ಲೈಫ್ ಬಗ್ಗೆ ಜಾಸ್ತಿ ಕನ್‌ಫ್ಯೂಸ್ ಆಗಬೇಡಿ, ಬ್ಯಾಚುಲರ್‌ಗಳಿಗೆ ಇಲ್ಲಿದೆ 19 ಜೀವನ ಪಾಠಗಳು; ಮಧು ವೈಎನ್ ಬರಹ
ಹೊಸ ವರ್ಷದ ಹೊಸ್ತಿಲಲ್ಲಿ ಲೇಖಕ ಮಧು ವೈಎನ್ ಬ್ಯಾಚುಲರ್‌ಗಳಿಗಾಗಿ ಒಂದಿಷ್ಟು ಜೀವನ ಪಾಠಗಳನ್ನು ಹೇಳಿದ್ದಾರೆ. ಇಲ್ಲಿರುವ 19 ಅಂಶಗಳಲ್ಲಿ ಪ್ರತಿಯೊಂದು ಕೂಡ ಬಹಳ ಅರ್ಥಪೂರ್ಣ. ಬ್ಯಾಚುಲರ್ ಲೈಫ್‌ನಲ್ಲಿ ಮೋಜು, ಮಸ್ತಿ ಮಾಡುವ ಜೊತೆಗೆ ಈ ವಿಚಾರಗಳತ್ತಲೂ ಗಮನ ಹರಿಸಬೇಕು, ಇದು ಉಜ್ವಲ ಭವಿಷ್ಯಕ್ಕೆ ಅವಶ್ಯ ಕೂಡ.
2025ರ ಮೊದಲ ದಿನದಲ್ಲಿ ನಾವಿದ್ದೇವೆ. ಹೊಸ ವರ್ಷ ಎಂದಾಕ್ಷಣ ಹೊಸತನ್ನು ಆರಂಭಿಸಬೇಕು ಎನ್ನುವ ತುಡಿತ ಎಲ್ಲರಲ್ಲೂ ಇರುತ್ತದೆ. ಆದರೆ ಇಂತಹ ಉತ್ಸಾಹ, ಹುಮ್ಮಸ್ಸು ಯುವ ಮನಸ್ಸುಗಳಲ್ಲಿ ಕೊಂಚ ಹೆಚ್ಚಿರುತ್ತದೆ ಎನ್ನುವುದು ಸುಳ್ಳಲ್ಲ. ಆದರೆ ಎಷ್ಟೋ ಬಾರಿ ಈ ಉತ್ಸಾಹವೇ ಅತಿಯಾಗಿ ಬದುಕಿನ ಹಾದಿ ತಪ್ಪುವುದುಂಟು. ಬ್ಯಾಚುಲರ್ ಲೈಫ್ ಅಂದ್ರೆ ಎಂಜಾಯ್ ಮಾಡೋಕೆ ಇರೋದು ಅಂತ ಹಲವರು ಅಂದುಕೊಂಡು ಬಿಡುತ್ತಾರೆ. ಆದರೆ ಬ್ಯಾಚುಲರ್ ಲೈಫ್‌ನಲ್ಲಿ ನೀವು ಬದುಕಿನ ಅಡಿಪಾಯ ಗಟ್ಟಿ ಮಾಡಿಕೊಂಡಿಲ್ಲ ಅಂದ್ರೆ ಭವಿಷ್ಯದಲ್ಲಿ ತೊಂದರೆ ಎದುರಿಸೋದು ಖಂಡಿತ.
2025ರ ಹೊಸ ವರ್ಷದ ಸಂಭ್ರಮದಲ್ಲಿರುವ ಯುವ ಮನಸ್ಸುಗಳಿಗೆ, ಬ್ಯಾಚುಲರ್‌ಗಳಿಗೆ ಲೇಖಕ ಮಧು ವೈನ್ ಒಂದಿಷ್ಟು ಅನುಭವ ಪಾಠಗಳನ್ನು ಹೇಳಿದ್ದಾರೆ. ಇದು ನಿಜಕ್ಕೂ ಅರ್ಥಪೂರ್ಣ ಬರಹ. ಜನವರಿ 1ರ ಆರಂಭದಿಂದಲೇ ನೀವು ಈ ಪಾಠಗಳನ್ನು ಬದುಕಿಗೆ ಅಳವಡಿಸಿಕೊಂಡರೆ ಖಂಡಿತ ನಿಮ್ಮ ಭವಿಷ್ಯ ಉಜ್ವಲವಾಗಿರುತ್ತೆ. ಮಧು ವೈಎನ್ ನೀಡಿರುವ 19 ಜೀವನಪಾಠಗಳು ಇಲ್ಲಿವೆ ನೋಡಿ.
ಮಧು ವೈಎನ್ ಬರಹ
ಹೊಸ ವರ್ಷಕ್ಕೆ ನನ್ನ ಕಿರಿಯ ಮಿತ್ರರಿಗೆ (ಬ್ಯಾಚಲರ್‌ಗಳಿಗೆ) ಕೆಲವು ಅನುಭವದ ಮಾತುಗಳು.
1. ಸದಾ ಏನಾದರೂ ಕಲಿಯುತ್ತಿರಿ. ಯಾವಾಗಲಾದರೂ ಉಪಯೋಗಕ್ಕೆ ಬಂದೇ ಬರುತ್ತದೆ.
2. ವಯಸ್ಸು ಮೂವತ್ತು ವರ್ಷ ದಾಟುವವರೆಗೆ ಸೈಟು, ಮನೆಯೆಂದು ಇನ್ವೆಸ್ಟ್ ಮಾಡಬೇಡಿ. ಲೋನ್ ಮತ್ತು ಜಾಬ್ ಎರಡಕ್ಕೂ ಲಾಕ್ ಆಗುತ್ತೀರಿ.
3. ಕಲ್ಲನ್ನೂ ಕರಗಿಸುವ ದೇಹ ಇರುತ್ತದೆ. ಆದರೆ ಜೋಪಾನ. ದೇಹ ಒಮ್ಮೆ ಗ್ಯಾರೇಜಿಗೆ ಹೋಗಿ ಬಂದರೆ ನಿಮ್ಮ ವೇಗ ಅರ್ಧ ತಗ್ಗುತ್ತದೆ. ಹೊಸ ಕಾರು/ಬೈಕನ್ನು ಎಷ್ಟು ಜೋಪಾನ ಮಾಡುತ್ತೀರೋ ಹಾಗೆ ನಿಮ್ಮ ಆರೋಗ್ಯ.
4. ಯಾವುದಾದರೂ ಸಮುದಾಯಿಕ ಸೇವೆಯಲ್ಲಿ ತೊಡಗಿಸಿಕೊಳ್ಳಿ. ತಿಂಗಳಿಗೆ ಒಂದು ವೀಕೆಂಡ್ ಸಾಕು. ಅದು ನಿಮ್ಮನ್ನು ಊರು/ದೇಶ/ಜನರನ್ನು ಸುತ್ತಿಸುತ್ತದೆ.
5. ಸದಾ ಹುಡುಗಿಯರ/ಹುಡುಗರ ಗುಂಗಿನಲ್ಲಿ ಇರಬೇಡಿ. ದುಡಿಮೆಯಿಲ್ಲದೇ ಹೇಗೆ ಹಣ ಹುಟ್ಟುವುದಿಲ್ಲವೋ ಹಾಗೆ ವ್ಯಕ್ತಿತ್ವ ಹೊಳೆಯದಿದ್ದರೆ ಹುಡುಗ/ಹುಡುಗಿ ಸಿಗಲ್ಲ. ನಿಮ್ಮನ್ನು ನೀವು ಪಾಲಿಶ್ ಮಾಡಿಕೊಳ್ಳುತ್ತಿರಿ. ಹಣ, ಉದ್ಯೋಗ, ಬುದ್ಧಿ, ಕೌಶಲ .. ಒಂದೊಂದೇ ಗಳಿಸುತ್ತಾ ಹೋಗಿ. ಸಂಗಾತಿ ತಾನಾಗೆ ಸಿಗುತ್ತಾರೆ.
6. ಹೆಚ್ಚೆಂದರೆ ಊಟ ಅಥವಾ ರೈಲಿನ ಟಿಕೆಟ್ಟು- ಇಷ್ಟಕ್ಕೆ ಮಾತ್ರ ಹಣ ಇಟ್ಟುಕೊಂಡು ವರ್ಷಕ್ಕೊಮ್ಮೆ ಒಂದು ವಾರ ಹೊರಗೆ ಹೋಗಿಬನ್ನಿ.
7. ಸಂಕೋಚ ಬದಿಬಿಟ್ಟು ಆನ್‌ಲೈನ್ ಗ್ರೂಪ್‌ಗಳಲ್ಲಿ ತೊಡಗಿಸಿಕೊಳ್ಳಿ. ಸ್ನೇಹ ಬೆಳೆಸಿ. ಸಾಧ್ಯವಾದರೆ ಭೇಟಿಯಾಗಿ. ಕಲೆ, ಸಿನಿಮಾ, ವಿಜ್ಞಾನ, ತಂತ್ರಜ್ಞಾನ ಇವೆಂಟುಗಳಲ್ಲಿ ಪಾಲ್ಗೊಳ್ಳಿ. ಸುಮ್ಮನೆ ಹೋಗಿ ಕೂತು ಬನ್ನಿ.
8. ಲೈಫ್ ಬಗ್ಗೆ ಜಾಸ್ತಿ ಕನ್‌ಫ್ಯೂಜ್ ಆಗಬೇಡಿ. ಪ್ರೆಶರ್ ಹಾಕಿಕೊಳ್ಳಬೇಡಿ. ಕೆಟ್ಟ ವ್ಯಕ್ತಿಯಾಗದೇ ಉಳಿದರೆ ಮಿಕ್ಕಿದ್ದೆಲ್ಲ ತಾನಾಗೇ ಸಿಗುತ್ತದೆ. ಒಳ್ಳೆಯವರಿಗೆ ಡಿಮ್ಯಾಂಡ್ ಜಾಸ್ತಿಯಿದೆ.
9. ಮದುವೆಗೆ ಆತುರ ಬೀಳಬೇಡಿ. ಇಷ್ಟಪಡಿ. ಸಾಧ್ಯವಾದರೆ ಲಿವಿನ್ ಇರಿ. ಹೊಂದಾಣಿಕೆ ಆಗಲಿಲ್ಲವೆಂದರೆ ಮುಂಚೆಯೇ ಮಾತಾಡಿಕೊಂಡು ಗೌರವಯುತವಾಗಿ ದೂರವಾಗಿ. ಸ್ನೇಹಿತರಾಗಿ ಉಳಿಯಿರಿ.
10. ಕ್ರೆಡಿಟ್ ಕಾರ್ಡ್ ಬಳಸಬೇಡಿ.
11. ತಂದೆತಾಯಿಯರದ್ದು ಸೀಮಿತ ದೃಷ್ಟಿಯಿರುತ್ತದೆ. ಅವರಿಗೆ ನೋವು ಮಾಡದೆಯೇ ಅವರು ತೊಡರು ಹಾಕುವ ಬಲೆಗಳಲ್ಲಿ ಸಿಕ್ಕಿಕೊಳ್ಳಬೇಡಿ. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿರಲಿ.
12. ಉದ್ಯೋಗ ಇಲ್ಲದೆಯೇ ಆರು ತಿಂಗಳು ಇರಬಲ್ಲೆ ಅನ್ನುವಷ್ಟು ಫಂಡ್ ಇಟ್ಟುಕೊಳ್ಳಿ. ನಿಯಮಿತ ಸಂಬಳದ ಕಂಫರ್ಟ್ ಜೋನಿಗೆ ಬೀಳಬೇಡಿ.
13. ಮಾನಸಿಕವಾಗಿ ದಿಕ್ಸೂಚಿಗಳನ್ನು ಸೃಷ್ಟಿಸಿಕೊಳ್ಳಿ. ವಿವಿಧ ವಿಷಯಗಳಲ್ಲಿನ ಸಾಧಕರನ್ನು ಮಾನಸಗುರುಗಳನ್ನಾಗಿ ಮಾಡಿಕೊಳ್ಳಿ.
15. ಹೊಸ ಭಾಷೆ ಕಲಿಯಿರಿ. ಕ್ರಿಕೆಟ್ ಅಲ್ಲದ ಒಂದು ಕ್ರೀಡೆ ಫಾಲೋ ಮಾಡಿ. ಹೊಸ ಮ್ಯೂಜಿಕ್ ಇಂಸ್ಟ್ರುಮೆಂಟ್ ಮೇಲೆ ಕೈಯಾಡಿಸಿ.
16. ಒಳ್ಳೆಯ ಪುಸ್ತಕಗಳನ್ನು ಓದಿ, ಒಳ್ಳೆಯ ಸಿನಿಮಾಗಳನ್ನು ನೋಡಿ. ಇಷ್ಟವಾದವನ್ನು ಹುಡುಕಿ ಕೊಂಡು ಓದಿ. ರೆಂಟ್ ತಗೊಂಡು ನೋಡಿ. ವರ್ಲ್ಡ್ ಸಿನಿಮಾಗೆ ತೆರೆದುಕೊಳ್ಳಿ.
17. ಯಾವುದಾದರೂ ಒಂದು ಕ್ರೀಡೆಯನ್ನು ನಿಮ್ಮ ಜೀವನದ ಅವಿಭಾಜ್ಯ ಅಂಗ ಮಾಡಿಕೊಳ್ಳಿ. ಅದು ನಿಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಫಿಟ್ ಇಡುತ್ತದೆ.
18. ಸಂಕೋಚ ತೊರೆದು ಒಂದು ಡ್ಯಾನ್ಸ್ ಕ್ಲಾಸಿಗೆ ಸೇರಿಕೊಳ್ಳಿ. ಮದುವೆಗಳಲ್ಲಿ ಸಮಾರಂಭಗಳಲ್ಲಿ ಪಾರ್ಟಿಗಳಲ್ಲಿ ಆಫೀಸಲ್ಲಿ ಎಲ್ಲಾ ಕಡೆಗೂ ನಿಮಗೆ ಅಡ್ವಾಂಟೇಜ್ ಇರುತ್ತದೆ.
19. ಶ್ರೀಮಂತರಾಗಲು ಶಾರ್ಟ್ ಕಟ್ ಎಂಬುದು ಇಲ್ಲವೇ ಇಲ್ಲ. ಡೈಲಿ ಟ್ರೇಡಿಂಗ್, ಬೆಟ್ಟಿಂಗ್, ಆನ್ಲೈನ್ ಗೇಮಿಂಗ್ ಇವೆಲ್ಲವೂ ಮೋಸ. ಹತ್ತಿರವೂ ಸುಳಿಯಬೇಡಿ.
ಸಮಯ ಸಾಕಷ್ಟಿದೆ. ಟೈಮೇ ಇಲ್ಲ ಎಂಬುದು ಮಿಥ್ಯೆ. ಹೊಸ ವರ್ಷಕ್ಕೆ ಹಾರ್ದಿಕ ಶುಭಾಶಯಗಳು.
ಡಿಸೆಂಬರ್ 31 ರಂದು ಮಧು ಈ ಪೋಸ್ಟ್ ಹಾಕಿದ್ದಾರೆ. ಈಗಾಗಲೇ ಹಲವರು ಇವರ ಪೋಸ್ಟ್ ನೋಡಿದ್ದು 350ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. 80ಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿರುವ ಈ ಪೋಸ್ಟ್ 26 ಶೇರ್ ಆಗಿದೆ. ಹಲವರು ಇವರ ಸಲಹೆಗಳನ್ನು ಮೆಚ್ಚು ಕಾಮೆಂಟ್ ಮಾಡಿದ್ದಾರೆ.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope