ಹೆಚ್ಚು ಮಸಾಲೆ ಬೇಡ, ರುಬ್ಬುವ ಅಗತ್ಯವೂ ಇಲ್ಲ; ಸುಲಭವಾಗಿ ಮಾಡಿ ಬ್ಯಾಚುಲರ್ಸ್ಸ್ ಫೇವರೆಟ್ ಚಿಕನ್ ಚಿಂತಾಮಣಿ ರೆಸಿಪಿ
Chicken Chintamani Recipe: ಚಿಕನ್ ಕರಿ ಮಾಡಬೇಕಂದ್ರೆ ಹೆಚ್ಚು ಮಸಾಲೆ ಬೇಕು, ರುಬ್ಬಲು ಮಿಕ್ಸಿ ಬೇಕು. ಇದು ಬ್ಯಾಚುಲರ್ಸ್‌ಗೆ ಕಷ್ಟದ ಕೆಲಸ. ಅವರಿಗೆ ಸುಲಭವಾಗುವ ಹಾಗೂ ಹೆಚ್ಚು ಮಸಾಲೆಗಳಿಲ್ಲದೆ ಮಾಡುವ ಸುಲಭ ಚಿಕನ್ ರೆಸಿಪಿ ಇಲ್ಲಿದೆ.

ಮಾಂಸಾಹಾರಿಗಳಲ್ಲಿ ಚಿಕನ್ ಸೇವಿಸುವವರ ಸಂಖ್ಯೆ ಹೆಚ್ಚು. ದಿನಕ್ಕೊಂದು ಬಗೆಯ ಚಿಕನ್ ಕರಿ ಮಾಡಿ ಸೇವಿಸಬಹುದು. ಕೋಳಿ ಮಾಂಸವನ್ನು ಹೆಚ್ಚು ಮಸಾಲಗಳನ್ನು ಹಾಕಿ ಮಾಡಿ ತಿಂದರೆ ಅದರ ಸ್ವಾದವೇ ಬೇರೆ. ದೇಶದ ವಿವಿಧ ಭಾಗಗಳಲ್ಲಿ ಭಿನ್ನ ವಿಭಿನ್ನ ಶೈಲಿಯಲ್ಲಿ ಚಿಕನ್ ಕರಿ ಮಾಡ್ತಾರೆ. ನೀವು ಈಗಾಗಲೇ ಚಿಕನ್ ಮಸಾಲಾ, ಚಿಕನ್ ಪೆಪ್ಪರ್, ಘೀ ರೋಸ್ಟ್, ಉರುವಾಲ್ ಹೀಗೆ ಒಂದಷ್ಟು ವಿಧದಲ್ಲಿ ಚಿಕನ್ ಕರಿ ಮಾಡಿ ಸವಿದಿರಬಹುದು. ಇಂದು ಒಂದು ಭಿನ್ನ ಶೈಲಿಯಲ್ಲಿ ಚಿಕನ್ ಕರ್ರಿ ಮಾಡಿ ನೋಡಿ. ಈ ಹೊಸ ರೆಸಿಪಿ ನಿಮಗೆ ಖಂಡಿತಾ ಇಷ್ಟವಾಗುತ್ತದೆ.
ಚಿಕನ್ ಚಿಂತಾಮಣಿ ಬ್ಯಾಚುಲರ್ಸ್ ರೆಸಿಪಿ ಎಂದೇ ಫೇಮಸ್. ಯಾಕೆಂದರೆ ಈ ರೆಸಿಪಿಯನ್ನು ಸುಲಭವಾಗಿ ಮಾಡಬಹುದು. ಇದಕ್ಕೆ ಮಸಾಲೆ ರುಬ್ಬುವ ಅಗತ್ಯವಿಲ್ಲ, ಜೊತೆಗೆ ಯಾವುದೇ ಮಸಾಲೆ ಪುಡಿ ಮಾಡುವ ಅಗತ್ಯವೂ ಇಲ್ಲ. ಸುಲಭವಾಗಿ ಯಾರೇ ಆದರೂ ಈ ಕರಿ ಮಾಡಬಹುದು. ಅದು ಕೂಡಾ ಕೆಲವೇ ನಿಮಿಷಗಳಲ್ಲಿ ಡಿಶ್ ರೆಡಿಯಾಗುತ್ತೆ. ಊಟ ಅಥವಾ ಚಪಾತಿ ಜೊತೆಗೆ ಸೈಡ್ ಡಿಶ್ ಆಗಿ ಚಿಕನ್ ಚಿಂತಾಮಣಿ ಸವಿಯಬಹುದು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಸುಲಭವಾಗಿ ಮಾಡಿ ಖುಷಿಯಿಂದ ಸವಿಯಬಹುದು. ನೀವೇನಾದರೂ ಅಡುಗೆ ಕಲಿಯುವವರಾಗಿದ್ದರೆ, ಆರಂಭಿಕ ಪ್ರಯತ್ನಕ್ಕೆ ಇದೇ ಬೆಸ್ಟ್.
ಹಾಗಿದ್ದರೆ, ಚಿಕನ್ ಚಿಂತಾಮಣಿ ರೆಸಿಪಿ ಮಾಡುವುದು ಹೇಗೆ ಎಂದು ತಿಳಿಯೋಣ. ಸರಳ ಪಾಕವಿಧಾನ ಇಲ್ಲಿದೆ.
ಚಿಕನ್ ಚಿಂತಾಮಣಿಗೆ ಬೇಕಾಗುವ ಸಾಮಾಗ್ರಿಗಳು
- ಚಿಕನ್ - ಒಂದು ಕೆಜಿ
- ಈರುಳ್ಳಿ - 250 ಗ್ರಾಂ
- ಟೊಮೆಟೋ -1
- ಒಣ ಮೆಣಸಿನಕಾಯಿ -10ರಿಂದ 12
- ಸೋಂಪು ಕಾಳು- 1 ಚಮಚ
- ಶುಂಠಿ ಬೆಳ್ಳುಳ್ಳಿ ಪೇಸ್ಟ್ -2 ಚಮಚ
- ಅರಿಶಿನ ಪುಡಿ - 1/2 ಚಮಚ
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಎಣ್ಣೆ - 3 ಚಮಚ
- ಕರಿಬೇವು - ಸ್ವಲ್ಪ
- ಉಪ್ಪು - ರುಚಿಗೆ
ಚಿಕನ್ ಚಿಂತಾಮಣಿ ತಯಾರಿಸುವ ವಿಧಾನ
ಬೋನ್‌ಲೆಸ್ ಅಥವಾ ವಿತ್ ಬೋನ್ ಚಿಕನ್ ಅನ್ನು ಚಿಕ್ಕ ತುಂಡುಗಳಾಗಿ ಮಾಡಿಕೊಂಡು ತೊಳೆದು ಇಟ್ಟುಕೊಳ್ಳಿ. ಅತ್ತ ಚಿಕ್ಕ ಗಾತ್ರದ ನಾಟಿ ಈರುಳ್ಳಿಯನ್ನು ಕತ್ತರಿಸಿ ಇಟ್ಟುಕೊಳ್ಳಿ.
ಒಂದು ಬಾಣಲೆಯನ್ನು ಒಲೆಯಲ್ಲಿ ಇಟ್ಟು ಅದಕ್ಕೆ 3 ಚಮಚ ಎಣ್ಣೆ ಹಾಕಿ. ಅದು ಬಿಸಿಯಾದಾಗ ಸೋಂಪು ಕಾಳು ಹಾಕಿ, ಅದರ ಬೆನ್ನಲ್ಲೇ ಕರಿಬೇವಿನ ಎಲೆ ಹಾಕಿ. ಇದಕ್ಕೆ ಒಣ ಮೆಣಸನ್ನು ಸಣ್ಣ ಸಣ್ಣ ತುಂಡು ಮಾಡಿ ಹಾಕಿ ಕೆಲ ಕಾಲ ಹುರಿಯಿರಿ. ಗುಂಟೂರು ಮೆಣಸಿನಕಾಯಿ ಆಗಿದ್ದರೆ ಅದರ ಬೀಜಗಳನ್ನು ತೆಗೆದು ಹಾಕುವುದು ಉತ್ತಮ. ಬ್ಯಾಡಗಿ ಮೆಣಸನ್ನು ಹಾಗೆಯೇ ತುಂಡು ಮಾಡಿ ಹಾಕಬಹುದು. ಇದಕ್ಕೆ ಈಗ ಈರುಳ್ಳಿ ಹಾಕಿ ಹುರಿಯಿರಿ.
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಬಾಡಿಸಿ. ಇದಕ್ಕೆ ಈಗ ಚಿಕನ್ ಹಾಕಿ ಅರಿಶಿನ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಅದಕ್ಕೆ ಸ್ವಲ್ಪ ಟೊಮೆಟೋ ಹಾಕಿ. ಮಿಶ್ರಣ ಮಾಡಿ ಸ್ವಲ್ಪವೇ ನೀರು ಹಾಕಿ. ಆ ನೀರು ಆವಿಯಾಗುವವರೆಗೆ ಮುಚ್ಚಿ ಬೇಯಿಸಿ.
ಗ್ಯಾಸ್ ಮೀಡಿಯಮ್ ಫ್ಲೇಮ್ ಅಲ್ಲಿಟ್ಟು ಚಿಕನ್ ಅನ್ನು ಬೇಯಿಸಿ, ಆಗಾಗ ಮುಚ್ಚಳ ತೆಗೆದು ಸೌಟು ಹಾಕಿ. ಚಿಕನ್ ಬೆಂದಿದೆಯಾ ಎಂದು ನೋಡಿ. ನೀರು ಆವಿಯಾಗುವವರೆಗೂ ಬೇಯಿಸಿ. ಕೊನೆಗೆ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ನಿಮಗೆ ಇಷ್ಟವಾಗುವ ಚಿಕನ್ ಚಿಂತಾಮಣಿ ರೆಡಿಯಾಗುತ್ತೆ.
ಇನ್ನಷ್ಟು ರೆಸಿಪಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | Paneer Dosa: ಬೆಳಗಿನ ಉಪಾಹಾರಕ್ಕೆ ಈ ರೀತಿ ಪನೀರ್ ದೋಸೆ ಮಾಡಿ, ಮಕ್ಕಳು ಕೂಡ ಇಷ್ಟಪಟ್ಟು ತಿನ್ನೋದು ಪಕ್ಕಾ
