Pacific Ocean: ಪೆಸಿಫಿಕ್ ಮಹಾಸಾಗರದ ಮೇಲೆ ಕೆಲವೊಂದು ವಿಮಾನಗಳು ಹಾರಾಟ ಮಾಡದಿರಲು ಕಾರಣ ಇಲ್ಲಿದೆ
ವಿಮಾನಯಾನ ಇಂದು ಜಗತ್ತಿನ ಅತ್ಯಂತ ಪ್ರಮುಖ ಸೇವೆ ಮತ್ತು ಉದ್ಯಮವಾಗಿ ಬೆಳೆದಿದೆ. ಒಂದು ಕಾಲದಲ್ಲಿ ಶ್ರೀಮಂತರಿಗೆ ಮಾತ್ರ ಸೀಮಿತವಾಗಿದ್ದ ವಿಮಾನಗಳಲ್ಲಿ ಇಂದು ಜನಸಾಮಾನ್ಯರು ಕೂಡ ಸುಲಭದಲ್ಲಿ ಪ್ರಯಾಣಿಸುವಂತಾಗಿದೆ. ಆದರೂ ವಿಮಾನಗಳು ಕೆಲವೊಂದು ಪ್ರದೇಶಗಳಲ್ಲಿ ಹಾರಾಟ ನಡೆಸುವುದಿಲ್ಲ, ಕಾರಣ ಏನು ಗೊತ್ತೇ?

ವಿಮಾನಯಾನ ಕ್ಷೇತ್ರದಲ್ಲಿ ಉಂಟಾಗಿರುವ ಕ್ರಾಂತಿಯಿಂದಾಗಿ ಜನಸಾಮಾನ್ಯರಿಗೂ ವಿಮಾನ ಪ್ರಯಾಣ ಸುಲಭ ದರದಲ್ಲಿ ಲಭ್ಯವಾಗುವಂತಾಗಿದೆ. ಭಾರತದಲ್ಲಿ ಉಡಾನ್ ಯೋಜನೆ, ಕಡಿಮೆ ದರದಲ್ಲಿ ಟಿಕೆಟ್ ಲಭ್ಯತೆ, ವಿಮಾನಯಾನ ಸಂಸ್ಥೆಗಳ ಪೈಪೋಟಿಯಿಂದಾಗಿ ಜನಸಾಮಾನ್ಯರು ವಿಮಾನ ಪ್ರಯಾಣದ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಸರ್ಕಾರ ಕೂಡ ಹೆಚ್ಚಿನ ವಿಮಾನ ನಿಲ್ದಾಣಗಳ ಸ್ಥಾಪನೆ ಮಾಡಿರುವುದು ಮತ್ತು ವಿವಿಧ ಕಾರ್ಯಕ್ರಮಗಳ ಮೂಲಕ ಉತ್ತೇಜನ ನೀಡಿರುವುದರಿಂದ ಜನರಿಗೆ ಹೆಚ್ಚಿನ ಅನುಕೂಲವಾಗಿದೆ.
ವಿಮಾನಯಾನ ಮಾರ್ಗ ಮತ್ತು ಕ್ಷೇತ್ರದಲ್ಲಿ ನಿಮಗೆ ಆಸಕ್ತಿ ಇದೆ ಎಂದಾದರೆ, ಕೆಲವೊಂದು ಅಚ್ಚರಿಯ ಸಂಗತಿಗಳು ನಿಮಗೆ ತಿಳಿದಿರುತ್ತವೆ. ಜತೆಗೆ, ಕೆಲವೊಂದು ನಿರ್ಬಂಧಗಳ ಬಗೆಗೂ ನೀವು ಕಂಡುಕೊಂಡಿರುತ್ತೀರಿ. ಅದರಂತೆ, ಇಡೀ ಪೆಸಿಫಿಕ್ ಮಹಾಸಾಗರದ ಮೇಲೆ ಹಾರುವ ವಿಮಾನಗಳು ಬಹಳ ಕಡಿಮೆ. ವಾಸ್ತವವಾಗಿ, ಆ ಪ್ರದೇಶದ ಮೂಲಕ ಸಾಗಬೇಕಾದ ಸಂದರ್ಭದಲ್ಲಿ, ವಿಮಾನಯಾನ ಸಂಸ್ಥೆಗಳು ಬದಲಿ ಮಾರ್ಗದ ಮೊರೆ ಹೋಗುತ್ತಾರೆ, ಅಂದರೆ, ಸಮೀಪದ ಮಾರ್ಗದ ಬದಲು, ಪೆಸಿಫಿಕ್ ಮಹಾಸಾಗರದ ಪ್ರಯಾಣವನ್ನು ತಪ್ಪಿಸಿ, ಬೇರೆ ಮಾರ್ಗಗಳನ್ನು ಆಯ್ಕೆ ಮಾಡುತ್ತಾರೆ. ಅದಕ್ಕೆ ಕಾರಣವೇನು?
ಪೆಸಿಫಿಕ್ ಮಹಾಸಾಗರದ ಮೇಲೆ ಕೆಲವು ವಿಮಾನಗಳು ಹಾರುವುದಿಲ್ಲ ಏಕೆ?
ಪೆಸಿಫಿಕ್ ಮಹಾಸಾಗರವು ಒಂದು ವಿಶಾಲವಾದ ಸಾಗರವಾಗಿದ್ದು, ಅತ್ಯಂತ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿದೆ. ಅದನ್ನು ದಾಟಲು ವಿಮಾನಗಳಿಗೆ ಹೆಚ್ಚಿನ ಪ್ರಮಾಣದ ಇಂಧನ ಬೇಕಾಗುತ್ತದೆ. ಪೆಸಿಫಿಕ್ ಮಹಾಸಾಗರದಾದ್ಯಂತ ನೇರವಾಗಿ ಹಾರುವ ಬದಲು, ಹೆಚ್ಚಿನ ವಾಣಿಜ್ಯ ವಿಮಾನಗಳು ಬಾಗಿದ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಏಕೆಂದರೆ ಅವು ವಾಸ್ತವದಲ್ಲಿ ನೇರವಾಗಿ ಹಾರುವುದಕ್ಕಿಂತ ಬಾಗಿದ ಮಾರ್ಗದ ಮೂಲಕ ಹಾರಾಟ ಮಾಡುವುದು ಉತ್ತಮ ಮತ್ತು ಕಡಿಮೆ ಅವಧಿಯ ಪ್ರಯಾಣವಾಗಿದೆ. ಇದು ನೋಡಲು, ದೂರದ ಪ್ರಯಾಣ ಎಂದು ತೋರುತ್ತದೆಯಾದರೂ, ಭೂಮಿಯು ಗೋಳಾಕಾರವಾಗಿರುವುದರಿಂದ, ನೇರ ರೇಖೆಯು ಎರಡು ಬಿಂದುಗಳ ನಡುವಿನ ಕಡಿಮೆ ಅಂತರವಲ್ಲ. ಹೀಗಾಗಿ ನೇರ ಮಾರ್ಗದ ಬದಲು, ಬಾಗಿದ ಮಾರ್ಗವೇ ಹೆಚ್ಚು ಸೂಕ್ತವಾಗಿರುತ್ತದೆ.
ತುರ್ತು ಲ್ಯಾಂಡಿಂಗ್ ಸಮಸ್ಯೆ
ಕೆಲವು ವಿಮಾನಗಳು ಪೆಸಿಫಿಕ್ ಮಹಾಸಾಗರದ ಮೇಲೆ ಹಾರಾಟ ಮಾಡದಿರಲು ಇನ್ನೊಂದು ಪ್ರಮುಖ ಕಾರಣವೆಂದರೆ ವಿಮಾನಗಳು ಯಾವಾಗಲೂ ಸಮತಟ್ಟಾದ ಮೇಲ್ಮೈ ಪ್ರದೇಶದಲ್ಲಿ ತುರ್ತು ಲ್ಯಾಂಡಿಂಗ್ ಮಾಡುತ್ತವೆ. ಅಲ್ಲದೆ, ತುರ್ತು ಸಂದರ್ಭದಲ್ಲಿ ವಿಮಾನವನ್ನು ಸುಲಭವಾಗಿ ಇಳಿಸಲು ಸಾಧ್ಯವಾಗುವಂತೆ ಸುರಕ್ಷತೆಯ ದೃಷ್ಟಿಯಿಂದ ಗರಿಷ್ಠ ವಿಮಾನ ನಿಲ್ದಾಣಗಳು ಇರುವ ಮಾರ್ಗದಲ್ಲಿ ವಿಮಾನವನ್ನು ಹಾರಿಸುವುದು ಸೂಕ್ತವೆಂದು ಪೈಲಟ್‌ಗಳು ಪರಿಗಣಿಸುತ್ತಾರೆ. ಹೀಗಾಗಿ ತುರ್ತು ಪರಿಸ್ಥಿತಿಯನ್ನು ಗಮನಿಸಿಕೊಂಡು, ವಿಮಾನಯಾನ ಸಂಸ್ಥೆಗಳು ಪೆಸಿಫಿಕ್ ಮಹಾಸಾಗರದ ಮೂಲಕ ಹಾರಾಟವನ್ನು ತಪ್ಪಿಸುತ್ತವೆ.
ಟಿಬೆಟಿಯನ್ ಪ್ರಸ್ಥಭೂಮಿ ಪ್ರದೇಶ
ಪೆಸಿಫಿಕ್ ಮಹಾಸಾಗರ ಪ್ರದೇಶ ಹೊರತುಪಡಿಸಿದರೆ ಪೈಲಟ್‌ಗಳು ತಪ್ಪಿಸುವ ಮತ್ತೊಂದು ಪ್ರದೇಶವೆಂದರೆ ಟಿಬೆಟಿಯನ್ ಪ್ರಸ್ಥಭೂಮಿ. ಟಿಬೆಟಿಯನ್ ಪ್ರಸ್ಥಭೂಮಿಯ ಮೇಲೆ ವಿಮಾನಗಳು ಹಾರುವುದನ್ನು ತಪ್ಪಿಸಲು ಮುಖ್ಯ ಕಾರಣವೆಂದರೆ ಅದರ ತೀವ್ರ ಎತ್ತರ. ಹೆಚ್ಚಿನ ಎತ್ತರದ ಪ್ರದೇಶದಲ್ಲಿ ಗಾಳಿ ಕಡಿಮೆ ಇರುವುದರಿಂದ ವಿಮಾನದ ಎಂಜಿನ್‌ಗಳ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಅಲ್ಲಿ ವಿಮಾನ ಸಂಚಾರ ಮಾಡುವುದಿಲ್ಲ.
ಹವಾಮಾನದ ಕಾರಣಗಳು
ಕೆಲವೊಂದು ಪ್ರದೇಶಗಳಲ್ಲಿ ವಿಮಾನಗಳು ಹಾರಾಟ ಮಾಡದಿರಲು ಮತ್ತೊಂದು ಪ್ರಮುಖ ಕಾರಣವೆಂದರೆ ಹವಾಮಾನ ಪರಿಸ್ಥಿತಿ. ಈ ಪ್ರದೇಶವು ಕಠಿಣ ಮತ್ತು ಅನಿರೀಕ್ಷಿತ ಹವಾಮಾನ ಪರಿಸ್ಥಿತಿಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಬಲವಾದ ಗಾಳಿ, ತೀವ್ರ ಪ್ರಕ್ಷುಬ್ಧತೆಯು ವಿಮಾನಗಳಿಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ. ಜತೆಗೆ ಈ ಪ್ರದೇಶವು ತೀವ್ರವಾದ ಗುಡುಗು ಸಹಿತ ಮಳೆಗೆ ಗುರಿಯಾಗುತ್ತದೆ. ಹೀಗಾಗಿ ಇಲ್ಲಿನ ಪ್ರಯಾಣ ಸುರಕ್ಷಿತವಲ್ಲ. ಮತ್ತೊಂದು ಪ್ರಮುಖ ಕಾರಣವೆಂದರೆ, ಅದರ ಭೂಪ್ರದೇಶ. ಈ ಪ್ರದೇಶವು 7,000 ಮೀಟರ್‌ಗಿಂತ ಹೆಚ್ಚಿನ ಶಿಖರಗಳನ್ನು ಹೊಂದಿರುವ ಕೆಲವು ಅತ್ಯಂತ ಕಠಿಣ ಪರ್ವತಗಳನ್ನು ಒಳಗೊಂಡಿದೆ. ಅಂತಹ ಎತ್ತರದ ಶಿಖರಗಳ ಮೇಲೆ ಹಾರುವುದು ಅಪಾಯಕಾರಿ. ವಿಮಾನವು ಹಾರಾಟದಲ್ಲಿರುವಾಗ, ತುರ್ತು ಪರಿಸ್ಥಿತಿಯಲ್ಲಿ ಈ ಪ್ರದೇಶದಲ್ಲಿ ಎಂಜಿನ್ ತೊಂದರೆಗಳನ್ನು ಅನುಭವಿಸಿದರೆ, ಸುರಕ್ಷಿತವಾಗಿ ಹೊರಬರಲು ಮತ್ತು ಲ್ಯಾಂಡಿಂಗ್ ಮಾಡಲು ಯಾವುದೇ ಆಯ್ಕೆಗಳಿರುವುದಿಲ್ಲ. ಹೀಗಾಗಿ ಅಂತಹ ದುರ್ಗಮ ಪ್ರದೇಶಗಳಲ್ಲಿ ಪ್ರಯಾಣ ಮಾಡದಿರುವುದೇ ಸೂಕ್ತ ಎಂಬ ನಿರ್ಧಾರವನ್ನು ವಿಮಾನಯಾನ ಸಂಸ್ಥೆಗಳು ಕೈಗೊಳ್ಳುತ್ತವೆ. ಅದನ್ನು ಹೊರತುಪಡಿಸಿದರೆ, ಕೆಲವೊಮ್ಮೆ ಯುದ್ಧ ಮತ್ತು ಭದ್ರತಾ ಕಾರಣಗಳಿಂದಾಗಿ ಕೆಲವೊಂದು ಪ್ರದೇಶಗಳಲ್ಲಿ ವಿಮಾನ ಸಂಚಾರವನ್ನು ತಡೆಯಲಾಗುತ್ತದೆ.
