New Year Plan 2025: ಚಿಕ್ಕ ಕೆಲಸ, ದೊಡ್ಡ ಉಳಿತಾಯ; ಹೊಸ ವರ್ಷದಿಂದ ವ್ಯವಹಾರದಲ್ಲಿ ಈ ರೀತಿ ಚಿಕ್ಕ ಬದಲಾವಣೆ ತನ್ನಿ
New Year Plan 2025: ಹೊಸ ವರ್ಷದಿಂದ ನೀವು ಒಂದು ಚಿಕ್ಕ ಕೆಲಸ ಮಾಡಲು ಆರಂಭಿಸಿ. ಆದ್ದರಿಂದ, ದೊಡ್ಡ ಉಳಿತಾಯವೇ ಆಗಲಿದೆ. ಹೀಗೆಲ್ಲ ಮಾಡಲು ಸಾಧ್ಯ ಆಗೊದೇ ಇಲ್ಲ ಎಂಬ ಯಾವ ಅನುಮಾನವೂ ಇಲ್ಲದ ಸರಳ ಉಪಾಯಗಳು ಇಲ್ಲಿದೆ ಗಮನಿಸಿ.
New Year Plan 2025: ಸೌಕರ್ಯ ಹೆಚ್ಚಾಗಿದೆ, ಬೇಕಷ್ಟು ಹಣವೂ ಇದೆ ಹಾಗೆಂದು ಎಲ್ಲವನ್ನೂ ನೀವು ಮೊಬೈಲ್‌ನಲ್ಲೇ ಆರ್ಡರ್ ಮಾಡಿದ್ರೆ ಮುಂದೆ ಏನಾಗಬಹುದು ಒಮ್ಮೆ ಯೋಚನೆ ಮಾಡಿ. ಯೋಚನೆ ಮಾಡಲು ಪುರಸೊತ್ತಿಲ್ಲ ಅಂದ್ರೆ ಒಮ್ಮೆ ಇದನ್ನಾದರೂ ಓದಿ ಬಿಡಿ. ಒಂದೊಂದು ಚಿಕ್ಕ ಚಿಕ್ಕ ವಿಷಯಗಳೂ ಎಷ್ಟು ದೊಡ್ಡ ಬದಲಾವಣೆ ತರಬಹುದು ಎಂಬುದನ್ನು ಸ್ವಲ್ಪ ಅರ್ಥ ಮಾಡಿಕೊಳ್ಳೋಣ ಬನ್ನಿ. ಬೆಂಗಳೂರನ ಮನೆಗಳಲ್ಲಿ ಕುಳಿತು ತಮ್ಮ ಪಾಡಿಗೆ ತಾವಾಯ್ತು, ತಮ್ಮ ಕೆಲಸವಾಯ್ತು ಎಂದು ಇದ್ದೂ ಇದ್ದೂ ಸಂಬಂಧಗಳೇ ಕಳೆದು ಹೋಗ್ತಿದೆ. ತಮ್ಮ ಮನೆಯ ಪಕ್ಕದಲ್ಲಿ ಅಥವಾ ಕೆಳ ಮಹಡಿಯಲ್ಲಿ ಯಾರಿದ್ದಾರೆ ಎಂದೂ ಅರಿಯದ ಸ್ಥಿತಿಯಲ್ಲಿ ನಾವಿದ್ದೇವೆ ಎಂಬ ಮಾತುಗಳನ್ನು ಸಾಕಷ್ಟು ಕೇಳಿರ್ತೀವಿ. ಆದರೂ ಅದನ್ನೇ ಮುಂದುವರೆಸಿ ಅದೇ ಬಾಳು ಬಾಳ್ತೀವಿ.
ಹೀಗಿರುವಾಗ ಬ್ಲಿಂಕಿಟ್, ಅಮೆಜಾನ್ ಡೆಲವರಿ ಬಾಯ್, ಸ್ವಿಗ್ಗಿ, ಜೊಮೆಟೋ ಹೀಗೆ ಸಾಕಷ್ಟು ಡಿಲವರಿ ಬಾಯ್‌ಗಳು ನಿಮ್ಮ ಮನೆಗೆ ಗೂಗಲ್ ಮ್ಯಾಪ್ ಹಾಕದೇ ಸೀದಾ ಬರುವಷ್ಟು ನೀವು ಆರ್ಡರ್ ಮಾಡಿರಬಹುದು. ಅವರು ಬಂದಾಗ ಕಿಟಕಿಯಿಂದಲೇ ಒಟಿಪಿ ಹೇಳಿ ಅವರು ಕೊಟ್ಟದ್ದನ್ನು ತೆಗೆದುಕೊಂಡು ಮತ್ತೆ ಮನೆ ಸೇರಿದ್ದಂತೂ ನಿಮ್ಮ ಬದುಕಲ್ಲಿ ಖಂಡಿತ ಇದೆ. ಹೀಗಿರುವಾಗ ಹೊಸ ವರ್ಷದಿಂದ ಏಕೆ ಒಂದು ಬದಲಾವಣೆ ತರಬಾರದು?
ಸಾಹಸವೇನೂ ಬೇಕಾಗಿಲ್ಲ, ಇಷ್ಟೇ ಇಷ್ಟು ಬದಲಾವಣೆ ಬೇಕು
ನೀವು ಆಗಾಗ ಮಾಲ್‌ಗೆ ಹೋಗಿ ಅಲ್ಲಿ ಏನಾದರೊಂದಿಷ್ಟು ವಸ್ತು ಖರೀದಿ ಮಾಡಿ ಇನ್ನೊಂದಷ್ಟು ದಿನ ಅದನ್ನೇ ಬಳಸುತ್ತೀರಿ. ಅಥವಾ ಡಿಮಾರ್ಟ್, ವಿಶಾಲ್ ಮಾರ್ಟ್, ಸೂಪರ್ ಮಾರ್ಕೆಟ್ ಹೀಗೆ ಎಲ್ಲಾದರೊಂದು ಕಡೆಯಿಂದ ದಿನಸಿಗಳನ್ನು ಗುಡ್ಡೆ ಹಾಕಿಕೊಂಡು ಬರುತ್ತೀರಿ. ತಿಂಗಳ ಮಧ್ಯದಲ್ಲೇ ಯಾವುದಾದರೂ ಒಂದು ಪದಾರ್ಥ ಖಾಲಿ ಆಯ್ತು ಎಂದರೆ ನೀವು ಬ್ಲಿಂಕ್ ಇಟ್‌ನಲ್ಲಿ ತಕ್ಷಣ ತರಿಸುವ ನಿರ್ಧಾರ ಮಾಡುತ್ತೀರಿ. ಅದರ ಬದಲಾಗಿ ಮನೆ ಪಕ್ಕದಲ್ಲೇ ಇರುವ ದಿನಸಿ ಅಂಗಡಿಗೆ ಹೋಗಿ ಬನ್ನಿ. ಸಣ್ಣ ವಾಕಿಂಗ್ ಆದ ಹಾಗೂ ಆಯ್ತು. ಡಿಲವರಿ ಚಾರ್ಜ್‌ಗೆಂದು ಕೊಡುವ ಹಣವೂ ಉಳಿಯಿತು.
ಚಿಕ್ಕ ಕೆಲಸ, ದೊಡ್ಡ ಉಳಿತಾಯ
ಇನ್ನು ತರಕಾರಿ ಖಾಲಿಯಾದರೆ ಬೆಳಿಗ್ಗೆ ಅಥವಾ ಸಾಯಂಕಾಲ ತಳ್ಳು ಗಾಡಿಯಲ್ಲಿ ನಿಮ್ಮ ಮನೆಯ ಬಳಿಯೇ ಬಂದ ವ್ಯಾಪಾರಿಗಳ ಹತ್ತಿರ ಖರೀದಿ ಮಾಡಿ. ಹತ್ತಿರದಲ್ಲೇ ಇದ್ದ ನಂದಿನಿ ಬೂತ್‌ಗೆ ಹೋಗಿ ಅಲ್ಲಿ ಹಾಲು, ಮೊಸರು ಖರೀದಿಸಿ. ಹೀಗೆ ಮಾಡಿದರೆ ನೀವು ಮಧ್ಯವರ್ತಿಗಳಿಗೆ ಕೊಡುವ ಹಣವೂ ಉಳಿತಾಯವಾಗುತ್ತದೆ. ಡೆಲಿವರಿ ಚಾರ್ಜ್ ಎಂದು ನೀವು ಇದುವರೆಗೆ ಎಷ್ಟು ಹಣ ವ್ಯಯ ಮಾಡಿರಬಹುದು ಎಂದು ಒಮ್ಮೆ ಯೋಚಿಸಿ. ಅವುಗಳನ್ನು ನೀವೇ ಇನ್ನು ಮುಂದೆ ಸರಿಪಡಿಸಿಕೊಳ್ಳಲು ಒಂದು ಸಣ್ಣ ಹೆಜ್ಜೆ ಮುಂದಿಟ್ಟು ನೋಡಿ. ನಿಮ್ಮ ಹಣದ ಉಳಿತಾಯದ ಜೊತೆಗೆ ನಿಮ್ಮ ಸುತ್ತಮುತ್ತಲಿನ ಜನರ ಪರಿಚಯ, ಭಾಂದ್ಯವದ ಜೊತೆಗೆ ಅವರ ಆರ್ಥಿಕತೆಯೂ ಸುಧಾರಿಸುತ್ತದೆ.
ಲೋಕಲ್ ಮಾರುಕಟ್ಟೆ
ಜೇನುತುಪ್ಪ, ಸೀಗೆಹುಡಿ, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಖಾರದಪುಡಿ, ಅರಶಿನ ಪುಡಿ, ಕಲ್ಲುಪ್ಪು, ಬೆಲ್ಲ ಇಂತಹ ಸಾಕಷ್ಟು ಪದಾರ್ಥಗಳನ್ನು ನೀವು ಹಳ್ಳಿಗಳಲ್ಲೇ ಖರೀದಿ ಮಾಡಬಹುದು. ಇನ್ನು ಟೆರೆಸ್ ಗಾರ್ಡನಿಂಗ್ ಮಾಡುವ ಹವ್ಯಾಸ ಇದ್ದರೆ ಆ ಮಣ್ಣಿಗೂ ಹಣ ಕೊಟ್ಟು ಖರೀದಿ ಮಾಡಬೇಕು ಎಂದೇನಿಲ್ಲ. ಲೋಕಲ್ ಮಾರುಕಟ್ಟೆಗಳಿಂದಲೇ ಪೇಟೆಗೆ ಬಂದು ಮಾರಾಟವಾಗುವ ವಸ್ತುಗಳನ್ನು ನೀವು ಲೋಕಲ್ ವ್ಯಾಪಾರಿಗಳಿಂದಲೇ ಖರೀದಿಸಿ ಹಣ ಉಳಿಸಿ. ಅವರಿಗೂ ಸಹಕರಿಸಿ. ಇದೆಲ್ಲವೂ ಸಾಧ್ಯವಾಗುವ ಚಿಕ್ಕ ಕೆಲಸಗಳು ಆದರೆ ದೊಡ್ಡ ಬದಲಾವಣೆ ತರಬಲ್ಲವು.
ಲೇಖನ: ಸುಮಾ ಕಂಚಿಪಾಲ್
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope