New Year 2025: ಹೊಸ ವರ್ಷಕ್ಕೂ ಮೊದಲು ಈ ವಸ್ತುಗಳನ್ನು ಮನೆಯಿಂದ ಹೊರಗೆಸೆಯಿರಿ; ಸಮೃದ್ಧಿ, ಸಂತೋಷ ತುಂಬಿ ತುಳುಕುತ್ತೆ
ಹೊಸ ವರ್ಷ ಬರುತ್ತಿದೆ. ಹೊಸ ವರ್ಷದಲ್ಲಿ ಜನರು ಹಲವು ಸಂಕಲ್ಪಗಳನ್ನು ಕೈಗೊಂಡು,ಅದನ್ನು ಪಾಲಿಸುತ್ತಾರೆ. ಅದೇ ಸಂದರ್ಭದಲ್ಲಿ ನಿಮ್ಮ ಮನೆಯಲ್ಲಿ ಕೆಲವೊಂದು ಹಳೆಯ ವಸ್ತುಗಳನ್ನು ಹೊರಗೆಸೆದರೆ,ಅದರಿಂದ ಸದಾ ಸಂತೋಷ,ಆರೋಗ್ಯಕರ ಜೀವನ ನಿಮ್ಮದಾಗುತ್ತದೆ. ಅಂತಹ ವಸ್ತುಗಳು ಯಾವುವು ನೋಡಿ.
ಹೊಸ ವರ್ಷ ಆರಂಭವಾಗಲು ಕೆಲವೇ ದಿನಗಳು ಬಾಕಿ ಇದೆ. 2024 ನಿಮಗೆ ಹಲವು ಸಿಹಿ-ಕಹಿ ಅನುಭವ ನೀಡಿರಬಹುದು. ಹೀಗಾಗಿ 2025ರಲ್ಲಿ ಹೊಸ ಆರಂಭ ಮಾಡಬೇಕು ಎಂಬ ನಿರ್ಧಾರವನ್ನು ತೆಗೆದುಕೊಂಡಿರುತ್ತೀರಿ. ಹೊಸ ವರ್ಷದಲ್ಲಿ ಸಂಪತ್ತು-ಆರೋಗ್ಯ ನಮ್ಮದಾಗಲಿ ಎಂದು ಹಲವರು ಆಶಿಸುತ್ತಾರೆ. ಅದಕ್ಕಾಗಿ ಜೀವನಶೈಲಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ. ಆದರೆ, ಮನೆಯಲ್ಲಿ ನಿರ್ಲಕ್ಷ್ಯ ವಹಿಸುವ ಕೆಲವೊಂದು ಸಂಗತಿಗಳು ನಿಮ್ಮ ಆರೋಗ್ಯಕ್ಕೆ, ಮನೆಯ ಉತ್ತಮ ವಾತಾವರಣಕ್ಕೆ ಅಡ್ಡಿಯಾಗಬಹುದು. ಹಾಗಿರುವಾಗ ಅಂತಹ ವಸ್ತುಗಳನ್ನು ಮನೆಯಿಂದ ಹೊರಗೆ ಎಸೆಯುವುದೇ ಉತ್ತಮ. ಯಾವ ವಸ್ತುಗಳನ್ನು ಬದಲಿಸಬೇಕು? ಮನೆಯಲ್ಲಿ ಸದಾ ಸಂತೋಷ, ಆರೋಗ್ಯ ತುಂಬಿರಲು ಏನು ಮಾಡಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಮನೆಯಲ್ಲಿ ಸದಾ ಸಂತೋಷ, ಆರೋಗ್ಯ ತುಂಬಿರಲು ಈ ಟಿಪ್ಸ್ ಅನುಸರಿಸಿ
ವಾರ್ಡ್‌ರೋಬ್ ಸ್ವಚ್ಛಗೊಳಿಸಿ: ಮನೆಯಲ್ಲಿನ ವಾರ್ಡ್‌ರೋಬ್‍ನಲ್ಲಿ ಬಹುತೇಕ ಮಂದಿ ಬಟ್ಟೆಗಳನ್ನು, ಒಂದಷ್ಟು ವಸ್ತುಗಳನ್ನು ತುರುಕಿಸಿ ಇಟ್ಟಿರುತ್ತಾರೆ. ಎಷ್ಟು ಬಾರಿ ವಾರ್ಡ್‌ರೋಬ್ ಸ್ವಚ್ಛಗೊಳಿಸಿ, ಕ್ರಮವಾಗಿ ಒಪ್ಪವಾಗಿ ಇಟ್ಟುಕೊಂಡಿದ್ದರೂ, ಕೆಲವೇ ದಿನಗಳಲ್ಲಿ ಅದು ತುಂಬಿ, ಮತ್ತೆ ರಾಶಿಯಾಗಿ ಕಾಣಿಸುತ್ತದೆ. ಅಂತಹ ಸಂದರ್ಭದಲ್ಲಿ ಬಳಸದೇ ಇರುವ, ಬೇಡದ, ಹಳೆಯ ಬಟ್ಟೆಗಳನ್ನು ಎಸೆದುಬಿಡಿ. ಉತ್ತಮ ಬಟ್ಟೆಯಿದ್ದರೆ ಅಗತ್ಯವಿದ್ದವರಿಗೆ ನೀಡಬಹುದು. ನಂತರ ಮತ್ತೆ ವಾರ್ಡ್‌ರೋಬ್ ಅನ್ನು ಒಪ್ಪವಾಗಿ ಜೋಡಿಸಿ.
ಹಳೆಯ ಟವೆಲ್ ಇಟ್ಟುಕೊಳ್ಳಬೇಡಿ: ಕೆಲವರು ಧರಿಸಲು ಉತ್ತಮ ಬಟ್ಟೆಯನ್ನು ಇಟ್ಟುಕೊಂಡಿದ್ದರೂ, ಸ್ನಾನದ ಟವೆಲ್ ಮಾತ್ರ ಹಳೆಯದನ್ನೇ ಬಳಸುತ್ತಿರುತ್ತಾರೆ. ಜತೆಗೆ ಒಳಉಡುಪುಗಳು ಕೂಡ ಹಳೆಯದೇ ಇರುತ್ತವೆ. ಅವುಗಳನ್ನು ಬದಲಿಸಿ, ಸ್ವಚ್ಛ, ಹೊಸ ಟವೆಲ್, ಒಳಉಡುಪು ಬಳಸಿ. ಇದರಿಂದ ಆರೋಗ್ಯಕ್ಕೂ ಹಲವು ಪ್ರಯೋಜನಗಳಿವೆ.
ಹಳೆಯ ದಿಂಬಿಗೆ ಬೈ ಬೈ ಹೇಳಿ: ಹಲವು ಮನೆಗಳಲ್ಲಿ ಹಳೆಯ ದಿಂಬುಗಳನ್ನೇ ವರ್ಷಾನುಗಟ್ಟಲೆ ಬಳಸುತ್ತಾರೆ. ಅದರಲ್ಲಿ ಸಾಕಷ್ಟು ಧೂಳು, ಕೊಳೆ ಸಂಗ್ರಹವಾಗಿರುತ್ತದೆ. ನಿಯಮಿತವಾಗಿ ಅದರ ಕವರ್ ಸ್ವಚ್ಛಗೊಳಿಸುವುದೂ ಇಲ್ಲ. ಈ ವರ್ಷದ ಆರಂಭದಲ್ಲಿ ಹಳೆಯ, ಹರಿದ, ಕೊಳೆಯಾದ ತಲೆದಿಂಬು ಇದ್ದರೆ, ಅದನ್ನು ಬದಲಿಸಿ ಅಥವಾ ದಿಂಬಿನ ಕವರ್ ಆದರೂ ಬದಲಿಸಿ. ತಲೆಕೂದಲಿನ ಆರೋಗ್ಯ ಕಾಪಾಡಿಕೊಳ್ಳಿ.
ಮನೆಯ ಅಲಂಕಾರಕ್ಕೆ ಗಮನ ಕೊಡಿ: ಗೋಡೆಯಲ್ಲಿ ಹಳೆಯ ಬಣ್ಣಮಾಸಿದ ಪೇಟಿಂಗ್, ಶೋಪೀಸ್, ಫೋಟೊ ಇದ್ದರೆ ಅದನ್ನು ತೆಗೆದು, ಹೊಸದನ್ನು ಇರಿಸಿ. ಅನಗತ್ಯ ವಸ್ತುಗಳನ್ನು ಮನೆಯ ಹಾಲ್‌ನಲ್ಲಿ, ಶೋಕೇಸ್‌ನಲ್ಲಿ ಇರಿಸಬೇಡಿ. ಅಲಂಕಾರಿಕ ವಸ್ತುಗಳನ್ನು ಸ್ವಚ್ಛಗೊಳಿಸಿ ಇಟ್ಟುಕೊಳ್ಳಿ. ಮನೆಯ ಒಳಗೆ ಬೆಳೆಯುವ ನೈಸರ್ಗಿಕ ಗಿಡಗಳನ್ನು ಬೆಳೆಸಿ, ಇದರಿಂದ ಮನಸ್ಸಿಗೂ ಉಲ್ಲಾಸ ದೊರೆಯುತ್ತದೆ. ಹಸಿರಿನಿಂದ ಉತ್ತಮ ಗಾಳಿ ಕೂಡ ದೊರೆಯುತ್ತದೆ. ಅಲ್ಲದೆ ಕಣ್ಣಿಗೂ ತಂಪು, ಮನೆ ಅಂದಕೂ ಇಂಪು ನೀಡುತ್ತದೆ.
ಸುಗಂಧ ದ್ರವ್ಯ ಬಳಸಿ: ಹಳೆಯ ಕ್ಯಾಂಡಲ್ ಇದ್ದರೆ, ಅದನ್ನು ಎಸೆದುಬಿಡಿ. ಅದರ ಬದಲಿಗೆ ಮಾರುಕಟ್ಟೆಯಲ್ಲಿ ಹಾಗೂ ಆನ್‌ಲೈನ್‌ನಲ್ಲಿ ಲಭ್ಯವಿರುವ ಎಸೆನ್ಷಿಯಲ್ ಆಯಿಲ್, ಡಿಫ್ಯೂಸರ್, ಅಟೋಮ್ಯಾಟಿಕ್ ರೂಮ್ ಸ್ಪ್ರೇ ಬಳಸಿ.
ಅಡುಗೆ ಮನೆ ಸ್ವಚ್ಛತೆಗೆ ಸಮಯ ಕೊಡಿ: ಅಡುಗೆ ಕೋಣೆಯಲ್ಲಿ ಹಲವು ಬಳಸದ ಪಾತ್ರೆಗಳು, ಪ್ಲಾಸ್ಟಿಕ್ ಕಂಟೇನರ್ ಇದ್ದರೆ, ಅದನ್ನು ಎಸೆದುಬಿಡಿ. ಅಡುಗೆ ಕೋಣೆ ಸಾಕಷ್ಟು ಗಾಳಿ-ಬೆಳಕಿನಿಂದ ಕೂಡಿರಲಿ. ಪಾತ್ರೆ ತೊಳೆಯಲು ಬಳಸುವ ಹಳೆಯ ಸ್ಕ್ರಬರ್, ಸ್ಪಾಂಜ್, ಒರೆಸುವ ಬಟ್ಟೆ ಹಳೆಯದಾಗಿದ್ದರೆ, ಅದರಲ್ಲಿ ವಿವಿಧ ಬ್ಯಾಕ್ಟೀರಿಯಾ, ಸೂಕ್ಷ್ಮ ಕ್ರಿಮಿಗಳು ಸೇರಿಸಿಕೊಂಡಿರುತ್ತವೆ. ಅದರಿಂದ ಆರೋಗ್ಯಕ್ಕೆ ಹಾನಿಯಾಗುವುದು ಖಂಡಿತ. ಹೀಗಾಗಿ ಕಾಲಕಾಲಕ್ಕೆ ಅದನ್ನು ಬದಲಿಸುತ್ತಿರಬೇಕು.