ನೈಜೀರಿಯಾದ ಬಿಟ್ಟರ್ ಕೋಲಾ ಆರೋಗ್ಯಕ್ಕೆ ಒಳ್ಳೆಯದು; ಇಲ್ಲಿನ ಜನರ ಆಹಾರ, ವ್ಯವಸ್ಥೆ ಹೇಗಿದೆ -ಶ್ರೀಹರ್ಷ ದ್ವಾರಕನಾಥ್ ಬರಹ
ನೈಜೀರಿಯಾದಲ್ಲಿ ಬಿಟ್ಟರ್ ಕೋಲಾ ಸಿಗುತ್ತದೆ. ಇಲ್ಲಿನ ಜನರು ಹೆಚ್ಚು ಬಳಸುತ್ತಾರೆ. ಇದು ಸಣ್ಣ ಕಾಯಿ ಅಥವಾ ಬೀಜದ ರೀತಿಯಲ್ಲಿ ಇರುತ್ತದೆ. ವೈದ್ಯಕೀಯವಾಗಿ ಹೇಳುವ ಪ್ರಕಾರ ಇದು ಆರೋಗ್ಯಕ್ಕೆ ಒಳ್ಳೆಯದು. ನೈಜೀರಿಯಾ ಜನರ ಜೀವನ ಶೈಲಿ, ಆಹಾರ, ವ್ಯವಸ್ಥೆಯ ಬಗ್ಗೆ ನೈಜೀರಿಯಾದ ಲಾಗೋಸ್‌ನಿಂದ ಶ್ರೀಹರ್ಷ ದ್ವಾರಕನಾಥ್ ಅವರ ಬರಹವನ್ನು ಓದಿ.
ಎಲ್ಲ ಕನ್ನಡಿಗರಿಗೆ ವಂದನೆ, ಅಭಿನಂದನೆ. ಈ ಲೇಖನದಲ್ಲಿ ನೈಜೀರಿಯಾದ ಜನರ ಆಹಾರ ಪದ್ಧತಿಯನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಾ ಇದ್ದೇನೆ, ಒಪ್ಪಿಸಿಕೊಳ್ಳಿ. ಇಲ್ಲಿನ ಜನರ ಬೆಳಗಿನ ನಾಷ್ಟಾ ಬ್ರೆಡ್ ಜೊತೆಗೆ ಚಿಕನ್ ಅಥವಾ ಪಾಸ್ತಾ ಆಗಿರುತ್ತದೆ. ಇದು ಬಹುಪಾಲು ಜನರ ಬೆಳಗಿನ ಉಪಾಹಾರ. ಚಿಕನ್ ಕೇಜಿಗೆ ಮೂರು ಯುಎಸ್‌ಡಿ, ಅಂದರೆ ಅಮೆರಿಕನ್ ಡಾಲರ್, ಅದೇ ಮಟನ್ ಆದಲ್ಲಿ ಕೇಜಿಗೆ ನಾಲ್ಕು ಯುಎಸ್‌ಡಿ. ಇನ್ನು ಬಾಯಾಡಿಸುವುದಕ್ಕೆ ಅಂತಲೇ ಅವರು ಬಯಸುವುದು ಹುರಿದಂಥ ಕಡಲೆಕಾಯಿ. ಅದು ಪ್ಯಾಕೆಟ್‌ನಲ್ಲಿ ಇರುತ್ತದೆ. ಅಷ್ಟು ದುಬಾರಿಯಲ್ಲ. ಇನ್ನು ಹಣ ಇರುವವರು ಏಳೂನೂರಾ ಐವತ್ತು ಮಿ.ಲೀ. ಬಾಟಲಿಯಲ್ಲಿ ಹಾಕಿಟ್ಟುರುವಂಥದ್ದನ್ನು ಖರೀದಿಸುತ್ತಾರೆ. ಅವರಿಗೆ ಅದು ಸ್ಥಳೀಯ ಕರೆನ್ಸಿ ಲೆಕ್ಕವಾದ ನೂರು ನೈರಾಗೆ ಸಿಗುತ್ತದೆ. ಭಾರತೀಯ ರೂಪಾಯಿ ಲೆಕ್ಕದಲ್ಲಿ ಹೇಳಬೇಕು ಅಂತಾದರೆ, ಇವತ್ತಿಗೆ ಐದು- ಐದೂವರೆ ರೂಪಾಯಿ. ಇನ್ನು ಇಲ್ಲಿನವರು ರವೆಯಲ್ಲಿ ಒಂದು ಖಾದ್ಯ ಮಾಡಿಕೊಳ್ತಾರೆ. ರವೆಯನ್ನು ಬೇಯಿಸಿ, ಉಂಡೆಯಂತೆ ಕಟ್ಟಿ, ಅದನ್ನು ಚಿಕನ್ ಅಥವಾ ಮಟನ್ ಜೊತೆಗೆ ತಿನ್ನುತ್ತಾರೆ. ಅದನ್ನು ಇಲ್ಲಿಯವರು ಸೆಮೋ ಅಂತ ಕರೆಯುತ್ತಾರೆ.
ಇಲ್ಲಿಯೂ ಅಕ್ಕಿಯನ್ನು ಬಳಸ್ತಾರೆ. ಅದು ಗಾತ್ರದಿಂದ ಹಾಗೂ ಆಕಾರದಿಂದ ತುಂಬ ದಪ್ಪನಾಗಿ ಇರುತ್ತದೆ. ಇಲ್ಲಿಯ ಜನರಿಗೆ ಜೀರ್ಣಶಕ್ತಿ ಚೆನ್ನಾಗಿದೆ ಅಂತ ಹೇಳಬೇಕು. ಏಕೆಂದರೆ, ಅವರು ತೆಗೆದುಕೊಳ್ಳುವ ಆಹಾರದ ಪ್ರಮಾಣ ಅಷ್ಟಿರುತ್ತದೆ. ತುಂಬ ಚೆನ್ನಾಗಿ ಊಟ- ತಿಂಡಿ ಮಾಡ್ತಾರೆ. ಯಾಮ್ ಅಂತ ಕರೆಯುವ ತಿನಿಸನ್ನು ಸಹ ಯಥೇಚ್ಛವಾಗಿ ತಿನ್ನುತ್ತಾರೆ. ಅದು ಬೇಯಿಸಿದ ಗೆಣಸು. ಗೆಣಸನ್ನು ಬೇಯಿಸಿ, ತಿನ್ನುವುದು ಇಲ್ಲಿನವರು ತುಂಬ ಇಷ್ಟ ಪಡುವಂಥದ್ದು. ವಿಶೇಷ ಸಂದರ್ಭಗಳು ಅಥವಾ ಕಾರ್ಯಕ್ರಮಗಳು ಅಂತಾದರೆ ಬೀಫ್ - ದನದ ಮಾಂಸವನ್ನ ತಿನ್ನುವುದು ಹೆಚ್ಚು.
ಇದರ ಮಧ್ಯ ನಾನು ವೈಯಕ್ತಿಕವಾಗಿ ಗಮನಿಸಿದಂತಹ ಜನರ ಸ್ವಭಾವವನ್ನು ಹಂಚಿಕೊಳ್ಳುವುದಕ್ಕೆ ಬಯಸುತ್ತೀನಿ. ಉದ್ಯೋಗ ಮಾಡುವ ಸ್ಥಳದಲ್ಲಿ ಏನೋ ತಪ್ಪು ಮಾಡಿದರು ಅಂತಲೋ ಅಥವಾ ಹೇಳಿದ್ದನ್ನು ಅರ್ಥ ಮಾಡಿಕೊಳ್ಳದೆ ಸಮಯ- ಹಣ ನಷ್ಟ ಮಾಡಿದರು ಅಂತಲೋ ಇಲ್ಲಿನ ಸ್ಥಳೀಯ ಜನರನ್ನು ಜೋರು ಧ್ವನಿಯಲ್ಲಿ ಬಯ್ಯುವುದೋ ಅಥವಾ ಹೀಯಾಳಿಸುವುದು ಇದೇನಾದರೂ ಮಾಡಿದರೂ ಅವರು ಅದನ್ನೇ ಮನಸ್ಸಿನಲ್ಲಿಯೇ ಇಟ್ಟುಕೊಂಡು ದ್ವೇಷ ಸಾಧಿಸುವುದಕ್ಕೆ ಹೋಗಲ್ಲ. ಆ ಸನ್ನಿವೇಶದಲ್ಲಿ ಏನು ಆಯಿತೋ ಅದು ಅಲ್ಲಿಗೆ ಮುಗಿಯಿತು. ಆ ನಂತರ ಕೂಡ ಬಯ್ದ ಅಥವಾ ಹೀಯಾಳಿಸಿದ ವ್ಯಕ್ತಿಯ ಜೊತೆಗೆ ತುಂಬ ಸಹಜವಾಗಿಯೇ ಮಾತನಾಡುತ್ತಾರೆ ಹಾಗೂ ಅದು ಅವರ ಮನಸ್ಸಿನಿಂದಲೂ ಹೊರಟು ಹೋಗಿರುತ್ತದೆ. “ಅಲ್ಲಿಂದ ಅಲ್ಲಿಗೆ ಬಿಟ್ಟು ಮುಂದಕ್ಕೆ ಹೋಗಬೇಕು” ಅಂತ ನಮ್ಮ ಮನೆಗಳಲ್ಲಿ ಹೇಳುವ ಮಾತು ಇಲ್ಲಿನ ಜನರ ಸ್ವಭಾವವನ್ನು ನೋಡಿದಾಗ ಬಹಳ ನೆನಪಾಗುತ್ತದೆ.
ನೈಜೀರಿಯಾದ ಬಿಟ್ಟರ್ ಕೋಲಾದ ಆರೋಗ್ಯ ಪ್ರಯೋಜನಗಳು
ಅಂದ ಹಾಗೆ ನೈಜೀರಿಯಾದಲ್ಲಿ ಬಿಟ್ಟರ್ ಕೋಲಾ ಅಂತ ಸಿಗುತ್ತದೆ. ಅದನ್ನು ಇಲ್ಲಿನ ಜನರು ಹೆಚ್ಚು ಬಳಸುತ್ತಾರೆ. ತೊಂಡೆಕಾಯಿಯಂತೆ ಕಾಣುವ ಅವುಗಳನ್ನು ಕೇಜಿ ಲೆಕ್ಕದಲ್ಲಿ ಮಾರಾಟ ಮಾಡುತ್ತಾರೆ. ತಮ್ಮ ಆರೋಗ್ಯಕ್ಕೆ ಇದರಿಂದ ಸಹಾಯ ಆಗುತ್ತದೆ ಎಂಬುದು ಅವರ ನಂಬಿಕೆ. ವೈದ್ಯಕೀಯವಾಗಿ ಹೇಳುವ ಪ್ರಕಾರ, ಇದು ಆರೋಗ್ಯಕ್ಕೆ ಒಳ್ಳೆಯದು. ಇಂಟರ್‌ನೆಟ್‌ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಇದೆ. ಸ್ಥಳೀಯವಾಗಿ ಬಹಳ ಅಂದರೆ ಬಹಳ ಕಡಿಮೆ ಬೆಲೆಗೆ ಇದು ಸಿಗುತ್ತದೆ. ಆದರೆ ಭಾರತದಲ್ಲಿ ಸಾವಿರಾರು ರೂಪಾಯಿ ಬೆಲೆ ಇದಕ್ಕೆ. ಒಬ್ಬ ವ್ಯಕ್ತಿಯ ಒಟ್ಟಾರೆ ಆರೋಗ್ಯಕ್ಕೆ ಈ ಬಿಟ್ಟರ್ ಕೋಲಾ ಸೇವನೆ ಒಳ್ಳೆಯದು ಅಂತ ಹೇಳಲಾಗುತ್ತದೆ. ಆದರೆ ಇಂಥ ವಿಚಾರಗಳನ್ನು ವೈದ್ಯರ ಮೂಲಕವೇ ಖಾತ್ರಿ ಮಾಡಿಕೊಳ್ಳುವುದು ಕ್ಷೇಮ.
ಆದರೆ, ಇಂಟರ್‌ನೆಟ್ ನಲ್ಲಿ ಸಿಗುವ ಮಾಹಿತಿ ಪ್ರಕಾರ, ಶ್ವಾಸಕೋಶದ ಆರೋಗ್ಯಕ್ಕೆ ಹಾಗೂ ಮಲಬದ್ಧತೆ ಮೊದಲಾದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಇದು ಬಹಳ ಒಳ್ಳೆಯದು ಅಂತ ಇದೆ. ಇದನ್ನು ಭಾರತದಲ್ಲಿ ಗಾರ್ಸಿನಿಯಾ ಕೋಲಾ ಅಂತಾರೆ. ಮಧುಮೇಹದ ನಿಯಂತ್ರಣಕ್ಕೂ ಅನುಕೂಲಕಾರಿ ಎಂಬ ಮಾಹಿತಿ ದೊರೆಯುತ್ತದೆ. ಈ ಬಿಟ್ಟರ್ ಕೋಲಾ ಎರಡೂವರೆ ಸಾವಿರ ನೈರಾಗೆ ಇಲ್ಲಿ ಸಿಗುತ್ತದೆ. ಭಾರತದ ರೂಪಾಯಿ ಲೆಕ್ಕದಲ್ಲಿ ಇವತ್ತಿಗೆ ನೂರಾ ಇಪ್ಪತ್ತೆಂಟು ರೂಪಾಯಿ.
ಈ ವಿಷಯಕ್ಕೆ ಹೊರತಾದ ಕೆಲವನ್ನು ನಿಮಗೆ ತಿಳಿಸಬೇಕು. ವಂಚಕರು- ಮೋಸಗಾರರನ್ನು ಭಾರತದಲ್ಲಿ 420 ಅಂತ ಕರೆಯಲಾಗುತ್ತದೆ. ಐಪಿಸಿ ಸೆಕ್ಷನ್ 420 ಆ ರೀತಿಯ ವಂಚನೆಗೆ ಬರುವುದರಿಂದ ಹೀಗೆ ಕರೆಯುವುದು ರೂಢಿಯಲ್ಲಿದೆ. ಅದೇ ರೀತಿಯಲ್ಲಿ ನೈಜೀರಿಯಾದಲ್ಲಿ 419 ಅನ್ನಲಾಗುತ್ತದೆ. ವಂಚನೆ ಮಾಡುವವರು ಅಥವಾ ಅಂಥದ್ದೊಂದು ಉದ್ದೇಶ ಕಂಡುಬರುತ್ತಿದೆ ಅಂತಾದರೆ, ಆ ವ್ಯಕ್ತಿಯನ್ನು 419 ಅಂತಾರೆ. ಇಲ್ಲಿ ಮುಸ್ಲಿ ಹಾಗೂ ಕ್ರಿಶ್ಚಿಯನ್ನರ ಜನಸಂಖ್ಯೆ ಹೆಚ್ಚು. ಮಧ್ಯವಯಸ್ಕ ಮುಸಲ್ಮಾನ ಪುರುಷರನ್ನು “ಅಲ್ಲಾಜೀ” ಎನ್ನುತ್ತಾರೆ. ಅದು ಎಲ್ಲರನ್ನೂ ಹಾಗೆಯೇ ಕರೆಯುತ್ತಾರೆ. ಅದು ಗೌರವ ಸೂಚಿಸುವ ಕ್ರಮದಂತೆ ಕಾಣುತ್ತದೆ. ಕರ್ನಾಟಕದಲ್ಲಿ “ಯಜಮಾನರೇ” ಎನ್ನುವುದಕ್ಕೆ ಸಮಾನಾರ್ಥಕವಾಗಿ ಇದನ್ನು ಬಳಸುವಂತೆ ಕಾಣುತ್ತದೆ.
ರಾಜನೆಂದು ಕರೆಸಿಕೊಳ್ಳುವ ಸ್ಥಳೀಯ ನಾಯಕರಿಗೆ ಹಫ್ತಾ ಕೊಡಲೇ ಬೇಕು
ಬೇರೆ ದೇಶಗಳಿಂದ ಕಂಟೇನರ್ ಗಳನ್ನು ತರಿಸಿದಾಗ, ಅಂದರೆ ವಿದೇಶಗಳಿಂದ ಆಮದು ಮಾಡಿಸಿಕೊಂಡಾಗ, ಕೇಬಲ್ ಗಾಗಿ ರಸ್ತೆ ಅಗೆಯುವುದು, ದೊಡ್ಡ ಪ್ರಮಾಣದ ಯಾವುದೇ ಕೆಲಸಗಳು ಇದ್ದಾಗ ಸ್ಥಳೀಯವಾಗಿ “ರಾಜ” ಎಂದು ಕರೆಸಿಕೊಳ್ಳುವವರಿಗೆ ಹಫ್ತಾ ಕೊಡಬೇಕಾಗುತ್ತದೆ. ಅವರು ತಮ್ಮನ್ನು ರಾಜ ಅಂತ ಕರೆದುಕೊಳ್ಳುತ್ತಾರೆ. ಅವರ ಜತೆಗೆ ಏನು ಹೇಳಿದರೂ ಕೇಳುವ ಮತ್ತು ಮಾಡುವ ಹತ್ತಾರು ಜನ ಇರುತ್ತಾರೆ. ಒಂದೊಂದು ಪ್ರದೇಶಕ್ಕೆ ಈ ರೀತಿಯಲ್ಲಿ ಒಬ್ಬೊಬ್ಬ ರಾಜ.
ಅವರಿಗೆ ಆದಾಯ ಹೇಗೆ ಅಂದರೆ, ವರ್ತಕರು- ವ್ಯಾಪಾರಿಗಳು ಆಮದು ಮಾಡಿಕೊಳ್ಳುವ ವಸ್ತುಗಳ ಆಧಾರದಲ್ಲಿ ಇಂತಿಷ್ಟು ಹಣ ಕೊಡಬೇಕು, ಸ್ಥಳೀಯವಾಗಿ ರಸ್ತೆ, ಚರಂಡಿ ಅಥವಾ ಇನ್ಯಾವುದೇ ಕೆಲಸ ಮಾಡಿಸುವಾಗ ಗುತ್ತಿಗೆದಾರ ಇಂತಿಷ್ಟು ಹಣವನ್ನು ನೀಡಬೇಕು. ಇಂಟರ್ ನೆಟ್ ರಿಪೇರಿ ಆಯಿತು ಅಂತಾದರೆ, ಅದನ್ನು ಸರಿ ಮಾಡುವ ಮುಂಚೆ ಇವರಿಗೆ ಇಂಥಿಷ್ಟು ಹಣ ಅಂತ ಕೊಡಬೇಕು. ಸಾಂಪ್ರದಾಯಿಕವಾದ ದಿರಿಸಿನಲ್ಲಿ ಕಾಣಿಸಿಕೊಳ್ಳುವ ಅವರ ಆದಾಯದ ಮೂಲ ಹೀಗಿರುತ್ತದೆ. -ಇದು ಸ್ಥಳೀಯರು ನೀಡುವ ಮಾಹಿತಿ. ಕುತೂಹಲಕ್ಕಾಗಿ ಯಾರಿದು ರಾಜ, ಇವರ ಆದಾಯದ ಮೂಲ ಏನು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದರೆ ಸ್ಥಳೀಯರು ಹೇಳುವುದು ಈ ಮೇಲ್ಕಂಡ ಮಾತುಗಳು. ಮತ್ತೆ ಇನ್ನಷ್ಟು ಆಸಕ್ತಿಕರ ಮಾಹಿತಿಗಳ ಜೊತೆ ನಿಮ್ಮೆದುರು ಬರುವುದಕ್ಕೆ ಪ್ರಯತ್ನಿಸುತ್ತೇನೆ, ನಮಸ್ಕಾರ.
ವಿಭಾಗ