Paneer Benefits: ನಿಮಗೂ ಪನೀರ್ ಇಷ್ಟವೇ? ಅದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Paneer Benefits: ನಿಮಗೂ ಪನೀರ್ ಇಷ್ಟವೇ? ಅದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಯಿರಿ

Paneer Benefits: ನಿಮಗೂ ಪನೀರ್ ಇಷ್ಟವೇ? ಅದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಯಿರಿ

Paneer Benefits: ಪನೀರ್ ಎಂದರೆ ಕೆಲವರಿಗೆ ಬಾಯಲ್ಲಿ ನೀರೂರುತ್ತದೆ. ಸಸ್ಯಾಹಾರಿಗಳು ಮಾತ್ರವಲ್ಲದೆ ಮಾಂಸಹಾರಿಗಳು ಕೂಡ ಇಷ್ಟಪಟ್ಟು ಪನೀರ್ ತಿನ್ನುತ್ತಾರೆ. ಪನೀರ್‌ ತಿನ್ನುವುದರಿಂದ ಆಗುವ ಪ್ರಯೋಜನಗಳೇನು? ಅದರ ವಿಶೇಷತೆಗಳ ಬಗ್ಗೆ ಇಲ್ಲಿ ಓದಿ.

ಪನೀರ್‌ ತಿನ್ನುವುದರಿಂದ ಆಗುವ ಪ್ರಯೋಜನಗಳೇನು?
ಪನೀರ್‌ ತಿನ್ನುವುದರಿಂದ ಆಗುವ ಪ್ರಯೋಜನಗಳೇನು? (pixabay)

ಭಾರತದ ವಿಶೇಷ ಖಾದ್ಯಗಳ ಸಾಲಿನಲ್ಲಿ ಪನೀರ್‌ಗೆ ಯಾವತ್ತೂ ಸ್ಥಾನವಿರುತ್ತದೆ. ಸಸ್ಯಾಹಾರಿಗಳು ಮತ್ತು ಮಾಂಸಹಾರಿಗಳು ಇಷ್ಟಪಟ್ಟು ತಿನ್ನುವ ಪನೀರ್‌ನಿಂದ ಹತ್ತು ಹಲವು ಖಾದ್ಯಗಳನ್ನು ತಯಾರಿಸಲಾಗುತ್ತದೆ. ಪನೀರ್ ತಿಂದರೆ ಬಹಳಷ್ಟು ಆರೋಗ್ಯ ಪ್ರಯೋಜನಗಳಿವೆ, ಅಗತ್ಯ ಪೋಷಕಾಂಶಗಳು ಕೂಡ ದೊರಕುತ್ತವೆ. ಹೀಗಾಗಿ ವೈದ್ಯರು ಕೂಡ ಡಯೆಟ್‌ ಪ್ಲ್ಯಾನ್‌ನಲ್ಲಿ ಪನೀರ್ ಇರಲಿ ಎಂದು ಹೇಳುತ್ತಾರೆ. ಹಾಲಿನಿಂದ ತಯಾರಾಗುವ ಪನೀರ್ ಅನ್ನು ಮಕ್ಕಳು ಕೂಡ ಇಷ್ಟಪಟ್ಟು ತಿನ್ನುತ್ತಾರೆ. ಚೀಸ್‌ನಂತೆ ಬಿಸಿಮಾಡಿದಾಗ ಪನೀರ್ ಕರಗುವುದಿಲ್ಲ. ಹೀಗಾಗಿ ಪನೀರ್ ಅನ್ನು ಗ್ರಿಲ್ ಐಟಂಗಳಲ್ಲಿ, ಫ್ರೈ ಮಾಡಿ, ಅಥವಾ ವಿವಿಧ ಕರಿ ತಯಾರಿಸಲು ಬಳಸುತ್ತಾರೆ. ಹೋಟೆಲ್‌ಗಳಲ್ಲಿ ಸಸ್ಯಾಹಾರಿ ಮೆನುವಿನಲ್ಲಿ ಪನೀರ್ ಸದಾ ಮೊದಲ ಸ್ಥಾನದಲ್ಲಿರುತ್ತದೆ. ಬಹುಬೇಡಿಕೆಯ ಪನೀರ್ ಸೇವನೆಯಿಂದ ದೇಹಕ್ಕೆ ಅಗತ್ಯ ಪ್ರೊಟೀನ್, ಕ್ಯಾಲ್ಸಿಯಂ ಕೂಡ ದೊರೆಯುತ್ತದೆ.

ರಿಸರ್ಚ್‌ ಗೇಟ್‌ನಲ್ಲಿ ಪ್ರಕಟವಾದ ಅಧ್ಯಯನ ಪ್ರಕಾರ, ಪ್ರತಿ 100 ಗ್ರಾಂ ಪನೀರ್‌ನಲ್ಲಿ ಪ್ರೊಟೀನ್ 24.1 ಗ್ರಾಂ, ಕಾರ್ಬೋಹೈಡ್ರೇಟ್ 6.3 ಗ್ರಾಂ, ಕೊಬ್ಬು 25.0, ಕ್ಯಾಲ್ಸಿಯಂ 790 ಮಿಲಿಗ್ರಾಂ ಮತ್ತು ಕಬ್ಬಿಣದ ಅಂಶ 2.1 ಮಿಲಿಗ್ರಾಂ ಇರುತ್ತದೆ. ಹೀಗೆ ಹೇರಳ ಪೋಷಕಾಂಶಗಳನ್ನು, ವಿಟಮಿನ್ ಡಿ ಹೊಂದಿರುವ ಪನೀರ್ ಸೇವನೆಯಿಂದ ನಮ್ಮ ದೇಹಕ್ಕೆ ಅಗತ್ಯ ಅಂಶಗಳು ದೊರಕುತ್ತವೆ. ಆರೋಗ್ಯಕ್ಕೂ ಪೂರಕ.

ಅಧಿಕ ಪ್ರಮಾಣದ ಪ್ರೊಟೀನ್

ಗುಣಮಟ್ಟದ ಮತ್ತು ಅಧಿಕ ಪ್ರಮಾಣದ ಪ್ರೊಟೀನ್ ಪನೀರ್‌ನಲ್ಲಿ ಹೇರಳವಾಗಿರುತ್ತದೆ. ದೇಹದಲ್ಲಿನ ಕೋಶಗಳ ಬೆಳವಣಿಗೆಗೆ ಇದು ಸಹಾಯ ಮಾಡುತ್ತದೆ. ಈ ಕುರಿತು ಇಂಟರ್‌ನ್ಯಾಶನಲ್ ಜರ್ನಲ್ ಆಫ್ ಸೈನ್ಸ್ ಆಂಡ್ ರಿಸರ್ಚ್ ಆರ್ಕೈವ್ಸ್‌ನಲ್ಲಿ ಅಧ್ಯಯನ ವರದಿ ಕೂಡ ಪ್ರಕಟವಾಗಿದೆ.ಹೀಗಾಗಿ ದೇಹಕ್ಕೆ ಅಗತ್ಯ ಪ್ರೊಟೀನ್ ಪನೀರ್ ಸೇವನೆಯಿಂದ ದೊರೆಯುತ್ತದೆ.

ಮೂಳೆಗಳನ್ನು ಶಕ್ತಿಶಾಲಿಯನ್ನಾಗಿಸುತ್ತದೆ

ಪನೀರ್ ಸೇವನೆಯಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ದೊರೆಯುತ್ತದೆ. ಇದರಿಂದ ನಮ್ಮ ದೇಹದ ಮೂಳೆಗಳು ಸದೃಢವಾಗಿ ಬೆಳೆಯುತ್ತದೆ. ಮೂಳೆಗಳ ಸವಕಳಿ ಮತ್ತು ಬಲಹೀನ ಮೂಳೆಗಳ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪನೀರ್ ಅಗತ್ಯ ಕ್ಯಾಲ್ಸಿಯಂ ಒದಗಿಸುತ್ತದೆ.

ತೂಕ ನಿರ್ವಹಣೆಯಲ್ಲಿ ಸಹಕಾರಿ

ಪನೀರ್ ಸೇವನೆಯಿಂದ ಅದರಲ್ಲಿನ ಪ್ರೊಟೀನ್ ದೇಹಕ್ಕೆ ಅಗತ್ಯ ಪೋಷಕಾಂಶ ಒದಗಿಸುವ ಜತೆಗೆ, ತೂಕ ನಿರ್ವಹಣೆಗೂ ಸಹಕಾರಿಯಾಗುತ್ತದೆ. ಪನೀರ್ ತಿಂದರೆ ಬಹುಸಮಯ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದರಿಂದ ಆಗಾಗ ತಿನ್ನಬೇಕು ಎನ್ನುವ ಬಾಯಿಚಪಲ ಕಡಿಮೆಯಾಗಿ, ತೂಕ ನಿರ್ವಹಣೆಯಾಗುತ್ತದೆ.

ರಕ್ತದಲ್ಲಿನ ಸಕ್ಕರೆ ಅಂಶ ನಿರ್ವಹಣೆ

ಪನೀರ್ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯ ಅಂಶ ನಿರ್ವಹಣೆಯಾಗುತ್ತದೆ ಎಂದು ಅಧ್ಯಯನದಲ್ಲಿ ಹೇಳಿದೆ. ಹೀಗಾಗಿ ಮಧುಮೇಹದಿಂದ ಬಳಲುತ್ತಿರುವವರು ಕೂಡ ಪನೀರ್ ಸೇವಿಸಬಹುದು.

ಹೃದಯದ ಆರೋಗ್ಯಕ್ಕೆ ಪೂರಕ

ಪನ್ನೀರ್ ಸೇವನೆ ಮಾಡುವುದರಿಂದ ಹೃದಯದ ಆರೋಗ್ಯಕ್ಕೆ ಉತ್ತಮ ಪ್ರಯೋಜನವಿದೆ. ಆರೋಗ್ಯಕ್ಕೆ ಪೂರಕ ಕೊಬ್ಬು, ಕ್ಯಾಲೊರಿ ಪನೀರ್‌ನಿಂದ ದೊರೆಯುತ್ತದೆ. ಇದರಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗಿ, ಹೃದಯಕ್ಕೆ ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಳ

ಪನೀರ್‌ನಲ್ಲಿ ಸತುವಿನ ಅಂಶವೂ ಅಧಿಕವಾಗಿದೆ. ಇದರಿಂದ ದೇಹದಲ್ಲಿ ರೋಗ ನಿರೋಧಕ ಅಂಶ ವೃದ್ಧಿಯಾಗುತ್ತದೆ. ಇದರಿಂದ ದೇಹಕ್ಕೆ ಬಾಧಿಸುವ ಅಂಶಗಳ ವಿರುದ್ಧ ಹೋರಾಡಲು ಅನುಕೂಲವಾಗುತ್ತದೆ.

ಹೀಗೆ ಹಲವು ಆರೋಗ್ಯಕ್ಕೆ ಪೂರಕ ಅಂಶಗಳನ್ನು ಹೊಂದಿರುವ ಪನೀರ್ ಸೇವನೆಯಿಂದ ಬಹಳಷ್ಟು ಪ್ರಯೋಜನಗಳಿವೆ. ಆದರೆ ಸಾಧ್ಯವಾದಷ್ಟು ಮನೆಯಲ್ಲೇ ತಯಾರಿಸಿದ ಪನೀರ್ ಖಾದ್ಯಗಳನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಹೊರಗಡೆ ಸೂಕ್ತ ರೀತಿಯಲ್ಲಿ ಸಂಸ್ಕರಿಸದ ಪನೀರ್ ಬಳಸಿದರೆ ಆರೋಗ್ಯಕ್ಕೆ ಸಮಸ್ಯೆಯಾಗಬಹುದು.

Whats_app_banner