೇರಿಸುತ್ತೇವೆ ಎಂಬ ಭರವಸೆ ನೀಡಿ. ಅದು ಉತ್ತಮ ಮತ್ತು ಆರೋಗ್ಯವಂತ ವ್ಯಕ್ತಿಯಾಗಲು ಮಕ್ಕಳಿಗೆ ಸಹಾಯ ಮಾಡುತ್ತದೆ.
ಮಕ್ಕಳಿಗೆ ರೋಲ್ ಮಾಡೆಲ್ ಆಗುವುದು
ಮಕ್ಕಳು ಹಸಿ ಮಣ್ಣಿನಂತೆ ಎಂಬ ಮಾತನ್ನು ನೀವು ಕೇಳಿರಬೇಕು. ನಾವು ಯಾವ ಆಕಾರ ನೀಡುತ್ತೇವೋ ಅವರು ಆ ಕಾರಣ ಪಡೆಯುತ್ತಾರೆ. ಅವರಿಗೆ ಎಲ್ಲವನ್ನೂ ಕಲಿಸುವ ಅಗತ್ಯವಿಲ್ಲ, ಏಕೆಂದರೆ ಅವರು ನಿಮ್ಮನ್ನು ನೋಡುವ ಮೂಲಕ ಅನೇಕ ವಿಷಯಗಳನ್ನು ಕಲಿಯುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಈ ವರ್ಷ ನೀವು ಮಕ್ಕಳಿಗೆ ರೋಲ್ ಮಾಡೆಲ್ ಆಗುತ್ತೀರಿ ಎಂದು ಭರವಸೆ ನೀಡಿ. ನಿಮ್ಮ ಮಗುವಿನಲ್ಲಿ ನೀವು ನೋಡಲು ಬಯಸುವ ಉತ್ತಮ ಅಭ್ಯಾಸಗಳನ್ನು ಮೊದಲು ನಿಮ್ಮ ಸ್ವಂತ ಜೀವನದಲ್ಲಿ ಅಳವಡಿಸಿಕೊಳ್ಳುತ್ತೀರಿ. ಹೀಗೆ ಮಾಡುವುದರಿಂದ ಮಕ್ಕಳ ಮೇಲೂ ಅದರ ಸಕಾರಾತ್ಮಕ ಪರಿಣಾಮ ಕಂಡುಬರುತ್ತದೆ.
ಮಕ್ಕಳಿಗಾಗಿ ಟೈಮ್ ಟೇಬಲ್ ರೆಡಿ ಮಾಡುವುದು
ಮಕ್ಕಳು ಯಶಸ್ವಿಯಾಗಲು ಬಯಸಿದರೆ, ಅವರ ಟೈಮ್ ಟೇಬಲ್ ಅನ್ನು ಸರಿಯಾಗಿ ಆಯೋಜಿಸುವುದು ಬಹಳ ಮುಖ್ಯ. ಜವಾಬ್ದಾರಿಯುತ ಪೋಷಕರಾಗಿ, ಮಕ್ಕಳೊಂದಿಗೆ ಸ್ವಲ್ಪ ಸಮಯ ಕುಳಿತುಕೊಳ್ಳಿ. ಅವರ ಸಲಹೆಯನ್ನು ತೆಗೆದುಕೊಳ್ಳಿ, ಅವರ ಅಧ್ಯಯನದ ದಿನಚರಿಯನ್ನು ನೋಡಿ, ಪಠ್ಯಕ್ರಮವನ್ನು ನೋಡಿ ಮತ್ತು ವಿವರವಾದ ವೇಳಾಪಟ್ಟಿಯನ್ನು ತಯಾರಿಸಿ. ಆ ಟೈಮ್ ಟೇಬಲ್‌ನಲ್ಲಿ ಕೇವಲ ಅಧ್ಯಯನವನ್ನು ಸೇರಿಸುವ ಮೂಲಕ ಮಕ್ಕಳಿಗೆ ಹೊರೆಯಾಗಬಾರದು ಎಂಬುದು ನೆನಪಿನಲ್ಲಿರಲಿ. ಆ ಟೈಮ್‌ಟೇಬಲ್‌ನಲ್ಲಿ ಒಂದಿಷ್ಟು ಹೊತ್ತು ಆಟವಾಡಲು ಸಮಯ ನಿಗದಿ ಮಾಡಿ. ಇದು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗುವುದಲ್ಲದೇ ಬಾಲ್ಯದಿಂದಲೇ ಸಂಘಟಿತರಾಗಿ ಬದುಕುವ ಹವ್ಯಾಸವನ್ನು ಬೆಳೆಸಲು ಸಾಧ್ಯವಾಗುತ್ತದೆ.
–––
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope