ಗೂಗಲ್‌ ಪೇ, ಫೋನ್‌ ಪೇ ಮೂಲಕ ತಪ್ಪು ಸಂಖ್ಯೆಗೆ ಹಣ ಕಳುಹಿಸಿದ್ದೀರಾ? ಹಣ ಮರಳಿ ಪಡೆಯಲು ಹೀಗೆ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಗೂಗಲ್‌ ಪೇ, ಫೋನ್‌ ಪೇ ಮೂಲಕ ತಪ್ಪು ಸಂಖ್ಯೆಗೆ ಹಣ ಕಳುಹಿಸಿದ್ದೀರಾ? ಹಣ ಮರಳಿ ಪಡೆಯಲು ಹೀಗೆ ಮಾಡಿ

ಗೂಗಲ್‌ ಪೇ, ಫೋನ್‌ ಪೇ ಮೂಲಕ ತಪ್ಪು ಸಂಖ್ಯೆಗೆ ಹಣ ಕಳುಹಿಸಿದ್ದೀರಾ? ಹಣ ಮರಳಿ ಪಡೆಯಲು ಹೀಗೆ ಮಾಡಿ

Refund Money In UPI: ಕೆಲವೊಮ್ಮೆ ಆಕಸ್ಮಿಕವಾಗಿ ಗೂಗಲ್‌ ಪೇ ಅಥವಾ ಫೋನ್‌ ಪೇಯಿಂದ ತಪ್ಪಾಗಿ ಬೇರೆ ಸಂಖ್ಯೆಗೆ ಹಣವನ್ನು ಕಳುಹಿಸಿಬಿಡುತ್ತೇವೆ. ಇಂತಹ ಸಮಯದಲ್ಲಿ ತಮ್ಮ ಹಣವನ್ನು ಮರಳಿ ಪಡೆಯುವುದು ಹೇಗೆ ಎಂದು ಅನೇಕರಿಗೆ ತಿಳಿದಿರುವುದಿಲ್ಲ. ಹಾಗಾದರೆ ಏನು ಮಾಡಬೇಕು? ಯಾವ ರೀತಿ ನಿಮ್ಮ ಹಣವನ್ನು ಮರಳಿ ಪಡೆದುಕೊಳ್ಳಬಹುದು? ಇಲ್ಲಿದೆ ಓದಿ. (ಬರಹ: ಅರ್ಚನಾ ವಿ ಭಟ್)

ತಪ್ಪಾದ ಆನ್‌ಲೈನ್‌ ಪೇಮೆಂಟ್‌ನಿಂದ ಹಣವನ್ನು ವಾಪಸ್‌ ಪಡೆಯುವ ವಿಧಾನ
ತಪ್ಪಾದ ಆನ್‌ಲೈನ್‌ ಪೇಮೆಂಟ್‌ನಿಂದ ಹಣವನ್ನು ವಾಪಸ್‌ ಪಡೆಯುವ ವಿಧಾನ (PC: ‌ Pinterest)

ಈಗ ಬಹುತೇಕ ಎಲ್ಲ ಕಡೆ ಡಿಜಿಟಲ್ ಪೇಮೆಂಟ್‌ ಮಾಡಬಹುದಾದ ಸೌಲಭ್ಯವಿದೆ. ಕೈಯಲ್ಲಿ ಹಣ ಇಟ್ಟುಕೊಂಡು ಓಡಾಡುವುದಕ್ಕಿಂತ ಸುಲಭವಾಗಿ ಫೋನ್‌ ಮೂಲಕ ಹಣದ ವ್ಯವಹಾರ ನಿರ್ವಹಿಸುವುದು ಹೆಚ್ಚಾಗುತ್ತಿದೆ. ದೊಡ್ಡ ದೊಡ್ಡ ಮಾಲ್‌ಗಳಿಂದ ಹಿಡಿದು ಹಾಲಿನ ಬೂತ್‌, ತರಕಾರಿ ಅಂಗಡಿಯವರೆಗೆ ಆನ್‌ಲೈನ್‌ ಪೇಮೆಂಟ್ ಬಳಸುವುದು ಅಭ್ಯಾಸವಾಗಿಬಿಟ್ಟಿದೆ. ಆದರೆ ಕೆಲವೊಮ್ಮೆ ಆಕಸ್ಮಿಕವಾಗಿ ತಪ್ಪು ಸಂಖ್ಯೆಗಳಿಗೆ ಹಣ ಪಾವತಿ ಮಾಡಿಬಿಡುತ್ತೇವೆ. ನಂತರ ಆ ಹಣ ಮರಳಿ ಪಡೆಯುವುದು ಹೇಗೆ ಎಂಬ ಪ್ರಶ್ನೆಗಳು ಅವರನ್ನು ಕಾಡುತ್ತವೆ. ಜೊತೆಗೆ ಚಿಂತೆಗೂ ಒಳಗಾಗುತ್ತಾರೆ.

ತಮ್ಮ ಹಣವನ್ನು ತಾವು ಹೇಗೆ ಮರಳಿ ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಂಡರೆ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು. ಆರ್‌ಬಿಐ ನಿಯಮಗಳ ಪ್ರಕಾರ, ಡಿಜಿಟಲ್ ಸೇವೆಗಳ ಮೂಲಕ ತಪ್ಪು ವ್ಯಕ್ತಿಗೆ ಹಣ ಕಳುಹಿಸಿದ್ದರೆ, ಹಣ ಪಾವತಿಸಿದ ದಾಖಲೆಗಳನ್ನು ಬಳಸಿ ದೂರು ನೀಡಬಹುದಾಗಿದೆ. ಗೂಗಲ್‌ ಪೇ (Google Pay), ಫೋನ್‌ ಪೇ (Phone Pay), ಪೇಟಿಎಂ (Paytm) ಮತ್ತು ಇತರ ಯುಪಿಐ ಪ್ಲಾಟ್‌ಫಾರ್ಮ್‌ಗಳ ಮೂಲಕ ನೀವು ತಪ್ಪಾಗಿ ಇತರರಿಗೆ ಹಣವನ್ನು ಕಳುಹಿಸಿದ್ದರೆ, ಎನ್‌ಪಿಸಿಐ (NPCI – National Payments Corporation of India) ಪೋರ್ಟಲ್ ಮೂಲಕ ದೂರು ಸಲ್ಲಿಸಬಹುದಾಗಿದೆ. ಹಾಗಾದರೆ ಯಾವ ರೀತಿ ದೂರು ಸಲ್ಲಿಸಬಹುದು ಎಂಬುದನ್ನು ತಿಳಿಯೋಣ.

ಎನ್‌ಪಿಸಿಐನಲ್ಲಿ ದೂರು ಸಲ್ಲಿಸುವುದು ಹೇಗೆ?

ಆಕಸ್ಮಿಕವಾಗಿ ಯುಪಿಐ ಮೂಲಕ ತಪ್ಪು ಸಂಖ್ಯೆಗೆ ಹಣ ಕಳುಹಿಸಿದ್ದರೆ ಆಗ ಆ ವಹಿವಾಟಿನ ವಿರುದ್ಧ ದೂರು ದಾಖಲಿಸಬಹುದು. ನಿಧಿ ವರ್ಗಾವಣೆ ಅಥವಾ ವ್ಯಾಪಾರ ವಹಿವಾಟು ಈ ಎರಡೂ ಸಂದರ್ಭದಲ್ಲಿ ನೀವು ಎನ್‌ಪಿಸಿಐನಲ್ಲಿ ದೂರು ನೀಡಬಹುದು. ಅದಕ್ಕೆ ಮೊದಲು ಎನ್‌ಪಿಸಿಐನ ಅಧಿಕೃತ ವೆಬ್‌ಸೈಟ್‌ npci.org.in ಗೆ ಭೇಟಿ ಕೊಡಬೇಕು. ನಂತರ ಹೋಮ್‌ ಪೇಜ್‌ನಲ್ಲಿರುವ ‘ವಾಟ್ ವಿ ಡು’ ಟ್ಯಾಬ್‌ ಕ್ಲಿಕ್‌ ಮಾಡಬೇಕು. ಅಲ್ಲಿ ಯುಪಿಐ ಅಡಿಯಲ್ಲಿರುವ ಡಿಸ್ಪ್ಯೂಟ್‌ ರೆಡ್ರಿಸಲ್‌ ಮೆಕ್ಯಾನಿಸಂ (ವಿವಾದ ಪರಿಹಾರ ಕಾರ್ಯವಿಧಾನ) ಟ್ಯಾಬ್ ಆಯ್ದುಕೊಳ್ಳಬೇಕು. ಕಂಪ್ಲೇಂಟ್‌ನಲ್ಲಿರುವ ಟ್ರಾನ್ಸಾಕ್ಷನ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಅಲ್ಲಿರುವ ಆನ್‌ಲೈನ್ ಫಾರ್ಮ್ ಅನ್ನು ಅಗತ್ಯ ಮಾಹಿತಿಗಳಾದ ಯುಪಿಐ ಐಡಿ, ವರ್ಚುವಲ್ ಪಾವತಿ ವಿಳಾಸ, ವರ್ಗಾವಣೆಯಾದ ಮೊತ್ತ, ವಹಿವಾಟು ದಿನಾಂಕ, ಇಮೇಲ್ ಐಡಿ, ಮೊಬೈಲ್ ಸಂಖ್ಯೆಯನ್ನು ನೀಡಿ ಭರ್ತಿ ಮಾಡಬೇಕು. ನಿಮ್ಮ ಖಾತೆಯಲ್ಲಿ ಹಣ ಕಡಿತವಾದ ವಿವರಗಳನ್ನು ನೀವು ಅಪ್‌ಲೋಡ್ ಮಾಡಬಹುದು. ಫಾರ್ಮ್ ಭರ್ತಿ ಮಾಡುವಾಗ ‘ಇಶ್ಯೂ’ ಅಡಿಯಲ್ಲಿ ನಿಮ್ಮ ದೂರಿನ ಕಾರಣವನ್ನು ಬರೆಯಬೇಕು. ‘ಮತ್ತೊಂದು ಖಾತೆಗೆ ತಪ್ಪಾಗಿ ವರ್ಗಾಯಿಸಲಾಗಿದೆ’ ಆಯ್ಕೆಯನ್ನು ಆಯ್ದುಕೊಳ್ಳುವ ಮೂಲಕ ದೂರು ಸಲ್ಲಿಸಬೇಕು.

ಎನ್‌ಪಿಸಿಐನಲ್ಲಿ ಯಾವಾಗ ದೂರು ಸಲ್ಲಿಸಬೇಕು?

ಎನ್‌ಪಿಸಿಐನ ವೆಬ್‌ಸೈಟ್ ಪ್ರಕಾರ, ಥರ್ಡ್ ಪಾರ್ಟಿ ಪ್ರೊವೈಡರ್ ಅಪ್ಲಿಕೇಶನ್ (TPAP) ಮೂಲಕ ಯುಪಿಐ ವಹಿವಾಟು ನಡೆಸಿದರೆ, ಮೊದಲು ಆಯಾ ಅಪ್ಲಿಕೇಶನ್‌ಗಳಿಗೆ ದೂರು ನೀಡಬೇಕು. ಯುಪಿಐಗೆ ಸಂಬಂಧಿಸಿದ ಎಲ್ಲಾ ದೂರುಗಳನ್ನು ಮೊದಲು ಸಾರ್ವಜನಿಕ ವಲಯದ ಬ್ಯಾಂಕ್ (ಪಿಎಸ್‌ಪಿ) ಅಥವಾ ಟಿಪಿಎಪಿ (TPAP) ಮೂಲಕ ಸಲ್ಲಿಸಬೇಕು. ಅಪ್ಲಿಕೇಶನ್ ನಿಮ್ಮ ಸಮಸ್ಯೆಯನ್ನು ಪರಿಹರಿಸದಿದ್ದರೆ, ಆಗ ನೀವು ಬ್ಯಾಂಕ್ ಮತ್ತು ಎನ್‌ಪಿಸಿಐ ಮೂಲಕ ದೂರು ಸಲ್ಲಿಸಬಹುದು. ಅದೇ ರೀತಿಯಲ್ಲಿ ಡಿಜಿಟಲ್ ದೂರುಗಳಿಗಾಗಿ ಆರ್‌ಬಿಐ ಓಂಬುಡ್ಸ್‌ಮನ್‌ಗೆ ದೂರು ಸಲ್ಲಿಸಬಹುದು. ಡಿಜಿಟಲ್ ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದ ದೂರುಗಳನ್ನು ಪರಿಹರಿಸಲು ಮತ್ತು ವಿವಾದಗಳನ್ನು ಬಗೆಹರಿಸಲು ಡಿಜಿಟಲ್ ವಹಿವಾಟುಗಳಿಗಾಗಿ ಆರ್‌ಬಿಐ ಒಂಬುಡ್ಸ್‌ಮನ್ ಅನ್ನು ಸ್ಥಾಪಿಸಲಾಗಿದೆ. ದೂರಿನ ಒಂದು ತಿಂಗಳೊಳಗೆ ಅಪ್ಲಿಕೇಶನ್‌ಗಳು ಉತ್ತರಿಸದಿದ್ದರೆ ಅಥವಾ ದೂರನ್ನು ತಿರಸ್ಕರಿಸಿದರೆ ಮಾತ್ರ ಗ್ರಾಹಕರು ಡಿಜಿಟಲ್ ವಹಿವಾಟುಗಳಿಗಾಗಿ ಓಂಬುಡ್ಸ್‌ಮನ್ ಅನ್ನು ಸಂಪರ್ಕಿಸಬೇಕು.

ಡಿಜಿಟಲ್‌ ವಹಿವಾಟುಗಳ ವಿವಾದ ಪರಿಹರಿಸಲು ಆರ್‌ಬಿಐ ಒಂಬುಡ್ಸ್‌ಮನ್‌

ಆರ್‌ಬಿಐ ಒಂಬುಡ್ಸ್‌ಮನ್‌ ಇದು ಡಿಜಿಟಲ್‌ ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಆರ್‌ಬಿಐ ಸ್ಥಾಪಿಸಿದ ಕುಂದುಕೊರತೆ ಪರಿಹಾರ ವಿಧಾನವಾಗಿದೆ. ಇದು ವಿಫಲ ವಹಿವಾಟುಗಳು, ಅನಧಿಕೃತ ಡೆಬಿಟ್‌ಗಳು, ವಂಚನೆಗಳು, ಮೊಬೈಲ್ ಬ್ಯಾಂಕಿಂಗ್‌ನಲ್ಲಿನ ಸಮಸ್ಯೆಗಳು, ಇಂಟರ್ನೆಟ್ ಬ್ಯಾಂಕಿಂಗ್, ಡಿಜಿಟಲ್ ವ್ಯಾಲೆಟ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಪಾವತಿಗಳಿಗೆ ಸಂಬಂಧಿಸಿದ ದೂರುಗಳನ್ನು ನಿರ್ವಹಿಸುತ್ತದೆ. ತಮ್ಮ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳೊಂದಿಗೆ ಸಮಸ್ಯೆಗಳನ್ನು ಎದುರಿಸುತ್ತಿರುವ ಗ್ರಾಹಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ಸಂಬಂಧಪಟ್ಟ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯೊಂದಿಗೆ ಪರಿಹರಿಸಿಕೊಳ್ಳಲು ಸಾಧ್ಯವಾಗದಿದ್ದರೆ ಆರ್‌ಬಿಐ ಒಂಬುಡ್ಸ್‌ಮನ್ ಅನ್ನು ಸಂಪರ್ಕಿಸಬಹುದಾಗಿದೆ.

ಬರಹ: ಅರ್ಚನಾ ವಿ ಭಟ್

 

 

Whats_app_banner