ಅಮಾಯಕರನ್ನು ಇಂತಹ ಅಪಾಯಗಳಿಂದ ರಕ್ಷಿಸಲೆಂದೇ ಇದ್ದಲ್ಲೇ ದೇವರ ಕಾಣಿರಿ, ಕಾವೇರಿಯೇ ನಮಗೆ ಗಂಗಾ ಎಂದಿದ್ದು- ಮಧು ವೈ ಎನ್ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ಅಮಾಯಕರನ್ನು ಇಂತಹ ಅಪಾಯಗಳಿಂದ ರಕ್ಷಿಸಲೆಂದೇ ಇದ್ದಲ್ಲೇ ದೇವರ ಕಾಣಿರಿ, ಕಾವೇರಿಯೇ ನಮಗೆ ಗಂಗಾ ಎಂದಿದ್ದು- ಮಧು ವೈ ಎನ್ ಬರಹ

ಅಮಾಯಕರನ್ನು ಇಂತಹ ಅಪಾಯಗಳಿಂದ ರಕ್ಷಿಸಲೆಂದೇ ಇದ್ದಲ್ಲೇ ದೇವರ ಕಾಣಿರಿ, ಕಾವೇರಿಯೇ ನಮಗೆ ಗಂಗಾ ಎಂದಿದ್ದು- ಮಧು ವೈ ಎನ್ ಬರಹ

Opinion: ಕಾಲ್ತುಳಿತ, ಅಪಘಾತದಂತಹ ದುರಂತಗಳನ್ನು ಗಮನಿಸುವಾಗ ಸಾವು ನೋವು ಬಹಳ ಘಾಸಿ ಉಂಟುಮಾಡುವಂಥದ್ದು. ಈ ವಿಚಾರವಾಗಿ ಲೇಖಕ ಮಧು ವೈ ಎನ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದು, “ಕುವೆಂಪು ಮೊದಲಾಗಿ ಮಹಾನುಭಾವರೆಲ್ಲರೂ ಇಂತಹ ಅಮಾಯಕರನ್ನು ಇಂತಹ ಅಪಾಯಗಳಿಂದ ರಕ್ಷಿಸಲೆಂದೇ ಇದ್ದಲ್ಲೇ ದೇವರ ಕಾಣಿರಿ, ಕಾವೇರಿಯೇ ನಮಗೆ ಗಂಗಾ ಎಂದಿದ್ದು” ಎಂಬುದನ್ನು ಸ್ಮರಿಸಿಕೊಂಡರು.

ನವದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಪ್ರಯಾಣಿಕ ದಟ್ಟಣೆ ಹೆಚ್ಚಾಗಿ ಕಾಲ್ತುಳಿತ ಸಂಭವಿಸಿ 18 ಯಾತ್ರಿಕರು ಪ್ರಾಣ ಕಳೆದುಕೊಂಡ ಹೃದಯವಿದ್ರಾವಕ ಘಟನೆ ನಡೆಯಿತು. (ಸಾಂಕೇತಿಕ ಚಿತ್ರ)
ನವದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಪ್ರಯಾಣಿಕ ದಟ್ಟಣೆ ಹೆಚ್ಚಾಗಿ ಕಾಲ್ತುಳಿತ ಸಂಭವಿಸಿ 18 ಯಾತ್ರಿಕರು ಪ್ರಾಣ ಕಳೆದುಕೊಂಡ ಹೃದಯವಿದ್ರಾವಕ ಘಟನೆ ನಡೆಯಿತು. (ಸಾಂಕೇತಿಕ ಚಿತ್ರ) (ANI)

Opinion: ಅಪಘಾತ, ಕಾಲ್ತುಳಿತ ಮುಂತಾದ ಘಟನೆಗಳಲ್ಲಿ ಪ್ರಾಣ ಕಳೆದುಕೊಂಡವರನ್ನು ನೋಡಿದಾಗ ಸಂಕಟವಾಗುತ್ತದೆ. ಬಹುತೇಕ ಮುಗ್ಧರು, ಅಮಾಯಕರು. ಸ್ವಲ್ಪ ವಿವೇಚನೆ, ಸಂಯಮಗಳ ಮೂಲಕ ದುರಂತಗಳನ್ನು ತಪ್ಪಿಸಬಹುದಾಗಿತ್ತು. ಸಾವು - ನೋವಿನ ವಿಚಾರ ಸಾರ್ವಜನಿಕವಾಗಿ ಕೂಡ ಚರ್ಚೆಯಾಗುತ್ತಿರುವ ಹೊತ್ತು ಇದು. ಈ ಹಂತದಲ್ಲಿ ಲೇಖಕ ಮಧು ವೈ ಎನ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದು, “ಕುವೆಂಪು ಮೊದಲಾಗಿ ಮಹಾನುಭಾವರೆಲ್ಲರೂ ಇಂತಹ ಅಮಾಯಕರನ್ನು ಇಂತಹ ಅಪಾಯಗಳಿಂದ ರಕ್ಷಿಸಲೆಂದೇ ಇದ್ದಲ್ಲೇ ದೇವರು ಕಾಣಿರಿ, ಕಾವೇರಿಯೇ ನಮಗೆ ಗಂಗಾ ಎಂದಿದ್ದು” ಎಂಬುದನ್ನು ಸ್ಮರಿಸಿಕೊಂಡಿದ್ದಾರೆ. ಅವರ ಬರಹ ಇಲ್ಲಿದೆ.

ಅಮಾಯಕರನ್ನು ಇಂತಹ ಅಪಾಯಗಳಿಂದ ರಕ್ಷಿಸಲೆಂದೇ ಇದ್ದಲ್ಲೇ ದೇವರು ಕಾಣಿರಿ, ಕಾವೇರಿಯೇ ನಮಗೆ ಗಂಗಾ ಎಂದಿದ್ದು

ಮೊನ್ನೆ ಮಧ್ಯಪ್ರದೇಶದಲ್ಲಿ ಒಂದು ಹತ್ತು ಜನ ಸತ್ತಿದ್ದರು. ನಿನ್ನೆ ರಾತ್ರಿ ಮೈಸೂರಿನಿಂದ ಬೆಂಗಳೂರಿಗೆ ಡ್ರೈವ್‌ ಮಾಡುತ್ತಾ ಸ್ನೇಹಿತರೊಂದಿಗೆ ಈ ದೇಶದಲ್ಲಿ ಯಾರಲ್ಲಿಯೂ ಸ್ವಲ್ಪವೂ ಅಪರಾಧ ಪ್ರಜ್ಞೆಯೇ ಇಲ್ಲವಲ್ಲ ಎಂದು ನೊಂದು ಮಾತಾಡುತ್ತಿದ್ದೆ. ಇಂದು ಬೆಳಿಗ್ಗೆ ಕಣ್ಬಿಟ್ಟರೆ ಮತ್ತೆ ಹದಿನೈದು ಸಾವು. ದುರಂತದ ಕಾಕತಾಳೀಯವೆಂದರೆ ನಾವು ಅದನ್ನು ಆ ಸಮಯದಲ್ಲಿ ಚರ್ಚಿಸುವಾಗಲೇ ಈ ಹೊಸ ಸಾವುಗಳು ಸಂಭವಿಸಿವೆ.

ಇದರ ಬಗ್ಗೆ ಉಸಿರೆತ್ತುವುದೂ ಅಪರಾಧವೆಂಬಂತೆ ಸಾಮಾನ್ಯ ಜನರೇ ವರ್ತಿಸುತ್ತಿದ್ದಾರೆ. ನನ್ನ ಈ ಆಕ್ಷೇಪಣೆಯಿಂದ ನಿಮ್ಮಲ್ಲಿ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ. ನನಗಂತೂ ಮೊದಲ ದಿನದ ಕಾಲ್ತುಳಿತದ ಘಟನೆಯಿಂದಲೂ ಈ ಸಾವುಗಳು ಬಹಳ ಕಾಡಿದೆ. ಮನೆಯಲ್ಲಿ ಯಾರಾದರೂ ತೀರಿಕೊಂಡರೆ ನಾಲ್ಕು ಜನರಿಗೆ ತಿಳಿಸಿ ಸಂಜೆಯವರೆಗೆ ಶವವನ್ನು ಕಾದಿಟ್ಟು ಮಣ್ಣು ಮಾಡುತ್ತೇವೆ. ಅಂಥದರಲ್ಲಿ ಶವಗಳನ್ನೇ ಕಣ್ಮರೆ ಮಾಡುತ್ತಿದ್ದೇವೆ ಎಂದರೆ ಇವು ಸಹಜ ಸಾವುಗಳಲ್ಲ ಎಂದು ಅರ್ಥ.

ಅಂಬಾನಿಯಿಂದ ಹಿಡಿದು ಅನುಕೂಲವಂತ ಮಧ್ಯಮವರ್ಗದವರೆಲ್ಲರೂ ಹೋಗಿ ಬಂದಿದ್ದಾರೆ. ಅವರೆಲ್ಲರಿಗೂ ತಾವು ಏನು ಮಾಡ್ತಿದ್ದೇವೆ ಎಂಬುದು ಗೊತ್ತಿದೆ. ಸುರಕ್ಷಿತವಾಗಿ ಹೋಗಿ ಬರುವ ಅನುಕೂಲಗಳನ್ನು ಹೊಂದಿದ್ದಾರೆ. ಅವರು ಹೋಗುವುದರಲ್ಲಿ ತಪ್ಪಿಲ್ಲ. ಈ ಅನುಕೂಲಗಳನ್ನು ಹೊಂದಿಲ್ಲದ, ಮಾಧ್ಯಮಗಳಲ್ಲಿ, ಸೋಷಿಯಲ್‌ ಮೀಡಿಯಾಗಳಲ್ಲಿ ಅಲ್ಲಿ ಇಲ್ಲಿ ಕೇಳಿ ಓದಿ ದಿಢೀರನೆ ಹೋಗಿ ಬರುವ ಆಸೆಯಾಗಿ ಮಾಡುತ್ತಿರುವ ಕೆಲಸವನ್ನು ತೊರೆದು ರಾತ್ರೋರಾತ್ರಿ ಗಂಟುಮೂಟೆ ಕಟ್ಟಿಕೊಂಡು ಹೊರಡುವ ಅಮಾಯಕರಿದ್ದಾರಲ್ಲ ಅವರ ಬಗ್ಗೆ ಬೇಸರವಾಗುತ್ತದೆ.

ಇಲ್ಲಿ ನಾನು ಕೇವಲ ಹಣದ ಅನುಕೂಲದ ಬಗ್ಗೆ ಹೇಳ್ತಿಲ್ಲ. ಬೌದ್ಧಿಕ ಅನುಕೂಲದ ಬಗ್ಗೆಯೂ ಹೇಳ್ತಿದ್ದೇನೆ. ವ್ಯಕ್ತಿ ಬೌದ್ಧಿಕವಾಗಿ ಸಿರಿವಂತನಾಗಿದ್ದಾಗ ಅವನ ಪ್ರಜ್ಞೆ ಅವನನ್ನು ಎಲ್ಲಿ ಹೋದರೂ ರಕ್ಷಿಸುತ್ತಿರುತ್ತದೆ. ವ್ಯಕ್ತಿ ಬೌದ್ಧಿಕವಾಗಿ ಬಡವನಾಗಿದ್ದಾಗ ಅದು ಮೌಢ್ಯವಾಗಿ ಶುದ್ಧ ಭಕ್ತಿಯ ಬದಲು ಹುಚ್ಚು, ಉನ್ಮಾದಗಳಿಗೆ ಒಳಗಾಗುತ್ತಾನೆ. ಅದು ಅವನನ್ನು ಇಂತಹ ಅಂತ್ಯಗಳೆಡೆ ಕರೆದೊಯ್ಯುತ್ತದೆ. ಅನುಕೂಲವಂತರಿಗೆ ಮಿಂದು ಏಳಲು ಶುದ್ಧ ಗಂಗಾ ನೀರೇ ಸಿಕ್ಕಿದೆ. ಮೂಢರಿಗೆ ಕೆಟ್ಟಾ ಕೊಳಕು ನೀರು ಸಿಕ್ಕಿದೆ. ಹೆಜ್ಜೆಯಿಡಿಲಾಗದ ಶೌಚಾಲಯಗಳು ಸಿಕ್ಕಿವೆ. ಇದೆಲ್ಲ ಹೇಗೆ?

ಕುವೆಂಪು ಮೊದಲಾಗಿ ಮಹಾನುಭಾವರೆಲ್ಲರೂ ಇಂತಹ ಅಮಾಯಕರನ್ನು ಇಂತಹ ಅಪಾಯಗಳಿಂದ ರಕ್ಷಿಸಲೆಂದೇ ಇದ್ದಲ್ಲೇ ದೇವರು ಕಾಣಿರಿ, ಕಾವೇರಿಯೇ ನಮಗೆ ಗಂಗಾ ಎಂದಿದ್ದು.

ನಿನ್ನೆ ಸ್ನೇಹಿತರು ಬಹಳ ಚೆನ್ನಾಗಿ ಹೇಳ್ತಿದ್ದರು. ಇದು ಕುರುಡ ಆನೆ ಮುಟ್ಟಿದ ಹಾಗೆ. ಎಲ್ಲರಿಗೂ ಎಲ್ಲೆಲ್ಲಿ ಮುಟ್ಟುತ್ತಾರೋ ಹಾಗೆ ಅನುಭವಕ್ಕೆ ಸಿಗುತ್ತಿದೆ ಎಂದು. ಇರಬಹುದು, ಶುದ್ಧಭಕ್ತಿಯುಳ್ಳವರಿಗೆ ಒಂದು ರೀತಿ, ತೆಗಳಲು ಹಣಿಯುಲೆಂದೇ ಹುಟ್ಟಿರುವವರಿಗೆ ಒಂದು ರೀತಿ. ಪ್ರಶ್ನೆ ಅದಲ್ಲ.

ದಿನದ ಅಂತ್ಯದಲ್ಲಿ ಈ ಅಮಾಯಕರ ಸಾವು ನೋವು ಇದೆಯಲ್ಲ, ಇವು ಪುಣ್ಯದ ಸಾವುಗಳಲ್ಲ. ಅಸಹಜ, ಪಾಪದ ಸಾವುಗಳು. ಈ ಅಪರಾಧದಲ್ಲಿ ಅವರನ್ನು ಹುಚ್ಚೆಬ್ಬಿಸಿ ದಬ್ಬಿದವರೆಲ್ಲರೂ ಭಾಗಿ. ನ್ಯಾಯಾಲಯದಲ್ಲಿ ಬೇಡ, ಕನಿಷ್ಠ ನಾಳೆ ದೇವರ ಎದುರು ಕೈ ಮುಗಿವಾಗ, ನಮ್ಮದು ತಪ್ಪಾಯಿತು, ನನ್ನ ಈ ದೇಶವಾಸಿಗಳಿಗೆ ಮೋಕ್ಷ ಕರುಣಿಸು ಎಂದಾದರೂ ಬೇಡಿಕೊಳ್ಳಬೇಕು.

- ಮಧು ವೈ ಎನ್, ಲೇಖಕ, ಬೆಂಗಳೂರು

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner