ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ ಒಳಚಡ್ಡಿ ಬಿಸಾಕಿ ಹೋಗ್ತಾರೆ, ಇಲ್ಲಿ ಜಳಕ ಮಾಡುವುದು ಹೇಗೆ? ಸಂತೋಷ್‌ ಕುಮಾರ್‌ ಎಲ್‌ಎಂ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ ಒಳಚಡ್ಡಿ ಬಿಸಾಕಿ ಹೋಗ್ತಾರೆ, ಇಲ್ಲಿ ಜಳಕ ಮಾಡುವುದು ಹೇಗೆ? ಸಂತೋಷ್‌ ಕುಮಾರ್‌ ಎಲ್‌ಎಂ ಬರಹ

ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ ಒಳಚಡ್ಡಿ ಬಿಸಾಕಿ ಹೋಗ್ತಾರೆ, ಇಲ್ಲಿ ಜಳಕ ಮಾಡುವುದು ಹೇಗೆ? ಸಂತೋಷ್‌ ಕುಮಾರ್‌ ಎಲ್‌ಎಂ ಬರಹ

ಸಂತೋಷ್‌ ಕುಮಾರ್‌ ಎಲ್‌ಎಂ ಬರಹ: ನದಿಗಳ ಬಳಿ ಸ್ನಾನಮಾಡುವ ಜಾಗಗಳ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ. ಇದೇ ಸಮಯದಲ್ಲಿ ಕಾವೇರಿ, ಭವಾನಿ ಮತ್ತು ಅಮೃತನದಿಗಳ ಸಂಗಮದಲ್ಲಿ ಕಂಡ ನೆನಪನ್ನು ಸಂತೋಷ್‌ ಕುಮಾರ್‌ ಎಲ್‌ಎಂ ಹಂಚಿಕೊಂಡಿದ್ದಾರೆ.

ಕಾವೇರಿ, ಭವಾನಿ ಮತ್ತು  ಅಮೃತನದಿಗಳ ಸಂಗಮ
ಕಾವೇರಿ, ಭವಾನಿ ಮತ್ತು ಅಮೃತನದಿಗಳ ಸಂಗಮ (ವಿಕಿಪೀಡಿಯಾ ಚಿತ್ರ)

ಸಂತೋಷ್‌ ಕುಮಾರ್‌ ಎಲ್‌ಎಂ ಬರಹ: ಏಳೆಂಟು ವರ್ಷಗಳ ಹಿಂದೆ ಶಬರಿಮಲೆಗೆ ಹೋಗಿದ್ದಾಗ ವಾಪಸ್ ಬರುವ ಹಾದಿಯಲ್ಲಿ ತಮಿಳುನಾಡಿನ ಭವಾನಿಗೂ ಭೇಟಿ ಕೊಟ್ಟಿದ್ದೆವು. ಭವಾನಿಯಲ್ಲಿ ಸಂಗಮೇಶ್ವರರ್ ದೇವಸ್ಥಾನವಿದೆ. ಅದರ ಪಕ್ಕದಲ್ಲೇ ತ್ರಿವೇಣಿ ಸಂಗಮವಿದೆ. ಕಾವೇರಿ, ಭವಾನಿ ಮತ್ತು ಅಮೃತನದಿಗಳ ಸಂಗಮ. ಅಲ್ಲಿ ಸ್ನಾನ ಮಾಡುವುದೆಂದರೆ ಪಾಪವೆಲ್ಲ ಕಳೆದು ಪುಣ್ಯ ಬರುತ್ತದೆಂಬ ಪ್ರತೀತಿ. ಮೂರುನದಿಗಳ ಸಂಗಮವಾದ್ದರಿಂದ ಅಲ್ಲೇ ತರ್ಪಣ, ಜೊತೆಗೆ ಅನೇಕ ಆಚರಣೆಗಳು ನಡೆಯುತ್ತಿರುತ್ತವೆ.

ಅಲ್ಲಿ ಸ್ನಾನ ಮಾಡಲೆಂದೇ ಒಂದು ಕಡೆ ಜಾಗ ಗೊತ್ತು ಮಾಡಿ, ಜನರು ಅದನ್ನು ದಾಟಿ ಹೋಗದ ಹಾಗೆ ತಡೆಯನ್ನು ಹಾಕಿದ್ದರು. ಹೋಗಿದ್ದೇ ಬೇಸಗೆಯಾದ್ದರಿಂದ ಆ ಸೀಸನ್ನಿನಲ್ಲಿ ನೀರಿನ ಹರಿವು ಸಿಕ್ಕಾಪಟ್ಟೆ ಕಡಿಮೆ ಇತ್ತು. ಅಲ್ಲಿ ಹೋಗಿ ನೋಡಿದರೆ ವಾಂತಿ ಮಾಡುವುದೊಂದು ಬಾಕಿ. ಅಷ್ಟು ಗಲೀಜಿತ್ತು. ವಾಸನೆ ಬೇರೆ. ಸ್ನಾನ ಮಾಡಿದ ಜನರು ಅವರ ಒಳವಸ್ತ್ರಗಳನ್ನು ಬಿಟ್ಟು ಹೋಗಿದ್ದಾರೆ. ರಾಶಿ ರಾಶಿ ಅಲ್ಲೇ ತೇಲುತ್ತಿವೆ. ಯಾರೋ ಒಬ್ಬಾತ ಬಂದು ಅವುಗಳಲ್ಲಿ ಚೆನ್ನಾಗಿ ಕಾಣುವುದನ್ನು ಮಾತ್ರ ಆಯ್ದುಕೊಂಡು ಗಂಟು ಕಟ್ಟಿಕೊಂಡು ಸ್ಕೂಟರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾನೆ. ಆತ ಆಯ್ದುಕೊಳ್ಳದೆ ಬಿಟ್ಟ ಉಳಿದ ಒಳವಸ್ತ್ರಗಳೆಲ್ಲ ಅಲ್ಲೇ ತೇಲುತ್ತ ಕೆಲ ದಿನಗಳ ನಂತರ ಅವುಗಳ ಮೇಲೆ ಪಾಚಿ ಕಟ್ಟಿ ಅಲ್ಯಾರೂ ಕಾಲಿಡದ ಹಾಗೆ ಮಾಡಿವೆ. ಅಲ್ಲಿ ಜಾಲರಿಯಂಥದ್ದನ್ನು ತಡೆ ಹಾಕಿದ್ದರಿಂದ ನೀರಿನ ಹರಿವಿನಲ್ಲಿ ಆ ಬಟ್ಟೆಗಳೆಲ್ಲವೂ ಕೊಚ್ಚಿಯೂ ಹೋಗುತ್ತಿಲ್ಲ. ಸ್ನಾನ ಮಾಡುವುದಿರಲಿ. ಅತ್ತ ಕಡೆಯೂ ಹೋಗದ ಹಾಗೆ ಅನ್ನಿಸಿಬಿಟ್ಟಿತು.

ಯಾವುದೋ ಸ್ಥಳದಲ್ಲಿ ನಾವು ಶುಚಿಯಾಗಿ ಬರುವುದೆಂದರೆ ನಮ್ಮ ಗಲೀಜನ್ನೆಲ್ಲ ಅಲ್ಲಿ ಬಿಟ್ಟು ಬರುವುದಲ್ಲ. ಆ ಅನುಭೂತಿಯನ್ನು ನಾವೂ ಪಡೆದು ಆ ಜಾಗವನ್ನು ನಂತರ ಬರುವ ಜನಗಳಿಗೂ ಸಹ್ಯವಾಗುವಂತೆ ಶುಚಿಯಾಗಿಡುವುದು.

ಹಾಕಿರೋ ಬಟ್ಟೆಗಳನ್ನು ನದಿಗೆ ಬಿಸಾಡಬೇಕು ಅನ್ನೋ ಆಚರಣೆಯನ್ನು ಅದ್ಯಾವನು ಮಾಡಿದ್ನೋ....ಅಥವ ಆ ಥರದ ನಂಬಿಕೆ ಯಾಕೆ ಜನರಿಗೆ ಬಂತೋ? ಪರಿಸರವನ್ನು ಚೆನ್ನಾಗಿಡುವ ನಂಬಿಕೆಗಳು ಬರಲಿ. ಹಾಳು ಮಾಡುವಂಥವಲ್ಲ. ಉದಾಹರಣೆಗೆ: ಯಾರದೋ ನೆನಪಿಗೆ ಒಂದು ಗಿಡ ನೆಟ್ಟು ಸಲಹಿ ಅಂತಿರಲಿ. ಒಂದು ಮರವನ್ನು ಕಡಿಯಲಿ ಅಂತಲ್ಲ.

ಇವನ್ನೆಲ್ಲ ನಮ್ಮ ಧಾರ್ಮಿಕ ಭಾವನೆಗಳಿಗೆ ತಳುಕು ಹಾಕುತ್ತೇವೆ. ನದಿಗಳು ಹಾಗಿರಲಿ. ಈ ನಗರಗಳ ಪಬ್ಲಿಕ್ ಟಾಯ್ಲೆಟ್ ಗಮನಿಸಿದರೆ ಸಾಕು, ಈ ಜನ ಸದ್ಯಕ್ಕೆ ಸುಧಾರಿಸುವಂತೆ ಕಾಣುವುದಿಲ್ಲ. ಮುಂಚಿನ ಹಾಗೆ ಕೆಲಸ ಮುಗಿದ ಮೇಲೆ ಪಕ್ಕದ ತೊಟ್ಟಿಯಿಂದ ಬಕೆಟ್ಟುಗಳಲ್ಲಿ ನೀರು ತುಂಬಿಕೊಂಡು ಬಂದು ಸುರಿಯುವಂತಿಲ್ಲ. ಅಲ್ಲೇ ಇರುವ ಹ್ಯಾಂಡಲ್ ತಿರುಗಿಸಿದರೆ ಸಾಕು, ಫ್ಲಷ್ ಆಗುತ್ತದೆ. ಆದರೆ ಜನರಿಗೆ ಆ ಸಾಧಾರಣ ಕಾಮನ್ ಸೆನ್ಸು ಇರುವಂತಿಲ್ಲ. ಫ್ಲಶ್ ಮಾಡದೆ ಹೋಗಿರುತ್ತಾರೆ. ನಂತರ ಹೋಗುವವರು ಆ ದೃಶ್ಯ ನೋಡಿ ಇನ್ನು ಮೂರು ದಿನ ಊಟ ಮಾಡುವಂತಿರುವುದಿಲ್ಲ. ನನಗನ್ನಿಸುವುದು ಇವರ ಮನೆಗಳ ಟಾಯ್ಲೆಟ್ಟುಗಳೂ ಹೀಗೇ ಇರುತ್ತವೋ ಅಂತ. ಇಂಥವನ್ನೆಲ್ಲ ಎಲ್ಲಿ ಕಲಿಸುವುದು, ಹೇಗೆ ಕಲಿಸುವುದು ಅನ್ನುವುದೇ ದೊಡ್ಡ ಪ್ರಶ್ನೆ. ನದಿಗಳ ಬಳಿ ಸ್ನಾನಮಾಡುವ ಜಾಗಗಳ ಬಗ್ಗೆ ಪೋಸ್ಟುಗಳನ್ನು ಓದಿದಾಗ ಇದು ನೆನಪಾಯ್ತು.

ಸಂತೋಷ್‌ ಕುಮಾರ್‌ ಎಲ್‌ಎಂ ಬರೆದ ಬರಹಕ್ಕೆ ಸಾಕಷ್ಟು ಜನರು ಕಾಮೆಂಟ್‌ ಬಾಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿ ತಮ್ಮ ಅನುಭವಗಳನ್ನೂ ಹಂಚಿಕೊಂಡಿದ್ದಾರೆ.

“ನೋಡಿ ಸ್ವಾಮಿ ನಾವು ಬೇಸರವಿಲ್ಲದೆ ಇರೋದೆ ಹೀಗೆ. ಪೂಜಿಸಿದ ದೇವರ ಫೋಟೊವನ್ನೇ ಮರದ ಕೆಳದ, ದೇವಸ್ಥಾನದ ಕಾಂಪೌಂಡಿನ ಬದಿಯಲ್ಲೊ, ತಿಪ್ಪೆಯ ಮಧ್ಯದಲ್ಲಿ ಯಾರಿಗೂ ಕಾಣದಂತಿ ಇರಿಸಿ ಬೇಗ ಜಾರಿಹೋಗುವ ಧೀರರು ನಾವು. ನಗುವುದೊ ಅಳುವುದೊ ನೀವೆ ಹೇಳಿ” “ಹಲವರಿಗೆ ಇದೊಂದು ಚಾಳಿ ಇದೆ. ಕೆಟ್ಟ ಚಾಳಿ, ಧರಿಸಿದ್ದ ಹಳೆ ವಸ್ತ್ರಗಳನ್ನ ಸ್ನಾನ ಘಟ್ಟ ಗಳಲ್ಲಿ ಬಿಟ್ಟು ಬರೋದು!” “ರಾಮೇಶ್ವರಂ ಸಮುದ್ರ ತೀರದಲ್ಲೂ ಹೀಗೆ ಬಟ್ಟೆ ಬಿಟ್ಟಿದ್ದಾರೆ. ಹೋದವರೆಲ್ಲ ಒಂದು ಬಟ್ಟೆ ಬಿಟ್ಟುಬಂದರೆ ಶನಿ‌ ಕಳೆಯುತ್ತಂತೆ. ಕರ್ಮ ಇವರ ನಂಬಿಕೆಗಳದ್ದು. ನಮ್ ಜನ ಸುಧಾರಿಸೋಲ್ಲ. ತಮಗೆ ಒಳ್ಳೇದಾಗುತ್ತೆ ಅಂದರೆ ಏನಾದ್ರು ಮಾಡಿಬರ್ತಾರೆ. ಧರ್ಮಸ್ಥಳ ನೇತ್ರಾವತಿ ದಡೆಯಲ್ಲೂ ಇದೇ ಗೋಳು. ಅಲ್ಲಿ ಸ್ನಾನ ಮಾಡಿದ್ರೆ ಇಲ್ದೇ ಇರೋ ಚರ್ಮ ಖಾಯಿಲೆ ಗಳ ಅಂಟಿಸಿಕೊಳ್ಳ ಬೇಕಾದೀತು” ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ.

“ನಾಲ್ಕು ವರ್ಷದ ಹಿಂದೆ ನಂಜನಗೂಡಿಗೆ ಟೂರ್ ಹೋಗಿದ್ವಿ ಅಲ್ಲಿನ ಆ ಪವಿತ್ರನದಿನಾ ಹೇಗೆ ಇಟ್ಕೊಂಡಿದಾರೆ ಅಂದ್ರೆ ತುಂಬಾ ಬೇಜಾರಾಯ್ತು ಅಲ್ಲೇ ಮಲ ಮೂತ್ರ ವಿಸರ್ಜನೆ ಮಾಡ್ತ ಇರ್ತಾರೆ ಈ ಕಡೆ ಸ್ನಾನ ಮಾಡ್ತ ಇರ್ತಾರೆ ಆಕಡೆ ಇಂದ ನೀರು ಈಕಡೆ ಬಂದು ಶುದ್ಧ ಮಾಡುತ್ತೆ ಕರ್ನಾಟಕದ ಅತಿ ದೊಡ್ಡ ದೇಗುಲದ ಪರಿಸ್ಥಿತಿ ನೋಡಿ ನಮ್ ಜನರಿಗೆ ಏನಾಗಿದೆ ಅಂಥ ಬೇಜಾರಾಗಿದೆ ಅಲ್ಲಿ ಪಬ್ಲಿಕ್ ಟಾಯ್ಲೆಟ್ ಇದೆ ಬಟ್ ಅದು ಬೆಳಿಗ್ಗೆ 7ಗಂಟೆ ಮೇಲೆ ಓಪನ್ ಮಾಡೋದಂತೆ ಅಲ್ಲಿವರೆಗೂ ನದಿ ಪಕ್ಕನೆ ಕುತ್ಕೋತಾರೆ ಅಲ್ಲೇ ತೋಲ್ಕೊತ್ತಾರೆ ನೋಡಿ ಬೇಜಾರಾಯ್ತು” “ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಇದೇ ರೀತಿ ವಾತಾವರಣವಿದೆ. 2011 ರಲ್ಲಿ ನಮ್ಮ ಮದುವೆಯಾದ ವರ್ಷದಲ್ಲಿ ಅಲ್ಲಿಗೆ ಹೋಗಿದ್ದು ಬಿಟ್ಟರೆ ಇದುವರೆಗೂ ತಿರುಗಿಯೂ ನೋಡುವುದಿಲ್ಲ.” ತಿರುನೆಲ್ಲಾರು‌... ಪಾಂಡಿಚೆರಿ ಯಲ್ಲಿ ಇರುವ ದೇವಸ್ಥಾನದಲ್ಲಿ ಅಲ್ಲಿಯೇ ರಾಶಿ ರಾಶಿ ಬಟ್ಟೆ ಇದೆಯೆಂದು ಕೇಳಿದ್ದೆ" ಎಂದು ಸಾಕಷ್ಟು ಜನರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

Whats_app_banner