SIM Cloning: ಹ್ಯಾಕರ್‌ಗಳು ನಿಮ್ಮ ಸಿಮ್ ಕಾರ್ಡ್ ನಕಲಿಸಬಹುದು ಎಚ್ಚರ, ಸಿಮ್ ಕ್ಲೋನಿಂಗ್ ಬಗ್ಗೆ ಇಲ್ಲಿದೆ ವಿವರ
SIM Cloning: ಆನ್‌ಲೈನ್ ವಂಚಕರು ಸಿಮ್ ಕಾರ್ಡ್ ಕ್ಲೋನಿಂಗ್ ಮೂಲಕ ವಂಚನೆ ಮಾಡಬಹುದು. ಸಿಮ್ ಕ್ಲೋನಿಂಗ್, ಸಿಮ್ ಹೈಜಾಕಿಂಗ್, ಸಿಮ್ ಸ್ವಾಪಿಂಗ್ ಹೆಸರಿನಿಂದ ಕರೆಯಲ್ಪಡುವ ಈ ನಕಲಿ ಸಿಮ್ ವಂಚನೆ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ನಮ್ಮ ಮೊಬೈಲ್ ಸಿಮ್ ಕಾರ್ಡ್‌ಗಳಲ್ಲಿ ನಮ್ಮ ಖಾಸಗಿ ಮತ್ತು ರಹಸ್ಯ ಮಾಹಿತಿಗಳು ಇರುತ್ತವೆ. ಹ್ಯಾಕರ್‌ಗಳ ಕೈಗೆ ನಿಮ್ಮ ಸಿಮ್ ಕಾರ್ಡ್ ದೊರಕಿದರೆ ಅದನ್ನು ಬಳಸಿ ಹಲವು ಬಗೆಯ ಆನ್‌ಲೈನ್ ವಂಚನೆಗಳನ್ನು ಮಾಡಬಹುದು. ಇದೇ ಕಾರಣಕ್ಕೆ ಸಿಮ್ ಕಾರ್ಡ್ ಕಳೆದು ಹೋದರೆ ಅದನ್ನು ಡಿಆ್ಯಕ್ಟಿವೇಟ್ ಮಾಡಿಸಲು ಮರೆಯಬೇಡಿ. ಕೆಲವೊಮ್ಮೆ ನಮಗೆ ಗೊತ್ತಿಲ್ಲದಂತೆ ನಮ್ಮ ಮಾಹಿತಿ ಪಡೆದುಕೊಂಡು ನಮ್ಮ ಹೆಸರಿನಲ್ಲಿ ಹ್ಯಾಕರ್‌ಗಳು ನಕಲಿ ಸಿಮ್ ಖರೀದಿಸಬಹುದು. ಹ್ಯಾಕರ್‌ಗಳು ನಮ್ಮ ನಂಬರ್‌ನ ನಕಲಿ ಸಿಮ್ ಖರೀದಿಸಿ ಆ್ಯಕ್ಟಿವೇಟ್ ಮಾಡಿದಾಗ ನಮ್ಮಲ್ಲಿರುವ ಅಸಲಿ ಸಿಮ್ ಡೆಡ್ ಆಗುತ್ತದೆ. ಆ ಕಡೆಯಲ್ಲಿರುವ ಆನ್‌ಲೈನ್ ವಂಚಕ ನಮ್ಮ ಸಿಮ್ ಕಾರ್ಡ್ ಬಳಸಿ ನಮ್ಮ ಬ್ಯಾಂಕ್ ಖಾತೆಗೆ ಲಗ್ಗೆ ಇಡಬಹುದು. ಈ ವಂಚನೆಗೆ ಸಿಮ್ ಕ್ಲೋನಿಂಗ್, ಸಿಮ್ ಹೈಜಾಕಿಂಗ್, ಸಿಮ್ ಸ್ವಾಪಿಂಗ್ ಎಂದೆಲ್ಲ ಹೆಸರುಗಳು ಇವೆ.
ಸಿಮ್‌ಗೆ ಪಿನ್ ಹಾಕಿ
ಮೊಬೈಲ್ ಸೆಟ್ಟಿಂಗ್‌ನಲ್ಲಿ ಸಿಮ್ ಕಾರ್ಡ್‌ಗೆ ಸುರಕ್ಷಿತ ಪಾಸ್‌ವರ್ಡ್(ಪಿನ್) ಹಾಕಲು ಸಾಧ್ಯವಿದೆ. ಈ ರೀತಿ ಪಿನ್ ನಮೂದಿಸುವಾಗ ಎಚ್ಚರವಿರಲಿ. ನೀವು ಪಿನ್ ಸಂಖ್ಯೆ ಮರೆತರೆ, ತಪ್ಪು ಪಿನ್ ನಮೂದಿಸಿದರೆ ಸಿಮ್ ಕಾರ್ಡ್ ಲಾಕ್ ಆಗುತ್ತದೆ.
ಸಿಮ್ ಕಾರ್ಡ್ ವಿವರ ಗೌಪ್ಯವಾಗಿಡಿ
ಸಿಮ್ ಕಾರ್ಡ್‌ನ ವಿವರವನ್ನು ಯಾರ ಜತೆಯೂ ಹಂಚಿಕೊಳ್ಳಬೇಡಿ. ಅಂದರೆ, ಸಿಮ್‌ನಲ್ಲಿರುವ ಐಸಿಸಿಐಡಿ ಮತ್ತು ಐಎಂಎಸ್‌ಐ ಸಂಖ್ಯೆಗಳನ್ನು ಇತರರಿಗೆ ತಿಳಿಸಬೇಡಿ.
ನಿಮ್ಮ ಸಿಮ್ ಕಾರ್ಡ್ ಅನ್ನು ಇತರರಿಗೆ ನೀಡಬೇಡಿ
ಮೊಬೈಲ್ ಕಳೆದುಹೋದರೆ ಸಿಮ್ ಡಿಆ್ಯಕ್ಟಿವೇಟ್ ಮಾಡಿ. ನಿಮ್ಮ ಸಿಮ್ ಕಾರ್ಡ್ ಯಾರಿಗೂ ನೀಡಬೇಡಿ. ಯಾರ ಕೈಗಾದರೂ ನಿಮ್ಮ ಸಿಮ್ ಸಿಕ್ಕರೆ ಸಿಮ್ ಕ್ಲೋನ್ ಟೂಲ್ ಮೂಲಕ ಅವರು ನಕಲಿ ಸಿಮ್ ತಯಾರಿಸಬಹುದು. ನಕಲಿ ಸಿಮ್‌ನಲ್ಲಿ ಟೆಕ್ಸ್ಟ್ ಸಂದೇಶ ಕಳುಹಿಸಲು ಸಾಧ್ಯವಾಗುತ್ತದೆ. ಕರೆ ಮಾಡಲು ಸಾಧ್ಯವಾಗುತ್ತದೆ. ನಿಮಗೆ ಬರಬೇಕಿರುವ ಒಟಿಪಿ ಸ್ವೀಕರಿಸಿ ಹಣಕಾಸು ವಂಚನೆಯನ್ನು ವಂಚಕರು ಮಾಡಬಹುದು.
ಫಿಶಿಂಗ್ ವಂಚನೆ ಕುರಿತು ಎಚ್ಚರವಿರಲಿ
ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಎಪಿಕೆ ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಡಿ. ಈ ರೀತಿ ಮಾಲ್‌ವೇರ್‌ಗಳು ನಮ್ಮ ಫೋನ್‌ಗೆ ಎಂಟ್ರಿ ನೀಡಿ ಸಿಮ್ ಕಾರ್ಡ ಮಾಹಿತಿ ಕದಿಯಬಹುದು.
ಆ್ಯಂಟಿ ವೈರಸ್ ಸಾಫ್ಟ್‌ವೇರ್ ಇರಲಿ
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮಾಲ್‌ವೇರ್‌ಗಳನ್ನು ತಡೆಯುವಂತಹ ಆ್ಯಂಟಿ ವೈರಸ್ ಸಾಫ್ಟ್‌ವೇರ್‌ಗಳು ಇರಲಿ.
ಸಾರ್ವಜನಿಕ ವೈಫೈ ಬಳಸಬೇಡಿ
ಉಚಿತವಾಗಿ ದೊರಕುತ್ತದೆ ಎಂದು ಸಾರ್ವಜನಿಕ ವೈಫೈ ಬಳಸಬೇಡಿ. ಇಂತಹ ಪಬ್ಲಿಕ್ ವೈಫೈಗಳ ಮೂಲಕ ನಿಮ್ಮ ಸಿಮ್ ಕಾರ್ಡ್ ವಿವರವನ್ನು ವಂಚಕರು ಪಡೆಯಬಹುದು. ಸೋಷಿಯಲ್ ಎಂಜಿನಿಯರಿಂಗ್ ಮೂಲಕ ಹ್ಯಾಕರ್‌ಗಳು ನಿಮ್ಮ ಮೊಬೈಲ್‌ನಲ್ಲಿರುವ ಮಾಹಿತಿ ಕದಿಯಬಹುದು.
ಮೊಬೈಲ್ ಪರಿಶೀಲನೆ ನಡೆಸುತ್ತ ಇರಿ
ಕೆಲವೊಮ್ಮೆ ನಿಮಗೆ ನಿಮ್ಮ ಮೊಬೈಲ್ ಸಂಖ್ಯೆಯ ಕುರಿತು ಯಾವುದಾದರೂ ಸಂದೇಶ ಬರಬಹುದು. "ನಿಮ್ಮ ಸಿಮ್ ಕಾರ್ಡ್ ಅನ್ನು ಮತ್ತೊಂದು ಸಾಧನಕ್ಕೆ ಹಾಕಲಾಗಿದೆ" ಎಂಬರ್ಥದ ಸಂದೇಶ ಬಂದರೆ ಕಡೆಗಣಿಸಬೇಡಿ. ತಕ್ಷಣ ಮೊಬೈಲ್ ಸೇವಾದಾರ ಸಂಸ್ಥೆಗೆ ಕಾಲ್ ಮಾಡಿ ರಕ್ಷಣೆ ಪಡೆಯಿರಿ.
ಸಿಮ್ ಕಾರ್ಡ್ ಕಳೆದುಹೋದರೆ ನೆಗ್ಲೆಕ್ಟ್ ಮಾಡಬೇಡಿ
ಸಿಮ್ ಕಾರ್ಡ್ ಕಳೆದುಹೋದಾಗ ಆ ಮೊಬೈಲ್ ನೆಟ್‌ವರ್ಕ್ ಸಂಸ್ಥೆಗೆ ಕರೆ ಮಾಡಿ ಡಿಆ್ಯಕ್ಟಿವೇಟ್ ಮಾಡಿಸಿ. ಹೋದ್ರೆ ಹೋಯ್ತು ಇನ್ನೊಂದು ತೆಗೆದುಕೊಳ್ಳೋಣ ಎಂದುಕೊಳ್ಳಬೇಡಿ.
ಸಿಮ್ ನಕಲಿ ಮಾಡಿದ ಬಳಿಕ ಹ್ಯಾಕರ್‌ಗಳು ಏನು ಮಾಡಬಹುದು?
ಈಗಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಾಲದಲ್ಲಿ ನಿಮ್ಮ ಐಡೆಂಟೆಟಿ ಕದ್ದು ಹ್ಯಾಕರ್‌ಗಳು ಏನು ಬೇಕಾದರೂ ಮಾಡಬಹುದು. ನಿಮ್ಮದೇ ಹೆಸರಲ್ಲಿ ವ್ಯವಹಾರ ಆರಂಭಿಸಬಹುದು. ನಿಮ್ಮ ಹೆಸರಿನಲ್ಲಿ ದಾಖಲೆ, ಮಾಹಿತಿ ಎಲ್ಲವನ್ನೂ ಪಡೆದು ಸಾಲ ಪಡೆಯಬಹುದು. ನಿಮ್ಮ ಬ್ಯಾಂಕ್ ಖಾತೆಗೆ ಲಗ್ಗೆ ಇಟ್ಟು ಹಣ ಲಪಟಾಯಿಸಬಹುದು. ಸೂಕ್ಷ್ಮ ಮಾಹಿತಿ ಕದ್ದು ನಿಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಬಹುದು. ಭಯೋತ್ಪಾದನಾ ಚಟುವಟಿಕೆಗಳಿಗೆ ಅಥವಾ ಕಾನೂನುಬಾಹಿರ ಚಟುವಟಿಕೆಗಳಿಗೆ ನಿಮ್ಮ ಸಿಮ್ ಕಾರ್ಡ್ ಬಳಸಬಹುದು. ಹೀಗಾಗಿ, ಸಿಮ್ ಕ್ಲೋನಿಂಗ್ ಕುರಿತು ಎಚ್ಚರವಿರಲಿ.