ಮನೆಯಲ್ಲೇ ಅತಿ ಸುಲಭವಾಗಿ ಮಾಡಬಹುದು ಓರಿಯೋ ಬಿಸ್ಕೆಟ್ ಐಸ್‌ಕ್ರೀಂ, ಇವೆರಡು ಐಟಮ್ ಇದ್ರೆ ಸಾಕು
Oreo Biscuit Ice Cream: ನಿಮಗೆ ಐಸ್‌ಕ್ರೀಂ ತಿನ್ನುವ ಮನಸಾಗುತ್ತಿದ್ದರೆ ಈ ರೀತಿ ಓರಿಯೋ ಬಿಸ್ಕೆಟ್‌ನಿಂದ ಐಸ್‌ಕ್ರೀಂ ಮಾಡಿ ಮನೆಯಲ್ಲೇ ತಿನ್ನಿ. ಬಹಳ ರುಚಿಯಾಗಿರುತ್ತದೆ. ಮಾಡುವ ವಿಧಾನವೂ ತುಂಬಾ ಸರಳ.
ನೀವು ಮನೆಯಲ್ಲೇ ಹಲವಾರು ರೀತಿಯ ಹಣ್ಣುಗಳನ್ನು ಬಳಸಿ ಇದಾಗಲೇ ಐಸ್‌ಕ್ರೀಂ ಮಾಡಿರಬಹುದು. ಆದರೆ ಬಿಸ್ಕೆಟ್ ಐಸ್‌ಕ್ರೀಂ ಮಾಡಿರದೇ ಇರಬಹುದು. ನೀವು ಬಿಸ್ಕೆಟ್‌ನಿಂದ ಮಾಡಿದ ಐಸ್‌ಕ್ರೀಂ ಕೂಡ ತಿನ್ನಲು ಬಹಳ ರುಚಿಯಾಗಿರುತ್ತದೆ. ಅದರಲ್ಲೂ ಮಕ್ಕಳಿಗೆ ಓರಿಯೋ ಬಿಸ್ಕೆಟ್ ಎಂದರೆ ಪಂಚಪ್ರಾಣ ಅಂಗಡಿಗೆ ಹೋದರೆ ಅದನ್ನೇ ಕೊಂಡು ತರುವವರು ಹಲವರಿದ್ದಾರೆ. ನಾವು ಇಂದು ಇದೇ ಓರಿಯೋ ಐಸ್‌ಕ್ರೀಂ ಮನೆಯಲ್ಲಿ ಮಾಡುವ ವಿಧಾನವನ್ನು ನಿಮಗೆ ತಿಳಿಸುತ್ತಿದ್ದೇವೆ. ಇದನ್ನು ಮಾಡಲು ಕೇವಲ ಎರಡು ಸಾಮಗ್ರಿ ಸಾಕು.
ಬೇಕಾಗುವ ಸಾಮಗ್ರಿಗಳು
ಅಮೂಲ್ ವಿಪ್ಪಿಂಗ್ ಕ್ರೀಂ
ಓರಿಯೋ ಬಿಸ್ಕೆಟ್
ಇನ್ನು ಇದನ್ನು ಹೊರತುಪಡಿಸಿ ನೀವು ಇನ್ನು ಅಗತ್ಯವಿದ್ದರೆ ವೆನಿಲ್ಲಾ ಎಸೆನ್ಸ್ ಸೇರಿಸಿಕೊಳ್ಳಬಹುದು. ನಿಮಗೆ ಸಕ್ಕರೆ ಸಾಲುವುದಿಲ್ಲ ಎಂದಾದರೆ ಸಕ್ಕರೆಯನ್ನೂ ಸಹ ಸೇರಿಸಿಕೊಳ್ಳಬಹುದು.
ಮಾಡುವ ವಿಧಾನ
ಮೊದಲಿಗೆ ಒಂದು ಮಿಕ್ಸಿ ಜಾರ್ ತೆಗೆದುಕೊಳ್ಳಿ. ನಂತರ ಅದಕ್ಕೆ ಒಂದೆರಡು ಪ್ಯಾಕೆಟ್ ಓರಿಯೋ ಬಿಸ್ಕೆಟ್‌ಗಳನ್ನು ಹಾಕಿ. ನಂತರ ಅದನ್ನು ನೀರು ಹಾಕದೇ ಹಾಗೇ ರುಬ್ಬಿ ಪೌಡರ್ ಮಾಡಿಕೊಳ್ಳಿ. ಸ್ವಲ್ಪ ತರಿ ತರಿಯಾಗಿದ್ದರೂ ಪರವಾಗಿಲ್ಲ. ನಂತರದಲ್ಲಿ ಆ ಪೌಡರ್ ಬದಿಗಿಟ್ಟು. ಫ್ರೆಷ್ ಕ್ರೀಂ ಅಥವಾ ಅಮೂಲ್ ವಿಪ್ಪಿಂಗ್ ಕ್ರೀಂಅನ್ನು ಮಿಕ್ಸಿಗೆ ಹಾಕಿ ಅಥವಾ ಬ್ಲೆಂಡರ್ ಇದ್ದರೆ ಅದರಲ್ಲಿ ಬ್ಲೆಂಡ್ ಮಾಡಿಕೊಳ್ಳಿ. ನಂತರ ಈ ಓರಿಯೋ ಬಿಸ್ಕೆಟ್ ಪೌಡರ್‌ಅನ್ನು ಅದಕ್ಕೆ ಮಿಕ್ಸ್ ಮಾಡಿ.
ರುಚಿಗೆ ಸಕ್ಕರೆ
ಇದರಲ್ಲಿ ಮೊದಲೇ ಸಿಹಿ ಅಂಶ ಇರುತ್ತದೆ. ನಿಮಗೆ ಅದರಲ್ಲಿರುವ ಸಿಹಿ ಅಂಶ ಸಾಲುತ್ತಿಲ್ಲ ಎಂದಾದರೆ ರುಚಿ ನೋಡಿ ಮತ್ತೆ ಅದಕ್ಕೆ ಸಕ್ಕರೆ ಬೇಕಿದ್ದರೆ ಸೇರಿಸಿಕೊಳ್ಳಿ. ನಂತರ ಅದೆಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಮಿಕ್ಸ್ ಮಾಡಿದ ನಂತರದಲ್ಲಿ ಅದನ್ನು ಒಂದು ಬಾಕ್ಸ್‌ಗೆ ಹಾಕಿ ಪ್ಯಾಕ್ ಮಾಡಿ. ಮೇಲಿನಿಂದ ಒಂದಷ್ಟು ಅಲಂಕಾರಕ್ಕೆ ಓರಿಯೋ ಬಿಸ್ಕೆಟ್ ತುಂಡುಗಳನ್ನು ಇಡಿ. ನಂತರ ಗಾಳಿ ಆಡದ ರೀತಿಯಲ್ಲೇ ಅದನ್ನು ಪ್ಯಾಕ್ ಮಾಡಿ. ಫ್ರೀಜರ್‌ನಲ್ಲಿ ಇಡಿ. ಸಂಪೂರ್ಣ ಒಂದು ರಾತ್ರಿಗಳ ಕಾಲ ಅದನ್ನು ಹಾಗೇ ಇಡಬೇಕು.
10 ತಾಸು ಇಡಿ
ಮರುದಿನ ಬೆಳಿಗ್ಗೆ ನೀವು ಅದನ್ನು ತೆಗೆದು ಗಟ್ಟಿಯಾಗಿದೆಯಾ ಎಂದು ನೋಡಿ. ಒಂದು ಹತ್ತು ತಾಸುಗಳ ಕಾಲ ಅದು ಅಲ್ಲೇ ಇದ್ದರೆ ಖಂಡಿತ ಗಟ್ಟಿಯಾಗಿರುತ್ತದೆ. ನಂತರ ಅದನ್ನು ಸರ್ವ್ ಮಾಡಿಕೊಂಡು ತಿನ್ನಿ. ತುಂಬಾ ರುಚಿ ಇರುತ್ತದೆ. ಮನೆಯಲ್ಲಿ ಎಲ್ಲರೂ ಇಷ್ಟಪಡುತ್ತಾರೆ.