New Year 2025: ಹೊಸ ವರ್ಷವನ್ನು ಡಿಫ್ರೆಂಟ್‌ ಆಗಿ ವೆಲ್‌ಕಂ ಮಾಡ್ಬೇಕಾ; ಈ ಐಡಿಯಾಗಳು ನಿಮಗೆ ಇಷ್ಟವಾಗಬಹುದು ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  New Year 2025: ಹೊಸ ವರ್ಷವನ್ನು ಡಿಫ್ರೆಂಟ್‌ ಆಗಿ ವೆಲ್‌ಕಂ ಮಾಡ್ಬೇಕಾ; ಈ ಐಡಿಯಾಗಳು ನಿಮಗೆ ಇಷ್ಟವಾಗಬಹುದು ನೋಡಿ

New Year 2025: ಹೊಸ ವರ್ಷವನ್ನು ಡಿಫ್ರೆಂಟ್‌ ಆಗಿ ವೆಲ್‌ಕಂ ಮಾಡ್ಬೇಕಾ; ಈ ಐಡಿಯಾಗಳು ನಿಮಗೆ ಇಷ್ಟವಾಗಬಹುದು ನೋಡಿ

2025ರ ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. ವಿಶ್ವದ ಜನರು ಇಯರ್‌ ಎಂಡ್ ಎಂಜಾಯ್‌ ಮಾಡುವ ಜೊತೆಗೆ ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಂತಹವರು ಈ ವರ್ಷ ನ್ಯೂ ಇಯರ್ ಅನ್ನು ನೀವು ಡಿಫ್ರೆಂಟ್ ಆಗಿ ವೆಲ್‌ಕಂ ಮಾಡಬೇಕು ಅಂತಿದ್ರೆ ಈ ಐಡಿಯಾಗಳನ್ನೊಮ್ಮೆ ನೋಡಿ.

ಹೊಸ ವರ್ಷವನ್ನು ಭಿನ್ನವಾಗಿ ಆಚರಿಸಲು ಐಡಿಯಾಗಳು
ಹೊಸ ವರ್ಷವನ್ನು ಭಿನ್ನವಾಗಿ ಆಚರಿಸಲು ಐಡಿಯಾಗಳು (PC: Canva)

ಹೊಸ ವರ್ಷ ಎಂದರೆ ಹಿಂದಿನ ವರ್ಷಕ್ಕೆ ಬಾಯ್ ಹೇಳಿ, ಮುಂದಿನ ವರ್ಷವನ್ನು ಅತ್ಯಂತ ಖುಷಿಯಿಂದ ಸ್ವಾಗತಿಸುವ ಸಂಭ್ರಮದ ಗಳಿಗೆ. ನೂತನ ವರ್ಷವನ್ನು ಒಬ್ಬೊಬ್ಬರು ಒಂದೊಂದು ರೀತಿ ಆಚರಿಸುತ್ತಾರೆ. ಹೊಸ ವರ್ಷ ಹೊಸತನದ ಸಂಕೇತ. ಕಳೆದ ವರ್ಷದ ಕಹಿಯನ್ನೆಲ್ಲಾ ಮರೆತು ಮುಂದಿನ ವರ್ಷ ಸಂತೋಷ, ಸಮೃದ್ಧಿಯಿಂದ ಕೂಡಿರಲಿ ಎನ್ನುವ ಭರವಸೆಯೊಂದಿಗೆ ಮುಂದಡಿ ಇಡುವ ಸಮಯ.

ಪ್ರತಿ ವರ್ಷವೂ ನೂತನ ವರ್ಷವನ್ನು ಸಖತ್ ಡಿಫ್ರೆಂಟ್ ಆಗಿ ಆಚರಿಸಬೇಕು ಎಂದು ಹಲವರು ಅಂದುಕೊಳ್ಳುತ್ತಾರೆ. ಆದರೆ ಅದೇ ಪಾರ್ಟಿ, ಅದೇ ಡಾನ್ಸ್‌, ಅದೇ ಹ್ಯಾಂಗ್‌ಔಟ್‌ ಮೂಡ್‌ನಲ್ಲಿ ಹೊಸ ವರ್ಷ ಆರಂಭವಾಗೇ ಬಿಡುತ್ತದೆ. 2025ರ ಹೊಸ ವರ್ಷಕ್ಕೆ ಇನ್ನು ಮೂರ್ನಾಲ್ಕು ದಿನ ಇರುವ ಈ ಹೊತ್ತಿನಲ್ಲಿ ಈ ನ್ಯೂ ಇಯರ್ ಅನ್ನು ವಿಶೇಷವಾಗಿ ಆಚರಿಸಬೇಕು ಎಂದುಕೊಳ್ಳುವವರಿಗೆ ಇಲ್ಲೊಂದಿಷ್ಟು ಐಡಿಯಾಗಳಿವೆ ನೋಡಿ. ಇವು ನಿಮಗೆ ಖಂಡಿತ ಇಷ್ಟವಾಗಬಹುದು, ಗಮನಿಸಿ.

ನಕ್ಷತ್ರ ತುಂಬಿದ ಆಕಾಶದಡಿ ಸೆಲೆಬ್ರೇಷನ್‌

ಹೊಸ ವರ್ಷವನ್ನು ನೀವು ಡಿಫ್ರೆಂಟ್ ಆಗಿ ಆಚರಿಸಬೇಕು ಅಂತಿದ್ರೆ ಟೆರೆಸ್ ಅಥವಾ ಯಾವುದಾದರೂ ಓಪನ್ ಪ್ಲೇಸ್‌ಗೆ ಭೇಟಿ ನೀಡಿ. ಅಲ್ಲಿ ವಿಶಾಲವಾದ ಆಕಾಶದಲ್ಲಿ ಹೊಳೆಯುವ ನಕ್ಷತ್ರಗಳ ಚಿತ್ತಾರದ ಕೆಳಗೆ ನೀವು ಮನೆಯಿಂದ ತಂದಿರುವ ತಿಂಡಿ ತಿನಿಸುಗಳನ್ನ ಹರಡಿಕೊಂಡು ಪರಸ್ಪರ ಕಥೆ, ಕವನ, ಹಾಡು ಹೇಳಿಕೊಂಡು ಎಂಜಾಯ್ ಮಾಡುತ್ತಾ ಹೊಸ ವರ್ಷವನ್ನು ಸ್ವಾಗತಿಸಬಹುದು. ಇದನ್ನು ನೀವು ಕುಟುಂಬದವರು ಹಾಗೂ ಸ್ನೇಹಿತರ ಜೊತೆ ಮಾಡಬಹುದು. ಇದರಿಂದ ನೀವು ಹೊಸ ವರ್ಷವನ್ನು ಯುನಿಕ್ ಆಗಿ ಸ್ವಾಗತಿಸಿದಂತಾಗುವುದು ಸುಳ್ಳಲ್ಲ.

ಮಧ್ಯರಾತ್ರಿ ಯೋಗ ಸೆಷನ್‌

ಬೆಳಗಿನ ಹೊತ್ತು, ಮುಂಜಾನೆಯ ಸಮಯದಲ್ಲಿ ಯೋಗ ಮಾಡುವುದು ಸಹಜ. ಆದರೆ ನೀವು ನಿಮ್ಮ ಸ್ನೇಹಿತರು ಹಾಗೂ ಆತ್ಮೀಯರ ಜೊತೆ ಸೇರಿಕೊಂಡು ಮಧ್ಯರಾತ್ರಿ ಯೋಗ ಸೆಷನ್ ಮೂಲಕ ಹೊಸ ವರ್ಷವನ್ನು ಸ್ವಾಗತಿಸಬಹುದು. ಇದು ವರ್ಷಪೂರ್ತಿ ನಮಗೆ ಯೋಗ ಮಾಡಿ ಆರೋಗ್ಯ ಕಾಪಾಡಿಕೊಳ್ಳಲು ಸ್ಪೂರ್ತಿಯೂ ಆಗುತ್ತದೆ. ನಿಮ್ಮ ಸ್ನೇಹಿತರೊಂದಿಗೆ ಸೇರಿಕೊಂಡು ಯೋಗ ಸೆಷನ್ ಮೂಲಕ ಹೊಸ ವರ್ಷವನ್ನು ಈ ರೀತಿ ಸ್ವಾಗತ ಮಾಡಬಹುದು.

ದೀಪಗಳ ಬೆಳಕಿನಲ್ಲಿ ಹೊಸ ವರ್ಷ

ಹೊಸ ವರ್ಷವನ್ನು ಎಲ್ಲರೂ ಪಟಾಕಿ ಹೊಡೆದು ಸಂಭ್ರಮಿಸುವ ಮೂಲಕ ಸ್ವಾಗತಿಸುತ್ತಾರೆ. ನೀವು ಅದರ ಬದಲು ದೀಪಗಳನ್ನು ಬೆಳಗುವ ಮೂಲಕ ನೈಸರ್ಗಿಕ ವಿಧಾನದ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿ ಸಂಭ್ರಮಿಸಬಹುದು.

ಗಿಡ ನೆಡುವುದು

ಇದೇನಪ್ಪಾ ಇದು, ರಾತ್ರಿ ಹೊತ್ತು ಗಿಡ ನೆಡ್ತಾರಾ ಅಂದ್ಕೋಬೇಡಿ. ನೀವು ಈ ಪದ್ಧತಿಗೆ ಚಾಲನೆ ನೀಡಿ. ಹೊಸ ವರ್ಷದಂದು ಪಬ್‌, ಬಾರ್ ಎಂದು ಎಂಜಾಯ್ ಮಾಡುವ ಬದಲು ಗಿಡ ನೆಡುವ ಮೂಲಕ ಸ್ವಾಗತಿಸಿ. ಅಲ್ಲದೇ ಹೊಸ ವರ್ಷದ ನೆನಪಿಗೆ ನೆಟ್ಟ ಗಿಡವನ್ನು ಚೆನ್ನಾಗಿ ಸಲಹಿ. ಅದಕ್ಕೆ ಪ್ರತಿದಿನ ನೀರು ಹಾಕಬೇಕು, ಅದರ ಆರೈಕೆ ಮಾಡಬೇಕು ಎನ್ನುವ ಗುರಿ ಇರಿಸಿಕೊಳ್ಳಿ.‌

ಅಡುಗೆ ಪ್ರಯೋಗ

ಹೊಸ ವರ್ಷವನ್ನು ಹೋಟೆಲ್‌, ರೆಸ್ಟೊರೆಂಟ್‌ನಲ್ಲಿ ಎಂಜಾಯ್ ಮಾಡುವ ಬದಲು ಮನೆಯಲ್ಲೇ ಹೊಸ ಅಡುಗೆ ಪ್ರಯೋಗ ಮಾಡಿ. ಹೊಸ ಹೊಸ ಖಾದ್ಯಗಳನ್ನು ತಯಾರಿಸಿ. ಎಲ್ಲರೂ ಒಟ್ಟಾಗಿ ಕುಳಿತು ಟೆರೆಸ್‌ನಂತಹ ಜಾಗದಲ್ಲಿ ಎಂಜಾಯ್ ಮಾಡಿ. ಇದು ನಿಮಗೆ ಮರೆಯಲಾಗದ ಕ್ಷಣವನ್ನು ನೀಡುವುದು ಸುಳ್ಳಲ್ಲ.

ಮೂವಿ ನೈಟ್‌

ಹೊಸ ವರ್ಷವನ್ನು ನೀವು ಸಿನಿಮಾ ಥಿಯೇಟರ್‌ನಲ್ಲೂ ಸ್ವಾಗತಿಸಬಹುದು. ಲೇಟ್‌ನೈಟ್ ಶೋ ಸಿನಿಮಾಕ್ಕೆ ಹೋಗುವ ಮೂಲಕ ಸಿನಿಮಾ ನೋಡಿ ಎಂಜಾಯ್ ಮಾಡುತ್ತಾ ಹೊಸ ವರ್ಷವನ್ನು ಸ್ವಾಗತಿಸಬಹುದು. ಇದು ಕೂಡ ನಿಮಗೆ ವಿಭಿನ್ನ ಅನುಭವ ನೀಡುವುದು ಸುಳ್ಳಲ್ಲ. 2025ರ ಹೊಸ ವರ್ಷವನ್ನು ನಾನು ಹೀಗೆ ಆಚರಿಸಿದೆ ಎಂದು ನೀವು ಮುಂದೊಮ್ಮೆ ನೆನಪಿಸಿಕೊಳ್ಳಬಹುದು.

ವರ್ಚುವಲ್‌ ಪಾರ್ಟಿ

ಸ್ನೇಹಿತರು, ಕುಟುಂಬಸ್ಥರು ಜೊತೆಗಿಲ್ಲ ಎನ್ನುವ ಬೇಸರ ಬೇಡ. ಹೊಸ ವರ್ಷದ ಸಂದರ್ಭ ನೀವು ವರ್ಚುವಲ್ ಪಾರ್ಟಿ ಆಯೋಜಿಸುವ ಮೂಲಕ ಹೊಸ ವರ್ಷದ ಆರಂಭವನ್ನು ಕೌಂಟ್‌ಡೌಂಟ್ ಮಾಡಬಹುದು. ಇದರಿಂದ ನಿಮಗೆ ಒಂಟಿತನದ ಭಾವನೆ ಬರುವುದಿಲ್ಲ. ಹೊಸ ವರ್ಷವನ್ನು ಎಂಜಾಯ್ ಮಾಡಿದ ಖುಷಿಯೂ ಸಿಗುತ್ತದೆ.

Whats_app_banner