ಡಿಜಿಟಲ್ ಕಗ್ಗಾಡಿನಲ್ಲಿ ಹೆತ್ತವರು ದಾರಿ ತಪ್ಪದಂತೆ ಮಕ್ಕಳೇ ಕಾಪಾಡಬೇಕು: ಹೊಸ ವರ್ಷದ ಮೊದಲ ದಿನವೇ ಈ ಸಂಕಲ್ಪ ಮಾಡೋಣ
ಕನ್ನಡ ಸುದ್ದಿ  /  ಜೀವನಶೈಲಿ  /  ಡಿಜಿಟಲ್ ಕಗ್ಗಾಡಿನಲ್ಲಿ ಹೆತ್ತವರು ದಾರಿ ತಪ್ಪದಂತೆ ಮಕ್ಕಳೇ ಕಾಪಾಡಬೇಕು: ಹೊಸ ವರ್ಷದ ಮೊದಲ ದಿನವೇ ಈ ಸಂಕಲ್ಪ ಮಾಡೋಣ

ಡಿಜಿಟಲ್ ಕಗ್ಗಾಡಿನಲ್ಲಿ ಹೆತ್ತವರು ದಾರಿ ತಪ್ಪದಂತೆ ಮಕ್ಕಳೇ ಕಾಪಾಡಬೇಕು: ಹೊಸ ವರ್ಷದ ಮೊದಲ ದಿನವೇ ಈ ಸಂಕಲ್ಪ ಮಾಡೋಣ

ಹೊಸ ವರ್ಷದ ಡಿಜಿಟಲ್‌ ಸಂಕಲ್ಪ: ಆನ್‌ಲೈನ್‌ ವಂಚನೆ ವಿರಾಟ ರೂಪದಲ್ಲಿರುವ ಈ ಕಾಲದಲ್ಲಿ ಡಿಜಿಟಲ್‌ ಸಾಕ್ಷರತೆ ಅತ್ಯಂತ ಅಗತ್ಯ. ವಿಶೇಷವಾಗಿ ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ ಜ್ಞಾನ ಇರುವವರು ತಮ್ಮ ಮನೆಯಲ್ಲಿರುವ ಹಿರಿಯರಿಗೆ ಆನ್‌ಲೈನ್‌ ಸಾಕ್ಷರತೆ ಮೂಡಿಸಬೇಕು. ಇದು ನಿಮ್ಮ ಈ ವರ್ಷದ ಪ್ರಮುಖ ಟೆಕ್‌ ನಿರ್ಣಯವಾಗಿರಲಿ.

ಹೊಸ ವರ್ಷದ ಸಂಕಲ್ಪ
ಹೊಸ ವರ್ಷದ ಸಂಕಲ್ಪ (Canva Photos)

ಹೊಸ ವರ್ಷದ ಹೊಸ್ತಿಲಲ್ಲಿ ಇರುವಾಗ ಸಾಕಷ್ಟು ಜನರು ನ್ಯೂ ಇಯರ್‌ ರೆಸಲ್ಯೂಷನ್‌ ಪಟ್ಟಿ ಮಾಡುತ್ತಾರೆ. ಡೈರಿ ಬರೆಯಬೇಕು, ಕೆಟ್ಟ ಚಟ ಬಿಡಬೇಕು, ತಪ್ಪದೇ ಜಿಮ್‌ಗೆ ಹೋಗಬೇಕು, ಯೋಗ ಕ್ಲಾಸ್‌ಗೆ ಹೋಗಬೇಕು... ಎಂದೆಲ್ಲ ನಿರ್ಣಯ ಕೈಗೊಳ್ಳುತ್ತಾರೆ. ಆದರೆ, ಎಲ್ಲರ ಹೊಸ ವರ್ಷಗಳ ನಿರ್ಣಯಗಳ ಪಟ್ಟಿಯಲ್ಲಿ "ತಮ್ಮ ಮನೆಯಲ್ಲಿನ ಹಿರಿಯರಿಗೆ ಡಿಜಿಟಲ್‌ ಸಾಕ್ಷರತೆ ಮೂಡಿಸುವೆ" ಎಂಬ ಸಂಕಲ್ಪ ಇರಲೇಬೇಕು. ಇದು ಈ ಕಾಲದ ತುರ್ತು ಎಂದರೂ ತಪ್ಪಾಗದು. ಇಲ್ಲವಾದರೆ ಡಿಜಿಟಲ್‌ ಕಗ್ಗಾಡಿನಲ್ಲಿ ಹೆತ್ತವರು, ಮನೆಯ ಹಿರಿಯರು ಕಷ್ಟಪಡಬೇಕಾಗಬಹುದು.

ಇತ್ತೀಚೆಗೆ ಮಂಡ್ಯ ಸಾಹಿತ್ಯ ಸಮ್ಮೇಳನದಿಂದ ವಾಪಸ್‌ ಬರುವಾಗ ಹಿರಿಯ ಮಹಿಳೆಯೊಬ್ಬರು ಬಸ್‌ನಲ್ಲಿ ಫೋನ್‌ನಲ್ಲಿ ಯಾರಲ್ಲಿಯೋ ಮಾತನಾಡುತ್ತಿದ್ದರು. ಮಾತಿನ ನಡುವೆಯೇ ಪಕ್ಕದಲ್ಲೇ ಇದ್ದ ನನಗೆ ಇದರಲ್ಲಿ ಒಟಿಪಿ ಎಲ್ಲಿ ಬರುತ್ತೆ ಎಂದು ಕೇಳಿದ್ರು. ಮೆಸೆಜ್‌ಗೆ ಬಂದಿರುತ್ತದೆ ಎಂದು ಹೇಳಿದೆ. ಆಮೇಲೆ ಯಾಕೋ ಅನುಮಾನ ಬಂದು "ಯಾರಿಗೆ ಒಟಿಪಿ ನೀಡ್ತೀರಿ" ಎಂದು ಕೇಳಿದೆ. ಯಾವುದೋ ಪಾರ್ಸೆಲ್‌ ಅಂತೆ ಎಂದ್ರು. ಆಮೇಲೆ ಅವರಲ್ಲಿ ಫೋನ್‌ ಕಟ್‌ ಮಾಡುವಂತೆ ಹೇಳಿ ಈ ರೀತಿ ಅಪರಿಚಿತರಿಗೆ ಒಟಿಪಿ ನೀಡಬೇಡಿ ಎಂದು ಹೇಳಿದೆವು. ಅವರ ಮೊಬೈಲ್‌ನಲ್ಲಿ ಸ್ಪೆಲ್ಲಿಂಗ್‌ ತಪ್ಪು ಇರುವ ಡೆಲಿವೆರಿ ಎಂಬ ಅಡ್ರೆಸ್‌ನಿಂದ ಒಟಿಪಿ ಬಂದಿತ್ತು. ಅವರು ಯಾವುದೇ ಆನ್‌ಲೈನ್‌ ಆರ್ಡರ್‌ ಕೂಡ ಮಾಡಿರಲಿಲ್ಲ. ಆನ್‌ಲೈನ್‌ನಲ್ಲಿ ಹೇಗೆ ಮೋಸ ಮಾಡ್ತಾರೆ, ನಿಮ್ಮ ಬ್ಯಾಂಕ್‌ ಖಾತೆಗೆ ಒಟಿಪಿ ಮೂಲಕ ಹೇಗೆ ಕನ್ನ ಹಾಕ್ತಾರೆ ಎಂದು ತಿಳಿಸಿ ಹೇಳಿದಾಗ ಅವರ ಮುಖದಲ್ಲಿ ಅಚ್ಚರಿ, ಭಯ ಕಾಣಿಸಿತು.

ಕೆಲವು ವರ್ಷಗಳ ಹಿಂದೆ ನಿವೃತ್ತಿಯಾಗಿದ್ದ ಮೇಸ್ಟ್ರು ಇತ್ತೀಚೆಗೆ ವಾಟ್ಸ್‌ಆ್ಯಪ್‌ನಲ್ಲಿ ದಿನ ವೈರಲ್‌ ವಿಡಿಯೋಗಳನ್ನು ಕಳುಹಿಸುತ್ತಿದ್ದರು. ಅವರ ಹಳೆ ವಿದ್ಯಾರ್ಥಿಗಳಿಗೆ ಇದೇ ರೀತಿ ಕಳುಹಿಸುತ್ತಿದ್ದಾರೆ ಎಂಬ ಸಂಗತಿ ತಿಳಿಯಿತು. ಅವರು ಸ್ಮಾರ್ಟ್‌ಫೋನ್‌ ಬಳಸಲು ಆರಂಭಿಸಿದ್ದು ಇತ್ತೀಚೆಗೆ. ಮಗ ಮತ್ತು ಸೊಸೆ ಜತೆಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಲು ಅನುಕೂಲವಾಗಲೆಂದು ವಾಟ್ಸ್‌ಆ್ಯಪ್‌ ಹಾಕಲಾಗಿತ್ತು. ದಿನ ಕಳೆದಂತೆ ಹಲವು ಗ್ರೂಪ್‌ಗಳಿಗೆ ಇವರು ಸೇರಿದ್ದಾರೆ. ಅಲ್ಲಿನ ವೈರಲ್‌ ವಿಡಿಯೋಗಳು ಇವರಿಗೆ ಥ್ರಿಲ್‌ ನೀಡಲು ಆರಂಭಿಸಿವೆ. “ತಮ್ಮ ಜಾತಿಯವರಿಗೆ ಹೀಗೆ ಅನ್ಯಾಯ ಆಯ್ತಂತೆ, ನಮ್ಮ ಧರ್ಮದವರಿಗೆ ಈ ರೀತಿ ಮೋಸ ಮಾಡ್ತಾರಂತೆ, ಆ ದೇಶದಲ್ಲಿ ಇಷ್ಟು ಕ್ರೂರವಾಗಿ ಇರ್ತಾರಂತೆ, ಉಗ್ರರು ಹೀಗೆ ತಲೆ ಕತ್ತರಿಸ್ತಾರಂತೆ ” ಎಂದು ಆ ವಿಡಿಯೋಗಳು ಇವರನ್ನು ಕೆರಳಿಸಲು ಆರಂಭಿಸಿವೆ. ಅದನ್ನೇ ತನ್ನ ಕಾಂಟ್ಯಾಕ್ಟ್‌ನಲ್ಲಿ ಇರುವ ಎಲ್ಲರಿಗೂ ಫಾರ್ವಾರ್ಡ್‌ ಮಾಡುವ ಅಭ್ಯಾಸ ಆರಂಭಿಸಿದ್ದಾರೆ. ಯಾರಾದರೂ ಸಿಕ್ಕಾಗ ಇಂತಹ ವಿಚಾರಗಳ ಕುರಿತು ಚರ್ಚಿಸಲು ಆರಂಭಿಸಿದ್ದಾರೆ. ವಿಡಿಯೋದಲ್ಲಿರುವ ಮಾಹಿತಿ ಸತ್ಯವೋ, ಮಿಥ್ಯವೋ ಎನ್ನುವುದು ಅವರಿಗೆ ಗೊತ್ತಿರಲಿಲ್ಲ. ಫೇಕ್‌ ವಿಡಿಯೋಗಳನ್ನೂ ಗೊತ್ತಿಲ್ಲದೆ ಕಳುಹಿಸುತ್ತಿದ್ದರು.

ನಿವೃತ್ತ ಉದ್ಯೋಗಿಯೊಬ್ಬರು ಇತ್ತೀಚೆಗೆ ಡಿಜಿಟಲ್‌ ಅರೆಸ್ಟ್‌ ವಂಚನೆಯಿಂದ ಹಲವು ಲಕ್ಷ ರೂಪಾಯಿ ಕಳೆದುಕೊಂಡಿದ್ದರು. ಆನ್‌ಲೈನ್‌ ವಂಚಕರು ಭಯಪಡಿಸಿದ ಕಾರಣ ಇಷ್ಟು ವರ್ಷ ಗಳಿಸಿ ಉಳಿಸಿಟ್ಟ ಹಣವನ್ನು ಕಳೆದುಕೊಳ್ಳಬೇಕಾಯಿತು. ಇಂತಹ ಪ್ರಕರಣಗಳು ಸಾಕಷ್ಟು ವರದಿಯಾಗುತ್ತವೆ. ಆನ್‌ಲೈನ್‌ ಸುರಕ್ಷತೆ ಕುರಿತು ಮನೆಯ ಹಿರಿಯರಿಗೆ ಹೇಳಿಕೊಡುವುದು ಮಕ್ಕಳ ಜವಾಬ್ದಾರಿ. ಇದೇ ರೀತಿ ಮಕ್ಕಳು ಹೇಳಿಕೊಡುತ್ತಾರೆ ಎಂದಾಗ ಇಗೋ ಪ್ರದರ್ಶಿಸದೆ ಕಲಿಯುವ ಗುಣವನ್ನೂ ಹಿರಿಯರು ಬೆಳೆಸಿಕೊಳ್ಳಬೇಕು.

ಹೊಸ ವರ್ಷದ ಸಂಕಲ್ಪ ಹೀಗಿರಲಿ

1. ಮನೆಯಲ್ಲಿ ಹೆತ್ತವರಿಗೆ ಮೊಬೈಲ್‌ ಫೋನ್‌ ಬಳಸುವುದು ಹೇಗೆ ಎಂದು ಹೇಳಿಕೊಡಿ. ತುರ್ತು ಪರಿಸ್ಥಿತಿ ಬಿದ್ದಾಗ ಹೇಗೆ ಕಾಲ್‌ ಮಾಡಬೇಕು, ಯಾರಿಗೆ ಕಾಲ್‌ ಮಾಡಬೇಕು ಎಂದು ಹೇಳಿ. ತುರ್ತು ಸಂಪರ್ಕ ಸಂಖ್ಯೆಗಳನ್ನು ಸೇವ್‌ ಮಾಡಿಡಿ.

2. ಒಟಿಪಿ ಸಂಖ್ಯೆ ಹೇಗೆ ಬಳಸಬೇಕು ಎಂದು ತಿಳಿಸಿ. ಅಪರಿಚಿತರಿಗೆ ಒಟಿಪಿ ಸಂಖ್ಯೆಯನ್ನು ನೀಡಬೇಡಿ ಎಂದು ತಿಳಿಸಿ. ಒಟಿಪಿ ಹಂಚಿಕೊಂಡು ಜನರು ಯಾವ ರೀತಿಯೆಲ್ಲ ಹಣ ಕಳೆದುಕೊಳ್ಳುತ್ತಿದ್ದಾರೆ ಎಂದು ಇತ್ತೀಚಿನ ಸುದ್ದಿಗಳನ್ನು ತಿಳಿಸಿ. "ಬರೀ ಒಟಿಪಿ ನೀಡಿದ್ದಕ್ಕೆ ಇಷ್ಟೊಂದು ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ, ಜಾಗೃತೆ ಇರಲಿ" ಎಂದು ಎಚ್ಚರಿಸಿ.

3. ವಾಟ್ಸ್ಆ್ಯಪ್‌ ಯಾವ ರೀತಿ ಬಳಸಬೇಕು ಎಂದು ತಿಳಿಸಿ. ಅಪರಿಚಿತರಿಂದ ಸಂದೇಶ ಬಂದರೆ ಪ್ರತಿಕ್ರಿಯಿಸದಂತೆ ತಿಳಿಸಿ. ಇದೇ ರೀತಿ ವಾಟ್ಸ್ಆ್ಯಪ್‌ನಲ್ಲಿ ಬರುವ ಸಂದೇಶಗಳು, ವಿಡಿಯೋಗಳು ಸುಳ್ಳಾಗಿರಬಹುದು ಎಂದು ಅವರನ್ನು ಎಚ್ಚರಿಸಿ.

5. ವಾಟ್ಸ್ಆ್ಯಪ್‌ನಲ್ಲಿ ಅಥವಾ ಇತರೆ ಸೋಷಿಯಲ್‌ ಮೀಡಿಯಾಗಳಲ್ಲಿ ಯಾವ ರೀತಿಯ ಲಿಂಕ್‌ಗಳನ್ನು ಕ್ಲಿಕ್‌ ಮಾಡಬಾರದು ಎಂದು ತಿಳಿಸಿ. ಲಿಂಕ್‌ಗಳನ್ನು ಕ್ಲಿಕ್‌ ಮಾಡಿದರೆ ಯಾವ ರೀತಿ ತೊಂದರೆಯಾಗಬಹುದು ಎಂದು ಎಚ್ಚರಿಸಿ.

6. ಲಿಂಕ್‌ ಮಾತ್ರವಲ್ಲದೆ ಎಪಿಕೆ ಫೈಲ್‌ಗಳು ಈಗ ವಾಟ್ಸ್ಆ್ಯಪ್‌ ಮುಂತಾದ ಮೆಸೆಂಜರ್‌ಗಳಲ್ಲಿ ಬರುತ್ತವೆ. ಇವುಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಾರದು. ಇವುಗಳಲ್ಲಿ ಮಾಲ್‌ವೇರ್‌ಗಳನ್ನು ಕಳುಹಿಸುತ್ತಾರೆ ಎಂದು ಮನವರಿಕೆ ಮಾಡಿಸಿ.

7. ಗೂಗಲ್‌ ಪೇ, ಫೋನ್‌ ಪೇ ಮುಂತಾದ ಯುಪಿಐ ಅಕೌಂಟ್‌ಗಳನ್ನು ಯಾವ ರೀತಿ ಬಳಸಬೇಕು ಎಂದು ಹೇಳಿಕೊಡಿ. ಯಾರಿಗಾದರೂ ಹಣ ಪೇಮೆಂಟ್‌ ಮಾಡುವಾಗ ಹಲವು ಬಾರಿ ಪರಿಶೀಲಿಸಿ ಎಂದು ತಿಳಿಸಿ. 1000 ರೂಪಾಯಿ ಹಾಕುವ ಬದಲು ಕಣ್ತಪ್ಪಿ ಒಂದು ಸೊನ್ನೆ ಜಾಸ್ತಿ ಹಾಕಿರುವ ಸಾಧ್ಯತೆ ಇರಬಹುದು, ಗಮನಿಸಿ ಎಂದು ತಿಳಿಸಿ.

8. ಇತ್ತೀಚಿನ ಡಿಜಿಟಲ್‌ ಅರೆಸ್ಟ್‌ ವಂಚನೆ ಕುರಿತು ಮಾಹಿತಿ ನೀಡಿ. ಯಾರಾದರೂ ನಿಮ್ಮ ಹೆಸರಿಗೆ ಪಾರ್ಸೆಲ್‌ ಬಂದಿದೆ, ಇಷ್ಟು ಹಣ ನೀಡಿ ಬಿಡಿಸಿಕೊಳ್ಳಿ ಎನ್ನಬಹುದು. ಎಫ್‌ಬಿಐ, ಸಿಬಿಐ, ಆರ್‌ಬಿಐ ಅಧಿಕಾರಿಗಳೆಂದು ಫೋನ್‌ ಮಾಡಿ ಭಯಪಡಿಸಬಹುದು. ಇಂತಹ ಯಾವುದೇ ಆನ್‌ಲೈನ್‌ ಬೆದರಿಕೆಗಳಿಗೂ ಭಯಪಡಬೇಡಿ ಎಂದು ತಿಳಿಸಿ.

9. ವಾಟ್ಸ್ಆ್ಯಪ್‌ನಲ್ಲಿ, ಫೇಸ್‌ಬುಕ್‌ನಲ್ಲಿ, ಇನ್‌ಸ್ಟಾಗ್ರಾಂನಲ್ಲಿ ಯಾವುದೇ ಪೋಸ್ಟ್‌ ಹಂಚಿಕೊಳ್ಳುವ ಮುನ್ನ ಎರಡೆರಡು ಬಾರಿ ಯೋಚಿಸಲು ತಿಳಿಸಿ.

10. ಆನ್‌ಲೈನ್‌ ಹಣಕಾಸು ವಂಚನೆಗಳ ಕುರಿತು ಎಚ್ಚರಿಕೆಯಿಂದ ಇರುವಂತೆ ತಿಳಿಸಿ. ಹೂಡಿಕೆ ವಿಚಾರದಲ್ಲಿ ಮೋಸ ಹೋಗದಂತೆ ತಿಳಿಸಿ.

ಇವು ಕೆಲವು ಉದಾಹರಣೆಗಳು. ಇದೇ ರೀತಿ ಆನ್‌ಲೈನ್‌ ಸುರಕ್ಷತೆಗೆ ಸಂಬಂಧಪಟ್ಟ ಅನೇಕ ವಿಚಾರಗಳನ್ನು ತಿಳಿಸಿ. ಹಾಗಂತ, ಭಯಪಡಿಸಬೇಡಿ. "ನಿನ್ನ ಮೊಬೈಲ್‌ ನನಗೆ ಬೇಡ, ನನಗೆ ಲ್ಯಾಂಡ್‌ಲೈನ್‌ ಸಾಕು" ಎಂದು ಅವರು ಇಂತಹ ಸಾಧನಗಳನ್ನು ಬಳಸದೆ ಇರಬಹುದು. ಮನೆಯ ಹಿರಿಯರು ಯಾವ ರೀತಿ ಸ್ಮಾರ್ಟ್‌ಫೋನ್‌, ಟ್ಯಾಬ್‌ಗಳನ್ನು ಬಳಸುತ್ತಿದ್ದಾರೆ ಎಂದು ಆಗಾಗ ನಿಗಾ ವಹಿಸಲು ಮರೆಯಬೇಡಿ.

ಮಕ್ಕಳಿಂದ ಕಲಿಯರಿ

ಮನೆಯಲ್ಲಿ ಇರುವ ಅಪ್ಪ ಅಮ್ಮ, ಅಜ್ಜ ಅಜ್ಜಿಗೆ ಈಗ ಡಿಜಿಟಲ್‌ ಸಾಕ್ಷರತೆ ಅಗತ್ಯವಿರುತ್ತದೆ. ವಾಟ್ಸ್ಆ್ಯಪ್‌ನಲ್ಲಿ ಬಂದಿರುವ ಯಾವುದೋ ಸಂದೇಶದ ಕುರಿತು "ಹಾಗಂತೆ, ಹೀಗಂತೆ.." ಎಂದು ಚರ್ಚಿಸುತ್ತ ಇರುತ್ತಾರೆ. ಅವರಿಗೆ ಅದು ಅಸಲಿಯೋ ನಕಲಿಯೋ ಗೊತ್ತಿರುವುದಿಲ್ಲ. ಡಿಜಿಟಲ್‌ ಜಗತ್ತಿನ ಕುರಿತು ತುಸು ಅರಿವು ಇರುವ ಕಿರಿಯರು ಈ ವರ್ಷದ ಮೊದಲ ದಿನದಿಂದಲೇ ತಮ್ಮ ಮನೆಯ ಹಿರಿಯರಿಗೆ ಡಿಜಿಟಲ್‌ ಸಾಕ್ಷರತೆ ಮತ್ತು ಆನ್‌ಲೈನ್‌ ಸುರಕ್ಷತೆಯ ಕುರಿತು ಅರಿವು ಮೂಡಿಸುತ್ತೇವೆ ಎಂದು ಸಂಕಲ್ಪ ಮಾಡಿಕೊಳ್ಳಿ. ಇದೇ ರೀತಿ ಮಕ್ಕಳು ಏನಾದರೂ ಹೇಳಿಕೊಟ್ಟಾಗ ಕೇಳಿಸಿಕೊಳ್ಳುವ ಗುಣವನ್ನು ಹಿರಿಯರು ಬೆಳೆಸಿಕೊಳ್ಳಬೇಕು. 

  • ಲೇಖನ: ಪ್ರವೀಣ್‌ ಚಂದ್ರ ಪುತ್ತೂರು

Whats_app_banner