ಅನನ್ಯ ಭಾರ್ಗವ ಬೇದೂರು ಬರಹ: ಸಂಭಾವನೆಗೆ ಸತಾಯಿಸಿದ ಸಂಸ್ಕೃತಿ ಇಲಾಖೆಯ ಕಿವಿಹಿಂಡಿದ ಕಲಾವಿದ
ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಕಲಾವಿದರಿಗೆ ಸಂಭಾವನೆ ನೀಡುವ ಹಾಗೂ ಖರ್ಚು ವೆಚ್ಚ ನೀಡುವ ವಿಚಾರದಲ್ಲಿ ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಸತಾಯಿಸುವುದು ಸಾಮಾನ್ಯವೆಂಬಂತಾಗಿದೆ. ಈ ರೀತಿ ಸಂಭಾವನೆಗೆ ಸತಾಯಿಸಿದ ಸಂಸ್ಕೃತಿ ಇಲಾಖೆಯ ಕಿವಿಹಿಂಡುವ ಕೆಲಸವನ್ನು ಕಲಾವಿದ ಶ್ರೀ ಅನನ್ಯ ಭಾರ್ಗವ ಬೇದೂರು ಮಾಡಿದ್ದಾರೆ.

ಕರ್ನಾಟಕದಲ್ಲಿ ಕಲಾವಿದರನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ಕರೆಯಿಸಿಕೊಂಡು ಸಂಭಾವನೆ ನೀಡದೇ ಸತಾಯಿಸುವ ವಿಚಾರ ಚರ್ಚೆಗೆ ಒಳಗಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಹುತೇಕ ಅಧಿಕಾರಿಗಳು ಈ ರೀತಿ ಮಾಡುತ್ತಿದ್ದು, ಇದರ ಬಗ್ಗೆ ಕಲಾವಿದ ಅನನ್ಯ ಭಾರ್ಗವ ಬೇದೂರು, "ನಾವು ಕಲಾವಿದರು, ಬಿಕ್ಷುಕರಲ್ಲ' ಎಂದು ಘೋಷಿಸುತ್ತ ಸಂಭಾವನೆಗೆ ಸತಾಯಿಸಿದ ಸಂಸ್ಕೃತಿ ಇಲಾಖೆಯ ಕಿವಿಹಿಂಡಿದ್ದಾರೆ. ಅವರ ಸುದೀರ್ಘ ಬರಹ ಇಲ್ಲಿದೆ.
ನಾವು ಕಲಾವಿದರು, ಭಿಕ್ಷುಕರಲ್ಲ
ನವರಾತ್ರಿಯ ಪ್ರಯುಕ್ತ ಕೆಂಪೇಗೌಡ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ 2024ರ ಅಕ್ಟೋಬರ್ 12 ರಂದು ನಿಮ್ಮದೊಂದು ಹಿಂದುಸ್ತಾನೀ ಶಾಸ್ತ್ರೀಯ ಸಂಗೀತ ಕಚೇರಿ ಕೊಡುತ್ತೀರಾ ಎಂದು *ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ* ನನಗೆ ಕಾಲ್ ಬರುತ್ತದೆ. ಇಲ್ಲಿ ಗಮನಿಸಬೇಕಾದ್ದು ನಾನು ಇಲಾಖೆಗೆ ನನಗೆ ಕಾರ್ಯಕ್ರಮ ಕೊಡಿ ಎಂದು ಕೇಳಿದ್ದಲ್ಲ. ಅವರಾಗಿಯೇ ನನಗೆ ಫೋನ್ ಮಾಡಿ ಕೇಳಿದ್ದು. ಫಾರಿನ್ ಡೆಲಿಗೇಟ್ಸ್ ಎಲ್ಲ ಬರುವುದರಿಂದ ಒಳ್ಳೆಯ ತಂಡದೊಂದಿಗೆ ಬನ್ನಿ ಎಂದು ಹೇಳಿದರು. ಸಹಜವಾಗಿ, ನಾನು ನಿಮ್ಮ ಆಹ್ವಾನಕ್ಕೆ ಧನ್ಯವಾದಗಳು.ಖಂಡಿತ ಬರುತ್ತೇನೆ.ಒಂದು ಒಳ್ಳೆ ಕಾರ್ಯಕ್ರಮ ಮಾಡೋಣ ಎಂದು ಹೇಳಿದೆ. ಎಷ್ಟಾದರೂ ನಾವು ಕಲಾವಿದರು, ಕಲೆಯನ್ನು ನಂಬಿ ಬದುಕುವವರು. ಸಂಸ್ಕೃತಿ ಇಲಾಖೆಯಿಂದಲೇ ಕರೆ ಮಾಡಿ ಹೇಳಿದಾಗ ನಮಗೂ ಒಂದು ಹೆಮ್ಮೆ, ಖುಷಿ.
ಆಯಿತು ಎಂದು ಒಪ್ಪಿಕೊಂಡೆ. ಆದರೆ ಅವರು ಸಂಭಾವನೆಯ ವಿಚಾರ ಏನೂ ಮಾತನಾಡಲಿಲ್ಲ. ನನಗೆ ಇವೆಲ್ಲ ಅನುಭವಗಳು ಇರುವುದರಿಂದ ನೇರವಾಗಿ ನಾನೇ ಕೇಳಿದೆ, ಸಂಭಾವನೆ ಎಷ್ಟು ಇರುತ್ತದೆ ಎಂದು. ಅದಕ್ಕೆ ಅವರು ನಿಮಗೆ 20,000 ಸಾವಿರ ಕೊಡಲಾಗುವುದು ಎಂದು ಹೇಳಿದರು. ಎಷ್ಟು ಸೋಜಿಗದ ಸಂಗತಿ ಎಂದರೆ ನಮ್ಮ ಸಂಭಾವನೆಯನ್ನು ಅವರು ನಿರ್ಧರಿಸುವುದು. ಅದೇ ಹಂಪಿ ಉತ್ಸವಗಳ ಇರಬಹುದು ನಾಡಿನ ಪ್ರಖ್ಯಾತ ಉತ್ಸವಗಳಲ್ಲಿ ಹೊರ ರಾಜ್ಯಗಳಿಂದ ಕರೆಸುವ ಸಂಗೀತ ಕಲಾವಿದರಿಗೆ ಅವರು ಕೇಳಿದಷ್ಟು ಸಂಭಾವನೆ, ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಅವರಿಗೆ ಉಳಿಯುವ ವ್ಯವಸ್ಥೆ, ರಾಜಾತಿಥ್ಯದೊಂದಿಗೆ ಅವರ ಸಂಪೂರ್ಣ ವೆಚ್ಚ ಭರಿಸಲಾಗುವುದು. ಆದರೆ ಇಲ್ಲಿ,ಅವರು ಕೊಟ್ಟಷ್ಟು. ಆದರೂ ನಮಗೂ ಸ್ವಾಭಿಮಾನ ಇರುತ್ತದೆ ಅಲ್ಲವೇ,ಅದಕ್ಕೆ ನಾನು ಒಳ್ಳೆಯ ತಂಡ ಬೇಕು ಎಂದು ಹೇಳುತ್ತೀರಿ, 30,000 ಸಾವಿರವಾದರೂ ಕೊಡಿ ಎಂದು ವಿನಂತಿಸಿದೆ. ಅದಕ್ಕೆ ಅವರು ನೋಡೋಣ 25,000 ಸಾವಿರ ವಾದರೂ ಮಾಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿ, ಮತ್ತೊಮ್ಮೆ ಉತ್ತಮ ತಂಡದೊಂದಿಗೆ ಬನ್ನಿ ಎಂದು ಹೇಳಿ ಫೋನ್ ಇಟ್ಟರು..
ನಾನು ನಿಗದಿಯಂತೆ ಅಕ್ಟೋಬರ್ 12ನೇ ತಾರೀಕು ಬೆಂಗಳೂರಿನ ಕೆಂಪೇಗೌಡ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ ಅವರೇ ನಿಗದಿಪಡಿಸಿದ ಸಮಯದಂತೆ ಮುಂಚಿತವಾಗಿ ನನ್ನ ತಂಡದೊಂದಿಗೆ ತೆರಳಿದೆ. ಮಧ್ಯಾಹ್ನ 4:30ಕ್ಕೆ ಪ್ರಾರಂಭವಾಗಬೇಕಾಗಿದ್ದ ನನ್ನ ಕಾರ್ಯಕ್ರಮ, ಸಂಜೆ 6:30 ಕ್ಕೆ ಪ್ರಾರಂಭವಾಯಿತು. ಮೊದಲೇ ಇಲ್ಲಿಂದ ಏರ್‌ಪೋರ್ಟ್‌ಗೆ ಹೋಗಬೇಕಿದ್ದರೆ ಟ್ರಾಫಿಕ್ ಜಾಮ್ ಕಿರಿಕಿರಿಯ ಹಿಂಸೆ ಹೇಳುತೀರದು.ಅದರಲ್ಲಿಯೂ ಲೇಟಾಗಿ ಕಾರ್ಯಕ್ರಮ ಪ್ರಾರಂಭವಾಗಿದ್ದು ಮನಸ್ಸಿಗೆ ತುಂಬಾ ಯಾತನೆಯಾಗುತ್ತಿತ್ತು. ಆದರೂ ನಮ್ಮಂತ ಕಲಾವಿದರಿಗೆ ಸರ್ಕಾರಿ ಕಾರ್ಯಕ್ರಮಗಳು ಸಹನೆಯ ಪಾಠವನ್ನು ಸಾಕಷ್ಟು ಕಲಿಸಿದೆ. ಹಾಗಾಗಿ ನನ್ನೆಲ್ಲ ಮಿತಿಯನ್ನೂ ಮೀರಿ ಉತ್ಸಾಹದಿಂದಲೇ ಕಾರ್ಯಕ್ರಮ ಕೊಟ್ಟೆ. ಕಾರ್ಯಕ್ರಮ ಮುಗಿದಾಗ ಎಲ್ಲರೂ ಬಂದು ತುಂಬಾ ಚೆನ್ನಾಗಿ ಆಯಿತು ಎಂದು ಅಭಿನಂದಿಸಿದರು. ಕೊನೆಗೂ, ಒಂದೊಳ್ಳೆ ಕಾರ್ಯಕ್ರಮ ಕೊಟ್ಟ ಸಂತೃಪ್ತ ಭಾವ ನನಗೂ ಹಾಗೂ ನನ್ನ ಜೊತೆಯಲ್ಲಿ ಇರುವ ಕಲಾವಿದರಿಗೂ ಆಯಿತು.
ಕಾರ್ಯಕ್ರಮ ಮುಗಿದ ಕೂಡಲೇ ಸಂಭಾವನೆ ಸಿಗಲಿಲ್ಲ, ಫಾರಂ ಕೊಟ್ಟರು
ಆಮೇಲೆ ಅಲ್ಲಿ ಕೆಲವು ಫಾರಂ ಗಳನ್ನು ಭರ್ತಿ ಮಾಡಲು ಹೇಳುತ್ತಾರೆ. ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್, ಪಾಸ್ಪೋರ್ಟ್ ಸೈಜ್ ಫೋಟೋ,ಆಧಾರ್ ಕಾರ್ಡ್ ಪ್ರತಿ ಎಲ್ಲವನ್ನು ಕೊಟ್ಟು,ಕೆಲವು ಭಾಗಗಳಲ್ಲಿ ನಮ್ಮ ಸಿಗ್ನೇಚರ್ ತೆಗೆದುಕೊಳ್ಳುತ್ತಾರೆ.ಅದರಲ್ಲಿ ಎಲ್ಲಿಯೂ ಸಂಭಾವನೆ ಇಷ್ಟು ಎಂದು ನಮೂದಿಸಲಾಗಿರುವುದಿಲ್ಲ. ನಾನು ಮತ್ತೆ ಮತ್ತೆ ಕೇಳಲು ಹೋಗಲಿಲ್ಲ. ಇಷ್ಟು ಒಳ್ಳೆಯ ಸ್ಥಳದಲ್ಲಿ ಕಾರ್ಯಕ್ರಮ ಆಗಿರುವುದರಿಂದ ಸಂಭಾವನೆಯೂ ಕಡಿಮೆ ಇರುವುದಿಲ್ಲ ಎಂದೇ ಭಾವಿಸಿದ್ದೆ. ನಾವು ಗಾಯಕರು ನಮ್ಮ ಜೊತೆ ಬಂದ ಸಹಕಲಾಾವಿದರಿಗೆ, *ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ* ದುಡ್ಡು ಬಂದ ನಂತರ ನಿಮಗೆ ಕೊಡುತ್ತೇನೆ ಎಂದು ಹೇಳಲಾಗುವುದಿಲ್ಲ, ಪಾಪ ಅವರಿಗೂ ದಿನನಿತ್ಯದ ಬದುಕು, ಇಂತಹ ಸಂದರ್ಭಗಳಲ್ಲಿ ನಾವು ನಮ್ಮ ಕೈಯಿಂದಲೇ ಅವರಿಗೆ ಅವರ ಸಂಭಾವನೆಯನ್ನು ನೀಡಿರುತ್ತೇವೆ.
ನಂತರದ ದಿನಗಳಲ್ಲಿ ನಾನು ಇವತ್ತು ಸಂಭಾವನೆ ಬರಬಹುದು ನಾಳೆ ಬರಬಹುದು ಎಂದು ಕಾದೆ. ಆದರೆ ಇಲಾಖೆಯಿಂದ ಹಣ ಬಂದಿಲ್ಲ. ಕಾರ್ಯಕ್ರಮ ಮುಗಿದು ತಿಂಗಳಾದರೂ ಹಣ ಬರದೇ ಇದ್ದಾಗ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಕನ್ನಡ ಸಂಸ್ಕೃತಿ ಇಲಾಖೆಗೆ ಕಾಲ್ ಮಾಡಲು ಪ್ರಾರಂಭಿಸುತ್ತೇನೆ. ನಿಮಗೆ ಇನ್ನು ನಾಲ್ಕು ದಿವಸದಲ್ಲಿ ಹಣ ಬರುತ್ತದೆ ಹೆಚ್ಚೆಂದರೆ ಒಂದು ವಾರ ಆಗಬಹುದು ಎಂಬ ಹೇಳಿಕೆಯೊಂದಿಗೆ ಕಾಲ್ ಕಟ್ ಆಗುತ್ತದೆ. ಆಮೇಲೆ ವಾರ 15 ದಿವಸ ಆದರೂ ಮತ್ತೆ ಹಣ ಬರದೆ ಇದ್ದಾಗ ಮತ್ತೆ ಕಾಲ್ ಮಾಡಿದರೆ ಕಾಲ್ ರಿಸೀವ್ ಆಗುವುದಿಲ್ಲ..
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅಲೆದಾಟ
ಮುಂದಿನ ಪ್ರಕ್ರಿಯೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅಲೆದಾಟ ಪ್ರಾರಂಭವಾಗುತ್ತದೆ. ಅಲ್ಲಿ ಮೂರನೇ ಮಹಡಿಗೆ ಹೋಗಿ ಕೇಳಿ,ಅಲ್ಲಿ ನಿಮಗೆ ಸಂಬಂಧಪಟ್ಟ ವಿವರ ಸಿಗುತ್ತದೆ ಎಂದು ಹೇಳಿದರು. ಅಲ್ಲಿ ಕೇಳಿದಾಗ ಮೂರನೇ ಮಹಡಿಯ ಮುಖ್ಯಸ್ಥರು ಸಿಗದೇ ಇದ್ದಂತ ಸಂದರ್ಭದಲ್ಲಿ ಪಕ್ಕದಲ್ಲಿರುವ ಕ್ಲರ್ಕ್ ವಿಚಾರ ಮಾಡಿದಾಗ ಉಢಾಫೆ ಉತ್ತರ ಬರುತ್ತದೆ. ನಿಮಗಿಂತಲೂ ಹಿಂದೆ ಕಾರ್ಯಕ್ರಮ ಕೊಟ್ಟವರ ಹಣವೇ ಇನ್ನೂ ಸಂದಾಯವಾಗಿಲ್ಲ, ನಿಮ್ಮದು ಬರುತ್ತದೆ ಹೋಗಿ ಎಂಬ ಧಿಮಾಕಿನ ಉತ್ತರ. ಪಟ್ಟು ಬಿಡದೆ ಇಲ್ಲಿಯ ಮುಖ್ಯಸ್ಥರು ಯಾರು? ಅವರನ್ನು ಭೇಟಿ ಮಾಡಬೇಕು ಎಂದು ಹೇಳಿದಾಗ ಅವರು ಶಿಲ್ಪಕಲಾ ಅಕಾಡೆಮಿಯಲ್ಲಿದ್ದಾರೆ ಅಲ್ಲಿ ಹೋಗಿ ವಿಚಾರಿಸಿ ಎಂದು ಕಳಿಸಿದರು. ಅಲ್ಲಿ ಹೋದರೆ ಅಲ್ಲಿದ್ದವರಿಂದ ಇಲ್ಲಿ ಇಲ್ಲ ಈಗಷ್ಟೇ ಮೇಲೆನ ಮಹಡಿಗೆ ಹೋಗಿದ್ದಾರೆ ಎಂಬ ಉತ್ತರ. ಅಂತೂ ಮೇಲಿನ ಮಹಡಿಗೆ ಹೋಗಿ ಅವರನ್ನು ಭೇಟಿಯಾಗಿ ನನ್ನನ್ನು ಪರಿಚಯಿಸಿಕೊಂಡೆ.
ಆಹಾ ಅದೆಂತ ಆತ್ಮೀಯತೆ, ಮಾತು, ನಗೆ, ಸರ್, ನಿಮ್ಮನ್ನು ಯಾರಿಗೆ ಪರಿಚಯ ಇಲ್ಲ ಸರ್?ನಿಮ್ಮಂತ ಕಲಾವಿದರ ಜೊತೆ ನಮಗೆ ಬೆರೆಯುವ ಹಾಗೂ ಸೇವೆ ಮಾಡುವ ಸೌಭಾಗ್ಯ ಸಿಕ್ಕಿದ್ದು ನಮ್ಮ ಪುಣ್ಯ ಎಂದು ಹೇಳಿದರು. ನಾನು ಅವರ ಮಾತಿಗೆ ತಲೆಗುಂಡು ಹಾಕುತ್ತಾ ಹೋದೆ. ಆಮೇಲೆ, ಟೀ ತರಿಸಿ ನನ್ನ ಜೊತೆ ಲೋಕಾಭಿರಾಮವಾಗಿ ಮಾತನಾಡುತ್ತಾ ಇಬ್ಬರು ಟೀ ಕುಡಿದೆವು. ಮನದಲ್ಲೇ, ಎಂತಹ ಅಧಿಕಾರಿಗಳು ಇವರು ಕಲಾವಿದರ ಬಗ್ಗೆ ಎಷ್ಟು ಹೆಮ್ಮೆ, ಅಭಿಮಾನ ಗೌರವ ಇದೆ ಎಂದು ಅಂದುಕೊಂಡೆ. ಆಮೇಲೆ ಹೊರಡುವಾಗ ಸರ್, ನಮ್ಮ ಕಾರ್ಯಕ್ರಮದ ಸಂಭಾವನೆ ಯಾವಾಗ ಬರುತ್ತದೆ ಎಂದು ಕೇಳಿದೆ. ಅವರು ಸರ್, ಸ್ವಲ್ಪ ಲೇಟಾಯ್ತು, ಏನು ಅಂದುಕೊಳ್ಳಬೇಡಿ. ಇನ್ನು ನಾಲ್ಕು ದಿನ ಅಥವಾ ವಾರದಲ್ಲಿ ನಿಮ್ಮ ಅಕೌಂಟಿಗೆ ಬರುತ್ತದೆ.ಸಿದ್ಧಪಡಿಸಿದ ಅದೇ ಮಾತು. ಆದರೂ ಏನೇ ಆಗಲಿ ಇಷ್ಟು ಚೆನ್ನಾಗಿ ಮಾತನಾಡಿಸಿದ್ದಾರೆ,ಇನ್ನು ನಾಲ್ಕೈದು ದಿನಗಳಲ್ಲಿ ನನ್ನ ಹಣ ಬರುತ್ತದೆ ಎಂಬ ನಂಬಿಕೆಯೊಂದಿಗೆ ಅಲ್ಲಿಂದ ಹೊರಟೆ.
ಆಮೇಲೆ ಮತ್ತೆ ವಾರವಾದರೂ 15 ದಿನಗಳಾದರೂ ನನ್ನ ಸಂಭಾವನೆ ಬರೆದೇರುವುದರಿಂದ ಅವರೇ ಕೊಟ್ಟ ಮೊಬೈಲ್ ನಂಬರಿಗೆ ಕಾಲ್ ಮಾಡಿದಾಗ ಯಾವ ಪ್ರತಿಕ್ರಿಯೆಯು ಇಲ್ಲ. ಹೀಗೆ ಮತ್ತೆ ಮತ್ತೆ ಕಾಲ್ ಮಾಡಿದಾಗ ನಿಮ್ಮ ಹಣ ಎರಡು ದಿನದಲ್ಲಿ ಬರುತ್ತದೆ ಎಂದು ಅವರು ಹೇಳುವುದು ಅದನ್ನು ನಾನು ನಂಬುವುದು. ಇದು ಬಗೆಹರಿಯದೆ ಇದ್ದಾಗ ಮತ್ತೆ *ಕನ್ನಡ ಸಂಸ್ಕೃತಿ ಇಲಾಖೆಗೆ* ಅಲೆದಾಟ. ಮೊದಮೊದಲು ಕೈಗೆ ಸಿಗುತ್ತಿದ್ದವರು ನಂತರ ಅಲ್ಲಿ ಇರುತ್ತಿರಲಿಲ್ಲ.ಎಲ್ಲಿ ಹೋಗಿದ್ದಾರೆ ಎಂದರೆ ಅಲ್ಲಿದ್ದವರು ಕೆಳಗಿನ ಮಹಡಿಗೆ ಹೋಗಿದ್ದಾರೆ ಅಲ್ಲಿ ಹೋಗಿ, ಇಲ್ಲಿ ಹೋಗಿ ಸಿಗುತ್ತಾರೆ ಎಂದು ಹೇಳುವುದು ನಾನು ಮತ್ತೆ ಅಲ್ಲಿ ಹೋಗಿ ಕೇಳಿದರೆ ಮೀಟಿಂಗ್‌ನಲ್ಲಿ ಇದ್ದಾರೆ ಎಂದು ಹೇಳುವ ಉತ್ತರ.ಅಂತೂ ಅವರನ್ನು ಹಿಡಿದು ಮತ್ತೆ ಕೇಳಿದಾಗ ಅದೇ ಬೆಳ್ನಗೆಯ ಉತ್ತರ ಏನು ಅಂದುಕೊಳ್ಳಬೇಡಿ ಇನ್ನೊಂದು ನಾಲ್ಕು ದಿನದಲ್ಲಿ ನಿಮ್ಮ ಹಣ ಬರುತ್ತದೆ ಎಂಬ ಸಿದ್ದ ಉತ್ತರ..
ಕೊನೆಗೂ ಇದು ಬಗೆಹರಿಯುವುದಿಲ್ಲವೆಂದು ಕೆಳಗಿನ ಮಹಡಿಯಲ್ಲಿರುವ ಹಾಗೂ ನಾನು *ಸಂಗೀತ ನೃತ್ಯ ಅಕಾಡೆಮಿಯಲ್ಲಿ ಸದಸ್ಯನಾಗಿ* ಕಾರ್ಯ ನಿರ್ವಹಿಸುತ್ತಿರುವಾಗ ರಿಜಿಸ್ಟರ್ ಆಗಿದ್ದ ಗೊತ್ತಿರುವ ಸಂಸ್ಕೃತಿ ಇಲಾಖೆಯ *ಜಂಟಿ ನಿರ್ದೇಶಕರು, ಮೇಡಂ* ಅವರ ಬಳಿ ಹೀಗಾಗಿದೆ ಎಂದು ಹೇಳಿದಾಗ ಅವರು 3ನೇ ಮಹಡಿಗೆ ಕಾಲ್ ಮಾಡಿ ಅಲ್ಲಿದ್ದ ಕ್ಲರ್ಕಿಗೆ, ಬೆಂಕಿಯಂತಹ ಅವಾಜ್ ಹಾಕಿದರು. ಏನಾಗಿದೆ ಇವರದ್ದು ಫೈಲ್ ತೆಗೆದುಕೊಂಡು ತಕ್ಷಣ ಇಲ್ಲಿಗೆ ಬನ್ನಿ ಎಂಬ ಖಡಕ್ ಸೂಚನೆ. ನಾನು ಕೂಡ ಮನದಲ್ಲೇ ಸ್ವಲ್ಪ ಸಮಾಧಾನದ ನಿಟ್ಟುಸಿರು ಬಿಟ್ಟೆ. ಇಷ್ಟಾದರೂ ಗಟ್ಟಿ ಧ್ವನಿಯಲ್ಲಿ ಹೇಳಿದರಲ್ಲ ಎಂದು. ಆಮೇಲೆ ಅವರು ನೀವು ಹೊರಡಿ ನಾನು ಅವರ ಬಳಿ ಮಾತನಾಡುತ್ತೇನೆ ಎಂದು ಹೇಳಿದರು. ಅದೇ ನಂಬಿಕೆಯೊಂದಿಗೆ ಮನೆಗೆ ಬಂದೆ.
*ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ* ಮೂರನೇ ಮಹಡಿಯ ಮಹನೀಯರ ಕಥೆ -ವ್ಯಥೆ
ಇಷ್ಟೆಲ್ಲ ಘಟನೆಗಳು ಆದ ನಂತರವೂ ಕೂಡ ಫೆಬ್ರವರಿ 2ನೇ ತಾರೀಖಿನಂದು ನಡೆಯುವ ನನ್ನ ಸಂಗೀತ ಶಾಲೆಯ ವಾರ್ಷಿಕೋತ್ಸವ ಹಾಗೂ *ಪದ್ಮ ವಿಭೂಷಣ ಉಸ್ತಾದ್ ಜಾಕಿರ್ ಹುಸೇನ್ ರವರಿಗೆ ಶ್ರದ್ಧಾಂಜಲಿ* ಕಾರ್ಯಕ್ರಮಕ್ಕೆ ಅದೇ *ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ* ಮೂರನೇ ಮಹಡಿಯ ಮಹನೀಯರನ್ನು ಆಹ್ವಾನಿಸುತ್ತೇನೆ. ಮತ್ತದೆ ಬೆಳ್ನಗೆ. ನಿಮ್ಮ ಕಾರ್ಯಕ್ರಮ ಸ್ಥಳದ ಸಮೀಪವೇ ನನ್ನ ಮನೆ ಇರುವುದು ಬಂದೇ ಬರುತ್ತೇನೆ ಎಂಬ ಆಶ್ವಾಸನೆ. (ಈಗಲಾದರೂ ನನ್ನ ಹಣ ಬಿಡುಗಡೆಯಾಗುವುದೆಂಬ ಆಶಾಭಾವನೆಯೊಂದಿಗೆ) ನಾನು ಕೂಡ ಅಷ್ಟೇ ಗೌರವದಿಂದ ನೀವೇ ಅಧ್ಯಕ್ಷತೆಯನ್ನು ವಹಿಸಬೇಕು ಎಂದು ಕೇಳಿಕೊಂಡೆ. ಅದಕ್ಕೆ ಒಪ್ಪಿದವರು. ಆಮೇಲೆ ಮತ್ತೆ, ಖುದ್ದಾಗಿ ನಾನೇ ಹೋಗಿ ಆಹ್ವಾನ ಪತ್ರಿಕೆಯನ್ನು ಕೊಟ್ಟು ಆಹ್ವಾನಿಸಿದೆ.
ಎಲ್ಲೂ ನನ್ನ ಸಂಭಾವನೆಯ ಹಣವನ್ನು ಕೇಳಲಿಲ್ಲ. ಆದರೆ ನಮ್ಮ ಸಂಗೀತ ಶಾಲೆಯ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಇವರು ಆ ದಿನ ಪತ್ತೆಯೇ ಇಲ್ಲ. ನನಗೂ ಒಂದು ರೀತಿಯ ಟೆನ್ಶನ್. ಎಷ್ಟು ಬಾರಿ ಕಾಲ್ ಮಾಡಿದರೂ ರಿಸೀವ್ ಮಾಡುತ್ತಿಲ್ಲ. ಅಂತೂ ಪುನಃ ಪುನಃ ಕಾಲ್ ಮಾಡಿದಾಗ ಆ ಕಡೆಯಿಂದ ಯಾವುದೋ ಒಂದು ಧ್ವನಿ ಬಂತು. ಸಾಹೇಬರಿಗೆ ಹುಷಾರಿಲ್ಲ ಅವರು ನಿನ್ನೆ ಮಧ್ಯಾಹ್ನದಿಂದ ಮಲಗಿದ್ದಾರೆ ಎಂದು. ನಾನು ಒಂದು ಮಾತನ್ನೂ ಆಡಲಿಲ್ಲ. (ನಮ್ಮಲ್ಲಿ ನಾವು ಯಾರೇ ಒಂದು ಕಾರ್ಯಕ್ರಮಕ್ಕೆ ಒಪ್ಪಿಕೊಂಡಮೇಲೆ ತೀರ ಅನಿವಾರ್ಯತೆಯಿಂದ ಬರಲು ಸಾಧ್ಯವಾಗದೇ ಹೋದರೆ ಮುಂಚಿತವಾಗಿ ಅವರಿಗೆ ಕಾಲ್ ಮಾಡಿ ಅಥವಾ ಒಂದು ಸಂದೇಶ ಕಳುಹಿಸಿ ನಮ್ಮ ಅನುಪಸ್ಥಿತಿಯ ಕುರಿತು ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸುವುದು ನಮ್ಮ ಪದ್ಧತಿ) ಆದರೂ ನಾನು ಏನೊಂದೂ ಹೇಳದೆ ಆಯ್ತು. ಶೀಘ್ರ ಗುಣಮುಖರಾಗಲಿ.ತೊಂದರೆ ಇಲ್ಲ ರೆಸ್ಟ್ ಮಾಡಲಿ.ಎಂದು ಹೇಳಿ ಫೋನ್ ಇಟ್ಟೆ.
ನಮ್ಮ ಕಾರ್ಯಕ್ರಮ ಮುಗಿದು 1-2-3 ದಿನವಾಯಿತು. ಅವರಿಂದ ಒಂದೇ ಒಂದು ಕಾಲ್ ಬಂದಿಲ್ಲ. ಆದರೆ ನಾನೇ ಪಾಪ, ಏನೊ ಹುಷಾರಿಲ್ಲದೆ ಮಲಗಿರಬಹುದು ಎಂದು ಆರೋಗ್ಯ ವಿಚಾರಿಸಲು ಕಾಲ್ ಮಾಡಿದೆ.ಆ ಕಡೆಯಿಂದ ಪ್ರತಿಕ್ರಿಯೆ ಇಲ್ಲ. ಹೋಗಲಿ ಸುಮ್ಮನೆ ಡಿಸ್ಟರ್ಬ್ ಮಾಡುವುದು ಬೇಡ ಎಂದು ಸುಮ್ಮನಾದೆ. ವಾರವಾಯಿತು, 15 ದಿನಗಳಾಯಿತು. ಅವರಿಂದ ಸೌಜನ್ಯಕ್ಕೂ ನಿಮ್ಮ ಕಾರ್ಯಕ್ರಮಕ್ಕೆ ಬರಲು ಆಗಲಿಲ್ಲ,ಹೇಗೆ ಆಯ್ತು ಎನ್ನುವ ಒಂದೇ ಒಂದು ಮಾತು ಇಲ್ಲ.
ನಾವು ಕಲಾವಿದರು ಭಿಕ್ಷುಕರಲ್ಲ ಸಂಭಾವನೆ ಹಣ ಯಾವಾಗ ಬರುತ್ತದೆ ಹೇಳಿ
ಮತ್ತೆ *ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ* ಅಲೆದಾಟ ಶುರು. ಅಲ್ಲಿ ಹೋದರೆ ಅವರು ಕೈಗೆ ಸಿಗುವುದಿಲ್ಲ, ತುಂಬಾ ಬ್ಯುಸಿ. ಮತ್ತೆ ಕೆಳಗಿನ ಮಹಡಿಯ ಮೇಡಂ ಬಳಿ ಹೋಗಿ ಹೀಗಾಗಿದೆ ಎಂದು ಹೇಳಿದಾಗ, ಅವರು ಹೌದೇ? ಏನು ಹೇಳುತ್ತಾರೆ ಅವರು ಎಂದು ನನಗೇ ತಿರುಗಿ ಪ್ರಶ್ನೆ ಕೇಳಿದರು. ಮೇಡಂ ಇವತ್ತು ಬರುತ್ತದೆ ನಾಳೆ ಬರುತ್ತದೆ ಎಂಬ ಅದೇ ಉತ್ತರ. ಏನು ಮಾಡಲಿ ನಾನು ಎಂದು ಕೇಳಿದಾಗ ಅವರಿಂದಲೂ ಮುಗುಳ್ನಗೆಯೇ ಉತ್ತರ.. ಬರಬಹುದು ನೋಡೋಣ ಎಂದು ಹೇಳಿ ನನ್ನನ್ನು ಸಾಗಹಾಕಿದರು.
ಕೊನೆಗೂ ಮತ್ತೆ 3ನೇ ಮಹಡಿಯ ಮಹನೀಯರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಕಾಲ್ ಮಾಡಿದರೆ ರಿಸೀವ್ ಮಾಡುತ್ತಿಲ್ಲ. ಮನೆಗೆ ಬಂದರೆ ಮನಸ್ಸಿನ ತುಂಬಾ ನೋವು, ಅಸಹನೆ, ಅದೇ ನೆನಪಲ್ಲಿ ಅವರಿಗೆ ಮತ್ತೆ ಮತ್ತೆ ಕಾಲ್ ಮಾಡಿದೆ. ರಿಸೀವ್ ಮಾಡದೇ ಇದ್ದಾಗ ಅವರ ವಾಟ್ಸಪ್ ನಂಬರಿಗೆ ಸ್ವಲ್ಪ ಖಾರವಾಗಿ ಮೆಸೇಜ್ ಮಾಡಿದಾಗ ತಕ್ಷಣ ಅವರಿಂದ ಒಂದು ಮಿಸ್ ಕಾಲ್ ಬರುತ್ತದೆ. ಮತ್ತೆ ಪುನ: ಕಾಲ್ ಮಾಡಿದಾಗ ರಿಸೀವ್ ಮಾಡುತ್ತಾರೆ. ನಾನು ಮೊದಲು ಕೇಳಿದ್ದು ಸರ್, ಆರೋಗ್ಯ ಹೇಗಿದೆ? ಹೇಗಿದ್ದೀರಿ ಎಂದು ಕೇಳಿದೆ. ಈಗ ಏನು ತೊಂದರೆ ಇಲ್ಲ ಆರಾಮಾಗಿದ್ದೇನೆ. ಕೆಲವು ದಿನ ಸ್ವಲ್ಪ ಆರೋಗ್ಯ ಸಮಸ್ಯೆ ಉಂಟಾಗಿತ್ತು ಎಂದರು. ಇಷ್ಟಾದರೂ ಆ ವ್ಯಕ್ತಿಯ ಬಾಯಲ್ಲಿ ನಿಮ್ಮ ಕಾರ್ಯಕ್ರಮ ಹೇಗಾಯಿತು? ನನಗೆ ಬರಲು ಆಗಲಿಲ್ಲ ಎನ್ನುವ ವಿಷಾದದ ಕಿಂಚಿತ್ ಭಾವವು ಕಾಣದೆ ಇದ್ದಾಗ ನನಗೆ ಕೋಪ ನೆತ್ತಿಗೇರಿತು. ಈ ಕಡೆ ಸಂಭಾವನೆಯ ಸುದ್ದಿಯು ಇಲ್ಲ, ಆ ಕಡೆ ಕಾರ್ಯಕ್ರಮಕ್ಕೆ ಅಧ್ಯಕ್ಷತೆಯನ್ನು ವಹಿಸಿಯೂ ಬರಲಾಗಲಿಲ್ಲವಲ್ಲ ಎನ್ನುವ ವಿಷಾದದ ಛಾಯೆಯೂ ಇಲ್ಲ. ಇವರೇನಾ ಕಲಾವಿದರ ಜೊತೆ ಬೆರೆತು ಸೇವೆ ಮಾಡುವುದು ನಮ್ಮ ಸೌಭಾಗ್ಯ ಎಂದು ಹೇಳಿದ ವ್ಯಕ್ತಿ ಎನಿಸಿತು. ಅಸಹ್ಯ ಭಾವದಿಂದ,
ನಾವು ಕಲಾವಿದರು ಭಿಕ್ಷುಕರಲ್ಲ ಸಂಭಾವನೆ ಹಣ ಯಾವಾಗ ಬರುತ್ತದೆ ಎಂದು ಗಟ್ಟಿಯಾಗಿ ಪ್ರಶ್ನಿಸಿದೆ. ಸರ್ ಲೇಟ್ ಆಗಿದೆ. ಏನು ಅಂದುಕೊಳ್ಳಬೇಡಿ ಕೆಲವು ಟೆಕ್ನಿಕಲ್ ಪ್ರಾಬ್ಲಮ್ ನಿಂದ ಹೀಗಾಗಿದೆ. ಸದ್ಯದಲ್ಲೇ ಬರುತ್ತದೆ. ನಾನು ಸ್ವಲ್ಪ ಏರು ಧ್ವನಿಯಲ್ಲಿ, ಏನ್ರೀ ನಿಮ್ಮದು ಪ್ರತಿ ಬಾರಿಯೂ ಇದೇ ಉತ್ತರ ಕೊಡುತ್ತೀರಿ, ನಮ್ಮನ್ನ ಏನೂ ಅಂತ ತಿಳಿದುಕೊಂಡಿದೀರಿ? ಇಲಾಖೆ ಎದುರು ಧರಣಿ ಕೂತ್ಕೊಳ್ಳುತ್ತೇನೆ ಎಂದು ಹೇಳಿದೆ. ಸರ್ ಮಾರ್ಚ್ ಎಂಡ್ ಒಳಗಡೆ ಬರುತ್ತದೆ ಎಂದು ಮತ್ತದೆ ಸಮಜಾಯುಷಿ ಉತ್ತರ.
2024ರ ಅಕ್ಟೋಬರ್ 12ರ ಕಾರ್ಯಕ್ರಮದ ಶುಲ್ಕ 2025ರ ಮಾರ್ಚ್ 14ಕ್ಕೆ ಖಾತೆಗೆ
ನಾನೊಬ್ಬ ಕಲಾವಿದ ಹೇಗೋ ಹಾಗೆ ನನ್ನೊಳಗೊಬ್ಬ ಹೋರಾಟಗಾರನಿದ್ದಾನೆ. *ಸಂಗೀತ ನೃತ್ಯ ಅಕಾಡೆಮಿ ಸದಸ್ಯನಾದಗಲೂ* ಇಂತಹ ಅನೇಕ ಅವ್ಯವಸ್ಥೆಗಳ ವಿರುದ್ಧ ಕಲೆ,ಕಲಾವಿದರ ಪರವಾಗಿ ಯಾವುದೇ ಮುಲಾಜಿಲ್ಲದೆ ಹೋರಾಟ ಮಾಡಿದ್ದೇನೆ. ಈಗ ನನ್ನಂತವನಿಗೇ ಇಂತಹ ಅವಮಾನ. ಸಾಮಾನ್ಯ ಕಲಾವಿದರ ಪಾಡೇನು?
ಅಂತೂ ಮೊನ್ನೆ 2025ರ ಮಾರ್ಚ್ 14 ರಂದು ಕಾರ್ಯಕ್ರಮ ಮುಗಿದು ಆರು ತಿಂಗಳಿಗೆ ನನ್ನ ಅಕೌಂಟ್ ಗೆ 20,000 ಸಂದಾಯವಾಗಿದೆ. ಯಾವ ಸುಖಕ್ಕೆ?
ಎಷ್ಟೋ ದಿನ ನಮ್ಮ ಕೆಲಸ ಬಿಟ್ಟು ತಿರುಗಿ, ಯಾವ ತಪ್ಪನ್ನೂ ಎಸಗದೆ ಇಷ್ಟೆಲ್ಲ ನೋವು,ಅವಮಾನ, ಹಿಂಸೆ ಅನುಭವಿಸಿದ್ದಕ್ಕೆ ಏನು ಪರಿಹಾರ?
ಇಲಾಖೆಯಲ್ಲಿ ಎಂತೆಂತಹ ಮುಖವಾಡ ಹೊತ್ತ ಮುಖಗಳು ಇರುತ್ತವೆ.ಇಂಥವರಿಂದ ಬೆರಳೆಣಿಕೆಯ ಪ್ರಾಮಾಣಿಕ ಅಧಿಕಾರಿಗಳಿಗೂ ಕೆಟ್ಟ ಹೆಸರು. ಇಂತಹ ಮನಸ್ಥಿತಿಯುಳ್ಳವರಿಂದ ಕಲೆ, ಕಲಾವಿದರು,ಸಂಸ್ಕೃತಿ ಬೆಳೆಯಲು,ಉಳಿಯಲು ಹೇಗೆ ಸಾಧ್ಯ?
ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲೇಬೇಕು. ನಮಗ್ಯಾಕೆ ಬೇಕು ಈ ಉಸಾಬರಿ ಎನ್ನುವ ಅಸಡ್ಡೆ ಬೇಡ. ನನ್ನ ಪ್ರೀತಿಯ *ಕಲಾ ಬಂಧುಗಳೇ* ಇಂದು ನನಗಾಗಿದ್ದು ನಾಳೆ ನಿಮಗಾಗಬಹುದು ಅಥವಾ ಈ ನೋವನ್ನು ನೀವು ಅನುಭವಿಸಿರಲೂಬಹುದು. ಹೇಳಿದರೆ ಮತ್ತೆ ಮುಂದೆ ನಮಗೆಲ್ಲಿ ಕಾರ್ಯಕ್ರಮ ತಪ್ಪಿ ಹೋಗುತ್ತದೆಯೋ ಅಥವಾ ಯಾವ ಪ್ರಶಸ್ತಿಗಳಿಂದ, ಅನುದಾನಗಳಿಂದ ವಂಚಿತರಾಗುತ್ತೇವೆಯೋ ಎನ್ನುವ ಮನೋಭಾವ ತೊರೆದು,*ನಾವು ಕಲಾವಿದರು,ಭಿಕ್ಷುಕರಲ್ಲ** ಎನ್ನುವ ಟ್ಯಾಗ್ ಲೈನ್ ನೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ವರ್ಗ, ಮಂತ್ರಿಗಳು ಪ್ರತಿಯೊಬ್ಬರಿಗೂ ಟ್ಯಾಗ್ ಮಾಡಿ.*ನಾವು ಕಲಾವಿದರು,ಭಿಕ್ಷುಕರಲ್ಲ* ಎನ್ನುವ ಮಾತಿನೊಂದಿಗೆ ಪ್ರಾರಂಭಿಸಿ ನಿಮ್ಮ ಅನಿಸಿಕೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ.
ಹಾಗಾದರೆ ಇದಕ್ಕೇನು ಪರಿಹಾರ?
ಕಾರ್ಯಕ್ರಮ ಮುಗಿದು 15 ದಿನಗಳ ಒಳಗಾಗಿ ಕಲಾವಿದರಿಗೆ ಅವರ ಸಂಭಾವನೆ ಬರದೇ ಇದ್ದಲ್ಲಿ, ಎಷ್ಟು ದಿನ ತಡವಾಗುತ್ತದೆಯೋ,ಅಷ್ಟನ್ನೂ ಬಡ್ಡಿ ಸಹಿತ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳೇ, ತಮ್ಮ ಭತ್ಯೆಯಿಂದ ಭರಿಸಬೇಕು ಎನ್ನುವ ಕಟ್ಟುನಿಟ್ಟಾದ ಕಾನೂನು ತರುವಂತೆ ಧ್ವನಿ ಎತ್ತೋಣ. ಇದರಿಂದಾದರೂ ಅನ್ಯಾಯ ಕ್ಕೊಳಗಾದ ಕಲಾವಿದರಿಗೆ ನ್ಯಾಯ ಸಿಗಬಹುದು. ಈ ಹೋರಾಟಕ್ಕೆ ಕೈಜೋಡಿಸಿ.
ನಿಮಗೆ ಯಾರಿಗಾದರೂ ಕಾರ್ಯಕ್ರಮ ಕೊಟ್ಟು ಹಲವು ತಿಂಗಳುಗಳಾದರೂ ಹಣ ಬರದೇ ಇದ್ದಲ್ಲಿ ನನ್ನನ್ನು ಸಂಪರ್ಕಿಸಿ. ನಾನು ನಿಮ್ಮ ಜೊತೆ ನಿಲ್ಲುತ್ತೇನೆ. ಅವರು ಯಾವುದೇ ಅಧಿಕಾರಿಗಳಾಗಿರಲಿ ನೇರವಾಗಿ ಪ್ರಶ್ನಿಸೋಣ.
ನೆಲ, ಜಲ, ಭಾಷೆ ನಮ್ಮ ಸಂಸ್ಕೃತಿಯ ಬಗ್ಗೆ ಅಭಿಮಾನವುಳ್ಳ ಪ್ರತಿಯೊಬ್ಬ ಕಲಾವಿದರು, ಸಾಹಿತಿಗಳು, ಕಲಾಭಿಮಾನಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಇದರ ಕುರಿತು ಧ್ವನಿ ಎತ್ತಿ. ಮತ್ತದೇ, ನಮಗೇಕೆ ಎನ್ನುವ ಅಸಡ್ಡೆ ತೊರೆದು, ಸಂಸ್ಕೃತಿ ಇಲಾಖೆಯ ಮಂತ್ರಿಗಳಿಗೆ, ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯಪಾಲರಾದಿಯಾಗಿ ಇದಕ್ಕೆ ಸಂಬಂಧಪಟ್ಟ ಪ್ರತಿಯೊಬ್ಬರಿಗೂ ಮನವಿ ಸಲ್ಲಿಸೋಣ. ಅದಕ್ಕೂ ಬಗ್ಗದಿದ್ದಲ್ಲಿ ಕಲಾವಿದರೆಲ್ಲ ಸಂಘಟಿತರಾಗಿ ಹೋರಾಡೋಣ.
ಆಗ ಮಾತ್ರ ಇಂತದ್ದೊಂದು ಸಮಸ್ಯೆ ತಾರ್ಕಿಕ ಅಂತ್ಯ ಕಾಣಲು ಸಾಧ್ಯ.ನನಗ್ಯಾಕೆ ಎಂಬ ಭಾವ ಇದ್ದರೆ ಏನೂ ಸಾಧಿತವಾಗುವುದಿಲ್ಲ ನೆನಪಿರಲಿ..
✍️ಇಂತಿ ನಿಮ್ಮ ಶ್ರೀ ಅನನ್ಯ ಭಾರ್ಗವ ಬೇದೂರು.

ವಿಭಾಗ