Happy New Year: ವರ್ಷಾಂತ್ಯವನ್ನು ಅರ್ಥಪೂರ್ಣವಾಗಿ ಕಳೆಯಲು ಇಲ್ಲಿದೆ ಟಿಪ್ಸ್; 2025ರ ಹೊಸ ವರ್ಷವನ್ನು ಮಹತ್ವಾಕಾಂಕ್ಷೆಗಳೊಂದಿಗೆ ಸ್ವಾಗತಿಸಿ
ಪ್ರಪಂಚದಾದ್ಯಂತ 2024ರ ವರ್ಷಾಂತ್ಯದ ಸಂಭ್ರಮ ಕಳೆಗಟ್ಟಿದೆ. ಹಳೆ ವರ್ಷಕ್ಕೆ ಗುಡ್‌ಬೈ ಹೇಳಿ ಹೊಸ ವರ್ಷವನ್ನು ಸ್ವಾಗತಿಸುವ ಈ ನ್ಯೂ ಇಯರ್ ಈವ್ ದಿನ ಜನರು ಪಾರ್ಟಿ, ಪಬ್ ಎಂದು ಎಂಜಾಯ್ ಮಾಡುವುದು ಸಹಜ. ವರ್ಷಾಂತ್ಯದ ದಿನ ಎಂದರೆ ಕುಡಿದು, ಕುಣಿದು ಎಂಜಾಯ್ ಮಾಡುವುದು ಮಾತ್ರವಲ್ಲ, ಇದು ಮುಂದಿನ ವರ್ಷವನ್ನು ಅರ್ಥಪೂರ್ಣವಾಗಿ ಸ್ವಾಗತಿಸುವ ಕ್ಷಣವೂ ಹೌದು ಮರೆಯದಿರಿ.
2024ನೇ ವರ್ಷ ಕಣ್ಮುಚ್ಚಿ ತೆರೆಯುವುದರೊಳಗೆ ಮುಗಿದು ಹೋಗಿದೆ. ಇಂದು 2024ರ ಕೊನೆಯ ದಿನ. ವರ್ಷಾಂತ್ಯದ ದಿನವನ್ನ ಜನರು ಸಖತ್ ಎಂಜಾಯ್ ಮಾಡುತ್ತಾರೆ. ಈ ದಿನ ಪಾರ್ಟಿ ಮಾಡುವ ಸಲುವಾಗಿಯೇ ಹಲವರು ಕಾಯುತ್ತಿರುತ್ತಾರೆ. 2024 ಮುಗಿದು 2025 ಅನ್ನು ಸ್ವಾಗತಿಸುವ ಕ್ಷಣದಲ್ಲಿ ಪಾರ್ಟಿ, ಪಬ್, ಡ್ರಿಂಕ್ಸ್ ಎಂದು ಮೈ ಮರೆಯುವವರೇ ಹೆಚ್ಚು. ಬಹುತೇಕರಿಗೆ ನ್ಯೂ ಇಯರ್ ಈವ್ ಎನ್ನುವುದು ಎಂಜಾಯ್ ಮಾಡಲು ಇರುವ ದಿನ ಅಂತಿರುವುದು ಸುಳ್ಳಲ್ಲ. ಆದರೆ ಈ ದಿನವನ್ನು ಅರ್ಥಪೂರ್ಣವನ್ನಾಗಿಯೂ ಆಚರಿಸಿಕೊಳ್ಳಬಹುದು ಹಾಗೂ ಇದು ಅಗತ್ಯ ಕೂಡ. ಯಾಕೆಂದರೆ ನಾವು ಹೊಸ ವರ್ಷವನ್ನು ಸ್ವಾಗತಿಸುವ ಕ್ಷಣವಿದು.
ಹೊಸ ವರ್ಷ ಎಂದರೆ ಹೊಸತನದ ಆಗಮನ ಎಂದರ್ಥ. ಹಾಗಂತ ನಮ್ಮ ಜೀವನವೇನು ಬದಲಾಗುವುದಿಲ್ಲ. ನಮ್ಮ ಹೊಟ್ಟೆಪಾಡಿನ ಕಾಯಕವನ್ನ ನಾವು ಮುಂದುವರಿಸಲೇಬೇಕು. ಡಿಸೆಂಬರ್ 31ರ ರಾತ್ರಿ ಹ್ಯಾಂಗ್ಓವರ್‌ನಿಂದ ಹೊರ ಬಂದು ಮರುದಿನ ಕೆಲಸ ಮಾಡಲೇಬೇಕಿದೆ, ನಮ್ಮ ಬದುಕು ಸಾಗಲೇಬೇಕಿದೆ ಎಂಬುದನ್ನು ಮರೆಯುವಂತಿಲ್ಲ. 2024ರಲ್ಲಿ ಮಾಡಲಾಗದ್ದನ್ನು 2025ರಲ್ಲಾದರೂ ಮಾಡಬೇಕು. ಅದಕ್ಕಾಗಿ ಒಂದಿಷ್ಟು ಸಿದ್ಧತೆಯೂ ಬೇಕಿರುತ್ತದೆ, ಇದರೊಂದಿಗೆ ಹೊಸತಾಗಿ ಏನು ನಮ್ಮ ಬದಕನ್ನ ಸುಸ್ಥಿರವಾಗಿಸಿಕೊಳ್ಳಲು ತಯಾರಿ ನಡೆಯಸಬೇಕು.
ವರ್ಷಾಂತ್ಯವನ್ನು ಅರ್ಥಪೂರ್ಣವಾಗಿ ಕಳೆದು, ಹೊಸ ವರ್ಷವನ್ನು ಮಹತ್ವಾಕಾಂಕ್ಷೆಯೊಂದಿಗೆ ಕಳೆಯಬೇಕು ಎಂದುಕೊಂಡವರಿಗಾಗಿ ಈ ಸಲಹೆ. ನೀವು ನಿಮ್ಮ ಈ ದಿನವನ್ನು ಭವಿಷ್ಯಕ್ಕೆ ಮೀಸಲಿಡಿ. ಭವಿಷ್ಯದ ಯೋಜನೆಗಳನ್ನು ರೂಪಿಸುವ ಮೂಲಕ ಈ ದಿನವನ್ನು ಮಹತ್ವಾಕಾಂಕ್ಷೆಯನ್ನಾಗಿ ಮಾಡಿ. ನ್ಯೂ ಇಯರ್ ಇವ್ ಅನ್ನು ಅರ್ಥಪೂರ್ಣವಾಗಿ ಕಳೆಯಲು ಬಯಸುವವರಿಗೆ ಈ ಟಿಪ್ಸ್.
2025ರ ಹೊಸ ವರ್ಷ, ಜನವರಿ ತಿಂಗಳಿಗೆ ಸಿದ್ಧತೆ
ಮೊದಲೇ ಹೇಳಿದಂತೆ ವರ್ಷಾಂತ್ಯ ಮುಗಿದರೆ ಬದುಕು ಮುಗಿದಂತಲ್ಲ. ಮುಂದೆ ದಿನಗಳಿಗೆ ಸಿದ್ಧತೆ ಬೇಕೇಬೇಕು. ಈ ದಿನ ಹ್ಯಾಂಗ್‌ಔಟ್‌ನಲ್ಲಿ ಹೊಸ ವರ್ಷವನ್ನು ಸ್ವಾಗತ ಮಾಡದಿರಿ. ಅದರ ಬದಲು ತಾಜಾ ಮನಸ್ಸಿನಿಂದ ಹೊಸ ವರ್ಷವನ್ನು ಸ್ವಾಗತಿಸಿ. 2025ರ ಮೊದಲ ತಿಂಗಳು ಜನವರಿಗೆ ಏನೇನೋ ಮಾಡಬೇಕು ಎಂಬ ಪಟ್ಟಿ ಮಾಡಿ. ನಾಳೆಗೆ ಹೊಸ ವರ್ಷವನ್ನು ಹೇಗೆ ಸ್ವಾಗತಿಸುವುದು ಎಂಬ ಸಿದ್ಧತೆಯೊಂದಿಗೆ ಬೇಗ ಮಲಗಿ. ಬೆಳಗೆದ್ದು ಫ್ರೆಶ್ ಮೂಡ್‌ನೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಿ. 2025ರ ಮೊದಲ ದಿನದಿಂದಲೇ ಅರ್ಥಪೂರ್ಣ ಬದುಕನ್ನು ಆರಂಭಿಸಿ. ರಾತ್ರಿ 12 ಗಂಟೆಗೆ ಮನೆ ಮುಂದೆ ರಂಗೋಲಿ ಹಾಕಿ, ಇಷ್ಟದವರಿಗೆ ಸಂದೇಶ ಕಳುಹಿಸಿ, ಕರೆ ಮಾಡಿ ಮಾತನಾಡಿ. ಹೀಗೆಲ್ಲಾ ಆಚರಿಸಿ.
ವ್ಯಾಯಾಮ, ಯೋಗ ಆರಂಭಿಸಿ
ನ್ಯೂ ಇಯರ್ ಈವ್ ಎಂದರೆ ಹೊಸ ವರ್ಷಕ್ಕೆ ಕಾಲಿಡುವ ಕ್ಷಣ. ಆ ಕ್ಷಣದಿಂದಲೇ ಮುಂದಿನ ವರ್ಷ ಶುರುವಾಗುತ್ತದೆ. ಪಾರ್ಟಿ, ಪಬ್ ಎಂದು ಹ್ಯಾಂಗ್ ಓವರ್‌ನಲ್ಲಿ ದಿನ ಆರಂಭಿಸುವ ಬದಲು ಯೋಗ, ವ್ಯಾಯಾಮದಂತಹ ದೇಹ, ಮನಸ್ಸಿಗೆ ಅವಶ್ಯವಿರುವ ಅಭ್ಯಾಸಗಳನ್ನು ರೂಢಿಸಿಕೊಂಡು ಅಂದಿನಿಂದಲೇ ಆರಂಭಿಸಿ. ಇದರಿಂದ ವರ್ಷಪೂರ್ತಿ ನೀವು ಇದನ್ನು ಅನುಸರಿಸಲು ಸಾಧ್ಯವಿದೆ. ಇಂದಿನ ಕಾಲಕ್ಕೆ ಇದು ಅನಿವಾರ್ಯ ಕೂಡ.
ಆರೋಗ್ಯಕರ ಆಹಾರ ಸೇವನೆ
ಇಯರ್ ಎಂಡ್ ಹೆಸರಿನಲ್ಲಿ ಮೋಜು, ಮಸ್ತಿ ಮಾಡುತ್ತಾ ಅನಾರೋಗ್ಯಕರ ಆಹಾರ ಸೇವನೆ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ನಾಳೆಯಿಂದ ಆರೋಗ್ಯಕರ ಆಹಾರ ಸೇವನೆ ಮಾಡುತ್ತೇನೆ ಎಂಬ ಶಪಥ ಮಾಡಿ. ಅದರ ಸಿದ್ಧತೆಗಾಗಿ ನ್ಯೂ ಇಯರ್ ಇವ್‌ನ ಸಂಜೆ ಹಾಗೂ ರಾತ್ರಿಯನ್ನು ಮೀಸಲಿಡಿ. ನಾಳೆಯ ದಿನವನ್ನು ಹೊಸ ಹುರುಪಿನೊಂದಿಗೆ ಸ್ವಾಗತಿಸಿ. ನಾಳೆ ದಿನಕ್ಕೆ ವಿಶೇಷ ಅಡುಗೆ ಮಾಡಲು ನ್ಯೂ ಇಯರ್ ಈವ್‌ನಲ್ಲಿ ಸಿದ್ಧತೆ ಮಾಡಿಕೊಳ್ಳಿ.
ಕ್ಯಾಲೆಂಡರ್ ರೂಪಿಸಿ
ನಿಮ್ಮ 2025ರ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಕ್ಯಾಲೆಂಡರ್ ರೂಪಿಸಿ. ಇದಕ್ಕಾಗಿ ನ್ಯೂ ಇಯರ್ ಈವ್ ಅನ್ನು ಮೀಸಲಿರಿಸಿ. ನಿಮ್ಮ ಬದುಕಿನ ಕ್ಯಾಲೆಂಡರ್ ಇದಾಗಿರುವ ಕಾರಣ ವರ್ಷಪೂರ್ತಿ ಏನು ಮಾಡಬೇಕು ಎಂಬುದರ ಪಟ್ಟಿ ಇದರಲ್ಲಿರಲಿ. ಇದು ನಿಮ್ಮ ಬದುಕಿಗೆ ಅಂದರೆ 2025ಕ್ಕೇ ನೀವು ಏನೇನು ಮಾಡಬೇಕು ಎಂಬ ಸ್ಪಷ್ಟ ಚಿತ್ರಣ ನೀಡುವುದು ಸುಳ್ಳಲ್ಲ.
ಗುರಿ ಹೊಂದಿಸಿ
2025ರಲ್ಲಿ ನಾನು ಏನೇನು ಮಾಡಬೇಕು ಎಂಬ ಗುರಿಯನ್ನು ಮೊದಲೇ ಹೊಂದಿಸಿಕೊಂಡರೆ ಖಂಡಿತ ನಿಮಗೆ ಎಂದಿಗೂ ಸೋಲಾಗುವುದಿಲ್ಲ. ನ್ಯೂ ಇಯರ್ ಈವ್ ಅನ್ನು ಗುರಿ ಹೊಂದಿಸುವ ದಿನವನ್ನಾಗಿ ಮೀಸಲಿರಿಸಿ. ಇದರಿಂದ ನೀವು ಬದುಕಿನಲ್ಲಿ ಹೊಸತನ್ನೇನಾದರೂ ಸಾಧಿಸಲು ಸಾಧ್ಯವಿದೆ.
ವರ್ಷಾಂತ್ಯ ಅಥವಾ ನ್ಯೂ ಇಯರ್ ಈವ್ ಎಂದರೆ ಪಾರ್ಟಿ ಎಂದಷ್ಟೇ ಅಲ್ಲ, ಅದಕ್ಕೂ ಮೀರಿ ಬದುಕನ್ನು ಮುನ್ನೆಡೆಸುವ ದಾರಿಯನ್ನು ನಾವು ಕಂಡುಕೊಳ್ಳಬೇಕಿದೆ.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope