ಗಂಡು–ಹೆಣ್ಣು ಎಂಬ ಭೇದಕ್ಕೆ ಬೈ ಹೇಳಿ, ಕಚೇರಿ–ಮನೆಯಲ್ಲಿ ನಿಮ್ಮನ್ನ ನೀವು ಬದಲಿಸಿಕೊಳ್ಳಿ; ವೃತ್ತಿಪರ ಮಹಿಳೆಯರಿಗಾಗಿ ಹೊಸ ವರ್ಷದ ನಿರ್ಣಯಗಳು
ಕನ್ನಡ ಸುದ್ದಿ  /  ಜೀವನಶೈಲಿ  /  ಗಂಡು–ಹೆಣ್ಣು ಎಂಬ ಭೇದಕ್ಕೆ ಬೈ ಹೇಳಿ, ಕಚೇರಿ–ಮನೆಯಲ್ಲಿ ನಿಮ್ಮನ್ನ ನೀವು ಬದಲಿಸಿಕೊಳ್ಳಿ; ವೃತ್ತಿಪರ ಮಹಿಳೆಯರಿಗಾಗಿ ಹೊಸ ವರ್ಷದ ನಿರ್ಣಯಗಳು

ಗಂಡು–ಹೆಣ್ಣು ಎಂಬ ಭೇದಕ್ಕೆ ಬೈ ಹೇಳಿ, ಕಚೇರಿ–ಮನೆಯಲ್ಲಿ ನಿಮ್ಮನ್ನ ನೀವು ಬದಲಿಸಿಕೊಳ್ಳಿ; ವೃತ್ತಿಪರ ಮಹಿಳೆಯರಿಗಾಗಿ ಹೊಸ ವರ್ಷದ ನಿರ್ಣಯಗಳು

ವರ್ಕಿಂಗ್ ವುಮೆನ್‌ಗಳು ಗಾಣದೆತ್ತಿನಂತೆ ಮನೆ–ಕಚೇರಿ ಎಂದು ದುಡಿಯುತ್ತಾರೆ. ಇವರಿಗೆ ವೈಯಕ್ತಿಕ ಬದುಕಿಗೆ ಸಮಯ ಇರುವುದೇ ಇಲ್ಲ. ನೀವು ವರ್ಕಿಂಗ್ ವುಮೆನ್‌ ಆಗಿದ್ರೆ 2025ರಿಂದ ನಿಮ್ಮ ಬದುಕನ್ನ ಬದಲಿಸಿಕೊಳ್ಳಿ. ಈ ಹೊಸ ವರ್ಷಕ್ಕೆ ಕಚೇರಿ ಹಾಗೂ ಮನೆಯಲ್ಲಿ ನಿಮ್ಮನ್ನು ನೀವು ಬದಲಿಸಿಕೊಳ್ಳುವ ನಿರ್ಣಯ ಮಾಡಿ. ಗಂಡು–ಹೆಣ್ಣು ಎಂಬ ತಾರತಮ್ಯಕ್ಕೆ ಗುಡ್‌ ಬೈ ಹೇಳಿ.

ವೃತ್ತಿಪರ ಮಹಿಳೆಯರಿಗಾಗಿ ಹೊಸ ವರ್ಷದ ನಿರ್ಣಯಗಳು
ವೃತ್ತಿಪರ ಮಹಿಳೆಯರಿಗಾಗಿ ಹೊಸ ವರ್ಷದ ನಿರ್ಣಯಗಳು (PC: Canva)

ಹೊಸ ವರ್ಷ ಬಂದಾಗ ಹೊಸ ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ. ಈ ವರ್ಷ ಈ ಸಂಕಲ್ಪಗಳನ್ನು ಮಾಡಿಯೇ ತೀರುತ್ತೇನೆ ಎಂದು ದೃಢ ನಿರ್ಧಾರ ಮಾಡುತ್ತೇವೆ. ಆದರೆ ಕೆಲವು ತಿಂಗಳಲ್ಲಿ ಸೋತು ಕೈ ಚೆಲ್ಲುತ್ತೇವೆ. ಅದರಲ್ಲೂ ವರ್ಕಿಂಗ್ ವುಮೆನ್‌ಗಳ ಕಥೆಯೇ ಭಿನ್ನ. ಕಚೇರಿ, ಮನೆ ಎಂದು ಹೆಣಗಾಡುವ ಇವರಿಗೆ ತಮ್ಮ ನಿರ್ಣಯಗಳಂತೆ ನಡೆದುಕೊಳ್ಳಲು ಸಾಧ್ಯವೇ ಇಲ್ಲ. ಯಾಕೆಂದರೆ ಅವರು ಮಹಿಳೆಯರು.

ಹೌದು ಮಹಿಳೆ ಅಥವಾ ಹೆಣ್ಣು ಎಂದರೆ ಎಲ್ಲ ಕಡೆಯಲ್ಲೂ ದುಡಿಯುವ ಆಳು ಮಾತ್ರ, ಆಕೆಗೆಂದು ಒಂದು ವೈಯಕ್ತಿಕ ಜೀವನ ಅಥವಾ ಸಮಯ ಬೇಕು ಎಂದು ಯಾರೂ ಅಂದುಕೊಳ್ಳುವುದಿಲ್ಲ. ಗಂಡಸರಿಗೆ ಕಚೇರಿ, ವೈಯಕ್ತಿಕ ಜೀವನದ ಜೊತೆಗೆ ಪರ್ಸನಲ್ ಸ್ಪೇಸ್ ಎನ್ನುವುದು ಇರುತ್ತದೆ. ಆದರೆ ಮಹಿಳೆಗೆ ವೈಯಕ್ತಿಕ ಜೀವನದ ಜೊತೆ ಪರ್ಸನಲ್ ಸ್ಪೇಸ್ ಕಲೆತು ಹೋಗಿರುತ್ತದೆ. ಹಾಗಂತ ಎಷ್ಟು ವರ್ಷ ಹೀಗೆ ಕಳೆದುಬಿಡೋದು ಅಲ್ವಾ. 2025ರ ಹೊಸ ವರ್ಷ ಬಂದೇ ಬಿಟ್ಟಿದೆ, ನೀವು ಬದಲಾಗಿ, ಬದಲಾವಣೆಗಾಗಿ ಒಂದಿಷ್ಟು ನಿರ್ಣಯಗಳನ್ನು ತೆಗೆದುಕೊಳ್ಳಿ. ಮನೆ ಕಚೇರಿಯಲ್ಲಿ ಹೆಣ್ಣೆಂಬ ಭೇದ ಇಲ್ಲದಂತೆ ಬದುಕು ಸಾಗಿಸುವ ಛಲ ರೂಢಿಸಿಕೊಳ್ಳಿ. ಈ ವರ್ಷದ ನಿಮ್ಮ ನಿರ್ಣಯಗಳು ನಿಮ್ಮ ಬದುಕನ್ನು ಬದಲಿಸಲಿ. ಹೊಸ ವರ್ಷಕ್ಕೆ ವೃತ್ತಿ ಮಹಿಳೆಯರು ತೆಗೆದುಕೊಳ್ಳಬಹುದಾದ ನಿರ್ಣಯಗಳು ಹೀಗಿವೆ.

ವೃತ್ತಿಯಲ್ಲಿ ಇನ್ನೂ ಎತ್ತರ ಏರಿ

ಹೆಣ್ಣು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸುತ್ತಾಳೆ ಎಂಬ ಮಾತು ಚಾಲ್ತಿಯಲ್ಲಿದ್ದರೂ ಇಂದಿಗೂ ಎಷ್ಟೋ ಬಾರಿ ಹೆಣ್ಣು ಎನ್ನುವ ಕಾರಣಕ್ಕೆ ಮಹಿಳೆಯರಿಗೆ ಸರಿಯಾದ ಸ್ಥಾನಮಾನ ಸಿಕ್ಕಿರುವುದಿಲ್ಲ. ಆದರೆ ಒಂದು ವಿಚಾರ ನೆನಪಿಡಿ. ನಿಮಗೆ ಸಿಕ್ಕಿರದ ಸ್ಥಾನಮಾನವನ್ನು ನೀವೇ ಗಳಿಸಿಕೊಳ್ಳಬೇಕು. ನಿಮ್ಮ ಕೆಲಸದ ಮೂಲಕ ನೀವು ಆ ಸ್ಥಾನಮಾನ ಗಳಿಸಿಕೊಳ್ಳಲು ಸಾಧ್ಯವಿದೆ ಎಂಬುದನ್ನು ಮರೆಯಬೇಡಿ. ಕೆಲಸ ಮಾಡಿ ತೋರಿಸಿ. ನಿಮ್ಮ ಸಾಮರ್ಥ್ಯವನ್ನು ಮುಚ್ಚಿಡಬೇಡಿ. ನಿಮ್ಮ ಸಾಮರ್ಥ್ಯವೇ ನಿಮಗೆ ಅಸ್ತ್ರ ಎನ್ನುವುದನ್ನು ಮರೆಯಬೇಡಿ.

ಕಚೇರಿಯಲ್ಲಿ ಜವಾಬ್ದಾರಿ ತೆಗೆದುಕೊಳ್ಳಿ

ಬಹುತೇಕ ಹೆಣ್ಣುಮಕ್ಕಳು ಅದರಲ್ಲೂ ವೃತ್ತಿಪರ ಮಹಿಳೆಯರು ಮನೆ ಹಾಗೂ ಕಚೇರಿ ಎಂದು ಬಂದಾಗ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಆದರೆ ನೀವು ಹಾಗೆ ಮಾಡದಿರಿ. ಈಗಾಗಲೇ ಜವಾಬ್ದಾರಿಯಿಂದ ಹಿಂದೆ ಸರಿದಿದ್ದರೆ ಈ ವರ್ಷ ಯಾವುದೇ ಜವಾಬ್ದಾರಿ ಕೊಟ್ಟರು ತೆಗೆದುಕೊಳ್ಳುತ್ತೇನೆ ಎನ್ನುವ ದೃಢನಿರ್ಧಾರ ಮಾಡಿ. ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ತೋರಿಸಿ. ಹೆಣ್ಣುಮಕ್ಕಳಿಗೆ ಜವಾಬ್ದಾರಿ ಕಡಿಮೆ ಎನ್ನುವ ಮಾತನ್ನು ಹುಸಿಗೊಳಿಸಿ.

ಗಂಡನಿಗೆ ಕೆಲಸ ಹಂಚಿ

ಬಹಳಷ್ಟು ಜನ ಹೆಣ್ಣುಮಕ್ಕಳು ಮನೆಯಲ್ಲಿ ಗಂಡನಿಗೆ ಯಾವುದೇ ಕೆಲಸ ಕೊಡುವುದಿಲ್ಲ. ತಾವೊಬ್ಬರೇ ಕಚೇರಿ, ಮನೆ ಎಂದು ಹೆಣಗಾಡುತ್ತಾರೆ. ಆದರೆ ನೀವು ಇನ್ನು ಮುಂದೆ ಬದಲಾಗಿ. ಮನೆಯಲ್ಲಿ ಗಂಡನೊಂದಿಗೆ ಕೆಲಸಗಳನ್ನು ಹಂಚಿಕೊಳ್ಳಿ. ಒಂದು ಪಟ್ಟಿ ಮಾಡಿ ಗಂಡ ಏನೇನು ಮಾಡಬೇಕು ಎಂಬುದನ್ನು ಅದರಲ್ಲಿ ಬರೆಯಿರಿ. ಗಂಡನಿಗೆ ವಹಿಸಲಾದ ಕೆಲಸವನ್ನು ಅವರು ತಪ್ಪದೇ ಮಾಡಬೇಕು ಎಂದು ಆಜ್ಞೆ ಮಾಡಿ. ಅಡುಗೆಮನೆ ಕೆಲಸದಲ್ಲೂ ಗಂಡನಿಗೆ ಪಾಲು ನೀಡಿ. ಮಕ್ಕಳ ಜವಾಬ್ದಾರಿಯನ್ನೂ ಇಬ್ಬರೂ ಹಂಚಿಕೊಳ್ಳಿ.

ಡ್ರೈವಿಂಗ್ ಕಲಿಯುವ ಪಣ ತೊಡಿ

ಬಹಳಷ್ಟು ವೃತ್ತಿಪರ ಹೆಣ್ಣುಮಕ್ಕಳು ಬಸ್‌, ಆಟೊ, ಮೆಟ್ರೊ ಎಂದು ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುವ ಮೂಲಕವೇ ಬದುಕು ಸವೆಸುತ್ತಾರೆ. ಅದು ಸುರಕ್ಷಿತವೂ ಹೌದು ಎಂಬುದು ಅವರ ಭಾವನೆ. ಇನ್ನೂ ಕೆಲವರಿಗೆ ಗಂಡನೇ ಕಚೇರಿಗೆ ಡ್ರಾಪ್ ಮಾಡಬೇಕು, ಬರುವಾಗ ಕರೆದುಕೊಂಡು ಬರಬೇಕು. ಈ ವಿಚಾರದಲ್ಲಿ ಎಷ್ಟೋ ಮಂದಿ ಗಂಡನ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ಈ ಅಭ್ಯಾಸಕ್ಕೆ ಬ್ರೇಕ್ ಹಾಕಿ. ನೀವು ಗಾಡಿ ಕಲಿತು, ಸ್ವತಃ ಗಾಡಿಯಲ್ಲಿ ಓಡಾಡುವಂತಾಗಿ. ಇದರಿಂದ ನೀವು ಸ್ವಾಭಿಮಾನಯಾಗಲು ಸಾಧ್ಯ.

ಮೀ ಟೈಮ್‌ಗೆ ನೀಡಿ ಆದ್ಯತೆ

ಮೀ ಟೈಮ್ ಅಥವಾ ಪರ್ಸನಲ್ ಟೈಮ್ ಅನ್ನೋದು ವೃತ್ತಿಪರ ಮಹಿಳೆಯರಿಗೆ ಕನಸಾಗಿರುತ್ತದೆ. ಆದರೆ ಇದು ಬದುಕಿಗೆ ಅವಶ್ಯ ಎಂಬುದನ್ನು ಬಹುತೇಕರು ಮರೆತಿರುತ್ತಾರೆ. ವೃತ್ತಿ ಹಾಗೂ ವೈಯಕ್ತಿಕ ಜೀವನವು ಮಹಿಳೆಯರ ಮೀ ಟೈಮ್ ಅನ್ನು ಮರೆಸಿರುತ್ತದೆ. ಆದರೆ ಈ ಹೊಸವರ್ಷದಿಂದ ನೀವು ನಿಮಗೆಂದು ಒಂದಿಷ್ಟು ಸಮಯ ಮೀಸಲಿಡುತ್ತೀರಿ ಎಂದು ಶಪಥ ಮಾಡಿ. ನಿಮ್ಮ ಸೌಂದರ್ಯದಿಂದ ಹಿಡಿದು ವೈಯಕ್ತಿಕ ಆರೈಕೆವರೆಗೆ ನಿಮಗೂ ನೀವು ಆದ್ಯತೆ ಕೊಡುತ್ತೇನೆ ಎಂಬ ನಿರ್ಣಯ ಮಾಡಿಕೊಳ್ಳಿ.

ಪ್ರವಾಸ ಪ್ಲಾನ್ ಮಾಡಿ

ವರ್ಕಿಂಗ್ ವುಮೆನ್‌ಗಳ ಆಸೆಗಳ ಬಕೆಟ್‌ ಲಿಸ್ಟ್‌ನಲ್ಲಿ ಟ್ರಿಪ್‌ಗೆ ಹೋಗೋದು ಸೇರಿರುತ್ತದೆ. ಆದರೆ ಗಂಡ ಮಾತ್ರ ಆಫೀಸ್‌ನಿಂದ ಟ್ರಿಪ್‌, ಸ್ನೇಹಿತರ ಜೊತೆ ಪ್ರವಾಸ ಅಂತ ಹೊರಗಡೆ ಹೋಗ್ತಾನೆ ಇರ್ತಾನೆ. ಮಕ್ಕಳು, ಮನೆ, ಕಚೇರಿ ಅಂತ ಹೆಣ್ಣುಮಕ್ಕಳು ಮನೆಯಲ್ಲೇ ಉಳಿದು ಬಿಡುತ್ತಾರೆ. ಅಂತಹವರು ಈ ವರ್ಷ ಪ್ರವಾಸಕ್ಕೆ ಹೋಗಿಯೇ ಹೋಗುತ್ತೇನೆ ಎಂಬ ದೃಢಸಂಕಲ್ಪ ಮಾಡಿ. ಸೋಲೊ ಟ್ರಿಪ್ ಹೋಗುವುದು ರೂಢಿಕೊಳ್ಳಿ. ಪ್ರವಾಸ ಹೋಗಲು ಸ್ನೇಹಿತೆಯರನ್ನು ಜೊತೆ ಮಾಡಿಕೊಳ್ಳಿ.

ಮಕ್ಕಳ ಜವಾಬ್ದಾರಿಯಲ್ಲಿ ಗಂಡನಿಗೂ ಪಾಲು ನೀಡಿ

ಭಾರತದಂತಹ ದೇಶದಲ್ಲಿ ಮೊದಲಿನಿಂದಲೂ ಹೆಣ್ಣು ಎಂದರೆ ಮಕ್ಕಳನ್ನು ಹೆರುವವಳು, ಹೆತ್ತ ತಪ್ಪಿಗೆ ಅವಳೇ ಮಕ್ಕಳನ್ನು ಸಾಕಿ ಸಲಹಬೇಕು ಎನ್ನುವ ಮನಸ್ಥಿತಿ ಇದೆ. ಆದರೆ ಆ ಮನಸ್ಥಿತಿ ಬದಲಾಗಬೇಕು ಎನ್ನುವ ಸಂಕಲ್ಪ ಮಾಡಿ. ಮಗುವಿನ ಜವಾಬ್ದಾರಿಯನ್ನು ಗಂಡನಿಗೂ ಹಂಚಿ. ಮಕ್ಕಳ ಹೋಮ್ ವರ್ಕ್ 3 ದಿನ ನೀವು, 3 ದಿನ ಗಂಡ ಮಾಡುವಂತೆ ಮಾಡಿ. ಮಗುವಿನ ಬೇಕು, ಬೇಡಗಳಿಗೆ ಗಂಡನೂ ಜವಾಬ್ದಾರನಾಗುವಂತೆ ಮಾಡಿ. ಈ ವರ್ಷದಿಂದ ಗಂಡ ಮಗುವಿನ ಎಲ್ಲಾ ಜವಾಬ್ದಾರಿಗಳಲ್ಲೂ ಸಮಾನ ಪಾಲುದಾರ ಎಂಬ ದೃಢ ನಿರ್ಧಾರ ತೆಗೆದುಕೊಳ್ಳಿ.

ಮಹಿಳೆ ಎನ್ನುವ ಕಾರಣಕ್ಕೆ ಕಚೇರಿಯಾಗಲಿ ಮನೆಯಾಗಲಿ ನಿಮ್ಮ ಅಸ್ತಿತ್ವವೇ ಇಷ್ಟು ಎಂಬಂತಾಗಿದಿರಲಿ. ಗಂಡಿನಷ್ಟೇ ಹೆಣ್ಣು ಸಮಾನಳು, ಅವಳಿಗೂ ಸಾಮರ್ಥ್ಯವಿದೆ, ಬದುಕಿನ ಆಸೆಗಳಿವೆ ಎಂಬುದನ್ನು ಮರೆತು ಬಿಡುವ ಬದಲು ಈ ಹೊಸ ವರ್ಷದಲ್ಲಿ ಗಂಡು–ಹೆಣ್ಣು ಸಮಾನ ಎಂಬುದನ್ನು ರೂಪಿಸಲು ಈ ನಿರ್ಣಯಗಳನ್ನು ತೆಗೆದುಕೊಳ್ಳಿ. ಅಂತೆಯೇ ನಡೆದುಕೊಂಡು ತೋರಿಸಿ.

–––

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner