ನಾವು ಊಟದ ಶಿಸ್ತನ್ನು ಮರೆತಿದ್ದೇವೆ, ನಮ್ಮ ಮಕ್ಕಳಿಗೆ ಕಲಿಸಿಲ್ಲ; ರುಚಿಕರ ಚರ್ಚೆಗೆ ನಾಂದಿಯಾದ ಕನಕರಾಜು ಬರಹ
ಕನಕರಾಜು ಸಿ ಬರಹ: ಮದುವೆ, ಉಪನಯನ, ವೈಕುಂಠ ಸಮಾರಾಧನೆಯಲ್ಲಿ ಆಹಾರ ವ್ಯರ್ಥ ಮಾಡುವವರ ಬಗ್ಗೆ ಮೈಸೂರಿನ ಕನಕರಾಜು ಸಿ ಸೋಷಿಯಲ್ ಮೀಡಿಯಾದಲ್ಲಿ ಬರೆದ ಬರಹ ಇಲ್ಲಿದೆ. ನಾವು ಸಂಪೂರ್ಣ ಊಟ ಮಾಡುವುದರ ಜೊತೆಗೆ, ನಮ್ಮ ಮನೆಯವರಿಗೂ ಕಲಿಸೋಣ ಎಂಬ ಈ ಬರಹಕ್ಕೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ.

ಕನಕರಾಜು ಸಿ ಬರಹ: ಮದುವೆ, ಉಪನಯನ, ವೈಕುಂಠ ಸಮಾರಾಧನೆಯಲ್ಲಿ ಆಹಾರ ವ್ಯರ್ಥ ಮಾಡುವವರ ಬಗ್ಗೆ ಮೈಸೂರಿನ ಕನಕರಾಜು ಸಿ ಸೋಷಿಯಲ್ ಮೀಡಿಯಾದಲ್ಲಿ ಬರೆದ ಬರಹ ಇಲ್ಲಿದೆ. ನಾವು ಸಂಪೂರ್ಣ ಊಟ ಮಾಡುವುದರ ಜೊತೆಗೆ, ನಮ್ಮ ಮನೆಯವರಿಗೂ ಕಲಿಸೋಣ ಎಂಬ ಈ ಬರಹ ರುಚಿಕರ ಚರ್ಚೆಗೆ ಮುನ್ನುಡಿ ಬರೆದಿದೆ.
ಕನಕರಾಜು ಸಿ ಬರಹ
"ಇತ್ತೀಚೆಗೆ ಮದುವೆ, ಉಪನಯನ, ವೈಕುಂಠಸಮಾರಾಧನೆ ಹೀಗೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ಎಲ್ಲಾ ಕಡೆ ನಾನು ಗಮನಿಸಿದ ಅಂಶ.
1. ಶೇಕಡಾ 50 ಊಟವನ್ನು ಜನರು ಚೆಲ್ಲುತ್ತಾರೆ.
2. ಬೇಕೋ ಬೇಡವೋ ಎಲ್ಲಾ ಪದಾರ್ಥಗಳನ್ನು ಎಲೆಗೆ ಹಾಕಿಸಿಕೊಳುತ್ತಾರೆ.
3. ಕುಡಿಯಲು ಪ್ಲಾಸಿಟ್ ಬಾಟಲಿಯಲ್ಲಿ ನೀರು. ಅದನ್ನೂ ಅರ್ಧಕುಡಿದು ಹಾಗೆಯೇ ಬಿಟ್ಟುಹೋಗುತ್ತಾರೆ.
ನಾವು ಕಾರ್ಯಕ್ರಮದಲ್ಲಿ ಊಟದ ವಿಚಾರದಲ್ಲಿ ಶಿಸ್ತನ್ನೇ ಮರೆತಿದ್ದೇವೆ.
ಮೊದಲಿಗೆ ನಾವು ಊಟದ ಶಿಸ್ತನ್ನು ಕಲಿತಿಲ್ಲ, ನಮ್ಮ ಮಕ್ಕಳಿಗೆ ಕಲಿಸಿಲ್ಲ.
ಮೊದಲಿಗೆ ಎಲೆಯ ಮೇಲ್ಭಾಗದಲ್ಲಿ ಉಪ್ಪು, ಉಪ್ಪಿನಕಾಯಿ, ಪಲ್ಯಗಳು, ಕೋಸಂಬರಿ ಬಡಿಸುತ್ತಾರೆ. ಊಟ ಪ್ರಾರಂಭಿಸಿದಾಗ ಅನ್ನ ಸಾರು ಬರುವ ಮೊದಲು ಅವುಗಳನ್ನು ಖಾಲಿ ಮಾಡಬಹುದು.
ಅನ್ನ ಹಾಕಿದಾಗ ಎರಡು ಭಾಗ ಮಾಡಿ, ಮೊದಲನೇ ಭಾಗವನ್ನು ಸಾರಿಗೆ, ಎರಡನೇ ಭಾಗವನ್ನು ಹುಳಿಯನ್ನು ಕಲಿಸಿಕೊಳ್ಳಬಹುದು.
ಸಿಹಿ ಬಂದಾಗ ಎಷ್ಟು ಬೇಕೋ ಅಷ್ಟು ಹಾಕಿಸಿಕೊಳ್ಳಿ.
ನಂತರ ಬೊಂಡ, ಬಜ್ಜಿ - ಸಾಧ್ಯವದಷ್ಟು ಕಡಿಮೆ ತಿನ್ನಿ. ಎಲ್ಲರೂ ಆಸೆಯಿಂದ ಹಾಕಿಸಿಕೊಳ್ಳುತ್ತಾರೆ. ಅರ್ಧದಷ್ಟು ಎಲೆಯಲ್ಲೇ ಬಿಡುತ್ತಾರೆ.
ಕೊನೆಗೆ ಮೊಸರನ್ನ. ಸಾಧ್ಯವಾದವರು ಊಟಕ್ಕೆ ಹಾಕಿದ ಕೊತ್ತಂಬರಿ, ಕರಿಬೇವನ್ನೂ ತಿಂದು ಮುಗಿಸಿ ಎಲೆಯನ್ನು ಶುಭ್ರವಾಗಿ ಇಡಬಹುದು.
ಇದು ನಾನು ಏಕೆ ಹೇಳಿತ್ತಿದ್ದೇನೆ ಎಂದರೆ ನಾನು ಹಾಗೆ ಬಾಳೆ ಎಲೆಯ ಮೇಲೆ ಹಾಕಿದ ವಸ್ತುವನ್ನು ಸಂಪೂರ್ಣ ಖಾಲಿ ಮಾಡುತ್ತೇನೆ, ಅಷ್ಟೇ ಅಲ್ಲದೆ ಹೆಂಡತಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೂ ಕಲಿಸಿದ್ದೇನೆ.
ನಾವೆಲ್ಲರೂ ಯಾಕೆ ಹೀಗೆ ಒಂದು ಅಭಿಯಾನ ಶುರುಮಾಡಬಾರದು ?
ನಾವು ಸಂಪೂರ್ಣ ಊಟ ಮಾಡುವುದರ ಜೊತೆಗೆ, ನಮ್ಮ ಮನೆಯವರಿಗೂ ಕಲಿಸೋಣ.. ಇಂದಿನಿಂದ ಪ್ರಾರಂಭಿಸೋಣವೇ ?" ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ
"ನಾನು ಒಗ್ಗರಣೆ ಹಾಕಿದ ಮೆಣಸನ್ನು ಬಿಡದೆ ಎಲ್ಲವನ್ನು ತಿನ್ನುತ್ತೇನೆ ನನ್ನ ಕುಟುಂಬದವರೆಲ್ಲ ಅದನ್ನು ಪಾಲಿಸುತ್ತಾರೆ. ನಾನು ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಹೀಗೆ ಚೆನ್ನಾಗಿ ಊಟ ಮಾಡಿದವರನ್ನು ಅಭಿನಂದಿಸಿದ್ದೆ" ಎಂದು ಶಿವಕುಮಾರ್ ಚುಕ್ಕೆಮನೆ ಪ್ರತಿಕ್ರಿಯೆ ನೀಡಿದ್ದಾರೆ. "ಮೊನ್ನೆ ಒಂದು ಊಟದ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ಒಬ್ಬ ಯುವಕರು ವಿಶೇಷವಾಗಿ ಊಟ ಮಾಡಿದರು..ತನಗೆ ಬೇಕಾದ್ದನ್ನು ಮಾತ್ರ ಬಡಿಸಿಕೊಂಡರು..ಊಟವನ್ನು ಸಂಪೂರ್ಣ ಆನಂದಿಸಿ.. ಊಟಕ್ಕೆ ಮುಂಚೆ ಎಲೆ ಹೇಗಿತ್ತೋ ಹಾಗೇ ತಮ್ಮ ಊಟವನ್ನು ಕೊನೆಗಾಣಿಸಿದರು" ಎಂದು ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. "ನಮ್ಮ ಮನೆಯಲ್ಲಿ ಬಾಳೆ ಎಳೆ ಬಿಟ್ಟು, ಮಿಕ್ಕಿದ್ದು ಎಲ್ಲವನ್ನೂ ತಿನ್ನುತ್ತೇವೆ" ಎಂದು ರಮ್ಯಾ ಟಿಎ ಪ್ರತಿಕ್ರಿಯೆ ನೀಡಿದ್ದಾರೆ.
"ನಾನು ಮಿತವಾಗಿ ಹಾಕಿಸಿಕೊಂಡು ಎಲೆ ಖಾಲಿ ಮಾಡಿ ಹೋಗುತ್ತೇನೆ, ನನಗೆ ಅಲರ್ಜಿ ಇರುವ ತರಕಾರಿ ಬಲವಂತವಾಗಿ ಹಾಕಿ ಬಿಟ್ಟರೆ ಅದು ಮಾತ್ರ ಬಿಡುತ್ತೇನೆ" ಎಂದು ನಾಗೇಶ್ ಕುಮಾರ್ ಬರೆದಿದ್ದಾರೆ. "ನಾನು ನೀವು ಹೇಳಿದ ಪ್ರಕಾರವೇ ತಿನ್ನುತ್ತೇನೆ , ಕುಡಿಯಲು ಸಣ್ಣ ಗಾಜಿನ ಬಾಟ್ಲಿ ನೀರು ತೆಗೊಂಡು ಹೋಗ್ತೇವೆ. ನೀರು ತೆಗೊಂಡು ಹೋಗದಿದ್ರೆ ಎಲೆ ಹಾಕುವವರ ಹತ್ರ ಲೋಟದಲ್ಲಿ ಕೇಳೋದು, ಅಥವಾ ಬದಿಯಲ್ಲಿ ಕೂತಾವರತ್ರ ಎಲೆಗೆ ಹಾಕ್ಲಿಕ್ಕೆ ಕೇಳೋದು ಹೆಚ್ಚಿನವರು ತಕರಾರು ಇಲ್ದೆ ಕೊಡ್ತಾರೆ" ಬಿ.ಸಿ. ಶೆಟ್ಟಿ ಕಾಮೆಂಟ್ ಮಾಡಿದ್ದಾರೆ. "ಈ ಪ್ರಯೋಗ ಎಲ್ಲಾ ಕಡೆ ನಡೆಯಬೇಕು, ಮತ್ತು ಬಂದ ಮಹನೀಯರು ಬೇಸರಗೊಂಡರು ಪರವಾಗಿಲ್ಲ ಎಷ್ಟು ಬೇಕೋ ಅಷ್ಟು ಹಾಕಿಸಿಕೊಂಡು ತಿನ್ನಿ ದಯವಿಟ್ಟು ಯಾರೂ ಎಲೆಯಲ್ಲಿ ಬಿಸಾಡಬೇಡಿ ಅಂತ. ಮತ್ತು ಯಾರು ಎಲೆಯಲ್ಲಿ ಸಂಪೂರ್ಣ ಕಾಲಿ ಮಾಡಿರುತ್ತಾರೋ ಅವರಿಗೆ ಮೊಮೆಂಟೋವನ್ನೂ ಕೊಡಬಹುದು" ಎಂದು ಸುಬ್ಬರಾಜು ಪ್ರತಿಕ್ರಿಯಿಸಿದ್ದಾರೆ.
"ನಾನು ಮೊಸರನ್ನವನ್ನು ಮುಗಿಸಿ ಬಾಳೆಲೆಯನ್ನು ಬೆರಳಿನಿಂದ ಬಳಿದು ಬಳಿದು ನೆಕ್ಕುತ್ತಿದ್ದಾಗ ಬಡಿಸುವವರಲ್ಲಿ ಒಬ್ಬರು ಹತ್ತಿರ ಬಂದು "ಎಲೆಯನ್ನು ಬಿಡ್ತೀರಾ ತಾನೆ?" ಎಂದು ವಿನೋದವಾಗಿಯೆ ಕೇಳಿದ್ದರು" ಎಂದು ನಾಗರಾಜ್ ರಾವ್ ಅನುಭವ ಹಂಚಿಕೊಂಡಿದ್ದಾರೆ. "ಅರಿವು ಮೂಡಿದೆ. ಆದರೆ ಶಿಸ್ತು; ಅದ್ಯಾಕೋ ಹಳೆ ತಲೆಗಳಿಗಿರುವಷ್ಟು, ಈಗಿನವರಿಗೆ ಅದು ಸ್ವಲ್ಪ ಕಡಿಮೆಯೇ. ಇದಕ್ಕೆ ಕಾರಣವೂ ಇದೆ. ಅದು ಮೊಬೈಲ್. ಊಟ ಮಾಡುವಾಗ ಮೊಬೈಲ್ ಅಭ್ಯಾಸ ಆಗಿರುವುದರಿಂದ ನಾವು ತಿನ್ನುವ ಆಹಾರದ ಪ್ರಮಾಣ ಅಂದಾಜಿಸುಲು ಆಗುವುದಿಲ್ಲ. ಇದರ ಜೊತೆಗೆ ಬಂದಿರುವ ನೆಂಟರು-ಇಷ್ಟರು ಇವರೆಲ್ಲರೂ ಊಟದ ಸಮಯದಲ್ಲಿ ಸಿಗುವುದರಿಂದ ಊಟದ ಮೇಲೆ ಗಮನಕ್ಕಿಂತ ಬಂದವರನ್ನು ಮಾತನಾಡಿಸುವ ತವಕದಲ್ಲಿ ಇರುತ್ತಾರೆ. ಈ ಕಾರಣಗಳನ್ನೂ ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ." ಎಂದು ಅಪ್ರಮೇಯ ಯೋಗೀಶ್ ಹೇಳಿದ್ದಾರೆ.
"ನನ್ನ ಒಂದು ಗಮನಕ್ಕೆ ಬಂದಿರುವುದು, ಬಡಿಸುವವರು ತುಂಬಾ ಬೇಗ ಬಡಿಸುತ್ತಾರೆ... ಒಂದರ ಮೇಲೊಂದು ತಂದು ಬಡಿಸುವುದು.. ಯೋಚಿಸಲೂ ಸಮಯ ಕೊಡದಷ್ಟು ಆತುರ... ಹೌದು ಮನೆಯಲ್ಲಿ ಮಾಡುವಷ್ಟು ನಿಧಾನ ಬೇಡ ಆದರೆ ಒಂದು average speed idre ವಾಸಿ... ಕೆಲವೊಮ್ಮೆ ಬಿಡಬೇಕಲ್ಲ ಎಂಬ ಬೇಸರ ಆದರೆ next ಪಂಕ್ತಿ ಜನ and ಎಲೆ ಎತ್ತುವವರ ಭಯದಿಂದ ಜಾಗ ಖಾಲಿ ಮಾಡಿದೀನಿ" ಎಂದು ಪ್ರಭಾ ಶರ್ಮಾ ಪ್ರತಿಕ್ರಿಯಿಸಿದ್ದಾರೆ. "ಚಿಕ್ಕಂದಿನಿಂದಲೂ, ನಮ್ಮ ಮನೆಯಲ್ಲಿ ಕಳಿಸಿದ ಪಾಠ, ಸಂಘದಲ್ಲಿ ಕಳಿಸಿದ ಪಾಠ - ಒಂದೇ ಒಂದು ಅಗುಳು ಎಲೆಯ ಮೇಲೆ ಬಿಡಬಾರದು. ಈಗಲೂ ನಾವೆಲ್ಲರೂ ಅದನ್ನೇ ಪಾಲಿಸಿಕೊಂಡು ಬರುತ್ತೇವೆ. ನಮ್ಮ ಎಲೆಗಳನ್ನು ನೋಡಿದ ಒಬ್ಬರು "You Polished Your Paan" ಅಂತ ಹೇಳಿದ್ದರು." ಎಂದು ಗುರುಪ್ರಸಾದ್ ಹೇಳಿದ್ದಾರೆ. "ಈ ಕಾರ್ಯಕ್ರಮಗಳಲ್ಲಿ ...ಮುಖ್ಯವಾಗಿ ಮಕ್ಕಳು ..ನಮ್ಮ ಪೀಳಿಗೆಯವರ ಹಾಗೆ ಸಿಕ್ಕ ಸಿಕ್ಕ ಒಳ್ಳೆಯ ಊಟ ಅವಕಾಶ ಸಂಪೂರ್ಣ ಉಪಯೋಗಿಸಿಕೊಳ್ಳುವ ಸಂಸ್ಕೃತಿಯಲ್ಲಿ ಬೆಳೆದಿಲ್ಲ ...ಎಲ್ಲವೂ ಬೇಡ ಬೇಡ ಎನ್ನುವ ರಾಗವೇ ಹೆಚ್ಚು..ಅಷ್ಟಕ್ಕೂ ಬಡಿಸಿದರೆ ಬಿಟ್ಟರಾಯಿತು ಅನ್ನುವ ಸ್ವಾತಂತ್ರ್ಯ" ಎಂದು ಶ್ರೀನಿವಾಸ್ ಕಾಮತ್ ಪ್ರತಿಕ್ರಿಯಿಸಿದ್ದಾರೆ. "ಇಷ್ಟೇ ಅಲ್ಲದೆ ಈಗ ತುಂಬಾ ಐಟಮ್ಸ್ ಮಾಡಿಸುವ ಶೋಕಿ ಹಾಗೂ ಮೇಲೆ ಒಬ್ಬರು ತಿಳಿಸಿದಂತೆ ಏನು ಪದಾರ್ಥ ಬಡಿಸುತ್ತಿದ್ದಾರೆ ಎಂದು ಗೊತ್ತೇ ಇರುವುದಿಲ್ಲ ಹಾಗೂ ಬಡಿಸುವವರಿಗೆ ವ್ಯವಧಾನವೂ ಇರುವುದಿಲ್ಲ" ಎಂದು ಸದಾನಂದ ಕಾರ್ಣಿಕ್ ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ ಕನಕರಾಜು ಅವರ ಫೇಸ್‌ಬುಕ್ ಪೋಸ್ಟ್ ರುಚಿಕರ ಚರ್ಚೆಗೆ ನಾಂದಿ ಹಾಡಿದೆ.
