ಜನರ ಭಾಗ್ಯವೇ ತನ್ನ ಗುರಿ ಎನ್ನುತ್ತಿರುವ ಕರ್ನಾಟಕ ಸರ್ಕಾರಕ್ಕೆ ಬೆಟ್ಟಿಂಗ್ ಆಪ್ ನಿಷೇಧಿಸಲು ಅಡ್ಡಿ ಏನು: ಉದ್ಯಮಿ ರವಿ ಅರೇಹಳ್ಳಿ ಅಭಿಮತ
Opinion: ಬಹುಬೇಗ ಶ್ರೀಮಂತರಾಗಿಬಿಡಬೇಕು ಎಂಬ ಆಸೆ ಮೊಳಕೆಯೊಡೆದರೆ ಅಂಥವರ ಪೈಕಿ ಕೆಲವರು ರಮ್ಮಿ ಸರ್ಕಲ್ ಮುಂತಾದ ಬೆಟ್ಟಿಂಗ್ ಆಪ್‌ನ ಜಾಲಕ್ಕೆ ಬಿದ್ದುಬಿಡುತ್ತಾರೆ. ಸಾಲದ ಸುಳಿಗೆ ಸಿಲುಕುತ್ತಾರೆ. ಜನರ ಭಾಗ್ಯವೇ ತನ್ನ ಗುರಿ ಎನ್ನುತ್ತಿರುವ ಕರ್ನಾಟಕ ಸರ್ಕಾರಕ್ಕೆ ಬೆಟ್ಟಿಂಗ್ ಆಪ್ ನಿಷೇಧಿಸಲು ಅಡ್ಡಿ ಏನು ಎಂಬುದು ಉದ್ಯಮಿ ರವಿ ಅರೇಹಳ್ಳಿ ಅವರ ಕಾಳಜಿಯ ಪ್ರಶ್ನೆ.

Opinion : ಕ್ಷಿಪ್ರವಾಗಿ ಶ್ರೀಮಂತರಾಗಬೇಕು ಎಂಬುದು ಬಹುತೇಕರ ಕನಸು. ಪರಿಶ್ರಮವಿಲ್ಲದೇ ಸುಲಭವಾಗಿ ಹೇಗೆ ಶ್ರೀಮಂತರಾಗವುದು ಎಂದು ಹುಡುಕಾಡುವವರನ್ನು ಜೂಜು ಬಹುಬೇಗ ಸೆಳೆದುಬಿಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಜೂಜಿನ ಸ್ಥಾನವನ್ನು ತುಂಬಿವೆ. ರಮ್ಮಿ, ರಮ್ಮಿ ಸರ್ಕಲ್ ಹೀಗೆ ಹತ್ತಾರು ಆಪ್‌ಗಳು ಮೊಬೈಲ್‌ನಲ್ಲೇ ಕಾಣಸಿಗುತ್ತವೆ. ಅದರ ಆಕರ್ಷಣೆಗೆ ಬಿದ್ದವರು ಸಾಲ ಮಾಡಿ ಆಡತೊಡಗುತ್ತಾರೆ. ಎಲ್ಲವನ್ನೂ ಕಳೆದುಕೊಂಡು ಬಳಿಕ ಸಾಲದ ಸುಳಿಗೆ ಸಿಲುಕಿ ಸಂಕಷ್ಟ ಎದುರಿಸುತ್ತಾರೆ. ಇದರು ವಾಸ್ತವ. ಆದರೆ, ಜನರ ಭಾಗ್ಯವೇ ತನ್ನ ಗುರಿ ಎನ್ನುತ್ತಿರುವ ಕರ್ನಾಟಕ ಸರ್ಕಾರಕ್ಕೆ ಬೆಟ್ಟಿಂಗ್ ಆಪ್ ನಿಷೇಧಿಸಲು ಅಡ್ಡಿ ಏನು ಎಂಬುದು ಉದ್ಯಮಿ ರವಿ ಅರೇಹಳ್ಳಿ ಅವರ ಕಾಳಜಿಯ ಪ್ರಶ್ನೆ. ಅವರು ಅದನ್ನು ವಿವರಿಸಿರುವುದು ಹೀಗೆ -
ಒಂದು ಸತ್ಯಕತೆ ಹೇಳ್ತೀನಿ…
ಅವರ ಹೆಸರು ದೇವರಾಜ. ಪರಿಣಿತ ಕಾರ್ ಡ್ರೈವರ್. ಎಲ್ಲಕ್ಕಿಂತ ಮಿಗಿಲಾಗಿ ಶ್ರಮ ಜೀವಿ. ಯಾವುದೇ ದುರಭ್ಯಾಸಗಳಿರಲಿಲ್ಲ. ಮದುವೆಯಾಗಿ ವರ್ಷಾರುತಿಂಗಳು.
ನಾರ್ಥ್ ಇಂಡಿಯನ್ ಡಾಕ್ಟರೊಬ್ಬರ ಖಾಯಂ ಡ್ರೈವರಾಗಿ ಏಳೆಂಟು ವರ್ಷಗಳಿಂದ ಕೆಲ್ಸ ಮಾಡಿಕೊಂಡಿದ್ದರು. ಡ್ರೈವರ್ ಕೆಲಸ ದಿನಕ್ಕೆ ಎರಡು ಮೂರು ಗಂಟೆ ಅಷ್ಟೆ. ದಿನದ ಉಳಿದ ಅವಧಿಗೆ ಅವರು ಆ ಡಾಕ್ಟರ್ ಮನೆಯ ಒಬ್ಬ ಸದಸ್ಯ. ಡಾಕ್ಟರ ಮನೆಯ ದಿನಸಿ ತರುವುದರಿಂದ ಹಿಡಿದು ಅಡಿಗೆಯವರು ಏನು ಅಡಿಗೆ ಮಾಡಬೇಕು ಎನ್ನುವವರೆಗೂ ಇವರ ಮಾತು ನಡೆಯುತ್ತಿತ್ತು. ಸಾಮಾನ್ಯವಾಗಿ ಹಿಂದಿ ಜನಗಳು ಕನ್ನಡಿಗರನ್ನು ಕೆಲ್ಸಕ್ಕೆ ಇಟ್ಟುಕೊಳ್ಳುವುದಿಲ್ಲ. ಅವರಿಗೆ ನಡು ಬಗ್ಗಿಸಿ ಸಲಾಮು ಹೊಡೆಯುವ ನೇಪಾಳಿಗಳು, ಇತರೆ ನಾರ್ಥ್ ಇಂಡಿಯನ್ನುಗಳೇ ಮೇಡ್ / ಡ್ರೈವರ್ ಗಳಾಗಿ ಬೇಕು. ದೇವರಾಜರ ಪ್ರಾಮಾಣಿಕತೆ ನಿಷ್ಠೆ ಅಷ್ಟು ಕಟ್ಟುನಿಟ್ಟಾಗಿದ್ದರಿಂದ ಕೆಲ್ಸದಿಂದ ತೆಗೆಯುವ ಮಾತೇ ಇರಲಿಲ್ಲ. ಸಂಬಳವೂ ಸಂಸಾರಕ್ಕೆ ಆಗಿ ‘ಸರಿಗಮ’ ಎನ್ನುವಷ್ಟಿತ್ತು.
ದೇವರಾಜರ ಹೆಂಡತಿ ಗರ್ಭಿಣಿಯೆಂಬ ವಿಷಯ ತಿಳಿದೊಡನೆ ಹರ್ಷಗೊಂಡ ಡಾಕ್ಟರು ನಿನ್ನ ಭವಿಷ್ಯಕ್ಕಿರಲಿ, ಎಲ್ಲಾ ಸಂಬಳನೂ ಖರ್ಚು ಮಾಡಬೇಡ ಎಂದು ಅವನ ಊರಿನಲ್ಲಿ ಹತ್ತು ಲಕ್ಷಕ್ಕೆ ಒಂದು ಸೈಟನ್ನೂ ಕೊಡಿಸಿ ಅದನ್ನು ತಮ್ಮ ಮತ್ತು ದೇವರಾಜರ ಜಂಟಿ ಖಾತೆಯಾಗಿ ರಿಜಿಸ್ಟರ್ ಮಾಡಿದರು. ತಿಂಗಳು ತಿಂಗಳೂ ಸಂಬಳದಲ್ಲಿ ಸ್ವಲ್ಪ ಭಾಗವನ್ನು ಸೈಟಿನ ಮೊತ್ತಕ್ಕೆ ಕಂತಾಗಿ ಮುರಿದುಕೊಳ್ಳುತ್ತಿದ್ದರು.
ಅದೊಂದು ದಿನ ದೇವರಾಜ ಕೆಲ್ಸಕ್ಕೆ ಬರಲಿಲ್ಲ. ಫೋನು ಮಾಡಿದರೆ ಸ್ವಿಚ್ ಆಫು. ನಾಳೆಗೆ ಬಂದಾರು ಎಂದು ಕಾದರು. ಬರಲಿಲ್ಲ! ದೇವರಾಜರ ಹೆಂಡತಿಯ ನಂಬರಿಗೆ ಫೋನ್ ಮಾಡಿದರು. ದಿನ ತುಂಬಿದ ಬಸುರಿ ಹೆಣ್ಣು ಗೋಳೋ ಎಂದು ಅಳುತ್ತಾ ನಡೆದ ವಿಷಯವನ್ನು ಹೇಳಿದಳು.
ರಮ್ಮಿ ಸರ್ಕಲ್ ತರದ್ದು ಏನೋ ಆಡಿ ಸಂಕಷ್ಟಕ್ಕೆ ಸಿಲುಕಿದವರು
ಏನಾಗಿತ್ತೆಂದರೆ ದೇವರಾಜ ರಮ್ಮಿ ಸರ್ಕಲ್ ನಂತದ್ದೇನೋ ಆನ್‌ಲೈನ್ ಬೆಟ್ಟಿಂಗ್ ಆಪ್ ಆಡಿ ಎರಡು ತಿಂಗಳೊಳಗೆ ಲಕ್ಷಾಂತರ ಕಳೆದುಕೊಂಡಿದ್ದರು. ಎಲ್ಲೆಲ್ಲಿ ಸಿಗುತ್ತೋ ಅಲ್ಲೆಲ್ಲ ಸಾಲ ಮಾಡಿದ್ದರು. ಕೊಂಡಿದ್ದ ಸೈಟು ಜಂಟಿ ಖಾತೆಯಲ್ಲಿ ಇರದಿದ್ದರೆ ಅದೂ ರಮ್ಮಿ ಆಡಲು ಹೋಗಿರುತ್ತಿತ್ತು. ಡಾಕ್ಟರ ಹೆಸರೇಳಿಯೂ ಹಲವರ ಬಳಿ ಹಣ ಪಡೆದಿದ್ದರು. ಕೊನೆಗೆ ಎಲ್ಲೂ ಸಾಲ ಗಿಟ್ಟದಾದಾಗ ಸಾಲಗಾರರ ಕಾಟವೂ ತಡೆಯದಾದಾಗ ತಲೆ ಮರೆಸಿಕೊಂಡಿದ್ದರು. ಒಂದು ತಿಂಗಳಾದರೂ ಕುಟುಂಬದೊಂದಿಗೆ ಸಂಪರ್ಕವಿಲ್ಲ. ಹೆಂಡತಿಗೆ ಹೆರಿಗೆಯಾದಾಗಲೂ ಮಗುವನ್ನು ನೋಡಲೂ ಹೋಗಲಿಲ್ಲ.
ಮೂರು ತಿಂಗಳು ಕಳೆದ ಮೇಲೆ ಡಾಕ್ಟರಿಗೆ ಫೋನ್ ಮಾಡಿ ಹೀಗೆಲ್ಲಾ ಆಯ್ತು ಕ್ಷಮಿಸಿಬಿಡಿ, ನಾನು ಸತ್ತು ಹೋಗ್ತೀನಿ ಎಂದಿದ್ದಾನೆ. ಡಾಕ್ಟರು ಹೋದದ್ದು ದುಡ್ಡಷ್ಟೆ, ನಿಧಾನಕ್ಕೆ ದುಡಿ ತೀರಿಸುವಿಯಂತೆ. ಈಗ ಮನೆಗೆ ಮನೆಗೆ ಹೋಗು ಹೆಂಡತಿ ಮಗುವಿನ ಮುಖ ನೋಡು ನಾಳೆ ಕೆಲ್ಸಕ್ಕೆ ಬಾ, ಉಳಿದದ್ದು ನೋಡಿಕೊಳ್ಳೋಣ ಎಂದು ಧೈರ್ಯ ತುಂಬಿದ್ದಾರೆ.
ಇದೆಲ್ಲಾ ಆಗಿ ವರ್ಷವಾಗಿದೆ. ಮಾಡ್ಕೊಂಡಿದ್ದ ಸಾಲದಲ್ಲಿ ಡಾಕ್ಟರ ಸಹಾಯ, ಬರುವ ಸಂಬಳದಿಂದ ಮಾಡಿದ್ದ ಸಾಲ ಅರ್ಧವಷ್ಟೆ ತೀರಿದೆ.
ಬೆಟ್ಟಿಂಗ್ ಆಪ್, ರಮ್ಮಿ ಆಪ್ ಗಳಲ್ಲಿ ಹಣ ಕಳೆದುಕೊಂಡ ಲಕ್ಷಾಂತರ ಅಮಾಯಕರಿಗೆ ಡಾಕ್ಟರ್ ರೀತಿಯ ಆಪತ್ಭಾಂದವರು ಸಿಗುವುದಿಲ್ಲ. ಏನೂ ತೋಚದೆ ಸಾವು ತಂದುಕೊಳ್ಳುತ್ತಾರೆ.
ಕನ್ನಡಿಗ ಪ್ರೇಕ್ಷಕರಿಂದ ಬದುಕುತ್ತಿರುವ ಯೂಟ್ಯೂಬರ್ ಗಳು, ಶರತ್ ಲೋಹಿತಾಶ್ವ ಅವರಂತ ನಟರಿಗೆ ರಮ್ಮಿ ಸರ್ಕಲ್ ಪ್ರಮೋಟ್ ಮಾಡುವಾಗ ‘ಲಕ್ಷಾಂತರ ಜನರ ಬದುಕು ದುರಂತಮಯವಾಗುತ್ತಿದೆ ಇಂತಹ ಕೆಟ್ಟ ಕೆಲ್ಸ ಮಾಡಬೇಡಿ’ ಎಂದು ತಿಳಿಸಿ ಹೇಳುವವರಾರು!
ಜನರ ಭಾಗ್ಯವೇ ತನ್ನ ಗುರಿ ಎಂದು ಹೇಳುತ್ತಾ ಅಧಿಕಾರಕ್ಕೆ ಬಂದ ಕರ್ನಾಟಕ ಸರ್ಕಾರವೇನು ಮಾಡುತ್ತಿದೆ? ಬೆಟ್ಟಿಂಗ್ ಆಪ್‌ಗಳನ್ನು ನಿಷೇಧಿಸಲು ಇರುವ ಅಡ್ಡಿಯಾದರೂ ಏನು ?
-ರವಿ ಅರೇಹಳ್ಳಿ, ಉದ್ಯಮಿ, ಬೆಂಗಳೂರು
