New Year 2025: ಹೊಸ ವರ್ಷಕ್ಕೆ ಪಾರ್ಟಿ ಪ್ಲಾನ್ ಮಾಡ್ತಾ ಇದೀರಾ, ಅದಕ್ಕೂ ಮೊದಲು ಹ್ಯಾಂಗೊವರ್‌ನಿಂದ ಹೊರ ಬರುವ ಟಿಪ್ಸ್ ತಿಳ್ಕೊಳ್ಳಿ
ಜಗತ್ತಿನಾದ್ಯಂತ ಹೊಸ ವರ್ಷದ ಸಂಭ್ರಮ ಶುರುವಾಗಿದೆ. ಹೊಸ ವರ್ಷಕ್ಕೂ ಮುನ್ನ ಇಯರ್ ಎಂಡ್ ಪಾರ್ಟಿ ಕಾಮನ್. ಹಲವರಿಗೆ ಹೊಸ ವರ್ಷದ ಹಿಂದಿನ ದಿನ ಕುಡಿದಿಲ್ಲ ಅಂದ್ರೆ ಹೊಸ ವರ್ಷ ವೆಲ್‌ಕಮ್ ಮಾಡಿದಂತೆ ಇರೋಲ್ಲ. ನೀವು ನ್ಯೂ ಇಯರ್ ಎಂಡ್ ಪಾರ್ಟಿ ಪ್ಲಾನ್ ಮಾಡಿದ್ರೆ, ಡ್ರಿಂಕ್ಸ್ ಮಾಡಿದ ಮೇಲೆ ಹ್ಯಾಂಗ್ ಓವರ್‌ನಿಂದ ಹೊರ ಬರೋಕೆ ಏನ್ ಮಾಡ್ಬೇಕು ಅಂತ ಈಗಲೇ ತಿಳ್ಕೊಂಬಿಡಿ.
2025ರ ಹೊಸ ವರ್ಷ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಡಿಸೆಂಬರ್ 31 ಅಥವಾ ವರ್ಷಾಂತ್ಯದ ದಿನ ಎಂದರೆ ಬಹುತೇಕರು ಪಾರ್ಟಿ ಮೂಡ್‌ನಲ್ಲಿರುತ್ತಾರೆ. ನ್ಯೂ ಇಯರ್ ಹಿಂದಿನ ದಿನ ಪಾರ್ಟಿ ಮಾಡಿಲ್ಲ ಅಂದ್ರೆ ಮರುದಿನ ಬೆಳಿಗ್ಗೆ ಆಗೊಲ್ಲ ಅನ್ನೋ ಮನಸ್ಥಿತಿಯಲ್ಲಿ ಇರುವವರೇ ನಮ್ಮ ನಡುವೆ ಹೆಚ್ಚಿದ್ದಾರೆ. ಕೆಲವರು ಪಾರ್ಟಿಯಲ್ಲಿ ತಮ್ಮಿಷ್ಟದ ತಿನಿಸುಗಳನ್ನು ತಿಂದು ಎದ್ದು ಬಂದರೆ ಇನ್ನೂ ಕೆಲವರು ಎಣ್ಣೆ ಇಲ್ಲದೇ ಎದ್ದು ಬರಲು ಸಾಧ್ಯವೇ ಇಲ್ಲ.
ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕರವಾದ್ರೂ ಹಲವರಿಗೆ ಡ್ರಿಂಕ್ಸ್ ಮಾಡಿಲ್ಲ ಅಂದ್ರೆ ಪಾರ್ಟಿ ಪರಿಪೂರ್ಣವಾಗಿದೆ ಅಂತ ಅನ್ನಿಸೋದೇ ಇಲ್ಲ. ಕಂಠಪೂರ್ತಿ ಕುಡಿದು ಕುಣಿದು ಎಂಜಾಯ್ ಮಾಡಬೇಕು ಎಂದುಕೊಳ್ಳುತ್ತಾರೆ. ಆದರೆ ಕುಡಿದ ಮೇಲೆ ಮರುದಿನ ಹ್ಯಾಂಗೋವರ್ ಕೂಡ ಫಿಕ್ಸ್.
ಡಿಸೆಂಬರ್ 31ರ ಪಾರ್ಟಿ ಹ್ಯಾಂಗೋವರ್‌ನ ಪರಿಣಾಮವಾಗಿ ಮರುದಿನ ತಲೆನೋವು, ಕಣ್ಣುಗಳು ಕೆಂಪಾಗುವುದು, ಸ್ನಾಯು ಸೆಳೆತ, ಅತಿಯಾದ ಬಾಯಾರಿಕೆ, ಬಿಪಿ ಹೆಚ್ಚಾಗುವುದು, ತಲೆತಿರುಗುವುದು ಮತ್ತು ಕಿರಿಕಿರಿಯಂತಹ ರೋಗಲಕ್ಷಣಗಳನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ನೀವು ಈ ವರ್ಷ ಪಾರ್ಟಿ ಪ್ಲಾನ್ ಮಾಡುತ್ತಿದ್ದು ಹ್ಯಾಂಗೋವರ್‌ನಿಂದ ಹೊರ ಬರುವ ಮಾರ್ಗಗಳ ಬಗ್ಗೆ ತಿಳಿಯಲು ಬಯಸುತ್ತಿದ್ದರೆ ಈ ಐಡಿಯಾಗಳು ನಿಮಗೆ ಇಷ್ಟವಾಗಬಹುದು ನೋಡಿ.
ಹ್ಯಾಂಗೋವರ್‌ನಿಂದ ಹೊರ ಬರಲು ಸಲಹೆ
ಹೈಡ್ರೇಟ್ ಆಗಿರುವುದು
ಹಾರ್ವರ್ಡ್ ಮೆಡಿಕಲ್ ಪ್ರಕಾರ, ಪಾರ್ಟಿ ಮಾಡುವ ಸಂದರ್ಭ ಹಾಗೂ ನಂತರ ದೇಹವನ್ನು ಹೆಚ್ಚು ಹೈಡ್ರೇಟ್ ಆಗಿರಿಸಿಕೊಳ್ಳುವ ಮೂಲಕ ಹ್ಯಾಂಗೋವರ್‌ನಿಂದ ಹೊರ ಬರಲು ಸಾಧ್ಯವಿದೆ. ಅತಿಯಾದ ಮದ್ಯ ಸೇವನೆಯಿಂದ ವ್ಯಕ್ತಿ ಹೆಚ್ಚು ಮೂತ್ರ ವಿಸರ್ಜನೆ ಮಾಡುತ್ತಾನೆ. ಅತಿಯಾದ ಮದ್ಯಪಾನವು ದೇಹದಲ್ಲಿ ಹೆಚ್ಚು ವಾಸೊಪ್ರೆಸ್ಸಿನ್ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ, ಇದರಿಂದಾಗಿ ಮೂತ್ರಪಿಂಡದಲ್ಲಿ ಹೆಚ್ಚು ಮೂತ್ರ ಉತ್ಪತ್ತಿಯಾಗುತ್ತದೆ. ಪರಿಣಾಮವಾಗಿ, ದೇಹದಲ್ಲಿ ನಿರ್ಜಲೀಕರಣ ಸಂಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹೆಚ್ಚು ಹೆಚ್ಚು ನೀರು ಕುಡಿಯುವ ಮೂಲಕ ನಿರ್ಜಲೀಕರಣ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಇದರಿಂದಾಗಿ ಆಲ್ಕೋಹಾಲ್ ಪ್ರಮಾಣವು ರಕ್ತದಿಂದ ವೇಗವಾಗಿ ಹೊರಬರಲು ಪ್ರಾರಂಭಿಸುತ್ತದೆ ಮತ್ತು ವ್ಯಕ್ತಿಯು ಹ್ಯಾಂಗೊವರ್‌ನಿಂದ ಬೇಗ ಪರಿಹಾರ ಪಡೆಯಲು ಸಾಧ್ಯವಿದೆ.
ಪುದೀನಾ
ಹ್ಯಾಂಗೊವರ್ ಪರಿಹಾರಕ್ಕೆ ಪುದೀನ ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಬಿಸಿನೀರಿನಲ್ಲಿ 3 ರಿಂದ 4 ಪುದಿನಾ ಎಲೆಗಳನ್ನು ಸೇರಿಸಿ ಕುಡಿಯುವುದರಿಂದ ಮದ್ಯದ ಅಮಲು ತಕ್ಷಣವೇ ದೂರವಾಗುತ್ತದೆ. ಇದರಿಂದ ನೀವು ದಿನಪೂರ್ತಿ ಹ್ಯಾಂಗೋವರ್‌ನಲ್ಲಿ ಕಳೆಯುವುದು ತಪ್ಪುತ್ತದೆ.
ವಿಟಮಿನ್ ಸಿ ಮತ್ತು ಸತುವಿನ ಸೇವನೆ
ಜರ್ನಲ್ ಆಫ್ ಕ್ಲಿನಿಕಲ್ ಮೆಡಿಸಿನ್ ವರದಿಯ ಪ್ರಕಾರ, ಆಲ್ಕೋಹಾಲ್ ಕುಡಿಯುವ 24 ಗಂಟೆಗಳ ಮೊದಲು ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಬಿ ಮತ್ತು ಸತುವಿನಾಂಶ ಇರುವ ಆಹಾರಗಳ ಸೇವನೆಯಿಂದ ಹ್ಯಾಂಗೋವರ್ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಿದೆ. ಆದಾಗ್ಯೂ ಈ ಅಧ್ಯಯನದ ಕುರಿತು ಇನ್ನೂ ಹೆಚ್ಚಿನ ಸಂಶೋಧನೆಗಳ ಅಗತ್ಯವಿದೆ.
ನಿಂಬೆಹಣ್ಣು
ಆಲ್ಕೋಹಾಲ್ ಹ್ಯಾಂಗೋವರ್ ಸರಿಯಾಗಲು ನಿಂಬೆ ರಸ ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಆಲ್ಕೋಹಾಲ್ ಅನ್ನು ತ್ವರಿತವಾಗಿ ಹೀರಿಕೊಳ್ಳುತ್ತದೆ ಮತ್ತು ಹ್ಯಾಂಗೊವರ್‌ನಿಂದ ತ್ವರಿತ ಪರಿಹಾರ ನೀಡುತ್ತದೆ. ಒಂದು ಲೋಟ ತಣ್ಣನೆಯ ನೀರಿಗೆ ನಿಂಬೆ ರಸ ಬೆರೆಸಿ ಕುಡಿಯುವುದು ಹ್ಯಾಂಗೋವರ್‌ನಿಂದ ಹೊರ ಬರಲು ಉತ್ತಮ ಪರಿಹಾರ ವಿಧಾನವಾಗಿದೆ.
ಶುಂಠಿ
ಹ್ಯಾಂಗೋವರ್‌ನಿಂದ ಹೊರ ಬರಲು ಶುಂಠಿ ರಸವನ್ನು ಕೂಡ ಬಳಸಬಹುದು. ಇದು ಪರಿಣಾಮಕಾರಿ ವಿಧಾನ ಕೂಡ ಹೌದು. ಚಡಪಡಿಕೆಯನ್ನು ಹೋಗಲಾಡಿಸುವ ಔಷಧೀಯ ಗುಣಗಳು ಶುಂಠಿಯಲ್ಲಿವೆ. ಇದು ತಲೆನೋವು ಮತ್ತು ಆತಂಕವನ್ನು ದೂರ ಮಾಡಲು ಸಹ ಸಹಾಯ ಮಾಡುತ್ತದೆ. ಶುಂಠಿಯ ರಸವನ್ನು ಕುಡಿಯಲು ಕಹಿ ಎನಿಸಿದರೆ ಅದಕ್ಕೆ ಜೇನುತುಪ್ಪ ಸೇರಿಸಿ ಕೂಡ ಕುಡಿಯಬಹುದು.
ನ್ಯೂ ಇಯರ್ ಪಾರ್ಟಿ ಮಾಡಿದ ಮೇಲೆ ಬಹುತೇಕರು ಹ್ಯಾಂಗೋವರ್ ಅನುಭವಿಸುತ್ತಾರೆ. ಆದರೆ ಈ ಮೇಲಿನ ಸಲಹೆಗಳನ್ನು ಅನುಸರಿಸುವ ಮೂಲಕ ತಕ್ಷಣಕ್ಕೆ ಹ್ಯಾಂಗೋವರ್‌ನಿಂದ ಹೊರ ಬರಲು ಸಾಧ್ಯವಿದೆ. ಈ ಇಯರ್ ಎಂಡ್‌ಗೆ ಪಾರ್ಟಿ ಮಾಡಲು ಹೋಗುವ ಮುನ್ನ ಈ ಟ್ರಿಕ್ಸ್ ತಿಳಿದುಕೊಂಡಿರಿ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope