Odisha: ಒಡಿಶಾದ ಕೆಂಪು ಇರುವ ಚಟ್ನಿಗೆ ಸಿಕ್ತು ಜಿಐ ಟ್ಯಾಗ್; ಕರ್ನಾಟಕದ ಚಗಳಿ ಚಟ್ನಿಗೂ ಸಿಕ್ರೆ ಚೆಂದ ಎಂದ ನೆಟಿಜನ್ಸ್
Odhisha: ಒಡಿಶಾದ ಮಯೂರ್ಭಂಜ್ ಕಾಡುಗಳಲ್ಲಿ ಕಂಡುಬರುವ ಕೆಂಪು ಇರುವೆಗಳಿಂದ ತಯಾರಿಸಿದ ಚಟ್ನಿ, ಅನೇಕ ಪೋಷಕಾಂಶಗಳಿಂದ ಕೂಡಿದೆ. ಈ ಚಟ್ನಿಗೆ ಇತ್ತೀಚೆಗೆ ಜಿಐ ಟ್ಯಾಗ್ ದೊರೆತಿದೆ.
Odhisha: ದೇಶದ ವಿವಿಧ ಭಾಗಗಳಲ್ಲಿ ಆಹಾರ ಸಂಸ್ಕೃತಿ ವಿಭಿನ್ನವಾಗಿರೋದು ನಮ್ಮೆಲ್ಲರಿಗೂ ತಿಳಿದ ವಿಚಾರ. ಆದಿ ಮಾನವ ಕೀಟಗಳನ್ನು ಆಹಾರವಾಗಿ ಸೇವಿಸುತ್ತಿದ್ದ, ಇದು ಇಂದಿಗೂ ಮುಂದುವರೆದಿದೆ. ಚೀನಾ, ಜಪಾನ್‌ನಂಥ ದೇಶಗಳಲ್ಲಿ ಕುರಿ, ಕೋಳಿ, ಮೇಕೆ ಹೊರತುಪಡಿಸಿ ಇತರ ಪ್ರಾಣಿ ಪಕ್ಷಿಗಳನ್ನೂ ಆಹಾರವಾಗಿ ಸೇವಿಸುತ್ತಾರೆ. ಹಾಗೇ ಕರ್ನಾಟಕದ ಮಲೆನಾಡು ಪ್ರದೇಶಗಳಲ್ಲಿ ಕೆಂಪು ಇರುವ ಚಟ್ನಿಯನ್ನು ಸೇವಿಸುತ್ತಾರೆ.
ಮಯೂರ್ಭಂಜ್ ಕಾಡುಗಳಲ್ಲಿ ಕಂಡುಬರುವ ಕೆಂಪು ಇರುವೆಗಳು
ಕೆಂಪು ಇರುವ ಚಟ್ನಿ ಕರ್ನಾಟದಲ್ಲಿ ಮಾತ್ರವಲ್ಲದೆ, ಒಡಿಶಾದಲ್ಲೂ ಬಳಸುತ್ತಾರೆ. ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಜನರು ಕೂಡಾ, ಕೆಂಪು ಇರುವೆ ಚಟ್ನಿ ಅಥವಾ ಕಾಯ್ ಚಟ್ನಿ ತಯಾರಿಸುತ್ತಾರೆ. ಇದು ಅದರ ಔಷಧೀಯ ಮತ್ತು ಪೌಷ್ಟಿಕಾಂಶದ ಗುಣಗಳಿಗೆ ಬಹಳ ಹೆಸರುವಾಸಿಯಾಗಿದೆ. 2 ಜನವರಿ 2024 ರಂದು, ಈ ವಿಶಿಷ್ಟವಾದ ಚಟ್ನಿಗೆ ಜಿಐ (Geographical Identification)ಟ್ಯಾಗ್ ನೀಡಲಾಗಿದೆ. ವೈಜ್ಞಾನಿಕವಾಗಿ ಓಕೋಫಿಲ್ಲಾ ಸ್ಮಾರಾಗ್ಡಿನಾ ಎಂದು ಕರೆಯಲ್ಪಡುವ ಕೆಂಪು ನೇಯ್ಗೆ ಇರುವೆಗಳು, ಚರ್ಮದ ಮೇಲೆ ಗುಳ್ಳೆಗಳನ್ನು ಉಂಟುಮಾಡುವಂತೆ ಕಚ್ಚುತ್ತವೆ, ಇದು ಬಹಳ ನೋವಿನಿಂದ ಕೂಡಿರುತ್ತದೆ. ಈ ಇರುವೆಗಳು ಸಾಮಾನ್ಯವಾಗಿ ಸಿಮಿಲಿಪಾಲ್ ಕಾಡುಗಳನ್ನು ಒಳಗೊಂಡಂತೆ ಮಯೂರ್ಭಂಜ್ ಕಾಡುಗಳಲ್ಲಿ ಕಂಡುಬರುತ್ತವೆ.
ಜಿಲ್ಲೆಯ ನೂರಾರು ಬುಡಕಟ್ಟು ಕುಟುಂಬಗಳು ಈ ಇರುವೆ ಹಾಗೂ ಇದರಿಂದ ತಯಾರಿಸಿದ ಚಟ್ನಿಯನ್ನು ಮಾರಾಟ ಮಾಡುವ ಮೂಲಕ ಜೀವನ ನಡೆಸುತ್ತಿದೆ. ಈ ಚಟ್ನಿ ತಯಾರಿಸಲು ಇರುವೆಗಳು ಮತ್ತು ಮೊಟ್ಟೆಗಳನ್ನು ಅವುಗಳ ಗೂಡುಗಳಿಂದ ಸಂಗ್ರಹಿಸಲಾಗುತ್ತದೆ. ಬಳಸುವ ಮೊದಲು ಅದನ್ನು ಸ್ವಚ್ಛಗೊಳಿಸಲಾಗುತ್ತದೆ. ಅದರೊಂದಿಗೆ ಉಪ್ಪು, ಶುಂಠಿ, ಬೆಳ್ಳುಳ್ಳಿ ಮತ್ತು ಹಸಿಮೆಣಸಿನ ಮಿಶ್ರಣವನ್ನು ಸೇರಿಸಿ ಗ್ರೈಂಡ್ ಮಾಡಿ ಚಟ್ನಿ ತಯಾರಿಸಲಾಗುತ್ತದೆ. ಈ ರೀತಿಯ ಕೆಂಪು ಇರುವೆ ಚಟ್ನಿಗಳನ್ನು ಪೂರ್ವ ರಾಜ್ಯಗಳಾದ ಜಾರ್ಖಂಡ್, ಕರ್ನಾಟಕ ಮತ್ತು ಛತ್ತೀಸ್‌ಗಢಗಳಲ್ಲಿಯೂ ಕಾಣಬಹುದು.
ನಾನಾ ಪೋಷಕಾಂಶ ಒದಗಿಸುವ ಕೆಂಪು ಇರುವೆ ಚಟ್ನಿ
ಕೆಂಪು ಇರುವ ಚಟ್ನಿಯು ರುಚಿ ಜೊತೆಗೆ ಅದರ ಆರೋಗ್ಯ ಲಾಭಗಳಿಗೂ ಹೆಸರಾಗಿದೆ. ಇದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಸತು, ವಿಟಮಿನ್ ಬಿ-12, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮುಂತಾದ ಪೋಷಕಾಂಶಗಳ ಉತ್ತಮ ಅಂಶಗಳಿವೆ. ಈ ಚಟ್ನಿ ಸೇವಿಸುವುದರಿಂದ ಆರೋಗ್ಯಕರ ಮೆದುಳು ಮತ್ತು ನರಮಂಡಲದ ಬೆಳವಣಿಗೆಗೆ ಸಾಕಷ್ಟು ಪ್ರಯೋಜನ ನೀಡುತ್ತದೆ. ಖಿನ್ನತೆ, ಆಯಾಸ ಮತ್ತು ಜ್ಞಾಪಕ ಶಕ್ತಿ ನಷ್ಟದಂತಹ ಪರಿಸ್ಥಿತಿಗಳ ನಿರ್ವಹಣೆಯಲ್ಲಿ ಸಮರ್ಥವಾಗಿ ಸಹಾಯ ಮಾಡುತ್ತದೆ.
ಒಡಿಶಾದ ಕೆಂಪು ಇರುವ ಚಟ್ನಿಗೆ ಜಿಐ ಟ್ಯಾಗ್ ದೊರೆತ ವಿಚಾರ ತಿಳಿದ ಕನ್ನಡಿಗರು, ಮಲೆನಾಡಿನ ಚಗಳಿ ಚಟ್ನಿಗೂ ಸಿಕ್ಕರೆ ಚೆನ್ನಾಗಿರುತ್ತದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.