Paget's Awareness Day: ಏನಿದು ಪ್ಯಾಗೆಟ್ಸ್ ಕಾಯಿಲೆ, ಈ ಅಪರೂಪದ ಮೂಳೆ ರೋಗದ ಲಕ್ಷಣಗಳು, ಪರಿಣಾಮಗಳ ಬಗ್ಗೆ ಇಲ್ಲಿದೆ ಮಾಹಿತಿ
ಪ್ಯಾಗೆಟ್ಸ್ ಕಾಯಿಲೆ ಅಥವಾ ಪೇಜೆಟ್ಸ್ ಕಾಯಿಲೆಯು ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ಈ ರೋಗವು ಹಳೆಯ ಮೂಳೆ ಅಂಗಾಂಶವನ್ನು ಹೊಸ ಮೂಳೆ ಅಂಗಾಂಶದೊಂದಿಗೆ ಬದಲಾಯಿಸುವ ಪ್ರಕ್ರಿಯೆಗೆ ಅಡ್ಡಿ ಉಂಟುಮಾಡುತ್ತದೆ.ಈ ಕಾಯಿಲೆಯ ರೋಗಲಕ್ಷಣಗಳೇನು, ಇದರ ಪರಿಣಾಮಗಳೇನು, ಪ್ಯಾಗೆಟ್ಸ್ ಕುರಿತು ಜನರು ತಿಳಿದುಕೊಳ್ಳಬೇಕಾದ ಸತ್ಯ–ಮಿಥ್ಯಗಳೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
Paget's Awareness Day: ಪ್ಯಾಗೆಟ್ಸ್ ಅಥವಾ ಪೇಜೆಟ್ಸ್ ಕಾಯಿಲೆಯು ಮೂಳೆಗಳನ್ನು ಬಾಧಿಸುವ ಅಸ್ಥಿಪಂಜರದ ದೀರ್ಘಕಾಲದ ಕಾಯಿಲೆಯಾಗಿದೆ. ಇದು ಹಳೆಯ ಮೂಳೆ ಅಂಗಾಂಶವನ್ನು ಹೊಸ ಮೂಳೆ ಅಂಗಾಂಶದೊಂದಿಗೆ ಬದಲಾಯಿಸುವ ಪ್ರಕ್ರಿಯೆಗೆ ಅಡ್ಡಿಪಡಿಸುತ್ತದೆ. ಸಾಮಾನ್ಯವಾಗಿ ಪೆಲ್ವಿಸ್, ತಲೆಬುರುಡೆ, ಬೆನ್ನುಮೂಳೆ ಮತ್ತು ಕಾಲುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ರೋಗದ ಅಪಾಯಕಾರಿ ಅಂಶಗಳು ವಯಸ್ಸಾದಂತೆ ಹಾಗೂ ಅನುವಂಶಿಕ ಕಾರಣದಿಂದಾಗಿ ಹೆಚ್ಚುತ್ತದೆ. ಪ್ಯಾಗೆಟ್ಸ್ ಕಾಯಿಲೆಯು ಸ್ವಲ್ಪ ಸಮಯದವರೆಗೆ ಲಕ್ಷಣರಹಿತವಾಗಿರಬಹುದು. ಈ ರೋಗದ ಲಕ್ಷಣಗಳು ಮೂಳೆ ವಿರೂಪಗೊಳ್ಳುವುದು, ಮೂಳೆ ಮುರಿತ ಹಾಗೂ ಪೀಡಿತ ಪ್ರದೇಶದಲ್ಲಿ ನೋವು ಉಂಟಾಗಬಹುದು.
ಆರೋಗ್ಯವಂತ ವ್ಯಕ್ತಿಯಲ್ಲಿ ನೈಸರ್ಗಿಕ ವಿಧಾನದ ಮೂಲಕ ಮೂಳೆಯ ಹಳೆಯ ತುಣುಕುಗಳನ್ನು ತೆಗೆದುಹಾಕಿ ಹೊಸ ಮೂಳೆ ಬರುವ ಪ್ರಕ್ರಿಯೆ ಜರುಗುತ್ತದೆ. ಆದರೆ ಪ್ಯಾಗೆಟ್ಸ್ ರೋಗ ಇರುವವರಲ್ಲಿ ಈ ಪ್ರಕ್ರಿಯೆಯು ತನ್ನ ಸಮತೋಲನವನ್ನು ಕಳೆದುಕೊಂಡು ಅಸಹಜ ಮಾರ್ಪಾಟು ಹೊಂದಿರುವ ಹೊಸ ಮೂಳೆಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಈ ಅಸಹಜ ಮೂಳೆಗಳು ಅಪಕ್ವವಾಗಿರುತ್ತವೆ, ಅಸಹಜ ಆಕಾರಗಳನ್ನು ಹೊಂದಿರುತ್ತವೆ ಮತ್ತು ಬಹಳ ದುರ್ಬಲವಾಗಿರುತ್ತವೆ. ಇದರಿಂದ ಮನುಷ್ಯ ಜೀವನಪೂರ್ತಿ ತೊಂದರೆ ಅನುಭವಿಸಬೇಕಾಗುತ್ತದೆ.
ಪ್ಯಾಗೆಟ್ಸ್ ರೋಗಕ್ಕೆ ಕಾರಣವೇನು?
ಈ ರೋಗದ ನಿಖರವಾದ ಕಾರಣ ಅಸ್ಪಷ್ಟವಾಗಿದೆ. ಇದು ಸಾಮಾನ್ಯವಾಗಿ 50 ವರ್ಷ ಮತ್ತು ಮೇಲ್ಪಟ್ಟ ವಯೋಮಾನದವರಲ್ಲಿ ಹೆಚ್ಚು ಕಂಡುಬರುತ್ತದೆ ಮತ್ತು ಪುರುಷರಲ್ಲಿ ಹೆಚ್ಚು ಪ್ರಚಲಿತವಾಗಿದೆ.
ಪ್ಯಾಗೆಟ್ಸ್ ಕಾಯಿಲೆಯು ಹೆಚ್ಚಿನ ಪ್ರಕರಣಗಳಲ್ಲಿ ಬೆನ್ನುಮೂಳೆ, ಸೊಂಟ, ಕೈಕಾಲುಗಳ ಉದ್ದನೆಯ ಮೂಳೆಗಳು ಮತ್ತು ತಲೆಬುರುಡೆಯ ಮೂಳೆಗಳಲ್ಲಿ ಕಾಣಿಸಿಕೊಂಡರೂ, ಇದು ಒಟ್ಟಾರೆ ಮನುಷ್ಯನ ಅಸ್ಥಿಪಂಜರದ ಯಾವುದೇ ಮೂಳೆಯ ಮೇಲೆ ಪರಿಣಾಮ ಬೀರಬಹುದು. ಇದು ಕೇವಲ ಒಂದು ಮೂಳೆಯಲ್ಲಿ ಅಥವಾ ಹಲವಾರು ಮೂಳೆಗಳಲ್ಲಿರಬಹುದು. ಸಂಪೂರ್ಣ ಮೂಳೆ ಅಥವಾ ಅದರ ಭಾಗದ ಮೇಲೆ ಪರಿಣಾಮ ಬೀರಬಹುದು.
ಪ್ಯಾಗೆಟ್ಸ್‌ನ ಆರಂಭಿಕ ಲಕ್ಷಣಗಳು
ಪಾಗೆಟ್ಸ್ ಕಾಯಿಲೆ ಇರುವ ಅನೇಕ ಜನರು ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಆದರೆ ರೋಗಲಕ್ಷಣಗಳು ಕಾಣಿಸಿಕೊಂಡಲ್ಲಿ, ಮಂದ ಮತ್ತು ನಿರಂತರವಾದ ಮೂಳೆ ನೋವು ಕಾಣಿಸಬಹುದು. ಈ ನೋವು ಪ್ರಾಥಮಿಕವಾಗಿ ಪಾಜೆಟ್ಸ್ ಕಾಯಿಲೆಗೆ ಸಂಬಂಧಿಸಿರಬಹುದು. ಮೂಳೆ ಮುರಿತ, ಮೂಳೆ ವಿರೂಪಗೊಂಡಿರುವುದು, ಬಾಧಿತ ಮೂಳೆ ಬಾಗುವುದು ಸೇರಿದಂತೆ, ಪೀಡಿತ ಮೂಳೆಯ ಬಳಿ ಇರುವ ಕೀಲುಗಳಲ್ಲಿ ಸಂಧಿವಾತ, ಸಹಜವಲ್ಲದ ಮೂಳೆಗಳಿಂದ ನರಗಳ ಮೇಲೆ ಸಂಕೋಚನದಿಂದ ಸಂವೇದನೆ ಉಂಟಾಗುವುದು, ಚಲನೆಯ ನಷ್ಟದಂತಹ ಸಮಸ್ಯೆಗಳು ಎದುರಾಗಬಹುದು.
ಪಾಗೆಟ್ಸ್ ಕಾಯಿಲೆಯ ಕುರಿತ ಕೆಲವು ಪ್ರಚಲಿತ ಅಂತೆ-ಕಂತೆಗಳು
• ಪ್ಯಾಗೆಟ್ಸ್ ಕಾಯಿಲೆಯು ವಯಸ್ಸಾದವರ ಮೇಲೆ ಮಾತ್ರ ಪರಿಣಾಮ ಬೀರುತ್ತದೆ.
- ಪ್ಯಾಗೆಟ್ಸ್ ಕಾಯಿಲೆಯು ವಯಸ್ಸಾದವರಲ್ಲಿ ಹೆಚ್ಚು ಸಾಮಾನ್ಯವಾಗಿದ್ದರೂ, ಇದು ಯಾವುದೇ ವಯಸ್ಸಿನಲ್ಲಿ ಪ್ರಾರಂಭಿಸಬಹುದು.
• ಪ್ಯಾಗೆಟ್ಸ್ ಕಾಯಿಲೆ ಯಾವಾಗಲೂ ಮುರಿತಗಳು ಅಥವಾ ವಿರೂಪಗಳಂತಹ ತೀವ್ರ ತೊಡಕುಗಳಿಗೆ ಕಾರಣವಾಗುತ್ತದೆ.
- ಅನೇಕ ಸಂದರ್ಭಗಳಲ್ಲಿ, ರೋಗವು ನಿಧಾನವಾಗಿ ಮುಂದುವರಿಯುತ್ತದೆ. ಮೂಳೆಯ ಬೆಳವಣಿಗೆಯನ್ನು ನಿಯಂತ್ರಿಸಲು ಸಹಾಯ ಮಾಡುವ ಔಷಧಿಗಳೊಂದಿಗೆ ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದಾಗಿದೆ
• ಪ್ಯಾಗೆಟ್ಸ್ ಕಾಯಿಲೆ ತುಂಬಾ ಅಪರೂಪ.
- ವಾಸ್ತವವಾಗಿ ಇದು ಸುಮಾರು ಶೇ 1 ರಿಂದ 3ರಷ್ಟು ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ. 55 ವರ್ಷಗಳು ಮೇಲ್ಪಟ್ಟ ವ್ಯಕ್ತಿಗಳಲ್ಲಿ ಕಂಡುಬರುವ ಸಾಮಾನ್ಯ ಮೂಳೆ ಅಸ್ವಸ್ಥತೆಗಳಲ್ಲಿ ಪೇಜೆಟ್ಸ್ ಕಾಯಿಲೆ ಕೂಡ ಒಂದಾಗಿದೆ.
ಈ ರೋಗವನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ. ಈ ಸ್ಥಿತಿ ಗಂಭೀರವಾದರೆ ಎದ್ದು ಓಡಾಡಲೂ ಕೂಡ ಕಷ್ಟವಾಗಬಹುದು. ಆರಂಭಿಕ ಪತ್ತೆ ಹಾಗೂ ಚಿಕಿತ್ಸೆಯಿಂದ ತಲೆಬುರುಡೆಯ ಮೂಳೆಗಳ ಅಸಹಜ ಅಥವಾ ಹೆಚ್ಚುವರಿ ಮೂಳೆ ಬೆಳವಣಿಗೆಯಿಂದ ಒಳಗಿನ ಕಿವಿಯ ರಚನೆಗಳ ಮೇಲೆ ಪರಿಣಾಮ ಬೀರಿ ಅದರಿಂದಾಗಿ ಉಂಟಾಗುವ ಶ್ರವಣ ನಷ್ಟದಂತಹ ತೊಡಕುಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ಆರಂಭಿಕ ಚಿಹ್ನೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅಂತೆ-ಕಂತೆಗಳ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳುವುದು, ಸಮಯೋಚಿತವಾಗಿ ವೈದ್ಯಕೀಯ ಸಲಹೆ ಪಡೆಯುವುದರ ಮೂಲಕ ಪ್ಯಾಗೆಟ್ಸ್ ರೋಗವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದಾಗಿದೆ.
(ಲೇಖನ: ಡಾ. ರಾಜೇಶ್ ಶ್ರೀನಿವಾಸ್, ಕನ್ಸಲ್ಟೆಂಟ್ - ಆರ್ಥೋಪೆಡಿಕ್ ಸರ್ಜನ್, ಮಣಿಪಾಲ್ ಆಸ್ಪತ್ರೆ ವರ್ತೂರು ರಸ್ತೆ ಮತ್ತು ವೈಟ್‌ಫೀಲ್ಡ್)