ಹೊಸ ವರ್ಷಕ್ಕೆ ಮನೆಯಲ್ಲಿ ಪಾರ್ಟಿ ಆಯೋಜಿಸಿದ್ದರೆ ಮಾಡಿ ಈ ರೆಸಿಪಿ; ಬಾಯಲ್ಲಿ ನೀರೂರಿಸುವ ಚಿಕನ್ ಮಂಚೂರಿಯನ್ ತಯಾರಿಸುವುದು ತುಂಬಾ ಸುಲಭ ಕಣ್ರೀ
ಮನೆಯಲ್ಲಿ ಹೊಸ ವರ್ಷದ ಪಾರ್ಟಿ ಯೋಜಿಸಿದರೆ ಒಂದಷ್ಟು ಆಹಾರ ಪದಾರ್ಥಗಳನ್ನು ತಯಾರಿಸಬೇಕಾಗುತ್ತೆ.ಮನೆಗೆ ಬರುವ ಅತಿಥಿಗಳಿಗೆ ಯಾವ ಚಿಕನ್ ಖಾದ್ಯ ಮಾಡುವುದು ಎಂದು ಯೋಚಿಸುತ್ತಿದ್ದರೆ ಬಾಯಲ್ಲಿ ನೀರೂರಿಸುವ ಚಿಕನ್ ಮಂಚೂರಿಯನ್ ಮಾಡಿ ನೋಡಿ. ಮನೆಗೆ ಬಂದ ಅತಿಥಿಗಳಿಗೆ ಖಂಡಿತ ಈ ರೆಸಿಪಿ ಇಷ್ಟವಾಗುತ್ತೆ. ಇದನ್ನು ತಯಾರಿಸುವುದು ಹೇಗೆ ಎಂಬುದು ಇಲ್ಲಿದೆ.
ಹೊಸ ವರ್ಷಕ್ಕೆ ಕಾಲಿಡಲು ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಜನರು ಹೊಸವರ್ಷವನ್ನು ಸ್ವಾಗತಿಸಲು ಕಾತುರರಾಗಿದ್ದಾರೆ. ಹೊಸ ವರ್ಷದ ಮುನ್ನಾದಿನ ಅಥವಾ ಮಧ್ಯರಾತ್ರಿ ಕೆಲವರು ಸ್ನೇಹಿತರೊಂದಿಗೆ ಪ್ರವಾಸಗಳನ್ನು ಯೋಜಿಸಿದರೆ, ಇನ್ನು ಕೆಲವರು ಕುಟುಂಬದೊಂದಿಗೆ ಪಾರ್ಟಿ ಮಾಡುವ ಬಗ್ಗೆ ಯೋಜಿಸುತ್ತಾರೆ. ನೀವು ಮನೆಯಲ್ಲಿ ಹೊಸ ವರ್ಷದ ಪಾರ್ಟಿ ಮಾಡುವ ಉತ್ಸಾಹದಲ್ಲಿದ್ದರೆ, ಅತಿಥಿಗಳು ಮೆಚ್ಚುವಂತಹ ಖಾದ್ಯವನ್ನು ತಯಾರಿಸಿ. ಮಸಾಲೆಯುಕ್ತ ಹಾಗೂ ರುಚಿಕರವಾದ ಚಿಕನ್ ಮಂಚೂರಿಯನ್ ರೆಸಿಪಿ ಮನೆಯಲ್ಲೇ ಮಾಡಿ. ಖಂಡಿತ ಎಲ್ಲರೂ ಇಷ್ಟಪಟ್ಟು ತಿಂತಾರೆ. ಈ ರೆಸಿಪಿ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಚಿಕನ್ ಮಂಚೂರಿಯನ್ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಬೋನ್ ಲೆನ್ ಬ್ರೆಸ್ಟ್ ಚಿಕನ್- 500 ಗ್ರಾಂ, ಮೊಟ್ಟೆ- 2, ಸೋಯಾ ಸಾಸ್- 2 ಟೀ ಚಮಚ, ಹಸಿಮೆಣಸಿನಕಾಯಿ- 2, ಖಾರದಪುಡಿ- 2 ಟೀ ಚಮಚ, ಕಾರ್ನ್ ಫ್ಲೋರ್ (ಜೋಳ ಹಿಟ್ಟು)- 4 ಟೀ ಚಮಚ, ಅಕ್ಕಿ ಹಿಟ್ಟು- 3 ಟೀ ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಟೀ ಚಮಚ, ಕಾಳುಮೆಣಸಿನ ಪುಡಿ- ಒಂದು ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ- ಕರಿಯಲು ಬೇಕಾಗುಷ್ಟು. ನುಣ್ಣಗೆ ಕತ್ತರಿಸಿದ ಶುಂಠಿ- 2 ಟೀ ಚಮಚ, ನುಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ- ಒಂದು ಟೀ ಚಮಚ, ನುಣ್ಣಗೆ ಕತ್ತರಿಸಿದ ಈರುಳ್ಳಿ- 1, ಸೋಯಾ ಸಾಸ್- 2 ಟೀ ಚಮಚ, ರೆಡ್ ಚಿಲ್ಲಿ ಸಾಸ್- 4 ಟೀ ಚಮಚ, ಟೊಮೆಟೊ ಸಾಸ್- ನಾಲ್ಕು ಟೀ ಚಮಚ, ವಿನೆಗರ್- 2 ಟೀ ಚಮಚ, ನೀರು- ಎರಡು ಕಪ್, ಕ್ಯಾಪ್ಸಿಕಂ- ಒಂದೂವರೆ ಕಪ್.
ಮಾಡುವ ವಿಧಾನ: ಮೊದಲಿಗೆ, ಸಣ್ಣ ತುಂಡುಗಳಾಗಿ ಕತ್ತರಿಸಿದ ಚಿಕನ್ (ಬೋನ್‍ಲೆಸ್ ಚಿಕನ್) ತೆಗೆದುಕೊಂಡು ಸ್ವಚ್ಛವಾಗಿ ತೊಳೆಯಿರಿ
- ನಂತರ ಚಿಕನ್‍ಗೆ ಸೋಯಾ ಸಾಸ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು ಮತ್ತು ಮೆಣಸು ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ
- ನಂತರ ಮೊಟ್ಟೆಯ ಬಿಳಿಭಾಗ, ಅಕ್ಕಿಹಿಟ್ಟು, ಕಾರ್ನ್ ಫ್ಲೋರ್ ಹಾಕಿ ಮಿಶ್ರಣ ಮಾಡಿ
- ಇವೆಲ್ಲವನ್ನೂ ಬೆರೆಸಿದ ನಂತರ, ಚಿಕನ್ ಅನ್ನು ಒಂದು ಗಂಟೆ ಪಕ್ಕಕ್ಕೆ ಇರಿಸಿ
- ಒಂದು ಗಂಟೆಯ ನಂತರ ಬಾಣಲೆಯನ್ನು ಸ್ಟೌವ್ ಮೇಲಿಟ್ಟು ಎಣ್ಣೆ ಹಾಕಿ
- ಎಣ್ಣೆ ಬಿಸಿಯಾದ ನಂತರ ಮ್ಯಾರಿನೇಟ್ ಮಾಡಿದ ಚಿಕನ್ ಮಿಶ್ರಣವನ್ನು ತೆಗೆದುಕೊಂಡು ಫ್ರೈ ಮಾಡಿ
- ಇವುಗಳನ್ನು ಮಧ್ಯಮ ಉರಿಯಲ್ಲಿ ಮಾತ್ರ ಫ್ರೈ ಮಾಡಿ.
- ಎಲ್ಲಾ ಚಿಕನ್ ತುಂಡುಗಳು ಗೋಲ್ಡನ್ ಬ್ರೌನ್ ಆದ ನಂತರ, ಅವುಗಳನ್ನು ತೆಗೆದುಕೊಂಡು ಟಿಶ್ಯೂ ಪೇಪರ್ ಅಥವಾ ಕಿಚನ್ ಟವೆಲ್ ಮೇಲೆ ಹಾಕಿ ಪಕ್ಕಕ್ಕೆ ಇಡಿ.
- ನಂತರ ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ನಾಲ್ಕು ಚಮಚ ಕಾರ್ನ್ ಫ್ಲೋರ್ ಮತ್ತು ಸ್ವಲ್ಪ ನೀರು ಸೇರಿಸಿ, ಅದನ್ನು ಪಕ್ಕಕ್ಕೆ ಇಟ್ಟುಕೊಳ್ಳಿ
- ಇನ್ನೊಂದು ಬೌಲ್ ತೆಗೆದುಕೊಂಡು ವಿನೆಗರ್ (ಇದರ ಬದಲು ನಿಂಬೆರಸ ಕೂಡ ಬಳಸಬಹುದು), ಸೋಯಾ ಸಾಸ್, ರೆಡ್ ಚಿಲ್ಲಿ ಸಾಸ್, ಟೊಮೆಟೊ ಸಾಸ್ ಸೇರಿಸಿ ಅದನ್ನು ಪಕ್ಕಕ್ಕೆ ಇರಿಸಿ
- ಬಾಣಲೆ ತೆಗೆದುಕೊಂಡು ಅದಕ್ಕೆ ಒಂದು ಚಮಚ ಎಣ್ಣೆಯನ್ನು ಸುರಿಯಿರಿ
- ಎಣ್ಣೆ ಸ್ವಲ್ಪ ಬಿಸಿಯಾದ ನಂತರ ನುಣ್ಣಗೆ ತುರಿದ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ
- ಚೆನ್ನಾಗಿ ಪರಿಮಳ ಬಂದ ಮೇಲೆ ಈರುಳ್ಳಿ ಮತ್ತು ಈರುಳ್ಳಿ ದಂಟು (ಸ್ಪ್ರಿಂಗ್ ಆನಿಯನ್) ಹಾಕಿ ಫ್ರೈ ಮಾಡಿ
- ಈರುಳ್ಳಿ ಬಣ್ಣ ಬದಲಾದ ನಂತರ ಕತ್ತರಿಸಿದ ಕ್ಯಾಪ್ಸಿಕಂ ಹಾಕಿ
- ಮಿಶ್ರಣ ಮಾಡಿದ ಎಲ್ಲಾ ಸಾಸ್‌ಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ
- ಸಾಸ್ ಅನ್ನು ಬಿಸಿ ಮಾಡಿದ ನಂತರ, ಜೋಳದ ಹಿಟ್ಟಿ (ಕಾರ್ನ್ ಫ್ಲೋರ್) ನ ಮಿಶ್ರಣವನ್ನು ಸುರಿಯಿರಿ. ಬೇಕಿದ್ದರೆ ಸ್ವಲ್ಪ ನೀರು ಸೇರಿಸಬಹುದು
- ಈ ನೀರು ಕುದಿಯುತ್ತಿರುವಾಗ ಉಪ್ಪು, ಹಸಿಮೆಣಸಿನಕಾಯಿ ಸೇರಿಸಿ ಮಿಶ್ರಣ ಮಾಡಿ
- ಈ ಮಿಶ್ರಣವು ಕುದಿಯುತ್ತಿರುವಾಗ, ಹುರಿದ ಚಿಕನ್ ಮತ್ತು ಸ್ಪ್ರಿಂಗ್ ಆನಿಯನ್ (ಈರುಳ್ಳಿ ದಂಟು) ಸೇರಿಸಿ. ಮತ್ತು ಚಿಕನ್ ಅನ್ನು ಚೆನ್ನಾಗಿ ಮಿಶ್ರಣ ಮಾಡಿ
- ಈ ಮಿಶ್ರಣವನ್ನು ಎರಡು ನಿಮಿಷ ಬೇಯಿಸಿ ನಂತರ ಸ್ಟೌವ್ ಆಫ್ ಮಾಡಿ
- ಇಷ್ಟು ಮಾಡಿದರೆ ಟೇಸ್ಟಿ ಮತ್ತು ಮಸಾಲೆಯುಕ್ತ ಚಿಕನ್ ಮಂಚೂರಿಯನ್ ತಿನ್ನಲು ಸಿದ್ಧ.
ಚಿಕನ್ ಮಂಚೂರಿಯನ್ ರೆಸಿಪಿ ತುಂಬಾ ರುಚಿಯಾಗಿರುತ್ತದೆ. ಹೊಸ ವರ್ಷದ ಪಾರ್ಟಿಗೆ ಈ ರೆಸಿಪಿ ಮಾಡಿ ನೋಡಿ. ಮನೆಗೆ ಬಂದ ಅತಿಥಿಗಳು ಖಂಡಿತ ಇಷ್ಟಪಡುವುದರಲ್ಲಿ ಸಂಶಯವಿಲ್ಲ.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope