Office Work: ಕಚೇರಿ ಕೆಲಸದ ವೇಳೆ ಈ ಸರಳ ವ್ಯಾಯಾಮ ಮಾಡಿ; ಬೆನ್ನು ನೋವು ದೂರವಾಗುವುದು ನೋಡಿ
ಆಧುನಿಕ ಜೀವನಶೈಲಿ ಮತ್ತು ಡೆಸ್ಕ್ ಕೆಲಸದ ಪರಿಣಾಮ, ಆಫೀಸ್ ಕುರ್ಚಿಯಲ್ಲಿಯೇ ನಾವು ದಿನದ 8-9 ಗಂಟೆ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲಸದ ಒತ್ತಡದ ನಡುವೆಯೂ ನಾವು ಕೆಲವೊಂದು ಸರಳ ವ್ಯಾಯಾಮ ಮಾಡುವ ಮೂಲಕ, ಮೈ ಕೈ ನೋವನ್ನು ಪರಿಹರಿಸಿಕೊಳ್ಳಬಹುದು.

ದಿನಕ್ಕೆ 8 ರಿಂದ 9 ಗಂಟೆ ಕಾಲ ಆಫೀಸ್‌ನಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡಿ ಮನೆಗೆ ಬಂದರೆ, ಬೆನ್ನು ನೋವು, ಕೈ-ಕಾಲು ನೋವು, ಸ್ನಾಯು ಸೆಳೆತ ಮುಂತಾದ ಸಮಸ್ಯೆಗಳು ನಮ್ಮನ್ನು ಬಾಧಿಸುತ್ತವೆ. ಕೆಲಸದ ಒತ್ತಡ ಮತ್ತು ರೀತಿಯಿಂದಾಗಿ ಹಾಗೆ ಕುಳಿತುಕೊಳ್ಳುವುದು ಅನಿವಾರ್ಯ. ಕಂಪ್ಯೂಟರ್, ಲ್ಯಾಪ್‌ಟಾಪ್ ಮುಂದೆ ಕುಳಿತು ಕೆಲಸ ಮಾಡಲಾರಂಭಿಸಿದರೆ, ಸ್ನಾಯುಗಳು ಬಿಗಿಯಾಗಿ, ದೈಹಿಕ ಒತ್ತಡ ಉಂಟಾಗುತ್ತದೆ. ಆ ಸಂದರ್ಭದಲ್ಲಿ ಕೈ-ಕಾಲು ಆಡಿಸಿ, ಮೈಯನ್ನು ಹಿಗ್ಗಿಸಿ, ಅರೆಕ್ಷಣ ಲಟಿಕೆ ಮುರಿದರೆ ಬಿಗಿಯಾಗಿರುವ ಸ್ನಾಯುಗಳು ಸಡಿಲವಾಗಿ, ದೇಹಕ್ಕೆ ತುಸು ಆರಾಮವಾಗುತ್ತದೆ. ಮನಸ್ಸು ಕೂಡ ಒತ್ತಡದಿಂದ ಮುಕ್ತವಾಗುತ್ತದೆ.
ಎಂಟು ಗಂಟೆಗೂ ಅಧಿಕ ಕಾಲ ಕುಳಿತುಕೊಂಡೇ ಕೆಲಸ ಮಾಡಿದರೆ, ದೇಹದ ಸ್ನಾಯುಗಳು ಬಿಗಿಯಾಗಿ, ಬೆನ್ನು ನೋವು, ಭುಜಗಳು ಮತ್ತು ಕೈ ಕಾಲಿನಲ್ಲಿ ಸೆಳೆತ ಉಂಟಾಗುತ್ತದೆ. ಆದರೆ ಅದೇ ಸ್ಥಿತಿಯಲ್ಲಿ ಕುಳಿತುಕೊಂಡಿದ್ದರೆ, ದೇಹಕ್ಕೆ ಅಪಾಯವಿದೆ. ಅದಕ್ಕಾಗಿ ನಾವು ಕುರ್ಚಿಯಲ್ಲಿ ಕುಳಿತುಕೊಂಡೇ, ಕೆಲವೊಂದು ಸರಳ ವ್ಯಾಯಾಮ ಮಾಡಬಹುದು. ಹಾಗೆ ಮಾಡುವುದರಿಂದ ದೇಹ ಮತ್ತು ಮನಸ್ಸು ಉಲ್ಲಸಿತವಾಗುತ್ತದೆ ಹಾಗೂ ದೀರ್ಘಕಾಲದ ಬೆನ್ನು ನೋವು, ಸ್ನಾಯು ಸೆಳೆತ, ಕೈಕಾಲು ಜೊಂಪು ಹಿಡಿಯುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಕುರ್ಚಿಯಲ್ಲಿ ಕುಳಿತುಕೊಂಡೇ ಮೈಕೈ ಹಿಗ್ಗಿಸುವುದರ ಪ್ರಯೋಜನಗಳು
ಕುರ್ಚಿಯಲ್ಲಿ ಕುಳಿತುಕೊಂಡು, ಮೈಕೈ ಮತ್ತು ದೇಹವನ್ನು ಸ್ಟ್ರೆಚ್ ಅಂದರೆ, ಹಿಗ್ಗಿಸುವುದರಿಂದ, ಬೊಜ್ಜು, ಬೆನ್ನು ನೋವು ಮತ್ತು ರಕ್ತಪರಿಚಲನೆಯಲ್ಲಿ ವ್ಯತ್ಯಾಸ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ದೂರಮಾಡುತ್ತದೆ. ಜತೆಗೆ ಹೃದಯದ ರಕ್ತನಾಳದ ಕಾಯಿಲೆ ಮತ್ತು ಕ್ಯಾನ್ಸರ್‌ನ ಅಪಾಯದಿಂದ ಪಾರುಮಾಡುತ್ತದೆ.
ನಿಯಮಿತವಾಗಿ ಸ್ಟ್ರೆಚ್ ಮಾಡುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ, ಸ್ನಾಯುಗಳ ಬಿಗಿತವನ್ನು ಕಡಿಮೆ ಮಾಡುತ್ತದೆ. ಇದಕ್ಕೆ ಸಂಬಂಧಿಸಿ ಹಲವು ಅಧ್ಯಯನಗಳು ನಡೆದಿದ್ದು, ಸ್ಟ್ರೆಚಿಂಗ್ ಮಾಡುವುದರಿಂದ ದೇಹದ ಆರೋಗ್ಯ ಮಾತ್ರವಲ್ಲದೆ ಏಕಾಗ್ರತೆಯನ್ನು ಕೂಡ ಹೆಚ್ಚಿಸುತ್ತದೆ ಎಂದು ವರದಿಗಳು ಹೇಳಿವೆ.
ಆಫೀಸ್‌ನಲ್ಲಿ ಕುಳಿತುಕೊಂಡೇ ನೀವು ಮಾಡಬಹುದಾದ ಸರಳ ಸ್ಟ್ರೆಚಿಂಗ್‌ಗಳು
ಕುತ್ತಿಗೆಯನ್ನು ತಿರುಗಿಸುವುದು, ಕುಳಿತುಕೊಂಡೇ ಬೆನ್ನುಮೂಳೆಯನ್ನು ತಿರುಗಿಸುವುದು, ಮಣಿಕಟ್ಟುಗಳನ್ನು ಹಿಗ್ಗಿಸಿ ತಿರುಗಿಸುವುದು, ಭುಜವನ್ನು ಹಿಗ್ಗಿಸುವುದು, ಕುಳಿತುಕೊಂಡು ಕಾಲು ವಿಸ್ತರಿಸುವುದು, ಕೈಗಳನ್ನು ಮೇಲಕ್ಕೆತ್ತಿ ಬದಿಗೆ ಬಾಗುವುದು, ಮಂಡಿಯನ್ನು ಹಿಗ್ಗಿಸುವುದು ಮತ್ತು ಕಣ್ಣುಗಳನ್ನು ಹೊರಳಿಸುವುದು ಕೂಡ ಒತ್ತಡ ಮತ್ತು ಸುಸ್ತನ್ನು ಕಡಿಮೆ ಮಾಡುತ್ತದೆ. ಜತೆಗೆ ಒಂದೇ ಭಂಗಿಯಲ್ಲಿ ಸತತ ಕುಳಿತುಕೊಂಡೇ ಇದ್ದರೆ, ಅದರಿಂದ ದೇಹ ಜಡವಾಗುತ್ತದೆ. ಹೀಗಾಗಿ ಈ ಸರಳ ಮತ್ತು ಕ್ಷಿಪ್ರ ವ್ಯಾಯಾಮಗಳನ್ನು ಮಾಡುವ ಮೂಲಕ ದೇಹ ಮತ್ತು ಮನಸ್ಸಿಗೆ ಉಂಟಾಗಿರುವ ಸುಸ್ತನ್ನು ನಿವಾರಿಸಬಹುದು.
ಸಣ್ಣ ಬ್ರೇಕ್ ತೆಗೆದುಕೊಳ್ಳಿ
ಆಫೀಸ್‌ನಲ್ಲಿ ಸತತ 8 ರಿಂದ 9 ಗಂಟೆ ಕುಳಿತುಕೊಂಡೇ ಇರಬೇಡಿ, ಮಧ್ಯದಲ್ಲಿ ಸಾಧ್ಯವಾದರೆ ಚಿಕ್ಕ ಬ್ರೇಕ್ ತೆಗೆದುಕೊಳ್ಳಿ, ಅದರಿಂದ ನಿಮ್ಮ ಮೂಡ್ ರಿಲಾಕ್ಸ್ ಆಗುತ್ತದೆ. ಪುಟ್ಟ ಐದು ನಿಮಿಷ ಅಥವಾ ಹತ್ತು ನಿಮಿಷದ ವಾಕ್ ಮಾಡಿ ಬನ್ನಿ, ಹಸಿರನ್ನು ವೀಕ್ಷಿಸಿ, ಅದರಿಂದ ಮನಸ್ಸಿಗೂ ನೆಮ್ಮದಿ, ಆಯಾಸವೂ ತಕ್ಕಮಟ್ಟಿಗೆ ಪರಿಹಾರವಾಗುತ್ತದೆ. ಬ್ರೇಕ್ ಎಂದು ಟೀ, ಕಾಫಿ ಮತ್ತು ಸಿಗರೇಟ್ ತೆಗೆದುಕೊಳ್ಳಬೇಡಿ, ಹೆಚ್ಚಿನ ಪ್ರಮಾಣದ ನೀರು ಕುಡಿಯಿರಿ. ಇದರಿಂದ ಆಲಸಿತನ ದೂರವಾಗುತ್ತದೆ, ಜತೆಗೆ ಕಾಫಿಯ ಅವಲಂಬನೆಯೂ ಕಡಿಮೆಯಾಗುತ್ತದೆ. ಟೆನ್ಶನ್ ಎಂದು ಸಿಗರೇಟ್ ಸೇದಬೇಡಿ. ಹಾಗೆ ಮಾಡಿದರೆ, ಮತ್ತೆ ಅದೊಂದು ಚಟವಾಗಬಹುದು. ಅದರ ಬದಲು, ನೀರು, ಮಜ್ಜಿಗೆ ಅಥವಾ ಎಳನೀರು ಕುಡಿಯಿರಿ.
