Open AI: ಗುಡ್‌ನ್ಯೂಸ್‌, ಕ್ಯಾನ್ಸರ್‌ಗೆ ಲಸಿಕೆ ತಯಾರಿಸಲಿದೆ ಎಐ: ಹೊಸ ಆವಿಷ್ಕಾರಕ್ಕೆ ಸಾಫ್ಟ್‌ಬ್ಯಾಂಕ್, ಓಪನ್ ಎಐ, ಒರಾಕಲ್ ಹೂಡಿಕೆ
ಕನ್ನಡ ಸುದ್ದಿ  /  ಜೀವನಶೈಲಿ  /  Open Ai: ಗುಡ್‌ನ್ಯೂಸ್‌, ಕ್ಯಾನ್ಸರ್‌ಗೆ ಲಸಿಕೆ ತಯಾರಿಸಲಿದೆ ಎಐ: ಹೊಸ ಆವಿಷ್ಕಾರಕ್ಕೆ ಸಾಫ್ಟ್‌ಬ್ಯಾಂಕ್, ಓಪನ್ ಎಐ, ಒರಾಕಲ್ ಹೂಡಿಕೆ

Open AI: ಗುಡ್‌ನ್ಯೂಸ್‌, ಕ್ಯಾನ್ಸರ್‌ಗೆ ಲಸಿಕೆ ತಯಾರಿಸಲಿದೆ ಎಐ: ಹೊಸ ಆವಿಷ್ಕಾರಕ್ಕೆ ಸಾಫ್ಟ್‌ಬ್ಯಾಂಕ್, ಓಪನ್ ಎಐ, ಒರಾಕಲ್ ಹೂಡಿಕೆ

ಎಐ ನಮ್ಮ ಜೀವನದ ಹಲವು ಅನ್ವಯಗಳಲ್ಲಿ ಬಳಕೆಯಾಗುತ್ತಿದೆ. ವೈದ್ಯಕೀಯ ಲೋಕದಲ್ಲಿ ಎಐ ಹೊಸ ಕ್ರಾಂತಿಯನ್ನೇ ಆರಂಭಿಸುತ್ತಿದೆ. ರೋಗ ಪತ್ತೆ, ಸೂಕ್ತ ವೈದ್ಯಕೀಯ ಚಿಕಿತ್ಸೆಗೆ ಎಐ ನೆರವು ನೀಡಲಿದೆ. ಕ್ಯಾನ್ಸರ್ ಪತ್ತೆ ಮತ್ತು ಲಸಿಕೆ ಅವಿಷ್ಕಾರಕ್ಕೆ ಹೊಸ ಸಾಧ್ಯತೆಯನ್ನು ಟೆಕ್ ಲೋಕದ ಪ್ರಮುಖ ಸಂಸ್ಥೆಗಳು ಕಂಡುಕೊಂಡಿದ್ದು, ಬೃಹತ್ ಮೊತ್ತ ಹೂಡಿಕೆ ಮಾಡಿ ಸಂಶೋಧನೆ ನಡೆಸಲಿವೆ.

ಒರಾಕಲ್ ಚೇರ್ಮನ್ ಲ್ಯಾರಿ ಎಲಿಸನ್
ಒರಾಕಲ್ ಚೇರ್ಮನ್ ಲ್ಯಾರಿ ಎಲಿಸನ್ (Image Credit: google/Wikimedia Commons)

ಎಐ ತಂತ್ರಜ್ಞಾನ ಬಳಸಿಕೊಂಡು ಕ್ಯಾನ್ಸರ್ ಪತ್ತೆ ಮತ್ತು 48 ಗಂಟೆಗಳಲ್ಲಿ ಲಸಿಕೆ ತಯಾರಿಸುವ ನೂತನ ಆವಿಷ್ಕಾರಕ್ಕೆ ಸಾಫ್ಟ್‌ಬ್ಯಾಂಕ್, ಓಪನ್ ಎಐ ಮತ್ತು ಒರಾಕಲ್ ಮುಂದಾಗಿದೆ. ಈ ಬಗ್ಗೆ ಮೂರು ಸಂಸ್ಥೆಗಳು ಜಂಟಿಯಾಗಿ ಒಪ್ಪಂದ ಮಾಡಿಕೊಂಡಿದ್ದು, 500 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಮುಂದಾಗಿವೆ.

ಸ್ಟಾರ್‌ಗೇಟ್ ಹೆಸರಿನ ನೂತನ ಯೋಜನೆಯನ್ನು ಸಾಫ್ಟ್‌ಬ್ಯಾಂಕ್, ಓಪನ್ ಎಐ, ಒರಾಕಲ್ ಘೋಷಿಸಿದ್ದು, ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದನ್ನು ಪ್ರಶಂಶಿಸಿದ್ದಾರೆ. ಎಐ ಇತಿಹಾಸದಲ್ಲೇ ಇದು ಅತಿ ದೊಡ್ಡ ಯೋಜನೆಯಾಗಿದ್ದು, ಕ್ಯಾನ್ಸರ್ ಸಂಶೋಧನೆ ಮತ್ತು ಡಾಟಾ ಸೆಂಟರ್ ಯೋಜನೆಗಳಿಗೆ ಸರ್ಕಾರ ಅಗತ್ಯ ನೆರವನ್ನು ನೀಡಲಿದೆ ಎಂದಿದ್ದಾರೆ.

ಓಪನ್ ಎಐ ಸಿಇಒ ಸ್ಯಾಮ್ ಆಲ್ಟ್‌ಮನ್, ಸಾಫ್ಟ್‌ಬ್ಯಾಂಕ್ ಸಿಇಒ ಮಸಾಯೋಶಿ ಸನ್ ಮತ್ತು ಒರಾಕಲ್ ಚೇರ್ಮನ್ ಲ್ಯಾರಿ ಎಲಿಸನ್ ಸ್ಟಾರ್‌ಗೇಟ್ ಯೋಜನೆಯ ರೂವಾರಿಗಳಾಗಿದ್ದಾರೆ.

ಸ್ಯಾಮ್ ಮತ್ತು ಮಾಸಾ ಅವರು ಒದಗಿಸುವ ಟೂಲ್‌ಗಳನ್ನು ಬಳಸಿಕೊಂಡು ಕ್ಯಾನ್ಸರ್ ಪತ್ತೆಯನ್ನು ಅತ್ಯಂತ ಶೀಘ್ರದಲ್ಲಿ ನಡೆಸಲು ಈ ಯೋಜನೆ ನೆರವಾಗಲಿದೆ. ರಕ್ತ ಪರೀಕ್ಷೆ ಮತ್ತು ಜೀನ್‌ಗಳನ್ನು ಪರಿಶೀಲಿಸಿ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಲು ಇದರಿಂದ ಸಾಧ್ಯವಾಗುತ್ತದೆ. ಕ್ಯಾನ್ಸರ್‌ನ ಸ್ವರೂಪ ಮತ್ತು ಗಡೆಯಿದ್ದಲ್ಲಿ, ಯಾವ ಹಂತದಲ್ಲಿದೆ ಎನ್ನುವುದನ್ನು ಎಐ ಬಳಸಿ ತಿಳಿದುಕೊಂಡು, ಅದಕ್ಕೆ ಸೂಕ್ತ ಲಸಿಕೆಯನ್ನು ಕೂಡ 48 ಗಂಟೆಗಳಲ್ಲೇ ತಯಾರಿಸಲಾಗುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವ ಕ್ಯಾನ್ಸರ್‌‌ಗೆ, ಅದರ ಸ್ವರೂಪಕ್ಕೆ ಅನುಗುಣವಾಗಿ ಎಐ ಸೂಕ್ತ ಲಸಿಕೆ ಸಿದ್ಧಪಡಿಸಲಿದೆ ಎಂದು ಒರಾಕಲ್‌ನ ಲ್ಯಾರಿ ಎಲಿಸನ್‌ ಹೇಳಿದ್ದಾರೆ.

ಕ್ಯಾನ್ಸರ್ ಪತ್ತೆ ಮತ್ತು ಚಿಕಿತ್ಸೆಗೆ ಅಗತ್ಯ ನೆರವು ನೀಡಲು ರೂಪಿಸಲಾಗಿರುವ ನೂತನ ಯೋಜನೆಯಲ್ಲಿ ಸಾಫ್ಟ್‌ಬ್ಯಾಂಕ್, ಓಪನ್ ಎಐ, ಒರಾಕಲ್ ಜತೆಗೆ ಮೈಕ್ರೋಸಾಫ್ಟ್ ಮತ್ತು ಎನ್‌ವಿಡಿಯಾ ಕೂಡ ಸೇರಿಕೊಳ್ಳುವ ಸಾಧ್ಯತೆಯಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

Whats_app_banner